ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವೈಕ್ಯ ಮೆರೆದ ಗಣೇಶೋತ್ಸವ: ಮುಸ್ಲಿಮರಿಂದ ‌ನೀರು, ಹಣ್ಣು ವಿತರಣೆ

ಗಣೇಶ ವಿಸರ್ಜನೆ: ಮುಸ್ಲಿಮರಿಂದ ‌ನೀರು, ಹಣ್ಣು ವಿತರಣೆ
Last Updated 19 ಸೆಪ್ಟೆಂಬರ್ 2022, 5:06 IST
ಅಕ್ಷರ ಗಾತ್ರ

ಬೀರೂರು: ಪಟ್ಟಣದ ಹಾಲಪ್ಪ ಬಡಾವಣೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಸಭಾದ ಗಣಪತಿ ವಿಸರ್ಜನಾ ಮಹೋತ್ಸವಕ್ಕೆ ಭಾವೈಕ್ಯದ ಮೆರುಗು ದೊರೆಯಿತು.

ಭಾನುವಾರ ಮುಸ್ಲಿಂ ಸಮುದಾಯದವರಿಂದ ವಿಶೇಷ ಪೂಜೆ ಹಾಗೂ ಕುಣಿದು ದಣಿದಿದ್ದ ಯುವಕರಿಗೆ ಮಸೀದಿ ಸಮಿತಿ ವತಿಯಿಂದ ನೀರು, ಹಣ್ಣು ವಿತರಿಸಿ ಸೌಹಾರ್ದದ ಸಂದೇಶವನ್ನು ಸಾರಿತು.

ಅಜ್ಜಂಪುರ ರಸ್ತೆಯ ಬದುವಿನಲ್ಲಿರುವ ಹಾಲಪ್ಪ ಬಡಾವಣೆ, ಶಾಂತಿನಗರಗಳು ಹಿಂದೂ-ಮುಸ್ಲಿಂ ಬಾಹುಳ್ಯದ ಪ್ರದೇಶವಾಗಿದ್ದರೂ ಪರಸ್ಪರ ಬಾಂಧವ್ಯಕ್ಕೇನೂ ಕೊರತೆ ಇಲ್ಲ. 15 ವರ್ಷಗಳಿಂದಲೂ ಇಲ್ಲಿ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆಗೊಳ್ಳುತ್ತಿದ್ದು, ಪ್ರತಿವರ್ಷವೂ ತನ್ನ ವೈಭವ ಹೆಚ್ಚಿಸಿಕೊಳ್ಳುತ್ತಿದೆ. ಈ ಬಾರಿಯೂ ಗಣೇಶ ಚತುರ್ಥಿಯಂದು ವಿವಿಧ ಸಂಘ- ಸಂಸ್ಥೆಗಳು, ಸಮುದಾಯಗಳ ಯುವಕರು ಸೇರಿ ಗಣಪತಿಯನ್ನು ಪ್ರತಿಷ್ಠಾಪಿಸಿದ್ದರು.

19 ದಿನಗಳಿಂದ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ನಿತ್ಯ ಪೂಜೆ, ಭಜನೆ, ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಶುಕ್ರವಾರ ನಡೆದ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ
ನೂರಾರು ಮುಸ್ಲಿಂ ಯುವಕರು ಸಾಮೂಹಿಕ ಪ್ರಾರ್ಥನೆಯ ಬಳಿಕ ಭೋಜನ ಸವಿದರೆ, ವಿಸರ್ಜನೆ ಸಂದರ್ಭದಲ್ಲಿ ಭಾನುವಾರ ಮಸೀದಿ ವತಿಯಿಂದ ಹಣ್ಣು-ಹಂಪಲು, ನೀರು ವಿತರಿಸಿ ಶುಭ ಕೋರಲಾಯಿತು.

ಶನಿವಾರದಿಂದಲೇ ಪಟ್ಟಣದ ಮಹಾತ್ಮಗಾಂಧಿ ವೃತ್ತ ಮತ್ತು ಮುಖ್ಯರಸ್ತೆಗಳಲ್ಲಿ ಕೇಸರಿ ಧ್ವಜ ರಾರಾಜಿಸಿತ್ತು. ಭಾನುವಾರ ಮಧ್ಯಾಹ್ನ ಆರಂಭವಾದ ವಿಸರ್ಜನಾ ಮಹೋತ್ಸವದ ಪಟಾಕಿ ಸಿಡಿತ, ನೂರಾರು ಯುವಕರ ನೃತ್ಯ, ಜಯಘೋಷ ಹಾಗೂ ಡಿಜೆ ಮೆರವಣಿಗೆ ಇಡೀ ಪಟ್ಟಣದ ಗಮನ ಸೆಳೆಯಿತು. ಗಣೇಶ ಮೂರ್ತಿಯನ್ನು ಬೀರೂರು ಹೊರವಲಯದ ಬಾಕಿನಕೆರೆಯಲ್ಲಿ ರಾತ್ರಿ ವಿಸರ್ಜನೆ ಮಾಡಲಾಯಿತು.

ಹಿಂದೂ ಮಹಾಸಭಾ ಗಣೇಶೋತ್ಸವ ಸಮಿತಿ ಅಧ್ಯಕ್ಷ ಆನಂದರಾವ್‌ ಮಾತನಾಡಿ, ಗಣೇಶೋತ್ಸವ ಪ್ರತಿ ವರ್ಷಕ್ಕಿಂತ ಈ ಬಾರಿ ವಿಭಿನ್ನವಾಗಿ ಆಚರಿಸಲಾಗಿದೆ. ಪಟ್ಟಣದಲ್ಲಿ ಎಲ್ಲ ಧರ್ಮಗಳ ಸಹಭಾಗಿತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಶಾಂತಿಯುತವಾಗಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಹಾಗೂ ಅದನ್ನು ಇಂದಿಗೂ ನಾವೆಲ್ಲರೂ ಪಾಲನೆ ಮಾಡುತ್ತಿದ್ದೇವೆ ಎಂದರು.

ಮುಂಜಾಗ್ರತಾ ಕ್ರಮವಾಗಿ ಬೀರೂರು, ಕಡೂರು ಹಾಗೂ ವೃತ್ತದ ಬೇರೆ ಠಾಣೆಗಳಿಂದ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT