ಬುಧವಾರ, ಅಕ್ಟೋಬರ್ 20, 2021
24 °C
ಕಾಫಿಯನ್ನು ಕೃಷಿ ಬೆಳೆಯೆಂದು ಪರಿಗಣಿಸಿ– ಡಾ.ಜಿ.ಎಸ್.ಮಹಾಬಲ ರಾವ್

ವಿಶೇಷ ಅನುದಾನ ನೀಡಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪ: ‘ಕಾಫಿಯನ್ನು ಕೃಷಿ ಬೆಳೆಯೆಂದು ಪರಿಗಣಿಸಲು ಕೇಂದ್ರದ ವಾಣಿಜ್ಯ ಖಾತೆ ಸಚಿವ ಪಿಯೂಷ್ ಗೋಯಲ್ ಅವರೊಂದಿಗೆ ನಡೆದ ಸಭೆಯಲ್ಲಿ ಚರ್ಚಿಸಲಾಗಿದ್ದು, ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ’ ಎಂದು ರಾಷ್ಟ್ರೀಯ ಕಾಫಿ ಮಂಡಳಿ ಉಪಾಧ್ಯಕ್ಷ ಡಾ. ಜಿ.ಎಸ್.ಮಹಾಬಲ ರಾವ್ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಫಿ ಬೆಳೆಗಾರರ ಹಿತಕಾಯಲು ಕಾಫಿ ಮಂಡಳಿಯು ಪಿಯೂಷ್ ಗೋಯಲ್ ಜತೆ ಸಭೆ ನಡೆಸಿದೆ. ವಿಶೇಷ ಅನುದಾನ ನೀಡಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ್ದೇವೆ’ ತಿಳಿಸಿದರು.

‘ಅಕ್ಟೋಬರ್‌ನಿಂದ ಅನುಷ್ಠಾನ ವಾಗುವಂತೆ ಸಣ್ಣ, ಅತಿಸಣ್ಣ ರೈತರು ಹೊಸದಾಗಿ ಕಾಫಿ ತೊಟ ಮಾಡು ವವರಿಗೆ, ಕಾಫಿ ತೋಟ ಪುನಶ್ಚೇತನಕ್ಕೆ ಹಾಗೂ ಯಂತ್ರೋಪಕರಣ ಖರೀದಿಗೆ ಸಹಾಯಧನ ನೀಡಲು ಕ್ರಮ ವಹಿಸಿದೆ. ಬುಡಕಟ್ಟು, ಗಿರಿಜನ ಕಾಫಿ ಬೆಳೆಗಾರಿಗೆ ಶೇ 75 ರಷ್ಟು ಸಹಾಯಧನ ನೀಡಲಾಗುತ್ತಿದೆ’ ಎಂದರು.

‘ಸಣ್ಣ, ಅತಿಸಣ್ಣ ರೈತರಿಗೆ ಮೀಸಲಿಟ್ಟ ₹ 62 ಕೋಟಿ ಸಹಾಯಧನದಲ್ಲಿ
₹ 12 ಕೋಟಿಯನ್ನು ಗಿರಿಜನ ಕಾಫಿ ಬೆಳೆಗಾರರಿಗೆ ಮೀಸಲಿಟ್ಟಿದ್ದೇವೆ. ಸಣ್ಣ, ಅತಿಸಣ್ಣ ಕಾಫಿ ಬೆಳೆಗಾರರ ಮಕ್ಕಳು, ತೋಟದ ಕೂಲಿ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಕಾಫಿ ಬೆಳೆಗಾರರ ಸಾಲ ನವೀಕರಣಕ್ಕೆ ಅವಕಾಶ ಸಿಗಲಿದೆ’ ಎಂದು ವಿವರಿಸಿದರು.

‘ದೇಶದಲ್ಲಿ ಒಟ್ಟು 4.59 ಲಕ್ಷ ಹೆಕ್ಟೇರ್, ಕರ್ನಾಟಕದಲ್ಲಿ 2.45 ಲಕ್ಷ ಹೆಕ್ಟೇರ್, ಚಿಕ್ಕಮಗಳೂರು ಜಿಲ್ಲೆಯಲ್ಲಿ 97 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತಿದೆ. ದೇಶದಲ್ಲಿ 50 ಲಕ್ಷಕ್ಕೂ ಹೆಚ್ಚು ಮಂದಿ ಕಾಫಿ ಉದ್ಯಮ ಅವಲಂಬಿಸಿದ್ದಾರೆ’ ಎಂದರು.

ಮಂಡಲ ಬಿಜೆಪಿ ಅಧ್ಯಕ್ಷ ಅದ್ದಡ ಸತೀಶ್, ಪಂಚಾಯತ್ ರಾಜ್ ಪ್ರಕೋಷ್ಟದ ರಾಜ್ಯ ಸಹ ಸಂಚಾಲಕ ಎಸ್.ಎನ್.ರಾಮಸ್ವಾಮಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಇದಿನಬ್ಬ, ಪ್ರವೀಣ್, ಬಿಜೆಪಿ ಮುಖಂಡ ಎಚ್.ಆರ್.ಜಗದೀಶ್ ಇದ್ದರು.

ಚಿಕೋರಿ ಮಿಶ್ರಣಕ್ಕೆ ತಡೆ

‘ಕಾಫಿ ಬೆಳೆಯನ್ನು ಶೇ 90 ರಷ್ಟು ಸಣ್ಣ ಮತ್ತು ಅತಿ ಸಣ್ಣ ರೈತರು, ಶೇ 8 ರಷ್ಟು ಮಧ್ಯಮ ವರ್ಗ, ಶೇ 2 ರಷ್ಟು ದೊಡ್ಡ ರೈತರು ಬೆಳೆಯುತ್ತಿದ್ದಾರೆ. ಕಾಫಿ ರಪ್ತಿನಿಂದ ದೇಶದ ಆರ್ಥಿಕ ವ್ಯವಸ್ಥೆಗೆ ₹  10 ಸಾವಿರ ಕೋಟಿಗೂ ಹೆಚ್ಚು ಆದಾಯವಿದೆ. ಕ್ರೋನಲ್ ಗ್ರಾಫ್ಟ್ ಮೂಲಕ ಕಾಫಿ ಸಸಿ ಬೆಳೆಸುವ ನಿಟ್ಟಿನಲ್ಲಿ ಸಂಶೋಧನೆ ನಡೆದಿದೆ. ದೇಶದ 37 ಭಾಗಗಳಲ್ಲಿ ಸಂಶೋಧನಾ ಸಂಸ್ಥೆ ಕಾರ್ಯನಿರ್ವಹಿಸುತ್ತಿವೆ. ಚಿಕೋರಿ ಬೆಳೆಯನ್ನು ಕಾಫಿ ಜತೆಗೆ ಮಿಶ್ರಣ ಮಾಡದಂತೆ ಕ್ರಮ ಕೈಗೊಳ್ಳಲು ಮನವಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಇದರಿಂದ ಕಾಫಿ ಬೆಳೆಗಾರರಿಗೆ ಅನುಕೂಲವಾಗಲಿದೆ. ಅರೆಬಿಕಾ ಮತ್ತು ರೋಬಸ್ಟಾ ಒಗ್ಗೂಡಿಸಿ ಮಾಡಿದ ಕಾಫಿ ಪುಡಿಯಿಂದ ಮಾಡಿದ ಕಾಫಿ ಹೆಚ್ಚು ರುಚಿಕರವಾಗಿರುತ್ತದೆ’ ಎಂದು ಡಾ. ಜಿ.ಎಸ್.ಮಹಾಬಲ ರಾವ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.