ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ವೈಷ್ಣವ ಆಲಯಗಳಲ್ಲಿ ಶ್ರೀನಿವಾಸನ ಜಪ

ವೈಕುಂಠ ಏಕಾದಶಿ: ಬೆಳಿಗ್ಗೆಯಿಂದಲೇ ದೇವಾಲಯಗಳತ್ತ ಹರಿದು ಬಂದ ಭಕ್ತ ಸಮೂಹ, ದಿನವೀಡಿ ಬಗೆಬಗೆಯ ಧಾರ್ಮಿಕ ಕೈಂಕರ್ಯಗಳ ಆಚರಣೆ
Last Updated 6 ಜನವರಿ 2020, 11:27 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ವೈಕುಂಠ ಏಕಾದಶಿ ಪ್ರಯುಕ್ತ ಸೋಮವಾರ ಜಿಲ್ಲೆಯಾದ್ಯಂತ ವೆಂಕಟೇಶ್ವರ, ನಾರಾಯಣ, ಶ್ರೀನಿವಾಸ, ವಿಷ್ಣು ದೇವಸ್ಥಾನಗಳಲ್ಲಿ ಹಬ್ಬದ ಸಡಗರ ಮನೆ ಮಾಡಿತ್ತು. ವೈಷ್ಣವ ಆಲಯಗಳಲ್ಲಿ ವಿಶೇಷವಾಗಿ ವೈಕುಂಠ ದ್ವಾರ ರೂಪಿಸಿ, ಭಕ್ತರಿಗೆ ಪ್ರವೇಶ ಕಲ್ಪಿಸಲಾಗಿತ್ತು. ಬೆಳಿಗ್ಗೆಯಿಂದಲೇ ದೇವಾಲಯಗಳಲ್ಲಿ ದೇವರ ದರ್ಶನಕ್ಕಾಗಿ ಸಾಲುಗಳು ಕಂಡು ಬಂದವು.

ದೇವಾಲಯಗಳಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ವಿಶೇಷ ಪೂಜೆ, ಉತ್ಸವ ಮೂರ್ತಿಗೆ ಅಲಂಕಾರ, ವೈಕುಂಠ ದ್ವಾರದ ಪೂಜೆ, ನಾರಾಯಣನ ದರ್ಶನ ಮುಂತಾದ ಧಾರ್ಮಿಕ ಕೈಂಕರ್ಯಗಳು ಜರುಗಿದವು.

ನಗರದ ಕಂದವಾರಪೇಟೆಯ ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯ, ವೇಣುಗೋಪಾಕೃಷ್ಣ ದೇವಾಲಯ, ಕೋದಂಡರಾಮಸ್ವಾಮಿ ದೇವಾಲಯ, ರಂಗನಾಥಸ್ವಾಮಿ ದೇವಾಲಯ, ಶಿರಡಿಸಾಯಿ ಬಾಬಾ ದೇವಾಲಯ, ಪೇಟೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಭಕ್ತರು ದರ್ಶನಕ್ಕೆ ಮುಗಿಬಿದ್ದಿದ್ದರು. ಭಕ್ತರು ದೈವದ ಚಿನ್ಹೆಯಾದ ನಾಮವನ್ನು ಹಣೆ ಮೇಲೆ ಧರಿಸಿಕೊಳ್ಳುತ್ತಿದ್ದದ್ದು ಕಂಡುಬಂತು.

ನಗರದ ಕಂದವಾರಪೇಟೆಯ ಲಕ್ಷ್ಮಿವೆಂಕಟರಮಣಸ್ವಾಮಿ ಮತ್ತು ರಂಗಸ್ಥಳದ ರಂಗನಾಥಸ್ವಾಮಿ ದೇವಾಲಯಕ್ಕೆ ಭಕ್ತರು ನಸುಕಿನಲ್ಲೇ ದರ್ಶನಕ್ಕೆ ಸಾಲುಗಟ್ಟಿ ನಿಂತಿದ್ದರು. ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ನಗರದ ಗಂಗಮ್ಮನ ಗುಡಿ ರಸ್ತೆಯ ಪೇಟೆ ಆಂಜನೇಯಸ್ವಾಮಿ ದೇವಾಲಯದಲ್ಲಿ ವೈಕುಂಠ ದಾರಿಯ ಪ್ರತಿಕೃತಿ ಒಳಗೆ ಮೂಲಕ ಪ್ರವೇಶಿಸುವ ವ್ಯವಸ್ಥೆ ಮಾಡಲಾಗಿತ್ತು.

ತಾಲ್ಲೂಕಿನ ಕೊಟಗಾರ್ಲಹಳ್ಳಿ ಬಳಿಯ ಶ್ರೀನಿವಾಸ ಸಾಗರ ಜಲಾಶಯಕ್ಕೆ ಹೊಂದಿಕೊಂಡಂತಿರುವ ವೆಂಕಟೇಶ್ವರಸ್ವಾಮಿ ದೇವಾಲಯಕ್ಕೆ ಭಕ್ತ ಸಮೂಹ ಹರಿದು ಬಂದಿತ್ತು. ವೈಕುಂಠ ಏಕಾದಶಿ ಪ್ರಯುಕ್ತ ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ದೇಗುಲದಲ್ಲಿ ಬೆಳಿಗ್ಗೆ 5 ಗಂಟೆ ಸುಪ್ರಭಾತ ಸೇವೆ, ಅಭಿಷೇಕ, ಉತ್ಸವ ಸೇರಿದಂತೆ ಹಲವು ಧಾರ್ಮಿಕ ಕೈಂಕರ್ಯಗಳು ನಡೆದವು. ಭಕ್ತರಿಗೆ ಸಿಹಿ ಪೊಂಗಲ್ ಪ್ರಸಾದ ರೂಪದಲ್ಲಿ ವಿತರಿಸಲಾಯಿತು.

ತಾಲ್ಲೂಕಿನ ನಂದಿ ಹೋಬಳಿಯ ಗೋಪಿನಾಥ ಬೆಟ್ಟದಲ್ಲಿರುವ ಗೋವರ್ಧನಗಿರಿ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಫಲ ಪಂಚಾಮವೃತಾಭಿಷೇಕ, ಮಂಗಳ ದ್ರವ್ಯ ಸಹಿತ ಮಹಾಅಭಿಷೇಕ, ಬೆಳಿಗ್ಗೆ 5.30ಕ್ಕೆ ವೈಕುಂಠದ್ವಾರದಲ್ಲಿ ಸ್ವಾಮಿಗೆ ವಿಶೇಷ ಪೂಜೆ, ಪ್ರವೇಶ, ಅಷ್ಠಾವಧಾನ ಸೇವೆ, ಮಹಾಮಂಗಳಾರತಿ ಸೇರಿದಂತೆ ಅನೇಕ ಧಾರ್ಮಿಕ ಕೈಂಕರ್ಯಗಳು ನೆರವೇರಿಸಲಾಯಿತು. ಭಕ್ತರು ವೈಕುಂಠ ದ್ವಾರದಲ್ಲಿ ಹಾದು ಹೋಗುವ ಮೂಲಕ ಧನ್ಯತೆಯಲ್ಲಿ ಮಿಂದೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT