ಸೋಮವಾರ, ಅಕ್ಟೋಬರ್ 26, 2020
20 °C
ಬಾಗೇಪಲ್ಲಿ: ಪುರುಷ ಸದಸ್ಯರಿಗೆ ನಿರಾಸೆ; ಉಪಾಧ್ಯಕ್ಷ ಸ್ಥಾನಕ್ಕೆ ಹೆಚ್ಚಾದ ಪೈಪೋಟಿ

ಅಧ್ಯಕ್ಷ ಸ್ಥಾನಕ್ಕೆ ಮೂವರು ಮಹಿಳೆಯರ ಕಸರತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗೇಪಲ್ಲಿ: ಪುರಸಭೆ ಚುನಾವಣೆ ಮುಗಿದು ಒಂದೂವರೆ ವರ್ಷ ಮುಗಿದಿದೆ. ಇದೀಗ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಗಳಿಗೆ ಮೀಸಲಾತಿ ಪ್ರಕಟ ಆಗಿದೆ. ಅಧಿಕಾರದ ಗದ್ದುಗೆ ಪಡೆಯಲು ಚಾತಕಪಕ್ಷಿಗಳಂತೆ ಕಾಯುತ್ತಿದ್ದ ಕಾಂಗ್ರೆಸ್‌ನ ಪುರುಷ ಸದಸ್ಯರಿಗೆ ನಿರಾಶೆಯಾಗಿದ್ದು, ಮೂವರು ಮಹಿಳೆಯರಲ್ಲಿ ಸ್ಥಾನಕ್ಕೇರುವ ಕಸರತ್ತು ಹೆಚ್ಚಾಗಿದೆ.

ಬಾಗೇಪಲ್ಲಿ ಪುರಸಭೆಯಲ್ಲಿ ಅತಿ ಹೆಚ್ಚು ಸ್ಥಾನ ಗಳಿಸಿರುವ ಕಾಂಗ್ರೆಸ್‌ ಅಧಿಕಾರ ಪಡೆಯುವ ಸಾಧ್ಯತೆಗಳೇ ಹೆಚ್ಚು. 23 ವಾರ್ಡ್‌ಗಳ ಪುರಸಭೆ ಪಟ್ಟಣದ ನ್ಯಾಷನಲ್ ಕಾಲೇಜಿನಿಂದ-ಚಿತ್ರಾವತಿ ಮೇಲುಸೇತುವೆಯವರೆಗೂ, ರಾಮಸ್ವಾಮಿ ಪಲ್ಲಿಯಿಂದ-ಕೊತ್ತಪಲ್ಲಿಯವರೆಗೂ ವ್ಯಾಪಿಸಿದೆ. ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಬಿಸಿಎಂ–ಎ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ ಪ್ರಕಟ ಆಗಿದೆ.

ಪುರಸಭೆಯಲ್ಲಿ 23 ಪೈಕಿ ಕಾಂಗ್ರೆಸ್-13, ಸಿಪಿಎಂ-2, ಜೆಡಿಎಸ್-1 ಹಾಗೂ ಪಕ್ಷೇತರರು-7 ಮಂದಿ ಇದ್ದಾರೆ. ಪುರಸಭೆ ಆಡಳಿತದಲ್ಲಿ ಇದುವರೆಗೂ ಕಾಂಗ್ರೆಸ್‌ನದ್ದೇ ಅಧಿಕಾರ. ಇದೀಗಲೂ 13 ಸದಸ್ಯರಿಂದ ಬಹುಮತ ಹೊಂದಿದೆ. ಅಧ್ಯಕ್ಷ ಸ್ಥಾನ ಪಡೆಯಲು ಪುರಸಭೆ ಸದಸ್ಯರು ಬೆಂಗಳೂರಿನ ಶಾಸಕರ ಮನೆ, ಕಚೇರಿಗಳಿಗೆ ಲಗ್ಗೆ ಇಟ್ಟು, ಅಧ್ಯಕ್ಷ, ಉಪಾಧ್ಯಕ್ಷರಾಗಲು ಅವಕಾಶಕ್ಕೆ ಸಹಕಾರ, ಆಶೀರ್ವಾದ ನೀಡುವಂತೆ ಮನವಿ ಮಾಡಿದ್ದಾರೆ. ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಪುರಸಭೆ ಸದಸ್ಯರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿದ್ದಾರೆ.

ಅಧ್ಯಕ್ಷ ಸ್ಥಾನ ಬಿಸಿಎಂ–ಎ ಮಹಿಳೆಗೆ ಮೀಸಲಾಗಿರುವುದರಿಂದ ಪುರುಷ ಆಕಾಂಕ್ಷಿಗಳಿಗೆ ನಿರಾಶೆ ಮೂಡಿದೆ. ಈಗಿನ ಮೀಸಲಾತಿಯಂತೆ, 14ನೇ ವಾರ್ಡ್‌ನ ಗುಲ್ನಾಜ್ ಬೇಗಂ, 18ನೇ ವಾರ್ಡ್‌ನ ಶಬಾನಾ ಪರ್ವೀನ್‌ ಹಾಗೂ 19ನೇ ವಾರ್ಡ್‌ನ ಹಸೀನಾ ಮನ್ಸೂರ್ ಅವರಿದ್ದಾರೆ. ಇನ್ನು ಸಾಮಾನ್ಯ ಮೀಸಲಾತಿಯಲ್ಲಿರುವ ಉಪಾಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳಲು ಹಿರಿಯ, ಕಿರಿಯ ಸದಸ್ಯರು ನಾಯಕರ ಬಳಿ ದುಂಬಾಲು ಬೀಳುತ್ತಿದ್ದಾರೆ.

‘ಕಾಂಗ್ರೆಸ್ ನ 13 ಪುರಸಭಾ ಸದಸ್ಯರ ಪೈಕಿ ಮೂವರು ಬಿಸಿಎಂ–ಎ ಮಹಿಳೆಯರು ಇದ್ದಾರೆ. ಕಾಂಗ್ರೆಸ್‌ಗೆ ಅಧಿಕಾರ ಖಚಿತ. ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಪಕ್ಷದ ಮುಖಂಡರು, ಸದಸ್ಯರ ತೀರ್ಮಾನವೇ ಅಂತಿಮವಾಗಿದೆ’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ನರೇಂದ್ರ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.