ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು | ಮುಂಗಾರು ಹಂಗಾಮು; ಗರಿಗೆದರಿದ ಬಿತ್ತನೆ ಚಟುವಟಿಕೆ

ಜಿಲ್ಲೆಯಲ್ಲಿ ಉತ್ತಮ ಮಳೆ; ರೈತರಲ್ಲಿ ಉತ್ಸಾಹ: 1.12 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ
Last Updated 13 ಜೂನ್ 2022, 3:18 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ಬಿತ್ತನೆ ಗುರಿ 1.12 ಲಕ್ಷ ಹೆಕ್ಟೇರ್‌ ಇದ್ದು, ಈವರೆಗೆ 12634 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಬಯಲುಸೀಮೆ ಭಾಗದಲ್ಲಿ ಬಿತ್ತನೆ ಚುರುಕಾಗಿದೆ. ಕಡೂರು ಭಾಗದಲ್ಲಿ 9 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ ನಡೆದಿದೆ. ಮಲೆನಾಡು ಭಾಗದ ಎನ್‌.ಆರ್.ಪುರ, ಕಳಸ, ಕೊಪ್ಪ, ಶೃಂಗೇರಿ ಭಾಗದಲ್ಲಿ ಬಿತ್ತನೆ ಆರಂಭವಾಗಿಲ್ಲ.

ಜಿಲ್ಲೆಯಲ್ಲಿ ವಾರ್ಷಿಕ ವಾಡಿಕೆ ಮಳೆ ಪ್ರಮಾಣ 183.3 ಸೆಂ.ಮೀ. ಜನವರಿಯಿಂದ ಜೂನ್‌ 9ರವರೆಗೆ ವಾಡಿಕೆ ಮಳೆ ಪ್ರಮಾಣ 22.3 ಸೆಂ.ಮೀ, ಈವರೆಗೆ 38.5 ಸೆಂ.ಮೀ (ಶೇ 172) ಮಳೆಯಾಗಿದೆ. ಉತ್ತಮ ಮಳೆಯಾಗಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಬೆಳೆಗಳು: ರಾಗಿ, ಜೋಳ, ತೊಗರಿ, ಹಲಸಂದೆ, ಉದ್ದು, ಹೆಸರು, ಹುರುಳಿ, ಶೇಂಗಾ, ಎಳ್ಳು, ಸೂರ್ಯಕಾಂತಿ, ಹರಳು, ಸಾಸಿವೆ, ಹತ್ತಿ, ಕಬ್ಬು, ಈರುಳ್ಳಿ, ಟೊಮೆಟೊ, ಮೆಣಸಿನಕಾಯಿ, ಆಲೂಗಡ್ಡೆ ಮೊದಲಾದವು ಪ್ರಮುಖವಾಗಿ ಬೆಳೆಯಲಾಗುತ್ತದೆ. ಮಲೆನಾಡು ಭಾಗದಲ್ಲಿ ಪ್ರಮುಖವಾಗಿ ಭತ್ತ ಬೆಳೆಯುತ್ತಾರೆ.

ಜಿಲ್ಲೆಯಲ್ಲಿ 2.23 ಲಕ್ಷ ಸಾಗುವಳಿದಾರರು ಇದ್ದಾರೆ. ಈ ಪೈಕಿ 1.28 ಲಕ್ಷ ಮಂದಿ ಅತಿಸಣ್ಣ ರೈತರು, 56 ಸಾವಿರ ಮಂದಿ ಸಣ್ಣ ರೈತರು, 16.5 ಸಾವಿರ ಮಂದಿ ಮಧ್ಯಮ ರೈತರು ಹಾಗೂ 22.5 ಸಾವಿರ ದೊಡ್ಡ ರೈತರು ಇದ್ದಾರೆ.

ಬೀಜ, ರಸಗೊಬ್ಬರ ದಾಸ್ತಾನು ವಿವರ: ಹೆಸರು, ಉದ್ದು, ಅಲಸಂದೆ, ಸೂರ್ಯಕಾಂತಿ, ಶೇಂಗಾ ಸಹಿತ ಸುಮಾರು 4 ಸಾವಿರ ಕ್ವಿಂಟಲ್‌ ಬೇಡಿಕೆ (ಜೂನ್‌ 3) ಇದೆ. ಈವರೆಗೆ 982 ಕ್ವಿಂಟಲ್‌ ಬಿತ್ತನೆ ಬೀಜ ವಿತರಿಸಲಾಗಿದೆ. 3 ಸಾವಿರ ಕ್ವಿಂಟಲ್‌ ದಾಸ್ತಾನು ಇದೆ. ರಸಗೊಬ್ಬರ (ಡಿಎಪಿ, ಕಾಂಪ್ಲೆಕ್ಸ್‌, ಎಂಒಪಿ, ಯುರಿಯಾ, ಎಸ್‌ಎಸ್‌ಸಿ...) 124874 ಟನ್‌ ಬೇಡಿಕೆ ಇದೆ. ಖಾಸಗಿ ಡೀಲರ್‌ಗಳು, ಮಾರುಕಟ್ಟೆ ಫೆಡರೇಷನ್‌ಗೆ 35099 ಟನ್‌ ಗೊಬ್ಬರ (ಮೇ 30ರವರೆಗೆ ) ಸರಬರಾಜಾಗಿ 20274 ಟನ್‌ ವಿತರಣೆಯಾಗಿದೆ. 15463 ಟನ್‌ ದಾಸ್ತಾನು ಇದೆ ಎಂದು ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವು ರಸಗೊಬ್ಬರ ಮಳಿಗೆಗಳಲ್ಲಿ ದರಪಟ್ಟಿ ಫಲಕ ಪ್ರದರ್ಶಿಸಿಲ್ಲ ಎಂಬ ದೂರುಗಳು ಇವೆ. ಡಿಎಪಿ, ಎಂಒಪಿ ಗೊಬ್ಬರ ಅಭಾವ ಇದೆ. ಬೇಡಿಕೆಯಷ್ಟು ಪೂರೈಕೆಯಾಗುತ್ತಿಲ್ಲ. ಈ ಸಮಸ್ಯೆ ಹಲವು ತಿಂಗಳಿನಿಂದ ಇದೆ. ಪರಿಹಾರ ನಿಟ್ಟಿನಲ್ಲಿ ಸಂಬಂಧಪಟ್ಟವರು ಕ್ರಮ ವಹಿಸಿಲ್ಲ ಎಂಬ ದೂರುಗಳು ಇವೆ. ಕೆಲವೆಡೆ ಕೃಷಿ ಯಂತ್ರಧಾರೆ ಕೇಂದ್ರಗಳಲ್ಲೂ ಸಾಧನ, ಯಂತ್ರಗಳ ಬಾಡಿಗೆ ದರ ಪಟ್ಟಿ ಪ್ರದರ್ಶಿಸಿಲ್ಲ ಎಂಬ ದೂರುಗಳು ಇವೆ. ಸಂಬಂಧಪಟ್ಟವರು ಈ ಬಗ್ಗೆ ನಿಗಾವಹಿಸಬೇಕು, ಬಾಡಿಗೆ ಪಟ್ಟಿ ಪ್ರದರ್ಶಿಸಲು ಕ್ರಮ ವಹಿಸಬೇಕು ಎಂಬುದು ರೈತರ ಒತ್ತಾಯವಾಗಿದೆ.

ಈರುಳ್ಳಿ ಬಿತ್ತನೆ ಗುರಿ 7ಸಾವಿರ ಹೆಕ್ಟೇರ್‌ ಇದ್ದು, ಈವರೆಗೆ 400 ಹೆಕ್ಟೇರ್‌ ಬಿತ್ತನೆಯಾಗಿದೆ. ಆಲೂಗಡ್ಡೆ ಗುರಿ 2250 ಹೆಕ್ಟೇರ್‌ ಇದ್ದು, ಈವರೆಗೆ 80 ಹಕ್ಟೇರ್‌ ಬಿತ್ತನೆಯಾಗಿದೆ. ಟೊಮೆಟೊ ಗುರಿ 1500 ಹೆಕ್ಟೇರ್‌ ಇದ್ದು, 400 ಹೆಕ್ಟೇರ್‌ ಬಿತ್ತನೆಯಾಗಿದೆ ಎಂದು ತೋಟಗಾರಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಮೂಡಿಗೆರೆ ತಾಲ್ಲೂಕಿನಾದ್ಯಂತ ಕೃಷಿ ಚಟುವಟಿಕೆಗಳು ಗರಿಗೆದರಿವೆ. ತಾಲ್ಲೂಕಿನಲ್ಲಿ ಪ್ರಮುಖವಾಗಿ ಕಾಫಿ, ಕಾಳುಮೆಣಸು, ಅಡಿಕೆ, ಭತ್ತ ಮುಂಚೂಣಿಯಲ್ಲಿರುವ ಕೃಷಿಯಾಗಿದ್ದು, ಏಲಕ್ಕಿ, ಬಾಳೆ, ಶುಂಠಿಯನ್ನು ಕೂಡ ಅಲ್ಲಲ್ಲಿ ಬೆಳೆಯಲಾಗುತ್ತದೆ.

ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಬೀಜದ ಭತ್ತ ಪೂರೈಕೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಇಂಟಾನ್, ತುಂಗಾ, ಬಾಂಗ್ಲಾ ಸೇರಿದಂತೆ ವಿವಿಧ ತಳಿಯ ಭತ್ತಗಳು ಭಿತ್ತನೆಗೆ ಸಿದ್ಧವಾಗಿವೆ. ವರ್ಷದಿಂದ ವರ್ಷಕ್ಕೆ ಭತ್ತದ ನಾಟಿ ಪ್ರಮಾಣ ಕಡಿಮೆಯಾಗುತ್ತಿದೆ. ಬೀಜದ ಭತ್ತಕ್ಕೆ ಕೊರೆತೆ ಇಲ್ಲ. ಕಾಫಿ, ಕಾಳು ಮೆಣಸಿಗೆ ಗೊಬ್ಬರ ಹಾಕುವುದು, ಔಷಧಿ ಸಿಂಪಡಣೆ ಮಾಡುವ ಚಟುವಟಿಕೆಗಳು ಬಿರುಸುಗೊಂಡಿವೆ. ಕೃಷಿ ಅಧಿಕಾರಿಗಳಯ ರಸಗೊಬ್ಬರಗಳ ಅಂಗಡಿಗೆ ಭೇಟಿ ನೀಡಿ ದಾಸ್ತಾನು ಪರಿಶೀಲಿಸುವ ಕಾರ್ಯ ಮುಂದುವರಿಸಿದ್ದಾರೆ.

ಅರೆಮಲೆನಾಡು ಎಂದು ಕರೆಸಿಕೊಳ್ಳುವ ತರೀಕೆರೆ ತಾಲ್ಲೂಕಿನಲ್ಲಿ ಮುಂಗಾರು ಬಿತ್ತನೆ ಚಟುವಟಿಕೆಗಳಲ್ಲಿ ರೈತರು ತೊಡಗಿದ್ದಾರೆ. ತಾಲ್ಲೂಕಿನ ಕೃಷಿ ಇಲಾಖೆಯಲ್ಲಿ ರೈತರ ಬಿತ್ತನೆಗೆ ಅಗತ್ಯವಾದ ಮೆಕ್ಕೆಜೋಳ, ಉದ್ದು,ಹೆಸರು,ಶೇಂಗಾ,ಸೇರಿದಂತೆ ತಾಲ್ಲೂಕಿನಲ್ಲಿ 360 ಕ್ವಿಂಟಾಲ್ ದಾಸ್ತಾನು ಲಭ್ಯವಿವೆ ಜೊತೆಗೆ ಬೆಳೆಗೆ ಅಗತ್ಯ ಪೋಷಕಾಂಶಗಳು, ಔಷಧಿಗಳು, ಕೃಷಿ ಪರಿಕರಗಳು ಲಭ್ಯವಿವೆ ಎಂದು ಕೃಷಿ ಸಹಾಯಕ ನಿರ್ದೇಶಕ ರಮೇಶ ತಿಳಿಸಿದ್ದಾರೆ.

ಭತ್ತದ ಕೃಷಿಗೆ ನಿರಾಸಕ್ತಿ: ಕಳಸ ತಾಲ್ಲೂಕಿನ 5 ಸಾವಿರ ಎಕರೆ ಭತ್ತದ ಗದ್ದೆಯ ಪೈಕಿ 3 ಸಾವಿರ ಎಕರೆಯಲ್ಲಿ ಕೂಡಭತ್ತದ ಕೃಷಿ ನಡೆಯುವುದು ಅನುಮಾನವಾಗಿದೆ. ಕಾಫಿ, ಅಡಿಕೆಯ ವಾಣಿಜ್ಯ ಕೃಷಿಯ ಭರಾಟೆ ನಡುವೆ ಭತ್ತದ ಕೃಷಿ ಮಂಕಾಗಿದೆ. ಭತ್ತದ ಗದ್ದೆಗಳಲ್ಲಿ ಉಳುಮೆ ಅಥವಾ ಬಿತ್ತನೆ ಕಾರ್ಯ ಈವರೆಗೂ ಆರಂಭಗೊಂಡಿಲ್ಲ. ಕೃಷಿ ಇಲಾಖೆಯು ರೈತರಿಗೆ ತುಂಗಾ( ಐಇಟಿ 13901) ಮತ್ತು ಇಂಟಾನ್ ತಳಿಯ ಬಿತ್ತನೆ ಬೀಜವನ್ನು ಕೆಲವೇ ದಿನದಲ್ಲಿ ನೀಡಲಿದೆ.ಸದ್ಯದಲ್ಲೇ ಅಗತ್ಯ ಔಷಧಿ ಕೂಡ ಸರಬರಾಜು ಆಗಲಿದೆ.

ಕೊರೋನೋತ್ತರ ಕಾಲದಲ್ಲಿ ಭತ್ತದ ಕೃಷಿ ಬಗ್ಗೆ ಆಸಕ್ತಿ ಮೂಡುತ್ತಿದೆ. ಪಾಳುಬಿದ್ದ ಗದ್ದೆಗಳಲ್ಲಿ ಈ ಬಾರಿ ಭತ್ತದ ಕೃಷಿ ಆರಂಭ ಆಗಬಹುದು ಎಂದು ಕೃಷಿ ಅಧಿಕಾರಿ ಪಾಂಡುರಂಗ ಹೇಳುತ್ತಾರೆ.

ಪಟ್ಟಣದ ಕೃಷಿ ಯಂತ್ರಧಾರೆಯಲ್ಲಿ ಪವರ್ ಟಿಲ್ಲರ್, ಟ್ರ್ಯಾಕ್ಟರ್, ನಾಟಿ ಯಂತ್ರ, ಕಳೆತೆಗೆಯುವ ಮತ್ತು ಔಷಧಿ ಸಿಂಪಡಣೆ ಮಾಡುವ ಯಂತ್ರಗಳು ಬಾಡಿಗೆಗೆ ಸಿಗುತ್ತವೆ. ಸದ್ಯಕ್ಕೆ ರಸಗೊಬ್ಬರದ ಕೊರತೆ ಕೂಡ ಇಲ್ಲ ಎಂದೂ ಅವರು ಮಾಹಿತಿ ನೀಡಿದರು.

ಆರಂಭವಾಗದ ಬಿತ್ತನೆ ಕಾರ್ಯ: ನರಸಿಂಹರಾಜಪುರ ತಾಲ್ಲೂಕಿನಾದ್ಯಂತ ಉತ್ತಮವಾದ ಹದ ಮಳೆಯಾಗಿದ್ದರೂ ಭತ್ತ ಬಿತ್ತನೆ ಕಾರ್ಯ ಇನ್ನೂ ಆರಂಭವಾಗಿಲ್ಲ. ತಾಲ್ಲೂಕಿನ ವ್ಯಾಪ್ತಿಯಲ್ಲಿ ಸುಮಾರು 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು ಬೆಳೆಯಲಾಗುತ್ತಿದೆ. ವಿವಿಧ ಪ್ರದೇಶಗಳಲ್ಲಿ 100 ಹೆಕ್ಟೇರ್ ಮುಸುಕಿನ ಜೋಳವನ್ನು ಸಹ ಬೆಳೆಯಲಾಗುತ್ತಿದೆ. ಹದವಾದ ಮಳೆಯಾಗಿರುವುದರಿಂದ ಭತ್ತದ ಗದ್ದೆಗಳನ್ನು ಬೆಳೆಗಾರರು ಹೂಟಿ ಮಾಡಿದ್ದಾರೆ. ಜೂನ್ ಕೊನೆಯವಾರದಲ್ಲಿ ಬಿತ್ತನೆ ಆರಂಭಿಸುವ ನಿರೀಕ್ಷೆ ಇದೆ.

ತಾಲ್ಲೂಕಿನ ವ್ಯಾಪ್ತಿಯಲ್ಲಿ ರಸಗೊಬ್ಬಗಳಾದ ಯೂರಿಯಾ, ಡಿಎಪಿ ಮಾರುಕಟ್ಟೆಯಲ್ಲಿ ಲಭ್ಯವಿದೆ, ಎಂಓಪಿ ಗೊಬ್ಬರದ ಕೊರತೆ ಇದೆ. ಕೊರತೆಯಿರುವ ರಸಗೊಬ್ಬರಗಳ ಬಗ್ಗೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಗಮನಕ್ಕೆ ತರಲಾಗಿದೆ. ಎಲ್ಲಾ ರಸಗೊಬ್ಬರ ಮಾರಾಟ ಮಳಿಗೆಗಳಿಗೂ ಭೇಟಿ ನೀಡಿ ದರ ಪಟ್ಟಿ, ದಾಸ್ತಾನುಪಟ್ಟಿ ಹಾಕುವಂತೆ ಸೂಚನೆ ನೀಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ರಮೇಶ್ ಮಸ್ಕಲೆ ತಿಳಿಸಿದರು.

ಕೊಪ್ಪ ತಾಲ್ಲೂಕಿನ ರಸಗೊಬ್ಬರ ಮಳಿಗೆಗಳಲ್ಲಿ ಡಿಎಪಿ ಕೊರತೆ ಇದೆ. ರೈತರು ಸಾಧ್ಯವಾದಷ್ಟು ಕಾಂಪ್ಲೆಕ್ಸ್ ಗೊಬ್ಬರಗಳನ್ನು ಬಳಸಲು ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ರಸಗೊಬ್ಬರ ಗಳಿಗೆ ಇಂಡೆಂಟ್ ಹಾಕಲಾಗಿದೆ. ಪ್ರಮುಖವಾಗಿ ಬೇಕಾಗಿದ್ದ ಡಿಎಪಿ, ಪೊಟ್ಯಾಷ್
ಸಿಗುತ್ತಿಲ್ಲ ಎಂದು ರೈತರು ಹೇಳುತ್ತಾರೆ. ಶೃಂಗೇರಿ ತಾಲ್ಲೂಕಿನಲ್ಲಿ ಅಡಿಕೆ, ಕಾಫಿ, ಕಾಳುಮೆಣಸು ಗಿಡಗಳಿಗೆ ಬೇಕಾಗಿರುವ ಡಿ.ಎ.ಪಿ, ಪೊಟ್ಯಾಷ್, ಸುಫಲಾ, ಕಾಂಪ್ಲೆಕ್ಸ್ ಇತ್ಯಾದಿ ರಸಗೊಬ್ಬರಗಳ ಕೊರತೆ ಇದೆ. ತಾಲ್ಲೂಕಿನ ಸೊಸೈಟಿ ಮತ್ತು ರಸಗೊಬ್ಬರ ಕೇಂದ್ರಗಳಲ್ಲಿ ಗೊಬ್ಬರಗಳು ಸಿಗುತ್ತಿಲ್ಲ ಎಂದು ರೈತರು ಹೇಳುತ್ತಾರೆ. ಅಡಿಕೆ, ಕಾಫಿ, ಕಾಳು ಮೆಣಸು ಗಿಡಗಳಿಗೆ ಸರಿಯಾದ ಸಮಯದಲ್ಲಿ ರಸಗೊಬ್ಬರ ಹಾಕದಿದ್ದಲ್ಲಿ ಇಳುವರಿ, ಬೆಳವಣಿಗೆ ಸಮಸ್ಯೆಯಾಗುತ್ತದೆ ಎಂದು ರೈತರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT