ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ಮುಂಗಾರು ಕೃಷಿ; ಬಿತ್ತನೆ ಗುರಿ ಕುಸಿತ

Published 16 ಮೇ 2024, 6:59 IST
Last Updated 16 ಮೇ 2024, 6:59 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇನ್ನೂ ಉತ್ತಮವಾಗಿ ಮುಂಗಾರು ಮಳೆ ಸುರಿದಿಲ್ಲ. ಚದುರಿದಂತೆ ರೈತರು ಬಿತ್ತನೆಗೆ ಹೊಲಗಳನ್ನು ಸಿದ್ಧಗೊಳಿಸಿಕೊಳ್ಳುತ್ತಿದ್ದಾರೆ. ಮುಂಗಾರು ಬಿತ್ತನೆಗೆ ಕೃಷಿ ಇಲಾಖೆಯು ಪೂರ್ವ ಸಿದ್ಧತೆಗಳನ್ನು ಸಹ ಮಾಡಿಕೊಂಡಿದೆ.

ಪ್ರಸಕ್ತ ಮುಂಗಾರು ಅವಧಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು 1,28,175 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ. ಕಳೆದ ಮೂರು ವರ್ಷಗಳ ಕೃಷಿ ಇಲಾಖೆಯ ಬಿತ್ತನೆಯ ಗುರಿಗೆ ಹೋಲಿಸಿದರೆ ಈ ಬಾರಿ ದೊಡ್ಡ ಪ್ರಮಾಣದಲ್ಲಿಯೇ ಬಿತ್ತನೆಯ ಗುರಿ ಕಡಿಮೆ ಆಗಿದೆ.

ರಾಗಿ, ಶೇಂಗಾ ಅಧಿಕ: ರಾಗಿ, ಮುಸುಕಿನ ಜೋಳ ಮತ್ತು ಶೇಂಗಾ ಮುಂಗಾರು ಅವಧಿಯಲ್ಲಿ ಜಿಲ್ಲೆಯ ಪ್ರಮುಖ ಬಿತ್ತನೆಯ ಬೆಳೆಗಳಾಗಿವೆ. ಈ ಬಾರಿ 42,630 ಹೆಕ್ಟೇರ್‌ನಲ್ಲಿ ರಾಗಿ, 55,571 ಹೆಕ್ಟೇರ್‌ನಲ್ಲಿ ಹೈಬ್ರಿಡ್ ಮುಸುಕಿನ ಜೋಳ, 20,056 ಹೆಕ್ಟೇರ್‌ನಲ್ಲಿ ಶೇಂಗಾ ಬಿತ್ತನೆಯ ಗುರಿ ಹೊಂದಿದೆ. 

1,01,345 ಹೆಕ್ಟೇರ್‌ನಲ್ಲಿ ಏಕದಳ ಧಾನ್ಯಗಳು, 6,057 ಹೆಕ್ಟೇರ್‌ನಲ್ಲಿ ದ್ವಿದಳ ಧಾನ್ಯಗಳು, 20,433 ಹೆಕ್ಟೇರ್‌ನಲ್ಲಿ ಎಣ್ಣೆಕಾಳುಗಳು, 340 ಹೆಕ್ಟೇರ್‌ನಲ್ಲಿ ವಾಣಿಜ್ಯ ಬೆಳೆಗಳ ಬಿತ್ತನೆ ಗುರಿ ಹೊಂದಲಾಗಿದೆ. 

ಭತ್ತ 2,000 ಹೆಕ್ಟೇರ್, ಜೋಳ 1 ಸಾವಿರ, ತೃಣಧಾನ್ಯಗಳು 144, ತೊಗರಿ 2,756, ಹುರುಳಿ 1,200, ಅವರೆ 1,926, ಅಲಸಂದೆ 175, ಸೂರ್ಯಕಾಂತಿ 108, ಸಾಸಿವೆ 19, ಎಳ್ಳು 12, ಹುಚ್ಚೆಳ್ಳು 29, ಹರಳು 209, ಕಬ್ಬು 217, ಹತ್ತಿ 123 ಹೆಕ್ಟೇರ್‌ನಲ್ಲಿ ಬಿತ್ತನೆಯ ಗುರಿ ಇದೆ.

ದ್ವಿದಳ ಧಾನ್ಯಗಳ ಬಿತ್ತನೆ ಕುಸಿತ: ಕಳೆದ ವರ್ಷ ಜಿಲ್ಲೆಯಲ್ಲಿ 27,677 ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆಕಾಳುಗಳ ಬಿತ್ತನೆ ಗುರಿ ಇತ್ತು. ಈ ಬಾರಿ ಆ ಗುರಿ 20,433 ಹೆಕ್ಟೇರ್‌ಗೆ ಇಳಿಕೆ ಆಗಿದೆ. ಏಕದಳ ಧಾನ್ಯಗಳ ಬಿತ್ತನೆಯಲ್ಲಿ ಹೇಳಿಕೊಳ್ಳುವ ವ್ಯತ್ಯಾಸ ಆಗಿಲ್ಲ. ಆದರೆ ದ್ವಿದಳ ಧಾನ್ಯಗಳ ಬಿತ್ತನೆ ಕಳೆದ ವರ್ಷಕ್ಕೆ ಮತ್ತು ಈ ಬಾರಿಗೆ ಹೋಲಿಸಿದರೆ ದೊಡ್ಡ ಪ್ರಮಾಣದಲ್ಲಿಯೇ ಕುಸಿತವಾಗಿದೆ. ಕಳೆದ ಮುಂಗಾರಿನಲ್ಲಿ 18,700 ಹೆಕ್ಟೇರ್ ಬಿತ್ತನೆ ಗುರಿ ಇತ್ತು. ಈ ಬಾರಿ ಕೇವಲ 6,057 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯ ಗುರಿ ಹೊಂದಾಗಿದೆ. ವಾಣಿಜ್ಯ ಬೆಳೆಗಳ ಬಿತ್ತನೆಯ ಗುರಿ ಕಳೆದ ಬಾರಿಗಿಂತ ಹೆಚ್ಚಿದೆ.

ಪ್ರಮುಖ ಬೆಳೆಗಳ ಬಿತ್ತನೆ ಗುರಿಯು ಕಡಿಮೆ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ರಾಗಿ, ಶೇಂಗಾ ಮತ್ತು ಹೈಬ್ರಿಡ್ ಮುಸುಕಿನ ಜೋಳದ ಬಿತ್ತನೆ ಗುರಿಯ ಪ್ರಮಾಣವೂ ಕಡಿಮೆ ಆಗಿದೆ. ಗೌರಿಬಿದನೂರು ಹೊರತುಪಡಿಸಿದರೆ ಉಳಿದ ಎಲ್ಲಾ ತಾಲ್ಲೂಕುಗಳಲ್ಲಿಯೂ ಕಳೆದ ವರ್ಷಕ್ಕಿಂತ ಈ ಬಾರಿ ಬಿತ್ತನೆಯ ಗುರಿ ಕಡಿಮೆ ಇದೆ.  

ಈ ಬಾರಿ ಗೌರಿಬಿದನೂರು ತಾಲ್ಲೂಕಿನಲ್ಲಿ 35,531 ಹೆಕ್ಟೇರ್ ಬಿತ್ತನೆಯ ಗುರಿಯನ್ನು ಹೊಂದಲಾಗಿದೆ. ಇಡೀ ಜಿಲ್ಲೆಯಲ್ಲಿ ಅತಿ ಹೆಚ್ಚು ಬಿತ್ತನೆಯ ಗುರಿ ಹೊಂದಿರುವ ತಾಲ್ಲೂಕು ಇದು ಎನಿಸಿದೆ. 

ಕಳೆದ ವರ್ಷ ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟಿತ್ತು. ಅದಕ್ಕೂ ಹಿಂದಿನ ಎರಡು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಉತ್ತಮ ಮಳೆ ಆಗಿತ್ತು. 2021 ಮತ್ತು 2022ರಲ್ಲಿ ಜಿಲ್ಲೆಯಲ್ಲಿ ಉತ್ತಮವಾಗಿ ಬಿತ್ತನೆ ಆಗಿತ್ತು. ಆದರೆ ಕಳೆದ ವರ್ಷ ಮಳೆ ಇಲ್ಲದ ಕಾರಣ ಬಿತ್ತನೆಯೂ ಕುಂಠಿತವಾಗಿತ್ತು. ಬಿತ್ತನೆಯಾದ ಪ್ರದೇಶದಲ್ಲಿಯೂ ಬೆಳೆ ಬಂದಿರಲಿಲ್ಲ. 

ಈ ಬಾರಿ ಬಿತ್ತನೆಗೆ ರಸಗೊಬ್ಬರ, ಬಿತ್ತನೆ ಬೀಜಗಳನ್ನು ಸಿದ್ಧಗೊಳಿಸಿಕೊಳ್ಳಲಾಗಿದೆ. ಯಾವುದೇ ಕೊರತೆಗಳು ಎದುರಾಗುವುದಿಲ್ಲ. ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸುತ್ತವೆ.

ಅಂಕಿ ಅಂಶ

1,48,592 ಹೆಕ್ಟೇರ್

2023ರಲ್ಲಿ ಕೃಷಿ ಇಲಾಖೆ ಹೊಂದಿದ್ದ ಬಿತ್ತನೆ ಗುರಿ

1,51,954

2022ರಲ್ಲಿ ಕೃಷಿ ಇಲಾಖೆ ಹೊಂದಿದ್ದ ಬಿತ್ತನೆ ಗುರಿ

1,45,083

2021ರಲ್ಲಿ ಕೃಷಿ ಇಲಾಖೆ ಹೊಂದಿದ್ದ ಬಿತ್ತನೆ ಗುರಿ 

ತಾಲ್ಲೂಕು;ಬಿತ್ತನೆ ಗುರಿ (ಹೆಕ್ಟೇರ್‌ಗಳಲ್ಲಿ)


ಗೌರಿಬಿದನೂರು; 35,531
ಬಾಗೇಪಲ್ಲಿ; 27,864
ಚಿಂತಾಮಣಿ; 27,089
ಶಿಡ್ಲಘಟ್ಟ; 15,475
ಚಿಕ್ಕಬಳ್ಳಾಪುರ; 13,417
ಗುಡಿಬಂಡೆ; 8,799
ಒಟ್ಟು; 1,28,175

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT