ಬಾಗೇಪಲ್ಲಿ: ‘ಗ್ಯಾರಂಟಿ ಯೋಜನೆ, ಕಾಮಗಾರಿಗಳಲ್ಲಿ ಹಾಗೂ ಮಂಡಳಿಗಳ ಹೆಸರಿನಲ್ಲಿ ರಾಜ್ಯ ಸರ್ಕಾರ ಭ್ರಷ್ಟಾಚಾರ ಮಾಡಿ ಜನರ ಹಣವನ್ನು ಲೂಟಿ ಮಾಡುತ್ತಿದೆ’ ಎಂದು ಸಂಸದ ಡಾ.ಕೆ.ಸುಧಾಕರ್ ಸರ್ಕಾರದ ವಿರುದ್ಧ ಗುಡುಗಿದರು.
ಪಟ್ಟಣದ ಹೊರವಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಹಿಮಾಚಲ ಪ್ರದೇಶದಲ್ಲಿ ಸರ್ಕಾರಿ ನೌಕರರಿಗೆ, ಅಧಿಕಾರಿಗಳಿಗೆ ವೇತನ ವಿತರಿಸಲು ಹಣ ಇಲ್ಲ. ಇದರಿಂದ ಅಲ್ಲಿನ ಕಾಂಗ್ರೆಸ್ ಸರ್ಕಾರ, ಕೇಂದ್ರ ಸರ್ಕಾರದ ಮೊರೆ ಹೋಗಿದೆ. ರಾಜ್ಯದಲ್ಲಿ ಇದೀಗ ಸರ್ಕಾರಿ ನೌಕರರಿಗೆ ವೇತನ ನೀಡಲು ಹಣದ ಕೊರತೆ ಇದೆ. ಮುಂದೊಮ್ಮೆ ಹಿಮಾಚಲಪ್ರದೇಶದ ಗತಿಯಂತೆ ರಾಜ್ಯಕ್ಕೆ ಬರಲಿದೆ’ ಎಂದರು.
‘ರಾಜ್ಯ ಸರ್ಕಾರ ವಿವಿಧ ಯೋಜನೆ, ಕಾಮಗಾರಿಗಳಲ್ಲಿ, ಮಂಡಳಿ ಹೆಸರಿನಲ್ಲಿ ಹಣ ಲೂಟಿ ಮಾಡಿದೆ. ಮುಡಾ ಪ್ರಕರಣದಲ್ಲಿ ಸಚಿವರೇ ಶಾಮೀಲು ಆಗಿದ್ದಾರೆ ಎಂದು ತನಿಖೆಯಲ್ಲಿ ಬಹಿರಂಗ ಆಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಎತ್ತಿನಹೊಳೆ ಜಾರಿಗೆ ಮಾಡಿ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಹರಿಸಲು ಯೋಜನೆ ಮಾಡಲಾಗಿದೆ. ಇದೀಗ ಎತ್ತಿನಹೊಳೆ ಯೋಜನೆ ಜಾರಿ ಮಾಡಿದ್ದು ನಾವು ಎಂದು ಕಾಂಗ್ರೆಸ್ ಹೇಳಿಕೊಂಡಿರುವುದು ರಾಜಕೀಯ ಪ್ರೇರಿತ’ ಎಂದರು.
‘ಕಾಂಗ್ರೆಸ್‌ನವರು ತಮ್ಮ ಭ್ರಷ್ಟಾಚಾರ ಮರೆಮಾಚಲು, ಕೊರೊನಾ ಅವಧಿಯಲ್ಲಿನ ವರದಿ ತರಿಸಿದ್ದಾರೆ. ಎಂದಿಗೂ ನ್ಯಾಯಕ್ಕೆ ಜಯ ಸಿಗಲಿದೆ. ಯಾವುದೇ ತನಿಖೆಗೆ ನಾನು ಸಿದ್ಧ ಇದ್ದೇನೆ. ಅಭಿವೃದ್ಧಿ ಮಾಡಿ ಎಂದು ಜನರು ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರ ಕೊಟ್ಟರೆ, ಜನರ ಹಣದಲ್ಲಿ ಮಜಾ ಮಾಡುತ್ತಿರುವುದು ನಾಚಿಕೆ ಆಗಬೇಕು. ಸರ್ಕಾರದ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ. ಕಳೆದ 3 ದಿನಗಳ ಸಂಸದರ ಅಧಿಕಾರದ ಅವಧಿಯಲ್ಲಿ ₹171 ಕೋಟಿ ಕೇಂದ್ರದ ಹಣ ಅನುದಾನ ತಂದು ಅಭಿವೃದ್ಧಿ ಪಡಿಸಿದ್ದೇನೆ. ಬೆಂಗಳೂರು-ಹೈದರಾಬಾದ್ ದಶರಥ ರಸ್ತೆ ಮಾಡಿಸಿ, ಹೆಚ್ಚು ಕೈಗಾರಿಕೆ ಪ್ರದೇಶಗಳನ್ನು ಆರಂಭಿಸಲಾಗುವುದು’ ಎಂದರು.
‘ಬಾಗೇಪಲ್ಲಿ ಕ್ಷೇತ್ರಕ್ಕೆ ಆಂಧ್ರಪ್ರದೇಶದ ಗಡಿಯವರೆಗೆ ಹರಿದ ಕೃಷ್ಣಾ ನದಿಯ ನೀರನ್ನು ಹರಿಸಲು ಸುಲಭ. ಎರಡೂ ರಾಜ್ಯಗಳು ಸಮನ್ವಯದಿಮದ ಚರ್ಚೆ ಮಾಡಬೇಕು. ಈ ಭಾಗಕ್ಕೆ ನೀರು ಹರಿಸಲು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬುನಾಯ್ಡುರವರ ಬಳಿ ನಮ್ಮ ರಾಜ್ಯದ ಸಚಿವರು, ಅಧಿಕಾರಿಗಳ ನಿಯೋಗ ತೆರಳಿ ಕೃಷಿಗೆ ಹಾಗೂ ಕುಡಿಯುವ ನೀರಿಗೆ ಅನುಕೂಲ ಮಾಡುವಂತೆ ಮನವಿ ಮಾಡಬೇಕು. ನಿಯೋಗದಲ್ಲಿ ನಾನು ಭಾಗವಹಿಸುವೆ’ ಎಂದರು.
‘ಮುಂದಿನ ನನ್ನ ಅಧಿಕಾರದ ಅವಧಿಯಲ್ಲಿ ಬಾಗೇಪಲ್ಲಿ ಕ್ಷೇತ್ರಕ್ಕೆ ಶಾಶ್ವತ ನೀರಾವರಿ, ಚಿಕ್ಕಬಳ್ಳಾಪುರ-ಪುಟ್ಟಪರ್ತಿಗೆ ರೈಲ್ವೆ ಸಂಪರ್ಕ, ದಶಪಥರಸ್ತೆ, ಕೈಗಾರಿಕೆ ಸ್ಥಾಪನೆ ಮಾಡುತ್ತೇನೆ’ ಎಂದರು.
‘3 ಬಾರಿ ಶಾಸಕರಾದ ಎಸ್.ಎನ್.ಸುಬ್ಬಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಯಾವೊಬ್ಬ ಜನಪ್ರತಿನಿಧಿ ತುಟಿಬಿಚ್ಚಿಲ್ಲ. 3 ಬಾರಿ ಶಾಸಕರಾಗಿದ್ದರೂ ಕ್ಷೇತ್ರದಲ್ಲಿ ಶಾಶ್ವತ ಯೋಜನೆ ಮಾಡಿಲ್ಲ. ಸರ್ಕಾರಗಳಿಂದ ಬಂದ ಅನುದಾನದ ಪ್ರಗತಿ ಎಲ್ಲಿ ನಡೆದಿದೆಯೋ? ಗೊತ್ತಿಲ್ಲ’ ಎಂದು ಆರೋಪಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ ಮಾತನಾಡಿ, ‘ಕೊರೊನಾ ಸಂದರ್ಭದಲ್ಲಿ ಅಂದಿನ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವರು ಉಚಿತ ಲಸಿಕೆ ನೀಡಿ ಕೋಟ್ಯಂತರ ಜನರ ಪ್ರಾಣ ರಕ್ಷಿಸಿದ್ದಾರೆ. ಬಾಗೇಪಲ್ಲಿ ಕ್ಷೇತ್ರಕ್ಕೆ ಶಾಶ್ವತ ನೀರಾವರಿ, ರೈಲ್ವೆ, ಕೈಗಾರಿಕೆಗಳು ಮಾಡಿಸಬೇಕು’ ಎಂದು ಸಂಸದರಿಗೆ ಮನವಿ ಮಾಡಿದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಹರಿನಾಥರೆಡ್ಡಿ ಮಾತನಾಡಿ, ‘ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಸಂಸದ ಡಾ.ಕೆ.ಸುಧಾಕರ್ ಅವರ ಅಭಿನಂದನಾ ಕಾರ್ಯಕ್ರಮ ಮಾಡಬೇಕಾಗಿತ್ತು. ಮುಂದೊಮ್ಮೆ ಕಾರ್ಯಕ್ರಮಕ್ಕೆ ಬರುವ ನಿರೀಕ್ಷೆ ಇದೆ’ ಎಂದರು.
ಒಕ್ಕಲಿಗರ ಸಂಘದ ರಾಜ್ಯ ನಿದೇರ್ಶಕ ಕೋನಪ್ಪರೆಡ್ಡಿ, ನಿವೃತ್ತ ಪ್ರಾಂಶುಪಾಲ ಕೆ.ಟಿ.ವೀರಾಂಜನೇಯ, ಜೆಡಿಎಸ್ ಜಿಲ್ಲಾಧ್ಯಕ್ಷ ಮುನಿಯಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಕೆ.ವಿ.ನಾಗರಾಜ್, ಪಾವಜೇನಹಳ್ಳಿ ನಾಗರಾಜರೆಡ್ಡಿ, ಹೊಸಹುಡ್ಯ ವೆಂಕಟಶಿವಾರೆಡ್ಡಿ, ನಿರ್ಮಲಮ್ಮ, ಜೆ.ಪಿ.ಚಂದ್ರಶೇಖರ ರೆಡ್ಡಿ, ಎಸ್.ಆರ್.ಲಕ್ಷ್ಮಿನಾರಾಯಣ, ಜಿ.ಎಸ್.ಚೌಡರೆಡ್ಡಿ, ಶ್ರೀನಿವಾಸರೆಡ್ಡಿ, ಸುಧಾಕರರೆಡ್ಡಿ, ಆಂಜಿನಪ್ಪ, ಎಸ್.ಟಿ.ಚಂದ್ರಮೋಹನ್, ಎ.ನರಸಿಂಹಮೂರ್ತಿ, ಪೋತೇಪಲ್ಲಿ ವೆಂಕಟರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.