ಶಿಡ್ಲಘಟ್ಟ: ಸುಮಾರು 1451 ರಿಂದ 1669 ರವರೆಗೆ ಪಾಳೆಪಟ್ಟು ರಾಜರಿಗೆ ರಾಜಧಾನಿಯಾಗಿ ಕಲೆಗೆ ಹೆಸರಾದ ಅರಮನೆ, ಲತಾಮಂಟಪ, ಉದ್ಯಾನ, ಕೃಷಿ ಗದ್ದೆಗಳ ದೃಶ್ಯಾವಳಿಗಳಿದ್ದ ಪುರಾತನ ಸುಗಟೂರು ಗ್ರಾಮದಲ್ಲಿ ಸುಂದರವಾದ ಶಾಲೆ ಈಗ ಇತಿಹಾಸವನ್ನು ಮರುಸೃಷ್ಟಿಸಿದೆ.
ಇಲ್ಲಿನ ಶಾಲೆಯು ಊರ ಮಧ್ಯಭಾಗದಲ್ಲಿ ಸುಮಾರು 1950 ರಿಂದಲೂ ಇದ್ದು ಕಳೆದ 20 ವರ್ಷಗಳ ಹಿಂದೆ ಕಾಂಪೌಂಡ್, ಆಟದ ಮೈದಾನ, ಕೊಠಡಿಗಳ ಶಿಥಿಲತೆಯಿಂದ ನಲುಗುತ್ತಿತ್ತು. ಆದರೆ ಇದೀಗ ರಾಜಧಾನಿಯ ಶಾಲೆಗೆ ಸರಿಸಮಾನವಾಗಿ ಬಣ್ಣದಿಂದ ಸುಂದರ, ಆಕರ್ಷಕವಾಗಿದ್ದು ಉತ್ತಮ ಭೌತಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕವಾಗಿ ಉತ್ತಮ ಪರಿಸರ ಹೊಂದಿದೆ.
ಪ್ರಸ್ತುತ 1 ರಿಂದ 8ನೇ ತರಗತಿವರೆಗೆ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ದ್ವಿಭಾಷಾ ಆಂಗ್ಲ ಮಾಧ್ಯಮ ವಿಭಾಗವನ್ನೂ ಆರಂಭಿಸಲಾಗಿದೆ. ಎಲ್ಲಾ ತರಗತಿಗಳ ಕೋಣೆಗಳಲ್ಲಿಯೂ ವಿದ್ಯುತ್ ಸಂಪರ್ಕ, ಫ್ಯಾನ್ ವ್ಯವಸ್ಥೆ, ಗ್ರೀನ್ ಮತ್ತು ವೈಟ್ ಬೋರ್ಡ್ ವ್ಯವಸ್ಥೆ, ಕುಳಿತುಕೊಳ್ಳಲು ಡೆಸ್ಕ್ ವ್ಯವಸ್ಥೆಯಿದೆ. ನಲಿಕಲಿ ಕೋಣೆಗಳು ಅಲಂಕೃತಗೊಂಡಿದ್ದು, ಕುಳಿತುಕೊಳ್ಳುವ ಮಕ್ಕಳಿಗೆ ಚೇರ್, ಬರೆಯಲು, ಓದಲು ರೌಂಡ್ ಟೇಬಲ್ ವ್ಯವಸ್ಥೆ ಮಕ್ಕಳ ಆಸಕ್ತಿ ಕೆರಳಿಸುವಂತಿದೆ.
ಮಹತ್ತರ ಸಾಧನೆ: ಇಲ್ಲಿನ ವಿದ್ಯಾರ್ಥಿಗಳು 8ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಪ್ರತಿ ವರ್ಷವೂ ನಡೆಯುವ ರಾಷ್ಟ್ರಮಟ್ಟದ ಪ್ರತಿಭಾನ್ವೇಷಣಾ ಪರೀಕ್ಷೆ, ವಿಜ್ಞಾನ ಪರೀಕ್ಷೆ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಚಿತ್ರಕಲಾ ಲೋಯರ್ ಮತ್ತು ಹೈಯರ್ ಪರೀಕ್ಷೆಗಳಿಗೆ ಮಕ್ಕಳನ್ನು ನೊಂದಾಯಿಸಿ ಉಚಿತ ತರಬೇತಿ ನೀಡಿ ಉತ್ತಮ ಸಾಧನೆ ಮಾಡಲು ಪ್ರೋತ್ಸಾಹಿಸಲಾಗುತ್ತಿದೆ.
ಆಕರ್ಷಕ ಓರಣ: ಶಾಲೆಯ ಸುತ್ತ ಕಾಂಪೌಂಡ್ ನಿರ್ಮಿಸಲಾಗಿದ್ದು ಸ್ವಾಗತ ಕಮಾನುಳ್ಳ ಬಾಗಿಲು ಮಕ್ಕಳನ್ನು ಜ್ಞಾನದೇಗುಲಕ್ಕೆ ಮಕ್ಕಳನ್ನು ಸ್ವಾಗತಿಸುವಂತಿದೆ. ಸುಸಜ್ಜಿತ ರಂಗಮಂಟಪ, ಮುಂಭಾಗದಲ್ಲಿರುವ ಮಕ್ಕಳ ಉದ್ಯಾನ ಕಲಿಯಲು ಪ್ರೇರೇಪಿಸುವಂತಿವೆ.
ರಾಷ್ಟ್ರಮಟ್ಟದ ಶಿಬಿರಗಳ ತಾಣ: ಇಲ್ಲಿನ ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ನೇತೃತ್ವದಲ್ಲಿ ಈ ಶಾಲಾ ಆವರಣದಲ್ಲಿ 2021ರ ಫೆಬ್ರುವರಿ 5 ರಂದು ತ್ರಿಪುರವು ರಾಜ್ಯವಾದ 50 ವರ್ಷಗಳ ನೆನಪಿಗೆ ಹಮ್ಮಿಕೊಂಡಿದ್ದ ಸದ್ಭಾವನಾ ರಾಷ್ಟ್ರೀಯ ರಥಯಾತ್ರೆ, ಅಂತರರಾಜ್ಯ ಯುವಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಯಶಸ್ವಿಯಾಗಿದ್ದನ್ನು ಸ್ಮರಿಸಬಹುದಾಗಿದೆ.
ಮಕ್ಕಳ ದಿನಾಚರಣೆ ಅಂಗವಾಗಿ ನಡೆಯುವ ಅಂತರರಾಷ್ಟ್ರೀಯ ಮಕ್ಕಳ ಶಿಬಿರಗಳಲ್ಲಿ ಭಾಗವಹಿಸಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ.
ಪ್ರಶಸ್ತಿಗಳ ಮಹಾಪೂರ: ಈ ಶಾಲೆಗೆ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ನೀಡುವ ಉತ್ತಮ ಎಸ್‌ಡಿಎಂಸಿ ಪ್ರಶಸ್ತಿ, ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ ನೀಡುವ ಅತ್ಯುತ್ತಮ ಇಕೋ ಕ್ಲಬ್ ಪ್ರಶಸ್ತಿ, ಶಿಕ್ಷಕರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.
ಮಕ್ಕಳ ಸ್ನೇಹಿ ಕಲಿಕೆ: ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣ ಸಂಸ್ಥೆಯನ್ನು ಕಟ್ಟುವ ನಿಟ್ಟಿನಲ್ಲಿ ರೋಟರಿ, ಜೆಸಿಐ, ಶರಣಸಾಹಿತ್ಯ ಪರಿಷತ್ತು, ಯುಜನ ಕ್ರೀಡಾ ಇಲಾಖೆ, ಲೈಕನ್ ರೈಡರ್ಸ್, ಹಿಂದೂ ಸೇವಾ ಪ್ರತಿಷ್ಟಾನ, ಸಮರ್ಪಕ ಟ್ರಸ್ಟ್, ಹ್ಯಾಪಿ ವರ್ಲ್ಡ್ ಫೌಂಡೇಶನ್, ಗಾಂಧಿಭವನದಂತಹ ಸಂಸ್ಥೆಗಳಲ್ಲದೇ ದಾನಿಗಳು ಹಿರಿಯ ದಾನಿಗಳ ಸಹಕಾರ ಪಡೆಯಲಾಗುತ್ತಿದೆ.
ಪ್ರತಿವರ್ಷವೂ ಮಕ್ಕಳಿಗೆ ಅಗತ್ಯವಿರುವಷ್ಟು ನೋಟ್ ಪುಸ್ತಕಗಳನ್ನು ಸಂಸ್ಥೆ ದಾನಿಗಳಿಂದ ಕೊಡಿಸಲಾಗುತ್ತಿದೆ. ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಲಾಗುತ್ತಿದೆ-ಎಚ್.ಎಸ್.ರುದ್ರೇಶಮೂರ್ತಿ ಮುಖ್ಯಶಿಕ್ಷಕ
ಶಾಲೆಯಲ್ಲೆ ರಾಜ್ಯ ಮಟ್ಟದ ಸಂಪನ್ಮೂಲ ಶಿಕ್ಷಕರಿರುವುದರಿಂದ ಕಲಿಕೆಯಲ್ಲಿ ಕೊರತೆ ಇಲ್ಲ. ಬೆಂಗಳೂರಿನಲ್ಲಿ ಖಾಸಗಿ ಶಾಲೆಯಲ್ಲಿ ಆರಂಭಿಕ ಶಿಕ್ಷಣ ಮುಗಿಸಿದ ನನಗೆ ಈ ಶಾಲೆಯಲ್ಲಿನ ಪರಿಸರ ಕಲಿಕಾ ಪ್ರೋತ್ಸಾಹ ಖುಷಿಕೊಟ್ಟಿದೆ- ಎಸ್.ಪಿ.ಹರಿಪ್ರಿಯಾ 6ನೇ ತಗರತಿ ವಿದ್ಯಾರ್ಥಿನಿ
ಕಲಿಯಲು ಬೇಕಾದ ಸೌಲಭ್ಯ ಇಲ್ಲಿವೆ. ಶಿಕ್ಷಕರ ಬೋಧನೆ ಮಕ್ಕಳ ಬಗೆಗಿನ ಕಾಳಜಿ ಕಲಿಯಲು ಪ್ರೋತ್ಸಾಹ ಸಿಗುವಂತಿದೆ. ಪ್ರಾಥಮಿಕ ಹಂತದಿಂದ 8ನೇ ತರಗತಿವರೆಗೆ ಉತ್ತಮ ಶಿಕ್ಷಣ ಇಲ್ಲಿ ಸಿಗುವುದರಿಂದ ಕಲಿಯಲು ಇದಕ್ಕಿಂತ ಬೇರೆ ಶಾಲೆ ಬೇಕಿಲ್ಲ-ಎಸ್.ಎಸ್.ಮೊನೀಷಾ 8ನೇ ತಗರತಿ ವಿದ್ಯಾರ್ಥಿನಿ
ಪಂಚಾಯಿತಿ ಮಟ್ಟದಲ್ಲಿ ಕೀರ್ತಿ
ಸುಗಟೂರು ಸರ್ಕಾರಿ ಶಾಲೆ ನಮ್ಮ ಪಂಚಾಯಿತಿ ಮಟ್ಟದಲ್ಲಿ ಕೀರ್ತಿಪ್ರಾಯವಾಗಿದೆ. ಸ್ಮಾರ್ಟ್‌ಕ್ಲಾಸ್ ವ್ಯವಸ್ಥೆ ಹೆಚ್ಚುವರಿ ಅಡುಗೆ ಮನೆ ಶೌಚಾಲಯ ಸಿಸಿ ಕ್ಯಾಮೆರಾ ಅಳವಡಿಕೆ ಮತ್ತಿತರ ಅಗತ್ಯ ಸೌಕರ್ಯಗಳನ್ನು ಒದಗಿಸಲು ಪಂಚಾಯಿತಿ ಬದ್ಧವಾಗಿದೆ. ಇಂಗ್ಲಿಷ್ ಮಾಧ್ಯಮ ವಿಭಾಗವೂ ಆರಂಭವಾಗಿರುವುದರಿಂದ ಗ್ರಾಮಸ್ಥರು ಸರ್ಕಾರಿ ಶಾಲೆಯಲ್ಲಿಯೇ ಕಲಿಸಲು ಮುಂದಾಗಬೇಕು. ಕಾತ್ಯಾಯಿನಿ ಜೆವೆಂಕಟಾಪುರ ಪಿಡಿಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.