ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಫಿ ಬೆಳೆಗೆ ₹307 ಕೋಟಿ ನೆರವು: ದಿನೇಶ್

Published : 23 ಆಗಸ್ಟ್ 2024, 15:40 IST
Last Updated : 23 ಆಗಸ್ಟ್ 2024, 15:40 IST
ಫಾಲೋ ಮಾಡಿ
Comments

ಚಿಕ್ಕಮಗಳೂರು: ‘ಕಾಫಿ ಮಂಡಳಿ ಮೂಲಕ ಬೆಳೆಗಾರರಿಗೆ ನೆರವಾಗಲು ಕೇಂದ್ರ ವಾಣಿಜ್ಯ ಸಚಿವಾಲಯ ₹307.80 ಕೋಟಿ ನೆರವು ಘೋಷಿಸಿದೆ’ ಎಂದು ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ತಿಳಿಸಿದರು.

2022–23ರಲ್ಲಿ ₹228.23 ಕೋಟಿ ಮತ್ತು 2023–24ರಲ್ಲಿ ₹226.20 ಕೋಟಿ ಅನುದಾನ ದೊರೆತಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 36ರಷ್ಟು ಹೆಚ್ಚಿನ ಅನುದಾನ ದೊರೆತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಾಫಿ ಬೆಳೆಗೆ ಪೂರಕವಾದ ಯಂತ್ರೋಪಕರಣ ಖರೀದಿ ಸಬ್ಸಿಡಿಗಾಗಿ ಕಳೆದ ಸಾಲಿನಲ್ಲಿ ₹62.70 ಕೋಟಿ ನೀಡಲಾಗಿದ್ದು, ಈ ಸಾಲಿನಲ್ಲಿ ₹90 ಕೋಟಿಯಷ್ಟು ಸಬ್ಸಿಡಿ ಹಣ ಲಭ್ಯವಾಗಿದೆ. ಇದು ಕೂಡ ಶೇ 40ರಷ್ಟು ಹೆಚ್ಚಳವಾಗಿದೆ. ಈವರೆಗೆ 10 ಹೆಕ್ಟೇರ್‌ ತನಕ ಇದ್ದ ಸಬ್ಸಿಡಿ ಸೌಲಭ್ಯವನ್ನು 25 ಹೆಕ್ಟೇರ್‌ಗೆ ವಿಸ್ತರಿಸಲಾಗಿದೆ ಎಂದು ವಿವರಿಸಿದರು.

ಕಾಫಿ ಒಣಗಿಸುವ ಪ್ರಾಂಗಣ, ಗೋದಾಮು, ಪಲ್ಪರ್‌, ಕಾಫಿ ಒಣಗಿಸುವ ಯಂತ್ರಗಳ ಖರೀದಿಗೆ ಸಬ್ಸಿಡಿಯನ್ನು ಹಲವು ವರ್ಷಗಳ ಬಳಿಕ ಮತ್ತೆ ಜಾರಿಗೊಳಿಸಲಾಗಿದೆ. ತೆರೆದ ಬಾವಿ, ಟ್ಯಾಂಕ್ ನಿರ್ಮಾಣ, ಸ್ಪ್ರಿಂಕ್ಲರ್, ಹನಿ ನೀರಾವರಿ, ಕಾಫಿ ಕ್ಯೂರಿಂಗ್ ಘಟಕದಲ್ಲಿನ ಯಂತ್ರಗಳ ಬದಲಾವಣೆ ಸೇರಿ ವಿವಿಧ ಉದ್ದೇಶಗಳಿಗೆ ಸಬ್ಸಿಡಿ ನೀಡುವ ಮೂಲಕ ಬೆಳೆಗಾರರಿಗೆ ನೆರವಾಗಲು ಅವಕಾಶ ಮಾಡಿಕೊಳ್ಳಲಾಗಿದೆ ಎಂದರು.

ಕಾರ್ಮಿಕರ ಮಕ್ಕಳ ವಿದ್ಯಾನಿಧಿಗೆ ₹4 ಕೋಟಿ ಅನುದಾನ ಮೀಸಲಿಡಲಾಗಿದೆ. ಕಾಫಿ ಉತ್ಪಾದನೆ ಹೆಚ್ಚಿಸಲು ಮಾರ್ಗೋಪಾಯ ಕಂಡುಕೊಳ್ಳಲು ಇತ್ತೀಚೆಗೆ ನಡೆದ ಕಾಫಿ ಸಮುದಾಯದ ಸಭೆಯ ಆಧಾರದಲ್ಲಿ 17 ಸಮಿತಿಗಳನ್ನು ರಚನೆ ಮಾಡಲಾಗಿದೆ ಎಂದು ಹೇಳಿದರು.

‘ಈ ವರ್ಷ ಅತಿವೃಷ್ಟಿಯಿಂದ ಕಾಫಿ ಬೆಳೆಹಾನಿ ಬಗ್ಗೆ ಕಂದಾಯ ಇಲಾಖೆ ಮತ್ತು ಕಾಫಿ ಮಂಡಳಿ ಜಂಟಿಯಾಗಿ ಸಮೀಕ್ಷೆ ನಡೆಸುತ್ತಿವೆ. ಸರಾಸರಿ ಶೇ 33ಕ್ಕಿಂತ ಹೆಚ್ಚಿನ ಹಾನಿಯಾಗಿದ್ದರೆ ಎನ್‌ಡಿಆರ್‌ಎಫ್‌ನಿಂದ ಪರಿಹಾರ ಪಡೆಯಲು ಬೆಳೆಗಾರರು ಅರ್ಹರಿದ್ದಾರೆ’ ಎಂದರು.

ಮಂಡಳಿಯ ಸದಸ್ಯರಾದ ಮಹಾಬಲ, ಪ್ರದೀಪ್ ಪೈ, ಭಾಸ್ಕರ್, ಡಿ.ಎಂ.ಶಂಕರ್, ಉಪನಿರ್ದೇಶಕ ವೆಂಕಟರೆಡ್ಡಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT