ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ದಿಲ್ಲದೆ ಸಾಗಿದೆ ಮಾಗಿ ಉಳುಮೆ ಕಾರ್ಯ

ಹಲವೆಡೆ ಭೂಮಿ ಹದಗೊಳಿಸುತ್ತಿರುವ ರೈತರು, ಮುಂಜಾಗ್ರತೆ ಕ್ರಮಕ್ಕೆ ಅಧಿಕಾರಿಗಳ ಸಲಹೆ
Last Updated 6 ಮೇ 2020, 16:30 IST
ಅಕ್ಷರ ಗಾತ್ರ

ಸಾದಲಿ: ಲಾಕ್‌ಡೌನ್‌ ನಡುವೆ ಗ್ರಾಮೀಣ ಭಾಗದಲ್ಲಿ ರೈತರು ಮಾಗಿ ಉಳುಮೆ ಕಾರ್ಯದಲ್ಲಿ ತೊಡಗಿದ್ದಾರೆ. ರಾಗಿ ಬಿತ್ತನೆಗೊ ಮುನ್ನ ಜಮೀನನ್ನು ಹದಗೊಳಿಸುವ ಕಾರ್ಯ ಸದ್ದಿಲ್ಲದೆ ಸಾಗುತ್ತಿದೆ.

ಸಹಜವಾಗಿ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ವಿಪರೀತ ಬಿಸಿಲು ಇರುತ್ತದೆ. ಈ ಕಾಲದಲ್ಲಿ ಜಮೀನಿನಲ್ಲಿ ಮಾಗಿ ಉಳುಮೆ ಮಾಡುವುದರಿಂದ ಜಮೀನಿನಲ್ಲಿನ ರೋಗಾಣು ಜೀವಿಗಳು, ಕ್ರಿಮಿಕೀಟಗಳು ನಾಶವಾಗುತ್ತವೆ.

ನಂತರ ಬೀಳುವ ಮುಂಗಾರು ಮಳೆಗೆ ಜಮೀನು ಹದವಾಗಿ ಬಿತ್ತನೆ ಮಾಡಿದ ಕಾಳು ಮೊಳಕೆಯೊಡೆದು ಉತ್ತಮ ಫಸಲು ಸಿಗುತ್ತದೆ. ಹಾಗಾಗಿ ಈ ಸಮಯದಲ್ಲಿ ಭೂಮಿಯನ್ನು ಹದಗೊಳಿಸಿದಾಗ ಕೀಟಗಳು ನಾಶವಾಗಿ ಮುಂದೆ ಉತ್ತಮ ಇಳುವರಿಯೂ ಸಿಗುತ್ತದೆ ಎನ್ನುತ್ತಾರೆ ರೈತರು.

ಟ್ರ್ಯಾಕ್ಟರ್‌ಗಳಿಗೆ ಬೇಡಿಕೆ: ವರ್ಷದಿಂದ ವರ್ಷಕ್ಕೆ ಗ್ರಾಮೀಣ ಭಾಗದಲ್ಲಿ ಎತ್ತುಗಳ ಸಂಖ್ಯೆ ಕಡಿಮೆಯಾಗುತ್ತಿವೆ. ಹಿಂದೆ ಒಂದು ಸಣ್ಣ ಗ್ರಾಮದಲ್ಲಿ ಕನಿಷ್ಠ 10 ಜೋಡಿ ಎತ್ತುಗಳಾದರೂ ಇರುತ್ತಿದ್ದವು. ಇಂದು ಕೆಲವು ಗ್ರಾಮಗಳಲ್ಲಿ 1 ಜೋಡಿ ಎತ್ತುಗಳು ಸಿಗದಂತಾಗಿವೆ. ಹಾಗಾಗಿ ಸಹಜವಾಗಿ ಟ್ರಾಕ್ಟರ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ.

ಮೇ ಮೊದಲ ವಾರದಿಂದ ಸಾಮಾನ್ಯವಾಗಿ ರಾಗಿ ಬಿತ್ತನೆ ಕಾರ್ಯ ಶುರುವಾಗಲಿದೆ. ಸ್ವಂತ ಎತ್ತುಗಳು ಇರುವ ಅನೇಕ ರೈತರು ತಮ್ಮ ಹೊಲಗಳಲ್ಲಿ ಈಗಾಗಲೇ ಮಾಗಿ ಉಳುಮೆ ಕಾರ್ಯ ಕೈಗೊಂಡಿದ್ದಾರೆ. ಸಾದಲಿಯಲ್ಲಿ ರೈತ ಸಂಪರ್ಕ ಕೇಂದ್ರ ತೆರೆಯಲಾಗಿದ್ದು, ರೈತರಿಗೆ ಅಗತ್ಯವಾದ ಸಲಹೆ ಸೂಚನೆ ಮತ್ತು ಮಾರ್ಗದರ್ಶನ ನೀಡಲಾಗುತ್ತಿದೆ. ರಸಗೊಬ್ಬರಗಳು, ಬಿತ್ತನೆ ಬೀಜಗಳು ಇಲ್ಲಿ ಸಿಗುತ್ತವೆ ಎಂದು ಕೃಷಿ ಸಹಾಯಕ ಮೋಹನ್ ತಿಳಿಸಿದರು.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಈ ವರ್ಷವೂ ಸುಮಾರು 17,331 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಸೇರಿದಂತೆ ನೆಲಗಡಲೆ ಇನ್ನಿತರ ಮಳೆ ಆಶ್ರಿತ ಬೆಳೆ ಬಿತ್ತನೆ ಮಾಡುವ ಸಾಧ್ಯತೆ ಇದೆ. ಪ್ರಮುಖವಾಗಿ ರಾಗಿ ನೆಲೆಗಡಲೆಯೊಂದಿಗೆ ಮಿಶ್ರ ಬೆಳೆಗಳಾಗಿ ತೊಗರಿ, ಅಲಸಂದಿ, ಸೂರ್ಯಕಾಂತಿ, ಮುಸುಕಿನ ಜೋಳ, ಅವರೆ ಧಾನ್ಯಗಳೊಂದಿಗೆ ಮೇವಿನ ಜೋಳವನ್ನು ಹೆಚ್ಚು ಪ್ರದೇಶದಲ್ಲಿ ಬೆಳೆಯಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT