ಮಂಗಳವಾರ, ಮಾರ್ಚ್ 9, 2021
31 °C
ವರ್ಷ ಕಳೆದರೂ ಮುಗಿಯದ ರಸ್ತೆ ಅಭಿವೃದ್ಧಿ ಕೆಲಸಗಳು, ಜಲ್ಲಿ ಕಲ್ಲು ಸುರಿದ ರಸ್ತಗಳಲ್ಲಿ ಸಂಚರಿಸಲು ಸವಾರರು ಮತ್ತು ಪಾದಚಾರಿಗಳ ಪರದಾಟ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಾಗರಿಕರ ಆಕ್ರೋಶ

‘ನರಕ’ ಸೃಷ್ಟಿಸಿದ ನಗರೋತ್ಥಾನ ಕಾಮಗಾರಿ

ಪಿ.ಎಸ್.ರಾಜೇಶ್ Updated:

ಅಕ್ಷರ ಗಾತ್ರ : | |

Prajavani

ಬಾಗೇಪಲ್ಲಿ: ಪಟ್ಟಣದಲ್ಲಿ ಒಂದು ವರ್ಷದ ಹಿಂದೆ ಕೈಗೆತ್ತಿಕೊಂಡ ನಗರೋತ್ಥಾನ ಕಾಮಗಾರಿ ಆಮೆಗತಿಯ ಪ್ರಗತಿಯಿಂದಾಗಿ ನಾಗರಿಕರ ಬದುಕನ್ನೇ ನರಕ ಮಾಡಿ, ನೆಮ್ಮದಿ ಕಳೆದು ಹಾಕಿದೆ ಎಂಬ ಆಕ್ರೋಶ ಪಟ್ಟಣದ ಪ್ರತಿಯೊಂದು ವಾರ್ಡ್‌ನಲ್ಲಿ ವ್ಯಕ್ತವಾಗುತ್ತಿದೆ.

ಗುತ್ತಿಗೆದಾರರ ವಿಳಂಬ ಧೋರಣೆ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ನನೆಗುದಿಗೆ ಬಿದ್ದ ಕಾಮಗಾರಿಯಿಂದಾಗಿ ಜನರು ಪಟ್ಟಣದಲ್ಲಿ ಹತ್ತ ಹಲವು ಸಮಸ್ಯೆಗಳನ್ನು ಎದುರಿಸುತ್ತ ಹಿಡಿಶಾಪ ಹಾಕುತ್ತ, ಕಾಮಗಾರಿ ಬೇಗ ಮುಗಿಸಿ ಎಂದು ಒತ್ತಾಯಿಸುತ್ತ ದಿನದೂಡುತ್ತಿದ್ದಾರೆ.

ನಗರದ 23 ವಾರ್ಡ್‌ಗಳ ರಸ್ತೆಗಳನ್ನು ಅಭಿವೃದ್ಧಿಪಡಿಸಲು ₨7.50 ಕೋಟಿ ವೆಚ್ಚದಲ್ಲಿಕೈಗೆತ್ತಿಕೊಂಡ ನಗರೋತ್ಥಾನ ಕಾಮಗಾರಿಗೆ ಒಂದು ವರ್ಷದ ಹಿಂದೆ ಚಾಲನೆ ನೀಡಲಾಗಿತ್ತು. ಈ ಪೈಕಿ ₨6.50 ಕೋಟಿ ಕಾರ್ಯಾದೇಶಕ್ಕೆ ಸರ್ಕಾರದ ಅನುಮೋದನೆ ದೊರೆತಿದೆ. ಈ ಪೈಕಿ ಈವರೆಗೆ ಗುತ್ತಿಗೆದಾರರಿಗೆ ₨4.30 ಕೋಟಿ ಬಿಲ್ ಪಾವತಿಯಾಗಿದೆ. ಆದರೆ ಸಕಾಲಕ್ಕೆ ಕಾಮಗಾರಿ ಮಾತ್ರ ಮುಗಿದಿಲ್ಲ. ಜನರು ಜಲ್ಲಿ ಕಲ್ಲು ಸುರಿದ ರಸ್ತೆಯಲ್ಲಿ ಧೂಳಿನ ಮಜ್ಜನ ನಡುವೆ ನಿಟ್ಟುಸಿರು ಬಿಡುತ್ತ ಹೆಜ್ಜೆ ಹಾಕುತ್ತಿದ್ದಾರೆ.

ಆದರೆ, ಕಳೆದ ಒಂದು ವರ್ಷದಲ್ಲಿ ಪ್ರತಿ ವಾರ್ಡ್‌ನಲ್ಲಿ ರಸ್ತೆ ಅಗೆದು ಹಾಕಿ, ಜಲ್ಲಿ ಕಲ್ಲು ಸುರಿಯುವವರೆಗೆ ಮಾತ್ರ ಈ ಯೋಜನೆ ಪ್ರಗತಿ ಕಂಡಿದೆ. ಪಟ್ಟಣದ ಕುಂಬಾರಪೇಟೆ, ವಾಲ್ಮೀಕಿ, ಅಂಬೇಡ್ಕರ್ ಕಾಲೋನಿಗಳು, ಕೊತ್ತಪಲ್ಲಿ, ಸಂತೆ ಮೈದಾನ, ಗೂಳೂರು, ಪಾತಬಾಗೇಪಲ್ಲಿ, ನೂರಾನಿ ಮೊಹಾಲ್ಲಾ, ನೇತಾಜಿ ವೃತ್ತ ಸೇರಿದಂತೆ ಅನೇಕ ಬಡಾವಣೆಗಳು ನಗರೋತ್ಥಾನ ಕಾಮಗಾರಿ ಸೃಷ್ಟಿಸಿರುವ ಅವಾಂತರ ಅಷ್ಟಿಷ್ಟಲ್ಲ. ಪಟ್ಟಣದ ಪ್ರಗತಿ ಗ್ರಾಮೀಣ ಬ್ಯಾಂಕ್, ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಪಕ್ಕದ ರಸ್ತೆಗಳನ್ನು ಅಗೆದು ಹಾಕಿ, ಜಲ್ಲಿ ಕಲ್ಲು ಹಾಕಿ ಸುಮಾರು ಎಂಟು ತಿಂಗಳುಗಳೇ ಕಳೆದಿವೆ. ಈವರೆಗೆ ಆ ರಸ್ತೆಗಳಿಗೆ ಡಾಂಬರು ಹಾಕಿಲ್ಲ.

ಪರಿಣಾಮ, ಅಗೆದು ಹಾಕಿದ ರಸ್ತೆಗಳು, ಚೆದುರಿ ಬಿದ್ದ ಜಲ್ಲಿಕಲ್ಲುಗಳು, ಅರೆಬರೆ ಮುಚ್ಚಿದ ಗುಂಡಿಗಳು, ಟಾರು ಕಾಣದ ದಾರಿಗಳಲ್ಲಿ ದ್ವಿಚಕ್ರವಾಹನಗಳು, ಆಟೊ, ಕಾರು, ಟೆಂಪೊ ಚಾಲಕರು ಸಂಚರಿಸಲು ಪಡಬಾರದ ಪಾಡು ಪಡುವ ಚಿತ್ರಣಗಳು ಪಟ್ಟಣದಲ್ಲಿ ಸಾಮಾನ್ಯ ದೃಶ್ಯಗಳಂತಾಗಿವೆ. ಇಂತಹ ರಸ್ತೆಗಳಲ್ಲಿ ವೃಯೋವೃದ್ಧರು, ಮಕ್ಕಳು, ಅಶಕ್ತರು ಸಂಚರಿಸಲು ಹೋಗಿ ಬಿದ್ದು ಗಾಯಗೊಂಡ ಅನೇಕ ಉದಾಹರಣೆಗಳನ್ನು ನಾಗರಿಕರು ಅಸಮಾಧಾನದಿಂದ ಹೇಳುತ್ತಾರೆ.

ಗಾಯದ ಮೇಲೆ ಬರೆ ಎಳೆದಂತೆ ಅರೆಬರೆಗೊಂಡ ಚರಂಡಿ ಕಾಮಗಾರಿ ಕೆಲವೆಡೆ ತ್ಯಾಜ್ಯ ನೀರನ್ನು ರಸ್ತೆ ಮೇಲೆ ಹರಿಸುತ್ತದೆ. ಇನ್ನು ಹಲವೆಡೆ ಚರಂಡಿಯಲ್ಲಿ ರೊಚ್ಚು ನೀರು ಮಡುಗಟ್ಟಿ ದುರ್ನಾತ ಬೀರುತ್ತ, ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ರೂಪಾಂತರ ಹೊಂದಿ, ಸ್ಥಳೀಯರಿಗೆ ಕೊಡಬಾರದ ಕಷ್ಟ ಕೊಡುತ್ತಿವೆ. ಇದರಿಂದ ರೋಸಿ ಹೋದ ನಾಗರಿಕರು ಮನೆಯ ಕಿಟಕಿ, ಬಾಗಿಲುಗಳು ಮುಚ್ಚಿಕೊಂಡೇ ಇರುವಂತಾಗಿದೆ. ಕೆಲವೆಡೆ ಚರಂಡಿ ಕಾರಣದಿಂದ ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿದೆ ಎನ್ನುವುದು ಸಾರ್ವಜನಿಕರ ಆರೋಪ.

ಪುರಸಭೆಯ ಚುನಾವಣೆ ಮುಗಿದು ಏಳು ತಿಂಗಳಾದರೂ ಈವರೆಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆದಿಲ್ಲ. ಹೀಗಾಗಿ, ಪುರಸಭೆಯ ಪರಿಸ್ಥಿತಿ ಕೂಡ ‘ಹೇಳುವವರಿಲ್ಲದ ಮನೆ ಹಾಳು ಬಿತ್ತು’ ಎನ್ನುವಂತಾಗಿದೆ. ಇದು ಕೂಡ ಕಾಮಗಾರಿ ವಿಳಂಬಕ್ಕೆ ಕಾರಣ ಎನ್ನುತ್ತಾರೆ ಪ್ರಜ್ಞಾವಂತರು.

ನಗರೋತ್ಥಾನ ಕಾಮಗಾರಿ ವಿಳಂಬದ ವಿರುದ್ಧ ಸಾರ್ವಜನಿಕರಿಂದ ದೂರುಗಳ ಸುರಿಮಳೆಯಾದ ಬಳಿಕ ಮೂರು ತಿಂಗಳ ಹಿಂದಷ್ಟೇ ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಎಂಜಿನಿಯರ್ ಅವರು ಗುತ್ತಿಗೆದಾರನಿಗೆ ₨20 ಲಕ್ಷ ದಂಡ ವಿಧಿಸಿ ಸಕಾಲದಲ್ಲಿ ಕಾಮಗಾರಿ ಮುಗಿಸುವಂತೆ ಷರತ್ತು ವಿಧಿಸಿದ್ದಾರೆ ಎನ್ನುತ್ತಾರೆ ಅಧಿಕಾರಿಗಳು. ಆದರೆ, ಕಾಮಗಾರಿಯ ಚಿತ್ರಣ ಮಾತ್ರ ಬದಲಾಗುತ್ತಲೇ ಇಲ್ಲ ಎನ್ನುವ ಬೇಸರ ನಾಗರಿಕರದು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು