ಭಾನುವಾರ, ನವೆಂಬರ್ 29, 2020
24 °C
ಕಂದಾಯ ನೌಕರರ ಸಭೆ

ಭ್ರಷ್ಟಾಚಾರಕ್ಕೆ ಕಠಿಣ ಕ್ರಮ: ಶಾಸಕ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗೇಪಲ್ಲಿ: ‘ರಿಯಲ್ ಎಸ್ಟೇಟ್ ಹಾಗೂ ಶ್ರೀಮಂತರ ಕೆಲಸಗಳನ್ನು ಬೇಗ ಮಾಡಿ ಕೊಡುವ ಕಂದಾಯ ಇಲಾಖೆಯ ನೌಕರರು ಬಡವರ ಕೆಲಸಗಳನ್ನು ಅಷ್ಟೇ ಮುತುವರ್ಜಿಯಿಂದ ಮಾಡಬೇಕು. ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ಮಾಡಿದರೆ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ನೌಕರರಿಗೆ ಎಚ್ಚರಿಕೆ ನೀಡಿದರು.

ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಂದಾಯ ನೌಕರರ ಸಭೆಯಲ್ಲಿ ಮಾತನಾಡಿದರು.

‘ಕೆಲ ಕಂದಾಯ ನೌಕರರು ದೊಡ್ಡ ಕಾರುಗಳಲ್ಲಿ ಬರುವವರಿಗೆ, ಶ್ರೀಮಂತರಿಗೆ ರಾಜಾತಿಥ್ಯದ ಜೊತೆಗೆ ತ್ವರಿತವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಬಡವರು ಕಚೇರಿಗಳಿಗೆ ಸುತ್ತಿದರೂ ಕೆಲಸ ಮಾಡಿಕೊಡುತ್ತಿಲ್ಲ ಎಂದು ಸಾರ್ವಜನಿಕರಿಂದ ದೂರುಗಳು ನಿರಂತರವಾಗಿ ಬರುತ್ತಿದೆ. ಸರ್ಕಾರದ ನಿಯಾಮಾನುಸಾರವಾಗಿ ಬಡವರಿಗೆ ಕೆಲಸಗಳನ್ನು ಮಾಡಬೇಕು. ಆದರೆ ಕಚೇರಿಗಳಿಗೆ ಏಕೆ ಸುತ್ತಿಸುವಿರಿ?’ ಎಂದು ಸುಬ್ಬಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.

‘ಜನನ, ಮರಣ, ಪಾವತಿ, ಸಂಧ್ಯಾ ಸುರಕ್ಷಾ, ವಿಧವಾ, ಹಾಗು ವೃದ್ಧಾಪ್ಯ ವೇತನಗಳನ್ನು ಹಾಗೂ ಸೂಕ್ತ ದಾಖಲೆಗಳನ್ನು ಕೊಡಲು ದಿನಗಳಗಟ್ಟಲೇ ಬೇಕಾಗಿದೆಯೇ’ ಎಂದು ಪ್ರಶ್ನಿಸಿದರು.

‘ಇಲಾಖೆಯಲ್ಲಿ ವ್ಯಾಪಕವಾದ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸಹ ಸಾರ್ವಜನಿಕರಿಂದ ದೂರು ಬಂದಿದೆ. ಮುಂದಿನ ದಿನಗಳಲ್ಲಿ ನೌಕರರು ಲಂಚ ಕೇಳಿದರೆ, ಹಾಗೂ ಭ್ರಷ್ಟಾಚಾರ ಮಾಡಿದರೆ ಅಂತಹ ನೌಕರರ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡುತ್ತೇನೆ’ ಎಂದು ತಿಳಿಸಿದರು.

‘ಗ್ರಾಮ, ಹೋಬಳಿ, ತಾಲ್ಲೂಕು ಮಟ್ಟದ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿಯೇ ವಾಸ್ತವ್ಯ ಇರಬೇಕು ಎಂದು ಸರ್ಕಾರದ ನಿಯಮ ಇದೆ. ಆದರೆ ಕೆಲ ಅಧಿಕಾರಿಗಳು ಸಾರ್ವಜನಿಕರಿಗೆ ಕಚೇರಿಗಳಲ್ಲಿ ಸಿಗುತ್ತಿಲ್ಲ. ಈ ಹಿಂದೆ ಒಂದು ಇಲಾಖೆಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ನಾನೇ ಲೋಕಾಯುಕ್ತಕ್ಕೆ ದೂರು ನೀಡಿದ್ದೇನೆ. ತಪ್ಪಿತಸ್ಥರ ವಿರುದ್ಧ ಕ್ರಮ ನಡೆದಿದೆ. ಇದೀಗ ಸಹ ಬಡವರ, ರೈತರ ಬಗ್ಗೆ ಅಸಡ್ಡೆ ಮಾಡಿದರೆ ಮುಲಾಜಿಲ್ಲದೇ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮೀನರಸಿಂಹಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಆರ್.ನರೇಂದ್ರಬಾಬು, ಗ್ರೇಡ್-2 ತಹಶೀಲ್ದಾರ್ ನಾಗರಾಜ್ ಸೇರಿದಂತೆ ತಾಲ್ಲೂಕಿನ ಕಂದಾಯ ನೌಕರರು ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.