ವಿಜಯಕುಮಾರ್ ಎಸ್.ಕೆ.
ಚಿಕ್ಕಮಗಳೂರು: ಶಕ್ತಿ ಯೋಜನೆ ಜಾರಿಯಾದ ಬಳಿಕ ಕೆಎಸ್‌ಆರ್‌ಟಿಸಿ ಬಸ್‌ಗಳ ಪ್ರಯಾಣಿಕರ ಸಂಖ್ಯೆ ಶೇ 40ರಷ್ಟು ಹೆಚ್ಚಾಗಿದೆ. ಬೇಡಿಕೆಗೆ ತಕ್ಕಷ್ಟು ಬಸ್‌ಗಳ ಕಾರ್ಯಾಚರಣೆಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಣುಕಾಡುತ್ತಿದ್ದಾರೆ. ಒಂದೇ ಒಂದು ಹೆಚ್ಚುವರಿ ಬಸ್ ಇಲ್ಲ, ಚಾಲಕ–ನಿರ್ವಾಹಕರಿಲ್ಲ, ಅಗತ್ಯದಲ್ಲಿ ಅರ್ಧದಷ್ಟು ಮೆಕ್ಯಾನಿಕ್‌ಗಳಿಲ್ಲ, ಮಲೆನಾಡು ಭಾಗದಲ್ಲಿ ಡಿಪೊಗಳಂತೂ ಇಲ್ಲವೇ ಇಲ್ಲ.
ಚಿಕ್ಕಮಗಳೂರು ವಿಭಾಗದಲ್ಲಿ ಆರು ಡಿಪೊಗಳಿದ್ದು, ಮೂರು ಡಿಪೊಗಳು ಹಾಸನ ಜಿಲ್ಲೆಯ ವ್ಯಾಪ್ತಿಯಲ್ಲಿವೆ(ಅರಸೀಕೆರೆ, ಬೇಲೂರು, ಸಕಲೇಶಪುರ). ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಡೂರು, ಚಿಕ್ಕಮಗಳೂರು ಮತ್ತು ಮೂಡಿಗೆರೆಯಲ್ಲಿ ಡಿಪೊಗಳಿವೆ. ಶೃಂಗೇರಿ, ಎನ್.ಆರ್.ಪುರ, ಕೊಪ್ಪ, ತರೀಕೆರೆ ಭಾಗದಲ್ಲಿ ಡಿಪೊಗಳೇ ಇಲ್ಲ. ಚಿಕ್ಕಮಗಳೂರು ಡಿಪೊನಿಂದ ಈ ತಾಲ್ಲೂಕು ಕೇಂದ್ರಗಳು ಕನಿಷ್ಠ 90ರಿಂದ 100 ಕಿಲೋ ಮೀಟರ್ ದೂರದಲ್ಲಿವೆ. ಇಲ್ಲಿಂದ ಬಸ್‌ಗಳನ್ನು ಕಳುಹಿಸಿ ಮಲೆನಾಡು ಭಾಗದ ಮಾರ್ಗಗಳಲ್ಲಿ ಕಾರ್ಯಾಚರಣೆ ಮಾಡುವುದು ದುಬಾರಿ. ಆದ್ದರಿಂದ ಕೊಪ್ಪ, ಎನ್.ಆರ್.ಪುರ, ಶೃಂಗೇರಿ ಭಾಗದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಕಾರ್ಯಾಚರಣೆ ಬೆರಳೆಣಿಕೆಯಷ್ಟಿವೆ.
ಶೃಂಗೇರಿಯಲ್ಲಿ ಡಿಪೊ ನಿರ್ಮಾಣಕ್ಕೆ ಇತ್ತೀಚೆಗೆ ಗುದ್ದಲಿ ಪೂಜೆ ನೆರವೇರಿದ್ದು, ₹8 ಕೋಟಿ ಅನುದಾನ ಕೂಡ ದೊರೆತಿದೆ. ಡಿಪೊ ನಿರ್ಮಾಣವಾದರೆ ಮಲೆನಾಡು ಭಾಗದಲ್ಲಿ ಬಸ್‌ಗಳ ಕಾರ್ಯಾಚರಣೆ ಸಾಧ್ಯ ಎನ್ನುತ್ತಾರೆ ಕೆಎಸ್‌ಆರ್‌ಟಿಸಿ ಚಿಕ್ಕಮಗಳೂರು ವಿಭಾಗದ ಅಧಿಕಾರಿಗಳು. ತರೀಕೆರೆಯಲ್ಲಿ ಡಿಪೊ ನಿರ್ಮಾಣಕ್ಕೆ 4 ಎಕರೆ ಜಾಗ ಮಂಜೂರಾಗಿದ್ದು, ಡಿಪೊ ನಿರ್ಮಾಣವಾಗಬೇಕಿದೆ.
ಶೃಂಗೇರಿಯಲ್ಲಿ ಬಸ್ ಡಿಪೊ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಡಿಪೊ ನಿರ್ಮಾಣವಾದರೆ ಮಲೆನಾಡು ಭಾಗಕ್ಕೆ ಹೆಚ್ಚಿನ ಬಸ್ ಸೌಕರ್ಯ ಕಲ್ಪಿಸಬಹುದು.ಶ್ರೀಬಸವರಾಜ್, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ, ಚಿಕ್ಕಮಗಳೂರು
ಇಡೀ ವಿಭಾಗದಲ್ಲಿ 529 ಬಸ್‌ಗಳಿದ್ದು, ಇವುಗಳಲ್ಲಿ ನಾಲ್ಕು ಬಸ್‌ಗಳು ಕಾರ್ಯಾಚರಣೆಗೆ ಯೋಗ್ಯವಾಗಿಲ್ಲ. ಇನ್ನುಳಿದ 525 ಬಸ್‌ಗಳಲ್ಲಿ ಇಡೀ ವಿಭಾಗ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಜನ ಮತ್ತು ಜನಪ್ರತಿನಿಧಿಗಳಿಂದ ಬಸ್‌ಗಳ ಕಾರ್ಯಾಚರಣೆಗೆ ಬೇಡಿಕೆ ಬರುತ್ತಿದೆ. ಒತ್ತಡ ಇರುವ ತುರ್ತು ಬೇಡಿಕೆ ಪೂರೈಸಲು ಕನಿಷ್ಠ 50 ಬಸ್‌ಗಳು ಬೇಕು ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಶಕ್ತಿ ಯೋಜನೆ ಜಾರಿಯಾದ ಬಳಿಕ ಎಲ್ಲಾ ಮಾರ್ಗಗಳಲ್ಲೂ ಬಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಇಡೀ ವಿಭಾಗದಲ್ಲಿ ಜನರ ಬೇಡಿಕೆಗೆ ತಕ್ಕಂತೆ ಬಸ್ ಕಾರ್ಯಾಚರಣೆ ಮಾಡಲು 120 ಬಸ್‌ಗಳ ಅಗತ್ಯವಿದೆ ಎಂದು ವಿವರಿಸುತ್ತಾರೆ.
ಇರುವ ಬಸ್‌ಗಳು ಹಳೆಯದಾಗಿದ್ದು, ಅಲ್ಲಲ್ಲಿ ಕೆಟ್ಟು ನಿಲ್ಲುವುದು ತಪ್ಪಿಲ್ಲ. ಆರು ಡಿಪೊಗಳಿಂದ ಒಟ್ಟು 520 ಮೆಕ್ಯಾನಿಕ್ ಹುದ್ದೆಗಳಿದ್ದು, 320 ಮೆಕ್ಯಾನಿಕ್‌ಗಳಿದ್ದಾರೆ. ಸಮಪರ್ಕವಾಗಿ ನಿರ್ವಹಣೆ ಮಾಡಲಾಗದೆ ಬಸ್‌ಗಳು ಅಲ್ಲಲ್ಲಿ ಕೆಟ್ಟು ನಿಲ್ಲುವಂತಾಗಿದೆ. ಇನ್ನು ಚಾಲಕ–ನಿರ್ವಾಹಕರ ಕೊರತೆಯೂ ಸಮಸ್ಯೆಯಾಗಿ ಕಾಡುತ್ತಿದೆ.
ಬಸ್ ನಿಲ್ದಾಣಗಳಿಲ್ಲ
ಜಿಲ್ಲೆಯ ಮಲೆನಾಡು ಭಾಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳೇ ಇಲ್ಲ. ತಾಲ್ಲೂಕು ಕೇಂದ್ರಗಳಾದ ಕೊಪ್ಪ, ಕಳಸ, ಎನ್.ಆರ್.ಪುರ ಮತ್ತು ಶೃಂಗೇರಿಯಲ್ಲಿ ಬಸ್ ನಿಲ್ದಾಣಗಳೇ ಇಲ್ಲ.
ಕಳಸದಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಜನರಿಂದ ಬೇಡಿಕೆ ಇದೆ. ಆದರೆ, ಉಳಿದ ಮೂರು ಕಡೆ ಬಸ್‌ಗಳ ಕಾರ್ಯಾಚರಣೆಯೇ ವಿರಳ ಇರುವುದರಿಂದ ಬೇಡಿಕೆಯೂ ಇಲ್ಲವಾಗಿದೆ. ತಾಲ್ಲೂಕು ಕೇಂದ್ರದ ಹೊರತಾಗಿ ಸಿಂಗಟಗೆರೆ, ಯಗಟಿ ಬಸ್ ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿದೆ. ಹಿರೇನಲ್ಲೂರು, ಅಜ್ಜಂಪುರದಲ್ಲಿ ಬಸ್ ನಿಲ್ದಾಣಕ್ಕೆ ಬೇಡಿಕೆ ಇದೆ.
ಇನ್ನು ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿ ಗ್ರಾಮೀಣ ಬಸ್‌ಗಳ ಕಾರ್ಯಾಚರಣೆಗೆ ಪ್ರತ್ಯೇಕ ನಿಲ್ದಾಣ ಇದೆ. ಮಳೆ ಬಂದರೆ ಈ ನಿಲ್ದಾಣವಂತೂ ಕೆಸರುಗದ್ದೆಯಾಗಿ ಮಾರ್ಪಡುತ್ತದೆ. ಹೈಟೆಕ್ ನಿಲ್ದಾಣ ನಿರ್ಮಿಸುವ ಯೋಜನೆ ಇನ್ನೂ ಪ್ರಸ್ತಾಪದ ಹಂತದಲ್ಲೇ ಇದೆ. ಸುಸಜ್ಜಿತ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಕನಿಷ್ಠ ₹25 ಕೋಟಿ ಅನುದಾನ ಬೇಕಿದೆ. ಸರ್ಕಾರದಿಂದ ಅನುದಾನ ತರುವ ಪ್ರಯತ್ನವನ್ನು ಜನಪ್ರತಿನಿಧಿಗಳು ಮಾಡಬೇಕು ಎಂಬುದು ಸ್ಥಳೀಯರ ಒತ್ತಾಯ.
ಗ್ರಾಮೀಣ ಭಾಗಕ್ಕೆ ಬಸ್ ಸೌಲಭ್ಯವಿಲ್ಲ
ತರೀಕೆರೆ: ತಾಲ್ಲೂಕಿನ ಲಕ್ಕವಳ್ಳಿ ಲಿಂಗದಹಳ್ಳಿ ಹೋಬಳಿಯ ದೊಪದಖಾನ್ ಕಲ್ಲತ್ತಿಗಿರಿ ಕೆಮ್ಮಣ್ಣುಗುಂಡಿ ಅಮೃತಾಪುರ ಭಾಗಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಬೇಡಿಕೆ ಹೆಚ್ಚಿದೆ. ಆದರೆ ಪ್ರಯಾಣಿಕರ ತಕ್ಕಂತೆ ಬಸ್ ಸೌಲಭ್ಯ ವಿಲ್ಲ. ತಾಲ್ಲೂಕಿನ ಮಲೆನಾಡಿನ ಭಾಗದಲ್ಲಿ ನಿಯಮಿತ ಬಸ್‌ಗಳಿವೆ. ಶಕ್ತಿ ಯೋಜನೆಯಿಂದ ಪ್ರವಾಸಿತಾಣಗಳಿಗೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಆದರ್ ಬಸ್ ಸೌಲಭ್ಯ ಹೆಚ್ಚಿಸಬೇಕು ಎಂಬುದು ನಾಗರೀಕರ ಅಳಲು. ಕಳೆದ ಒಂದು ದಶಕದಿಂದ ತಾಲ್ಲೂಕಿನಲ್ಲಿ ಬಸ್ ಸೌಲಭ್ಯ ಬೇಡಿಕೆಯಿದೆ. ಇದಕ್ಕೆ ಡಿಪೊ ಸ್ಥಾಪನೆಯಾದರೆ ಬಸ್ ಕಾರ್ಯಾಚರಣೆ ಹೆಚ್ಚಿಸಬಹುದು. ಶೀಘ್ರದಲ್ಲೇ ಡಿಪೊ ನಿರ್ಮಾಣಕ್ಕೆ ಕ್ರಮ ಕೈ ಗೊಳ್ಳಲಾಗುವುದು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ಜಿಲ್ಲಾ ಕೇಂದ್ರಕ್ಕೆ ಒಂದೇ ಬಸ್
ನರಸಿಂಹರಾಜಪುರ: ತಾಲ್ಲೂಕು ಕೇಂದ್ರದಿಂದ ಜಿಲ್ಲಾ ಕೇಂದ್ರವಾದ ಚಿಕ್ಕಮಗಳೂರಿಗೆ ನೇರವಾಗಿ ತೆರಳಲು ಮತ್ತು ಹಿಂದುರುಗಲು ಇರುವುದು ಒಂದೇ ಕೆಎಸ್‌ಆರ್‌ಟಿಸಿ ಬಸ್. ತಾಲ್ಲೂಕು ಕೇಂದ್ರದಿಂದ ಜಿಲ್ಲಾ ಕೇಂದ್ರಕ್ಕೆ ತೆರಳಲು ಬೆಳಿಗ್ಗೆ 6.20ಕ್ಕೆ ಒಂದು ಬಸ್ ಹೊರಡುತ್ತಿದೆ. ಅದನ್ನು ಬಿಟ್ಟರೆ ಬೇರೆ ಬಸ್ ಇಲ್ಲ. ಸಾರ್ವಜನಿಕರು ಸರ್ಕಾರಿ ನೌಕರರು ಜಿಲ್ಲಾ ಕೇಂದ್ರಕ್ಕೆ ತೆರಳಲು ಬಾಳೆಹೊನ್ನೂರಿನವರೆಗೆ ಖಾಸಗಿ ಬಸ್‌ನಲ್ಲಿ ಸಾಗಿ ಅಲ್ಲಿಂದ ಸರ್ಕಾರಿ ಬಸ್ ಹಿಡಿದು ಜಿಲ್ಲಾ ಕೇಂದ್ರಕ್ಕೆ ಹೋಗುವುದು ಅನಿವಾರ್ಯ. ಅದೇ ರೀತಿ ಬೆಳಿಗ್ಗೆ ವೇಳೆಗೆ ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯ ತರೀಕೆರೆಯಲ್ಲಿರುವ ಉಪವಿಭಾಗಾಧಿಕಾರಿ ಕಚೇರಿಗೆ ತೆರಳು ಸರ್ಕಾರಿ ಬಸ್ ಇಲ್ಲ.
ಖಾಸಗಿ ಬಸ್ ಸಹ ಇಲ್ಲವಾಗಿದೆ. ಶಿವಮೊಗ್ಗ ಅಥವಾ ಲಕ್ಕಿನಕೊಪ್ಪಕ್ಕೆ ಹೋಗಿ ಪ್ರಯಾಣ ಮುಂದುವರಿಸಬೇಕಿದೆ. ಕೋವಿಡ್ ಪೂರ್ವದಲ್ಲಿ ಕೋಲಾರದ ಶ್ರೀನಿವಾಸಪುರ ಡಿಪೊದಿಂದ ಬೆಂಗಳೂರು ಮಾರ್ಗವಾಗಿ ಬೆಳಿಗ್ಗೆ 9 ಗಂಟೆಗೆ ಹೊರಡುತ್ತಿದ್ದ ಬಸ್ ಕಡೂರು ಬೀರೂರು ತರೀಕೆರೆ ಶಂಕರಘಟ್ಟ ಜಂಕ್ಷನ್ ಎನ್.ಆರ್.ಪುರ ಕೊಪ್ಪದ ಮೂಲಕ ಶೃಂಗೇರಿಗೆ ತೆರಳಿ ಅಲ್ಲೇ ತಂಗುತ್ತಿತ್ತು. ಬೆಳಿಗ್ಗೆ 7 ಗಂಟೆಗೆ ಶೃಂಗೇರಿಯಿಂದ ಹೊರಟು ಇದೇ ಮಾರ್ಗವಾಗಿ ಬೆಂಗಳೂರಿಗೆ ಹೋಗುತ್ತಿತ್ತು. ಇದರಿಂದ ಕಾಲೇಜು ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಅನುಕೂಲವಾಗಿತ್ತು. ಈ ಬಸ್ ಸೇವೆ ಸ್ಥಗಿತಗೊಳಿಸಿದ್ದರಿಂದ ಜನರಿಗೆ ಸಮಸ್ಯೆಯಾಗಿದೆ. ಶಿವಮೊಗ್ಗದಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಬಸ್ ಸೇವೆ ಇತ್ತು. ಅದು ಸಹ ಸ್ಥಗಿತಗೊಂಡಿದೆ. ಇದರಿಂದಾಗಿ ಶಕ್ತಿಯೋಜನೆ ಅನುಷ್ಟಾನವಾದರೂ ಬಹುತೇಕರಿಗೆ ಅನುಕೂಲ ಇಲ್ಲವಾಗಿದೆ.
ಜಿಲ್ಲಾ ಕೇಂದ್ರಕ್ಕೆ ತೆರಳಲು ಬೆಳಿಗ್ಗೆ 8 ಗಂಟೆ ವೇಳೆಗೆ ಮತ್ತು ಶಂಕರಘಟ್ಟ ತರೀಕೆರೆ ಕಡೂರಿಗೆ ತೆರಳಲು ಬೆಳಿಗ್ಗೆ ವೇಳೆ ಕೆಎಸ್‌ಆರ್‌ಟಿಸಿ ಬಸ್ ಸೇವೆ ಆರಂಭಿಸಿದರೆ ಬಹುತೇಕ ಜನರಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಗಮನಹರಿಸಬೇಕು ಎಂದು ಜಿಲ್ಲಾ ರೈತ ಸಂಘದ ಮುಖಂಡ ಮಾಳೂರು ದಿಣ್ಣೆ ವಿನಾಯಕ್ ಒತ್ತಾಯಿಸಿದ್ದಾರೆ.
ವಿದ್ಯಾರ್ಥಿಗಳ ಪ್ರಯಾಣ– ಪ್ರಯಾಸ
ಬಾಳೆಹೊನ್ನೂರು: ಶಕ್ತಿ ಯೋಜನೆ ಜಾರಿ ಮಾಡಿರುವುದು ಕಾಲೇಜಿಗೆ ತೆರಳುವ ವಿದ್ಯಾರ್ಥಿ ಪಾಲಿಗೆ ತೊಂದರೆ ತಂದೊಡ್ಡಿದೆ. ಬಾಳೆಹೊನ್ನೂರು-ಸೀಗೋಡು ಹೇರೂರು ಜಯಪುರದಿಂದ ಶೃಂಗೇರಿಯ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಿಗೆ ನಿತ್ಯ 100ಕ್ಕೂ ಅಧಿಕ ವಿದ್ಯಾರ್ಥಿಗಳು ಸರ್ಕಾರಿ ಬಸ್‌ನಲ್ಲೇ ಪ್ರಯಾಣಿಸುತ್ತಾರೆ.
ಶಕ್ತಿ ಯೋಜನೆ ಜಾರಿಯಾದ ಬಳಿಕ ಬೆಂಗಳೂರು ಸೇರಿದಂತೆ ರಾಜ್ಯ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಶೃಂಗೇರಿಗೆ ತೆರಳುವ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದು ವಿದ್ಯಾರ್ಥಿಗಳ ಪ್ರಯಾಣಕ್ಕೆ ತೊಂದರೆಯಾಗಿದ್ದು ಹಲವರು ಪರೀಕ್ಷೆಗೂ ಹಾಜರಾಗಲು ಸಾಧ್ಯವಾಗದೆ ತೊಂದರೆ ಅನುಭವಿಸುತ್ತಿದ್ದಾರೆ.
ಇರುವ ನಿಗದಿತ ಬಸ್‌ಗಳಲ್ಲಿ ತುಂಬಿ ತುಳುಕುವ ಪ್ರಯಾಣಿಕರ ನಡುವೆ ಸಿಲುಕಿಕೊಳ್ಳುವ ವಿದ್ಯಾರ್ಥಿನಿಯರು ಸ್ಥಿತಿಯಂತೂ ಹೇಳತೀರದಾಗಿದೆ. ಚಿಕ್ಕಮಗಳೂರಿನಿಂದ ಬಾಳೆಹೊನ್ನೂರು ಜಯಪುರ ಮೂಲಕ ಶೃಂಗೇರಿಗೆ ನಿತ್ಯ ಹತ್ತಕ್ಕೂ ಅಧಿಕ ಬಸ್‌ಗಳು ತೆರಳುತ್ತಿವೆ. ಎಲ್ಲೂ ಬಸ್ ನಿಲ್ದಾಣಗಳೇ ಇಲ್ಲ. ಖಾಸಗಿ ಬಸ್ ನಿಲ್ದಾಣಗಳನ್ನೇ ಆಶ್ರಯಿಸಬೇಕಾಗಿದೆ.
ಈ ಹಿಂದೆ ಶೃಂಗೇರಿ -ಬೆಂಗಳೂರು ಬಾಳೆಹೊನ್ನೂರು ಹೊರನಾಡು ತುಮಕೂರು ನಡುವೆ ರಾತ್ರಿ ವೇಳೆ ಸಾಮಾನ್ಯ ಪ್ರಯಾಣಿಕರನ್ನು ಗಮನದಲ್ಲಿರಿಸಿಕೊಂಡು 5ಕ್ಕೂ ಅಧಿಕ ಸಾಮಾನ್ಯ ಬಸ್‌ಗಳ ಕಾರ್ಯಾಚರಣೆ ಮಾಡಲಾಗುತ್ತಿತ್ತು. ಕೋವಿಡ್ ನಂತರ ಎಲ್ಲಾ ಬಸ್‌ಗಳ ಸಂಚಾರ ನಿಲ್ಲಿಸಲಾಗಿದೆ. ಅನೇಕಲ್ ಬೆಂಗಳೂರು ಶೃಂಗೇರಿ ನಡುವೆ ಕೇವಲ ಒಂದು ಬಸ್ ಮಾತ್ರ ನಿತ್ಯ ಸಂಚರಿಸುತ್ತಿದೆ. ಸ್ಥಗಿತಗೊಳಿಸಿರುವ ಬಸ್‌ಗಳ ಸಂಚಾರವನ್ನು ಪುನರ್ ಆರಂಭಿಸಬೇಕು ಎಂಬುದು ಸ್ಥಳೀಯರ ಒತ್ತಾಯ.
ಘಟಕವಿದ್ದರೂ ಬಸ್ ಕಾಣದ 180ಕ್ಕೂ ಅಧಿಕ ಹಳ್ಳಿ
ಮೂಡಿಗೆರೆ: ತಾಲ್ಲೂಕಿನಲ್ಲಿ ಕೆಎಸ್ಆರ್‌ಟಿಸಿ ಘಟಕ ನಿರ್ಮಾಣವಾಗಿ ಒಂದೂವರೆ ವರ್ಷಗಳು ಉರುಳಿದರೂ 180ಕ್ಕೂ ಅಧಿಕ ಹಳ್ಳಿಗಳಿಗೆ ಇಂದಿಗೂ ಬಸ್ ಸೌಲಭ್ಯವಿಲ್ಲ. ತಾಲ್ಲೂಕು ಗುಡ್ಡಗಾಡು ಪ್ರದೇಶವಾಗಿದ್ದು ಮಿನಿ ಬಸ್ ಸೇವೆ ಬೇಕು ಎಂಬ ಕೂಗು ಮೊಳಗಿದರೂ ಮಿನಿ ಬಸ್ ಸೇವೆ ಪ್ರಾರಂಭವಾಗದಿರುವುದು ಹಳ್ಳಿಗಳಿಂದ ಸಾರಿಗೆ ವ್ಯವಸ್ಥೆ ದೂರ ಉಳಿಯಲು ಕಾರಣವಾಗಿದೆ.
ತಾಲ್ಲೂಕಿನ ಹಲವು ಪ್ರವಾಸಿ ತಾಣಗಳಿಗೆ ಕೂಡ ಬಸ್ ಸೇವೆ ಕಲ್ಪಿಸದಿರುವುದು ಸಾರಿಗೆ ಸೌಲಭ್ಯದಿಂದ ಸ್ಥಳೀಯರು ದೂರ ಉಳಿಯುವಂತಾಗಿದೆ. ಇದರಿಂದಾಗಿ ದೇವರಮನೆ ಕೂಡಿಗೆ ಕೋಗಿಲೆಯಂತಹ ತಾಣಗಳನ್ನು ಮುಟ್ಟುವುದು ಸಾಮಾನ್ಯ ಜನರಿಗೆ ಸವಾಲಾಗುತ್ತದೆ. ಇತ್ತೀಚೆಗಷ್ಟೇ ಹೊರನಾಡಿಗೆ ಸ್ಥಳೀಯ ಘಟಕದಿಂದ ಬಸ್ ಸೇವೆ ಆರಂಭಿಸಿರುವುದನ್ನು ಹೊರತುಪಡಿಸಿದರೆ ಶೃಂಗೇರಿ ಇನಾಂ ದತ್ತಾತ್ರೇಯಪೀಠ ದೇವಿರಮ್ಮ ದೇವಾಲಯ ಸೇರಿದಂತೆ ಜಿಲ್ಲೆಯ ಯಾವ ತಾಣಗಳಿಗೂ ಬಸ್ ಸೇವೆ ಇಲ್ಲದಿರುವುದು ದೀಪದ ಕೆಳಗೆ ಕತ್ತಲು ಎನ್ನುವಂತಾಗಿದೆ.
ಇರುವ ಮಾರ್ಗಗಳಲ್ಲೂ ಬಸ್ ಸೇವೆ ಸಮರ್ಪಕವಾಗಿಲ್ಲ ಎಂಬುದು ಸ್ಥಳೀಯ ಪ್ರಯಾಣಿಕರ ಆರೋಪವಾಗಿದ್ದು ಬೆಳಗಿನ ವೇಳೆ ಜಿಲ್ಲಾ ಕೇಂದ್ರಕ್ಕೆ ಸೂಕ್ತ ಬಸ್ ವ್ಯವ್ಥೆಯಿಲ್ಲದೇ ವಿದ್ಯಾರ್ಥಿಗಳು ಪರದಾಡುವ ದೃಶ್ಯ ಸಾಮಾನ್ಯವಾಗಿದೆ. ಇನ್ನು ಬಸ್ ನಿಲ್ದಾಣದಲ್ಲಿ ಪೊಲೀಸ್ ಚೌಕಿಯಿಲ್ಲದೇ ಕಾಲೇಜು ಬಿಡುವ ಸಮಯದಲ್ಲಿ ನಿಲ್ದಾಣವು ಪುಂಡರ ತಾಣವಾಗುತ್ತಿದ್ದು ಬಸ್ ನಿಲ್ದಾಣದಲ್ಲಿಯೇ ಹೊಡೆದಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆಗಳು ನಡೆದಿವೆ.
ಬಸ್ ನಿಲ್ದಾಣದಲ್ಲಿ ಸೌಲಭ್ಯಗಳು ಮರೀಚಿಕೆಯಾಗಿದ್ದು ಕುಡಿಯುವ ನೀರಿನ ತಾಣವು ಅಶುಚಿತ್ವದಿಂದ ಕೂಡಿದ್ದರೆ ಇದೇ ಜಾಗದಲ್ಲಿ ಬೆಳಿಗ್ಗೆ ನಿಲ್ದಾಣದಲ್ಲಿ ತಂಗಿದ ನಿರ್ಗತಿಕರು ಪ್ರಯಾಣಿಕರು ಮುಖ ತೊಳೆದು ಹೋಗುವ ದೃಶ್ಯಗಳು ಸಾಮಾನ್ಯವಾಗಿವೆ. ಶೌಚಾಲಯ ಕೂಡ ಗಬ್ಬು ನಾರುತ್ತಿದ್ದು ಮೂಲ ಸೌಲಭ್ಯ ಹಾಗೂ ಬಸ್ ಸೇವೆ ಒದಗಿಸಲು ವಿಶೇಷ ಆಸಕ್ತಿ ಅಗತ್ಯವಾಗಿದೆ.
ಪೂರಕ ಮಾಹಿತಿ: ರಾಜಶೇಖರಯ್ಯ, ಕೆ.ವಿ.ನಾಗರಾಜ್, ಸತೀಶ್ ಜೈನ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.