ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶ ಯೋಗ ಕೇಂದ್ರದಲ್ಲಿ ‘ಸಪ್ತ ಋಷಿ ಆವಾಹನಂ’

Last Updated 19 ಮಾರ್ಚ್ 2023, 7:34 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತಾಲ್ಲೂಕಿನ ಆವಲಗುರ್ಕಿ ಬಳಿಯ ಈಶ ಯೋಗ ಕೇಂದ್ರದಲ್ಲಿ ಶನಿವಾರ ಸಂಜೆ ‘ಸಪ್ತ ಋಷಿ ಆವಾಹನಂ’ ಕಾರ್ಯಕ್ರಮ ನಡೆಯಿತು. ಕೇಂದ್ರದಲ್ಲಿನ ಯೋಗೇಶ್ವರ ಲಿಂಗಕ್ಕೆ ಕಾಶಿಯ ಏಳು ಅರ್ಚಕರು ಪೂಜೆ ನೆರವೇರಿಸಿದರು. ಕಾಶಿಯ ವಿಶ್ವೇಶ್ವರ ಲಿಂಗಕ್ಕೆ ಮಾತ್ರ ‘ಸಪ್ತ ಋಷಿ ಆವಾಹನಂ’ ಪೂಜೆ ನೆರವೇರುತ್ತದೆ.

ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಯೋಗದ ಮೂಲಪುರುಷ ಆದಿಯೋಗಿ. ಆದಿಯೋಗಿ ಬಹಳ ಜನರಿಗೆ ಗೊತ್ತಿರಲಿಲ್ಲ. ಇಂತಹ ಆದಿಯೋಗಿಯನ್ನು 21ಕ್ಕೆ ಶತಮಾನಕ್ಕೆ ತಂದುಕೊಟ್ಟವರು ಸದ್ಗುರು’ ಎಂದು ಪ್ರಶಂಸಿಸಿದರು.

ಸದ್ಗುರು ಅವರು ಅಂತರರಾಷ್ಟ್ರೀಯ ಮಟ್ಟದ ಭಾರತದ ಅಧ್ಯಾತ್ಮ ರಾಯಭಾರಿ. ಈ ಹಿಂದೆ ಕಂಡರಿಯದ ರೀತಿಯಲ್ಲಿ ಭಾರತದ ಸಂಸ್ಕೃತಿ ಮತ್ತು ಯೋಗವನ್ನು ಜಗತ್ತಿಗೆ ಸಾರುತ್ತಿದ್ದಾರೆ ಎಂದು ಹೇಳಿದರು.

ಇಲ್ಲಿ ಭಾರತೀಯ ಸಂಪ್ರದಾಯ, ಪರಂಪರೆಗೆ ಊನ ಬರದಂತೆ ಆದಿಯೋಗಿ, ಯೋಗೇಶ್ವರ ಲಿಂಗ ಹಾಗೂ ನಾಗನನ್ನು ಪ್ರತಿಷ್ಠಾಪಿಸಲಾಗಿದೆ. ಬೆಟ್ಟಗಳ ಸಾಲಿನ ಇದು ಆಕರ್ಷಣೆಯ ಪ್ರವಾಸಿ ತಾಣವಲ್ಲ, ಜನರ ಆತ್ಮಕ್ಕೆ ತಂಪು ನೀಡುವ ಸ್ಥಳ ಎಂದರು.

ಜಗತ್ತು ಯೋಗ ಮಾರ್ಗದಲ್ಲಿ ನಡೆಯುತ್ತಿದೆ. ಯೋಗ ಮನುಷ್ಯನಿಗೆ ಅಗತ್ಯವಾದುದು. ಎಲ್ಲಿ ಯೋಗ ಶಕ್ತಿ ಜಾಗೃತವಾಗುತ್ತದೆಯೊ ಅಲ್ಲಿ ರಾಗ, ದ್ವೇಷಗಳಿಗೆ ಅವಕಾಶವಿಲ್ಲ. ಮನುಷ್ಯ ರಾಗ, ದ್ವೇಷಗಳಿಂದ ಬಿಡುಗಡೆಯಾಗಿ ಸಾತ್ವಿಕ ಬದುಕು ನಡೆಸಬೇಕಾದರೆ ಯೋಗ ಶಕ್ತಿ ಅಗತ್ಯ ಎಂದರು.

ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, ಭಾರತ ಯೋಗ ಮತ್ತು ಅಧ್ಯಾತ್ಮದ ವಿಚಾರದಲ್ಲಿ ಪ್ರಪಂಚಕ್ಕೆ ಗುರು ಸ್ಥಾನವನ್ನು ಹೊಂದಿದೆ. ಸದ್ಗುರು ಅವರು ವಿಶ್ವದ ಜನರಿಂದ ಭಾರತದ ಹೆಸರನ್ನು ಹೇಳಿಸುತ್ತಿದ್ದಾರೆ ಎಂದರು.

ಜಗತ್ತು ಉಳಿಯಬೇಕು ಎಂದರೆ ಮಣ್ಣು, ನೀರು ಉಳಿಯಬೇಕು ಎಂದು ದೊಡ್ಡ ಆಂದೋಲನ ಮಾಡಿದರು.‌ ಜಗತ್ತಿನ ಎಲ್ಲದಕ್ಕೂ ಪರಿಹಾರ ಸದ್ಗುರು ಅವರ ಸನ್ನಿಧಾನದಲ್ಲಿ ಇದೆ. ಮುಂದಿನ ಐದು ವರ್ಷದಲ್ಲಿ ಪ್ರಪಂಚದ ಭೂಪಟದಲ್ಲಿ ಚಿಕ್ಕಬಳ್ಲಾಪುರದ ಹೆಸರು ಎದ್ದು ಕಾಣುತ್ತದೆ ಎಂದು ಹೇಳಿದರು.

ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಮನುಷ್ಯ ಜ್ಞಾನಕ್ಕಾಗಿ ಹಂಬಲಿಸುವ ಶಿಶು. ನಾವು ಹಚ್ಚುವ ದೀಪ ನಂದುವ ದೀಪ. ಸದ್ಗುರು ಹಚ್ಚಿದ ದೀಪ ಜ್ಞಾನದ, ಪ್ರೇಮದ ದೀಪ. ಇದು ನಂದುವುದಿಲ್ಲ ಎಂದರು.

ಯಾರ ದೇಹ, ಮನಸ್ಸು, ಹೃದಯ ಪವಿತ್ರವಾಗಿದೆಯೊ ಅವರನ್ನು ಸದ್ಗುರು ಎನ್ನಬೇಕು. ಯಾರಿಂದಲೂ ಏನನ್ನೂ ಅಪೇಕ್ಷಿಸದವರು ಸದ್ಗುರು. ಬೆಂದು ಹೋಗಿರುವ ಜೀವನಕ್ಕೆ ಸದ್ಗುರುಗಳ ನುಡಿ ಎಂದರೆ ಅದು ತಾಯಿಯ ಜೋಗುಳದಂತೆ ಎಂದು ಹೇಳಿದರು.

ಮಣ್ಣಿನ ರಕ್ಷಣೆಯೂ ಆಗಬೇಕು. ಮನಸ್ಸಿನ ರಕ್ಷಣೆಯೂ ಆಗಬೇಕು. ಸದ್ಗುರು ಅವರು ಈ ಎರಡೂ ಕೆಲಸಗಳನ್ನು ಮಾಡಿದ್ದಾರೆ ಎಂದು ಬಣ್ಣಿಸಿದರು.

***

‘ಜಾತಿ, ಮತ ಪಂಥಗಳಿಂದ ವಿಭಜನೆ’

ಸದ್ಗುರು ಜಗ್ಗಿ ವಾಸುದೇವ್ ಮಾತನಾಡಿ, ಮನುಷ್ಯರು ಜಾತಿ, ಮತ, ಪಂಥದ ಸೀಮಿತ ಗಡಿಗಳಲ್ಲಿ ಬದುಕಿದ್ದಾರೆ. ಅವುಗಳ ಮೂಲಕ ವಿಭಜಿಸಿಕೊಳ್ಳಲು ನಿರತರಾಗಿದ್ದಾರೆ. ಇದರಿಂದ ವಿನಾಶದ ಹಾದಿಯಲ್ಲಿ ಸಾಗಬೇಕಾಗುತ್ತದೆ ಎಂದರು.

ಸೂಕ್ಷ್ಮಾಣುಗಳು ಮಣ್ಣಿನಲ್ಲಿ ಕಡಿಮೆಯಾದಂತೆ ಮನುಷ್ಯ ಜನಾಂಗದ ಮಾನಸಿಕ ಆರೋಗ್ಯ ಸಹ ಕುಸಿಯುತ್ತದೆ. ಈ ಹಿಂದೆ ಇಷ್ಟು ಆಸ್ಪತ್ರೆಗಳು, ವೈದ್ಯರು ಇರಲಿಲ್ಲ. ಕೆಲವು ದೇಶಗಳಲ್ಲಿ ಆರೋಗ್ಯಕ್ಕೆ ಹೆಚ್ಚು ಹಣ ವ್ಯಯಿಸುತ್ತಿದ್ದಾರೆ ಎಂದು ಹೇಳಿದರು.

ನಮ್ಮ ಯೋಚನೆ, ಭಾವನೆ, ಜೀವ ಚೈತನ್ಯವನ್ನು ಪ್ರಜ್ಞಾಪೂರ್ವಕವಾಗಿ ನಡೆಸಬೇಕು. ಇಲ್ಲದಿದ್ದರೆ ಸಮಸ್ಯೆ ಎದುರಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT