ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ಪಲ್ಸ್ ಪೋಲಿಯೊ; 1.22 ಲಕ್ಷ ಮಕ್ಕಳ ಗುರುತು

ಮಾ.3 ರಿಂದ 6ರವರೆಗೆ  ನಡೆಯಲಿರುವ ರಾಷ್ಟ್ರೀಯ ಸಾರ್ವತ್ರಿಕ ಲಸಿಕಾ ಅಭಿಯಾನ
Published 27 ಫೆಬ್ರುವರಿ 2024, 14:18 IST
Last Updated 27 ಫೆಬ್ರುವರಿ 2024, 14:18 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮಾ.3 ರಿಂದ 6ರವರೆಗೆ  ನಡೆಯಲಿರುವ ರಾಷ್ಟ್ರೀಯ ಸಾರ್ವತ್ರಿಕ ಲಸಿಕಾ ಅಭಿಯಾನದಲ್ಲಿ ಮಕ್ಕಳು, ಗರ್ಭಿಣಿಯರು ಮತ್ತು ಅರ್ಹರು ಲಸಿಕೆ ಹಾಕಿಸಿಕೊಳ್ಳುವ ಮೂಲಕ ಅಭಿಯಾನ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರು. 

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ‘ಪಲ್ಸ್ ಪೋಲಿಯೊ ಟಾಸ್ಕ್ ಪೋರ್ಸ್ ಸಮಿತಿ ಸಭೆ’ಯಲ್ಲಿ ಮಾತನಾಡಿದರು. 

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ನಗರಸಭೆ, ಪುರಸಭೆ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಾರ್ವಜನಿಕರಲ್ಲಿ ಪಲ್ಸ್ ಪೋಲಿಯೊ ಕುರಿತು ಜಾಗೃತಿ ಮೂಡಿಸುವ ಕಾರ್ಯ ಚಟುವಟಿಕೆಗಳನ್ನು ನಡೆಸಬೇಕು ಎಂದು ಸೂಚಿಸಿದರು. 

ಪಲ್ಸ್ ಪೋಲಿಯೊ ಕಾರ್ಯಕ್ರಮದಡಿ ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೊ ಲಸಿಕಾಕರಣ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪ್ರತಿ ಮಗುವಿಗೆ ಲಸಿಕೆ ಹಾಕಿಸಬೇಕು. ಯಾವೊಂದು ಮಗುವು ವಂಚಿತರಾಗದಂತೆ ಅಧಿಕಾರಿಗಳು ನಿಗಾವಹಿಸಬೇಕು. ಜಿಲ್ಲೆಯಲ್ಲಿ ಲಸಿಕಾಕರಣಕ್ಕೆ 0.5 ವರ್ಷದೊಳಗಿನ 1,22,816 ಮಕ್ಕಳನ್ನು ಗುರುತಿಸಲಾಗಿದೆ. 647 ಲಸಿಕಾಬೂತ್‌, 5 ಸಂಚಾರಿ ಬೂತ್‌ಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು. 

2,664 ವ್ಯಾಕ್ಸಿನೇಟರ್‌ಗಳನ್ನು ಹಾಗೂ 140 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಅಂದು ಎಲ್ಲಾ ಅಂಗನವಾಡಿ ಕೇಂದ್ರಗಳು ಹಾಗೂ ಗುರ್ತಿಸಿದ ಶಾಲಾ ಕೊಠಡಿಗಳು ಜಿಲ್ಲೆಯಾದ್ಯಂತ ತೆರೆದಿರುತ್ತದೆ. ಸಾರ್ವಜನಿಕರು ತಮ್ಮ ಹತ್ತಿರದ ಲಸಿಕಾ ಕೇಂದ್ರಗಳಿಗೆ ತೆರಳಿ ಮಕ್ಕಳಿಗೆ ಹಾಗೂ ಅರ್ಹರಿಗೆ ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದರು.

ನಗರ, ತಾಲ್ಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಪೋಲಿಯೊ ಲಸಿಕೆ ಹಾಕುವ ದಿನ ಅಂಗನವಾಡಿ ಕೇಂದ್ರಗಳನ್ನು ತೆರೆದು ಲಸಿಕೆ ಹಾಕಿಸಬೇಕು. ಶಾಲಾ ಕೊಠಡಿಗಳು ತೆರೆದು ಕನಿಷ್ಠ ಇಬ್ಬರು ನಿಯೋಜಿತ ಶಿಕ್ಷಕರನ್ನು ಹಾಗೂ ಪ್ರೌಢಶಾಲೆ, ಕಿರಿಯ ಮಹಾವಿದ್ಯಾಲಯ ಮತ್ತು ಪ್ರಥಮ ದರ್ಜೆ ಕಾಲೇಜುಗಳಿರುವ ಕಡೆ ಎನ್.ಎಸ್.ಎಸ್ ಮತ್ತು ಎನ್.ಸಿ.ಸಿ ವಿದ್ಯಾರ್ಥಿಗಳನ್ನು ನಿಯೋಜಿಸಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಬೇಕು. ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರು, ತಾಲ್ಲೂಕು ಮಟ್ಟದ ಅನುಷ್ಠಾನ ಸಮಿತಿಯ ಸದಸ್ಯರಾದ ಸಿ.ಡಿ.ಪಿ.ಒಗಳು ಸೇರಿದಂತೆ ಎಲ್ಲಾ ಸ್ತ್ರೀ ಶಕ್ತಿ ಪದಾಧಿಕಾರಿಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಲಸಿಕೆಯ ಮಹತ್ವವನ್ನು ತಿಳಿಸಬೇಕು ಎಂದು ಹೇಳಿದರು.

ವಾಡಿಕೆಯ ರೋಗನಿರೋಧಕ ಲಸಿಕಾಕರಣದಿಂದ ಹೊರಗುಳಿದಿರುವ ಎರಡು ವರ್ಷ ವಯಸ್ಸಿನವರೆಗಿನ ಪ್ರತಿ ಮಗು ಹಾಗೂ ಎಲ್ಲಾ ಗರ್ಭಿಣಿಯರಿಗೆ ತಲುಪಿಸುವ ಉದ್ದೇಶವಾಗಿದ್ದು, ಪ್ರತಿಯೊಂದು ಮಗುವು ಸಹ ಲಸಿಕೆಯನ್ನು ಪಡೆದುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ನೇಮಿಸಿರುವ ಟಾಸ್ಕ್ ಪೋರ್ಸ್ ಸಮಿತಿಗಳು ಅರಿವು ಮೂಡಿಸಿ ಕಾರ್ಯ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಲಸಿಕೆ ಹಾಕಿಸುವಲ್ಲಿ ಕ್ರಮವಹಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿದರು. 

ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಈಶ್ವರಪ್ಪ, ಜಿಲ್ಲಾ ಆಯುಷ್ ಅಧಿಕಾರಿ ತಬೀಬಾ ಬಾನು,  ನಗರಸಭೆ ಪೌರಾಯುಕ್ತ ಮಂಜುನಾಥ್, ಲಸಿಕಾ ಅಭಿಯಾದ ಉಸ್ತುವಾರಿವಹಿಸಿರುವ ವೈದ್ಯರು, ತಾಲ್ಲೂಕು ಆರೋಗ್ಯ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

‘ನವಜಾತ ಶಿಶುವಿಗೂ ಲಸಿಕೆ ಹಾಕಿಸಿ’

ಲಸಿಕಾ ಅಭಿಯಾನದ ಸಿದ್ದತೆ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್ ಕುಮಾರ್ ಮಾಹಿತಿ ನೀಡಿ ಮಾ.3ರಂದು ಜನಿಸಿದ ನವಜಾತ ಶಿಶುವಿಗೂ ಸಹ ಪೋಷಕರು ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT