ಶನಿವಾರ, ಡಿಸೆಂಬರ್ 7, 2019
22 °C

ಸರ್.ಎಂ.ವಿ ಜನ್ಮದಿನ: ಅಂಚೆ ಚೀಟಿಯಲ್ಲಿ ಕಂಡ ಭಾರತರತ್ನ ವಿಶ್ವೇಶ್ವರಯ್ಯ

ಡಿ.ಜಿ.ಮಲ್ಲಿಕಾರ್ಜುನ Updated:

ಅಕ್ಷರ ಗಾತ್ರ : | |

ಶಿಡ್ಲಘಟ್ಟ (ಚಿಕ್ಕಬಳ್ಳಾಪುರ): ಕರ್ಮಯೋಗಿಯಂತೆ ಬದುಕಿದ ಭಾರತ ರತ್ನ ಸರ್‌.ಎಂ.ವಿಶ್ವೇಶ್ವರಯ್ಯ ಅವರ 158ನೇ ಜನ್ಮ ದಿನವನ್ನು  ದೇಶದೆಲ್ಲೆಡೆ ಆಚರಿಸಲಾಗುತ್ತಿದೆ. ಈ ದಿನವನ್ನು ಎಂಜಿನಿಯರ್‌ಗಳ ದಿನ ಎಂದು ಸಹ ಕರೆಯಲಾಗುತ್ತದೆ.

102 ವರ್ಷಗಳ ತುಂಬು ಬದುಕಿನಲ್ಲಿ ವಿಶ್ವೇಶ್ವರಯ್ಯ ನಾಡಿಗಾಗಿಯೇ ದುಡಿದವರು. ಇಂದು ಕರ್ನಾಟಕ ರಾಜ್ಯ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಬೇಕಾದರೆ ಅದಕ್ಕೆ ವಿಶೇಶ್ವರಯ್ಯ ಅವರ ಕಠಿಣ ಪರಿಶ್ರಮ ಮತ್ತು ದೂರದೃಷ್ಟಿಯೇ ಮುಖ್ಯ ಅಡಿಪಾಯ. 

ಇದನ್ನೂ ಓದಿ: ಮೋಕ್ಷಗುಂಡಂ ವಿಶ್ವೇಶ್ವರಯ್ಯ 157ನೇ ಜನ್ಮದಿನಕ್ಕೆ ಗೂಗಲ್ ಡೂಡಲ್ ಗೌರವ

ವಿಶ್ವೇಶ್ವರಯ್ಯನವರ 158ನೇ ಜನ್ಮ ದಿನದ ಅಂಗವಾಗಿ ಅವರು ಚಿಕ್ಕಬಳ್ಳಾಪುರದಲ್ಲಿ ಸ್ಥಾಪಿಸಿದ ಕಾರ್ಖಾನೆ ಹಾಗೂ ಅವರ ಅಂಚೆ ಚೀಟಿಗಳ ಕುರಿತಾದ ಕಿರುಪರಿಚಯ ಇಲ್ಲಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಜನಿಸಿದ ವಿಶ್ವೇಶ್ವರಯ್ಯ, ಗ್ರಾಮೀಣ ಜನರಿಗೆ ಉದ್ಯೋಗ ನೀಡುವಂತಹ ಕಾರ್ಖಾನೆಯೊಂದನ್ನು ಸ್ಥಾಪಿಸುವ ಕನಸಿತ್ತು. ಅದಕ್ಕೆಂದೇ ಅವರು 1952ರಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಕಿಸಾನ್ ಸಿಲ್ಕ್ ಇಂಡಸ್ಟ್ರಿ ಎಂಬ ಕಾರ್ಖಾನೆ ಸ್ಥಾಪಿಸಿದರು.

ಕಾರ್ಖಾನೆ ಸ್ಥಾಪನೆ ಸಭೆಯ ಚಿತ್ರ (ಚಿತ್ರ ಸಂಗ್ರಹ: ಮೇಲೂರು ಎಂ.ಆರ್.ಪ್ರಭಾಕರ್ )

ಸುಮಾರು 67 ವರ್ಷಗಳ ಹಿಂದೆಯೇ ದೂರದೃಷ್ಟಿಯುಳ್ಳ ಗ್ರಾಮೀಣ ಪ್ರಗತಿಯ ಯೋಜನೆಯನ್ನು ಅವರು ರೂಪಿಸಿದ್ದರು. ಈ ಭಾಗದ  ಭೂಮಿ ಮತ್ತು ಹವಾಗುಣ, ರೇಷ್ಮೆ ಗೂಡು ಹಾಗೂ ನೂಲು ತಯಾರಿಕೆಗೆ ಸೂಕ್ತವಾದುದ್ದರಿಂದ ಕಿಸಾನ್ ಸಿಲ್ಕ್ ಇಂಡಸ್ಟ್ರಿ ಪ್ರಾರಂಭಿಸಿದರು. ಆ ಮೂಲಕ ಇಲ್ಲಿನ ಜನರು ಆರ್ಥಿಕ ಅಭಿವೃದ್ಧಿ ಕಾಣಬೇಕು ಎಂಬ ಅವರ ಕನಸು ನನಸಾಯಿತು. 

ಇದನ್ನೂ ಓದಿ: ಸರ್‌ ಎಂ.ವಿ. ಬಾಲ್ಯ ನೆನಪಿಸುವ ‘ವಿಶ್ವಕುಟೀರ’

ಮೇಲೂರಿನಿಂದ ಕಂಬದಹಳ್ಳಿಗೆ ಹೋಗುವ ರಸ್ತೆಯಲ್ಲಿ ಪ್ರಾರಂಭವಾದ ಕಿಸಾನ್ ಸಿಲ್ಕ್ ಇಂಡಸ್ಟ್ರಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಪ್ರಾರಂಭವಾದ ಮೊಟ್ಟಮೊದಲ ಕಾರ್ಖಾನೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಕಾರ್ಖಾನೆ ಆರಂಭಕ್ಕೂ ಮುನ್ನ ವಿಶ್ವೇಶ್ವರಯ್ಯನವರು ಹಲವು ಸಭೆಗಳನ್ನು ನಡೆಸಿದ್ದರು. ಆ  ಸಭೆಗಳಿಗೆ ಮಳ್ಳೂರು ಜಿ.ಪಾಪಣ್ಣ, ಜಿ.ಪಿಳ್ಳಪ್ಪ, ಜಿ.ನಾರಾಯಣಪ್ಪ, ಕಂಬದಹಳ್ಳಿ ದೊಡ್ಡಪ್ಪಯ್ಯಣ್ಣ, ಪಟೇಲ್ ಪಿಳ್ಳೇಗೌಡರು, ಮೇಲೂರು ಎಂ.ಎಸ್.ವೆಂಕಟರೆಡ್ಡಿ, ಶಾನುಭೋಗ ಎಂ.ಎಸ್.ಸೀತಾರಾಮರಾವ್, ಮೇಲೂರು ಟಿ.ಬಚ್ಚಪ್ಪ ಮತ್ತಿತರ ಭಾಗವಹಿಸುತ್ತಿದ್ದರು. 1952ರಲ್ಲಿ ಈ ಕಾರ್ಖಾನೆಯನ್ನು ಸ್ವತಹ ವಿಶ್ವೇಶ್ವರಯ್ಯ ಅವರೇ ಉದ್ಘಾಟನೆ ಮಾಡಿದರು. 

ಅಂಚೆ ಚೀಟಿಯಲ್ಲಿ ವಿಶ್ವೇಶ್ವರಯ್ಯ

ಸಾಮಾನ್ಯವಾಗಿ ಯಾವುದೇ ಪ್ರಸಿದ್ಧ ಸಂಸ್ಥೆ ಅಥವಾ ವ್ಯಕ್ತಿಗೆ ನೂರು ವರ್ಷ ತುಂಬಿದಾಗ ವಿಶೇಷ ಅಂಚೆ ಚೀಟಿಯನ್ನು ಹೊರತರಲಾಗುತ್ತದೆ. ಕರ್ನಾಟಕಕ್ಕೆ ಇಂತಹ ಗೌರವ ತಂದುಕೊಟ್ಟವರಲ್ಲಿ ವಿಶ್ವೇಶ್ವರಯ್ಯ ಮೊದಲಿಗರು.


15 ಪೈಸೆ ಮುಖಬೆಲೆಯ ಸರ್.ಎಂ.ವಿ ಅಂಚೆಚೀಟಿ

ಜೀವಂತವಿರುವಾಗಲೇ ವ್ಯಕ್ತಿಗಳ ಗೌರವಾರ್ಥ ಅಂಚೆ ಚೀಟಿ ಹೊರತರುವುದು ಭಾರತದಲ್ಲಿ ತುಂಬಾ ವಿರಳ. ವಿಶ್ವೇಶ್ವರಯ್ಯ ಬದುಕಿರುವಾಗಲೇ ತಮ್ಮದೇ ಅಂಚೆ ಚೀಟಿಯನ್ನು ಕಂಡ ಅಪರೂಪದ ಭಾಗ್ಯಶಾಲಿ! ಸರ್.ಎಂ.ವಿ ಅವರ 15 ಪೈಸೆ ಮುಖಬೆಲೆಯ ಈ ಅಂಚೆ ಚೀಟಿ, ಅಶೋಕ ಸ್ತಂಭ ಜಲಚಿಹ್ನೆಯನ್ನು ಹೊಂದಿದ್ದು ಕಂದು ಮತ್ತು ಕ್ಯಾರಮೈನ್ ಮಿಶ್ರ ವರ್ಣದಲ್ಲಿ ಮುದ್ರಿತವಾಗಿದೆ. 

1960 ಸೆಪ್ಟೆಂಬರ್ 15 ರಂದು ಸರ್.ಎಂ.ವಿ. ಅವರಿಗೆ ನೂರು ವರ್ಷ ತುಂಬಿದ ದಿನದಂದೇ  ಕೇಂದ್ರ ಸರ್ಕಾರ ಅವರ ಗೌರವಾರ್ಥ ಈ ಅಂಚೆ ಚೀಟಿಯನ್ನು ಹೊರತಂದಿತ್ತು. ಈ ವಿಶೇಷ ಅಂಚೆ ಚೀಟಿ ಸರಣಿಯಲ್ಲಿ ಕರ್ನಾಟಕಕ್ಕೆ ಲಭಿಸಿದ ಮೊದಲ ಅಂಚೆ ಚೀಟಿ ಇದು.

ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ 2010 ಸೆಪ್ಟೆಂಬರ್ 15ರಂದು ವಿಶ್ವೇಶ್ವರಯ್ಯ ಅವರ 150ನೇ ಜನ್ಮದಿನ ಸಂದರ್ಭದಲ್ಲಿ ಬಿಡುಗಡೆಯಾದ ವಿಶೇಷ ಅಂಚೆ ಲಕೋಟೆ

2010ರಲ್ಲಿ ವಿಶ್ವೇಶ್ವರಯ್ಯನವರ 150 ನೇ ಜನ್ಮದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಅವರ ಸ್ಮರಣಾರ್ಥ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. 5 ರೂಪಾಯಿ ಮುಖಬೆಲೆಯ ಅಂಚೆ ಲಕೋಟೆಯು ಸರ್.ಎಂ.ವಿ ಅವರ ಚಿತ್ರವಿರುವ ವಿಶೇಷ ಸೀಲ್, ಅವರು ವಾಸಿಸುತ್ತಿದ್ದ ಮನೆ ಹಾಗೂ ಭಾವಚಿತ್ರವನ್ನು ಒಳಗೊಂಡಿದೆ.

ಇದನ್ನೂ ಓದಿ: ವಿಶ್ವೇಶ್ವರಯ್ಯ’ ಹೆಸರು ಬರೆಯುವುದು ಹೇಗೆ? ದೆಹಲಿ ಮೆಟ್ರೊಗೆ ಎದುರಾದ ಸಮಸ್ಯೆ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು