ಶಿಡ್ಲಘಟ್ಟ: ತಾಲ್ಲೂಕಿನಲ್ಲಿ ಬೇಸಿಗೆಯೊಂದಿಗೆ ಎಲ್ಲೆಡೆ ನೀರಿಗೆ ಪರದಾಟ, ಗೋಳಾಟವೂ ಪ್ರಾರಂಭವಾಗಿದೆ. ದಿನೇ ದಿನೇ ಬತ್ತುತ್ತಿರುವ ಕೊಳವೆಬಾವಿಗಳು ಜನರ ನೆಮ್ಮದಿ ಕಳೆಯುತ್ತಿವೆ.
ತಾಲ್ಲೂಕಿನಲ್ಲಿ ಬಹುತೇಕರಿಗೆ ರೇಷ್ಮೆ ಮತ್ತು ಹೈನುಗಾರಿಕೆಯಂತಹ ಉಪ ಕಸುಬುಗಳು ಬದುಕು ಕಟ್ಟಿಕೊಟ್ಟಿವೆ. ಆದರೆ ಈ ಎರಡಕ್ಕೂ ಹೆಚ್ಚಿನ ಪ್ರಮಾಣದ ನೀರು ಬೇಕೇಬೇಕು. ಸಮರ್ಪಕ ನೀರು ಸಿಗದೆ ರೈತರು ಕಂಗಾಲಾಗುವ ಸ್ಥಿತಿ ಬಂದೊದಗಿದೆ.
ಕೊರೊನಾ ಭೀತಿ, ಲಾಕ್‌ಡೌನ್ ಕಾರಣಕ್ಕೆ ಜನಸಾಮಾನ್ಯರು ಮೊದಲೇ ಹತ್ತು ಹಲವು ಸಮಸ್ಯೆಗಳಿಂದ ಚಿಂತೆಗೆ ಸಿಲುಕಿದ್ದಾರೆ. ಅದರ ನಡುವೆಯೇ ಜೀವಜಲಕ್ಕೂ ಕುತ್ತೂ ಬರುತ್ತಿರುವುದು ಗಾಯದ ಮೇಲೆ ಬರೆ ಎಳೆದಂತೆ ಮಾಡಿ, ಚಿಂತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಪ್ರಸ್ತುತ ತಾಲ್ಲೂಕಿನ 30 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಆ ಪೈಕಿ 26 ಹಳ್ಳಿಗಳಲ್ಲಿ ಖಾಸಗಿ ಕೊಳವೆ ಬಾವಿಗಳ ಮೂಲಕ, ನಾಲ್ಕು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸುಮಾರು 91 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉದ್ಭವವಾಗುವುದು ಅಂದಾಜಿಸಿ ಈಗಾಗಲೇ ಅವುಗಳನ್ನೂ ಸಮಸ್ಯಾತ್ಮಕ ಗ್ರಾಮಗಳು ಎಂದು ತಾಲ್ಲೂಕು ಆಡಳಿತ ಗುರುತಿಸಿದೆ.
ಕುಡಿಯುವ ನೀರಿಗೆ ಶಾಶ್ವತ ಜಲಮೂಲವಿಲ್ಲದ ಈ ತಾಲ್ಲೂಕಿನಲ್ಲಿ ಕೊಳವೆಬಾವಿಗಳೇ ನೀರಿನ ಮೂಲ ಆಧಾರಗಳಾಗಿವೆ. ಆದರೆ, ವರ್ಷಗಳು ಉರುಳಿದಂತೆ ಅಂತರ್ಜಲ ಕುಸಿಯುತ್ತ, ನೀರು ಸಿಗುವುದು ದುರ್ಲಭವಾಗುತ್ತಿದೆ. ಹೊಸದಾಗಿ ಕೊರೆಯಿಸಿದ ಬಾವಿಗಳಲ್ಲೂ ಸಿಗುವ ನೀರಿನ ಪ್ರಮಾಣ ಕನಿಷ್ಠ ಮಟ್ಟಕ್ಕೆ ಇಳಿಯುತ್ತಿರುವುದು ನೀರಿನ ಸಮಸ್ಯೆ ಬಿಗಡಾಯಿಸುವಂತೆ ಮಾಡುತ್ತಿದೆ.
ಇದರಿಂದಾಗಿ ವರ್ಷದ ಎಲ್ಲಾ ದಿನಗಳಲ್ಲೂ ತಾಲ್ಲೂಕಿನ ಒಂದಲ್ಲಾ ಒಂದು ಕಡೆ ನೀರಿನ ಸಮಸ್ಯೆ ಕಾಯಂ ಅತಿಥಿಯಂತಾಗುತ್ತಿದೆ. ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ನೀರನ್ನು ಹೊಂದಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ.
ನೀರಿನ ಸಮಸ್ಯೆ ತಾಲ್ಲೂಕಿನ ಜನರ ಬದುಕಿನ ಭಾಗವಾಗಿರುವ ಜಾನುವಾರುಗಳಿಗೂ ತಟ್ಟಿದೆ. ಕೆರೆ ಕುಂಟೆಗಳು ಬತ್ತಿಹೋಗಿವೆ. ಜನರು ಒದಗಿಸುವ ನೀರೇ ಅವುಗಳಿಗೆ ಸಿಗುತ್ತಿರುವುದು. ಆದರೂ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ನರೇಗಾ ಯೋಜನೆ ಅಡಿ ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗಿದೆ.
ಈ ತಾಲ್ಲೂಕನ್ನು ಬರಪೀಡಿತ ತಾಲ್ಲೂಕುಗಳ ಪಟ್ಟಿಯಿಂದ ಹೊರಗಿಡಲಾಗಿದೆ. ಇದರಿಂದಾಗಿ ಟ್ಯಾಂಕರ್ ಹಾಗೂ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಪೂರೈಸಲು ಹಣದ ಅಡಚಣೆ ಎದುರಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.