ಭಾನುವಾರ, ಫೆಬ್ರವರಿ 28, 2021
20 °C

ಯುವಕರಿಗೆ ಮತದ ಹಕ್ಕು ಅವಶ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೌರಿಬಿದನೂರು: ‘ನಮ್ಮ ದೇಶದಲ್ಲಿ ಮತದಾನ ಮಾಡುವ ಹಕ್ಕು ಸಂವಿಧಾನದಲ್ಲಿ ಎಲ್ಲರಿಗೂ ನೀಡಿದ್ದು ಅದನ್ನು ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ಸ್ವಇಚ್ಛೆಯಿಂದ ಚಲಾಯಿಸಿ ಸದೃಢ ದೇಶ ಕಟ್ಟುವಲ್ಲಿ ಯುವ ಜನತೆ ಮುಂದಾಗಬೇಕಿದೆ’ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶೆ ಆರ್.ಪವಿತ್ರ ತಿಳಿಸಿದರು.

ನಗರದ ತಾ.ಪಂ ಕಚೇರಿಯ ಆವರಣದಲ್ಲಿರುವ ಸಾಮರ್ಥ್ಯ ಸೌಧದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ತಾಲ್ಲೂಕು ಸ್ವೀಪ್ ಸಮಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ‘ರಾಷ್ಟ್ರೀಯ ಮತದಾರರ ದಿನಾಚರಣೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘1950ರಲ್ಲಿ ಚುನಾವಣಾ ಆಯೋಗ ರಚನೆಯಾಗಿದ್ದು, ಇದರ ಅಡಿಯಲ್ಲಿ ಸಂವಿಧಾನದ ಪ್ರಕಾರ ಕಲಂ 326ರ ಅಡಿಯಲ್ಲಿ ಈ ದೇಶದ 18 ವರ್ಷ ತುಂಬಿದ ಯುವ ಜನತೆಗೆ ಮತದಾನ ಮಾಡುವ ಹಕ್ಕನ್ನು ನೀಡಿದೆ. ಇದರಿಂದ ನಾವು ನಮ್ಮನ್ನು ಆಳುವ ಜನಪ್ರತಿನಿಧಿಯನ್ನು ನಮ್ಮ ಸ್ವಇಚ್ಛೆಯಂತೆ ಆಯ್ಕೆ ಮಾಡುವ ಅಧಿಕಾರ ನೀಡಿದೆ’ ಎಂದರು.

‘ಈ ದೇಶದ ಸಂವಿಧಾನ ಪ್ರಕಾರ ಮತದಾನದ ಹಕ್ಕು ಎಲ್ಲರಿಗೂ ನೀಡಿದೆ, ಇದನ್ನು ಎಲ್ಲರೂ ಚಲಾಯಿಸಬೇಕಿದೆ. ಈ ನಿಟ್ಟಿನಲ್ಲಿ ಮತದಾನ ದಿನ ಸಾರ್ವತ್ರಿಕ ರಜೆ ಸಹ ನೀಡಿದೆ. ಆದರೆ ಕ್ಷೇತ್ರದಲ್ಲಿ ಮತದಾನ ಶೇ 70ರಷ್ಟು ಸಹ ಆಗದಿರುವುದು ದುರದೃಷ್ಟಕರವಾಗಿದೆ. ಪ್ರತಿ ಪ್ರಜೆ ಮತ ಚಲಾಯಿಸಿದಾಗ ಮಾತ್ರ ಸದೃಢ ಸರ್ಕಾರ ರಚನೆ ಮಾಡಲು ಸಾಧ್ಯ. ಜನರಿಂದ ಜನರಿಗಾಗಿ ರಚನೆ ಆಗಿರುವ ಸಂವಿಧಾನ ಆಶಯ ಈಡೇರಿಸಲು ಮತದಾನ ಕಡ್ಡಾಯವಾಗಿದೆ. ಇದನ್ನು ಯುವ ಜನತೆಗೆ ಅರಿವು ಮೂಡಿಸುವುದು ಅನಿವಾರ್ಯವಾಗಿದೆ’ ಎಂದು ಹೇಳಿದರು.

ಸರ್ಕಾರಿ ಅಭಿಯೋಜಕ ಆದಿನಾರಾಯಣಸ್ವಾಮಿ ಮಾತನಾಡಿ, ‘ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಬಲಪಡಿಸಲು ಯುವ ಜನತೆ ಮುಂದಾಗಬೇಕು. ಅದು ಮತದಾನ ಮಾಡುವ ಮೂಲಕವೇ ಅಗಿದೆ. ಮತದಾನ ಪದ್ಧತಿ ಮೂಲತಃ ವಿದೇಶದಿಂದ ಬಂದಿದ್ದು ಈ ವ್ಯವಸ್ಥೆ ಮೊದಲು ಮತದಾನ ಬ್ಯಾಲಟ್ ಪತ್ರಗಳ ಮೂಲಕ ಬಂದು ಇದೀಗ ಯಂತ್ರಗಳ ಮೂಲಕ ಮತದಾನ ಮಾಡಬಹುದಾಗಿದೆ. 18 ವರ್ಷ ತುಂಬಿದ ಪ್ರತಿ ಯುವ ಜನತೆ ಇದಕ್ಕೆ ಅರ್ಹರಾಗಿರುತ್ತಾರೆ’ ಎಂದರು.

ಇದೇ ವೇಳೆ ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ತಹಸೀಲ್ದಾರ್ ಎಂ.ರಾಜಣ್ಣ, ವೃತ್ತ ನಿರೀಕ್ಷಕ ಶಶಿಧರ್, ಬಿಇಓ ಕೆ.ವಿ.ಶ್ರೀನಿವಾಸಮೂರ್ತಿ, ಇಒ ಎನ್.ಮುನಿರಾಜು, ವಕೀಲರಾದ ವಿ.ಗೋಪಾಲ್, ನಾಗರಾಜು, ಕೋರ್ಟು ಸಿಬ್ಬಂದಿ ಸಂಧ್ಯಾ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು