ಶುಕ್ರವಾರ, ಆಗಸ್ಟ್ 12, 2022
24 °C
ಜಿಲ್ಲೆಯಲ್ಲಿ 2,232 ರೈತರಿಗೆ ಬಿಡುಗಡೆಯಾಗಿಲ್ಲ ₹ 13 ಕೋಟಿ ಹಣ

ಚಿಕ್ಕಬಳ್ಳಾಪುರ: 3 ತಿಂಗಳಾದರೂ ಬಾರದ ರಾಗಿ ಹಣ

ಡಿ.ಎಂ.ಕುರ್ಕೆ ಪ್ರಶಾಂತ್‌ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಬೆಂಬಲ ಬೆಲೆ ಯೋಜನೆಯಡಿ ಸರ್ಕಾರಕ್ಕೆ ರಾಗಿ ಮಾರಾಟ ಮಾಡಿದ ಜಿಲ್ಲೆಯ 2,232 ರೈತರಿಗೆ ಮೂರು ತಿಂಗಳಾದರೂ ಹಣವೇ ಬಿಡುಗಡೆಯಾಗಿಲ್ಲ! ಇಷ್ಟು ರೈತರಿಗೆ ₹ 13.18 ಕೋಟಿ ಹಣ ಬಿಡುಗಡೆಯಾಗಬೇಕು. ಕೋವಿಡ್‌ನ ಈ ದುರಿತ ಕಾಲದಲ್ಲಿ ಬಹಳಷ್ಟು ರೈತರು ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಿ ಬದುಕು ಸಾಗಿಸುತ್ತಿದ್ದಾರೆ.

ಇಂತಹ ಸಮಯದಲ್ಲಿಯೂ ರಾಜ್ಯ ಸರ್ಕಾರ ಹಣವನ್ನು ಬಾಕಿ ಉಳಿಸಿಕೊಂಡಿದೆ. ಬಹಳಷ್ಟು ರೈತರು ಯಾವಾಗ ಹಣ ಬಿಡುಗಡೆ ಆಗುತ್ತದೆ ಎಂದು ಅಧಿಕಾರಿಗಳನ್ನು ಕೇಳುತ್ತಲೇ ಇದ್ದಾರೆ. ಅಧಿಕಾರಿಗಳು ನಮ್ಮದೇನಿಲ್ಲ ಎಂದು ಸರ್ಕಾರದತ್ತ ಬೆರಳು ತೋರುತ್ತಿದ್ದಾರೆ. ಹಣ ಬಿಡುಗಡೆಗೆ ಆಗ್ರಹಿಸಿ ಈಗಾಗಲೇ ರೈತರು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೂ ಮನವಿ ಸಲ್ಲಿಸಿದ್ದಾರೆ.

ಈಗ ಮತ್ತೆ ಮುಂಗಾರು ಚಟುವಟಿಕೆಗಳು ಆರಂಭವಾಗಿವೆ. ಮುಂಗಾರಿಗೆ ರೈತರು ಬಿತ್ತನೆ ಬೀಜ, ರಸಗೊಬ್ಬರ ಖರೀದಿ, ಉಳುಮೆಗೆ ಹಣ ಅಗತ್ಯವಾಗಿದೆ. ಬಹಳಷ್ಟು ರೈತರು ಒಂದಿಷ್ಟು ಉತ್ಪನ್ನಗಳನ್ನು ಮಾರಾಟ ಮಾಡಿ ಮುಂಗಾರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವರು. ಹಣ ಬಿಡುಗಡೆ ಆಗದಿರುವುದರಿಂದ ಮುಂಗಾರಿನ ಈ ಸಂದರ್ಭದಲ್ಲಿ ರೈತರು ಸಂಕಷ್ಟ ಸಹ ಎದುರಿಸಬೇಕಾಗಿದೆ.

ಜಿಲ್ಲೆಯ ಬಾಗೇಪಲ್ಲಿ, ಗೌರಿಬಿದನೂರು, ಚಿಕ್ಕಬಳ್ಳಾಪುರ, ಚಿಂತಾಮಣಿ ಮತ್ತು ಶಿಡ್ಲಘಟ್ಟದಲ್ಲಿ ಬೆಂಬಲ ಬೆಲೆ ಯೋಜನೆಯಡಿ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮೂಲಕ ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿತ್ತು. ಏಪ್ರಿಲ್ 30ರವರೆಗೆ ಈ ಐದು ಕೇಂದ್ರಗಳಿಗೆ ಒಟ್ಟು 7,404 ರೈತರು 1,41,303 ಕ್ವಿಂಟಲ್ ರಾಗಿ ಮಾರಾಟ ಮಾಡಿದ್ದರು. ಇದರ ಒಟ್ಟು ಮೌಲ್ಯ ₹ 46.55 ಕೋಟಿಯಾಗಿತ್ತು. ಇಷ್ಟೊಂದು ಪ್ರಮಾಣದಲ್ಲಿ ರೈತರು ರಾಗಿ ಮಾರಾಟ ಮಾಡಿದ್ದು ದಾಖಲೆಯೂ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚು ರಾಗಿಯನ್ನು ರೈತರು ಮಾರಾಟ ಮಾಡಿದ್ದಾರೆ.

ರಾಗಿ ಮಾರಾಟ ಮಾಡಿದ 5,1719 ರೈತರಿಗೆ ಮೊದಲ ಮತ್ತು ಎರಡನೇ ಹಂತದಲ್ಲಿ ₹ 33.37 ಕೋಟಿ  ಬಿಡುಗಡೆಯಾಗಿದೆ.

ಮಾ.16ರ ಮೊದಲು ರಾಗಿಯನ್ನು ಮಾರಾಟ ಮಾಡಿದ ರೈತರಿಗೆ ಹಣ ಬಿಡುಗಡೆಯಾಗಿದೆ. ನಂತರ ಮಾರಾಟ ಮಾಡಿದ ರೈತರು ಹಣ ಬಿಡುಗಡೆಯ ನಿರೀಕ್ಷೆ ಹೊತ್ತಿದ್ದಾರೆ. ಮೇ ಮೊದಲ ವಾರದಲ್ಲಿ ಎರಡನೇ ಹಂತದ ಹಣ ಬಿಡುಗಡೆ ಆಗಿತ್ತು. ಆ ವೇಳೆ ಈ 2,232 ರೈತರು ತಮಗೆ ಮೂರನೇ ಕಂತಿನಲ್ಲಿ ಹಣ ಆದಷ್ಟು ಬೇಗ ಬಿಡುಗಡೆ ಆಗುತ್ತದೆ ಎನ್ನುವ ಆಸೆಯನ್ನು ಹೊತ್ತಿದ್ದರು. ಆದರೆ ಆ ಆಸೆ ಇನ್ನೂ ಕೈಗೂಡಿಲ್ಲ.

ಕೊರೊನಾ ಮತ್ತು ಲಾಕ್‌ಡೌನ್‌ನ ಈ ಸಂಕಷ್ಟದ ಸಮಯದಲ್ಲಿಯೂ ಹಣ ಬಂದಿಲ್ಲ. ಸರ್ಕಾರ ಆದಷ್ಟು ಬೇಗ ಹಣ ಬಿಡುಗಡೆಗೆ ಕ್ರಮವಹಿಸಬೇಕು ಎಂದು ರೈತರು ಆಗ್ರಹಿಸುವರು.

 ***

ತಾಲ್ಲೂಕು; ಹಣ ಬಿಡುಗಡೆಯಾಗಬೇಕಾದ ರೈತರ ಸಂಖ್ಯೆ

ಬಾಗೇಪಲ್ಲಿ;222
ಗೌರಿಬಿದನೂರು;58
ಚಿಂತಾಮಣಿ;434
ಶಿಡ್ಲಘಟ್ಟ;712
ಚಿಕ್ಕಬಳ್ಳಾಪುರ;806
ಒಟ್ಟು;2,232

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು