ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡೆಂಗಿ, ಮಲೇರಿಯಾ ತಡೆಗೆ ಸಮುದಾಯದ ಸಹಕಾರ ಅಗತ್ಯ’

Published 8 ಜೂನ್ 2023, 13:51 IST
Last Updated 8 ಜೂನ್ 2023, 13:51 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಮಳೆಗಾಲ ಆರಂಭವಾಗಿದ್ದು ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಾಗಿ ಕಡಿತದಿಂದ ಡೆಂಗಿ, ಮಲೇರಿಯಾ, ಚಿಕನ್‌ಗುನ್ಯಾದಂತಹ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ. ನಿವಾರಣೆಗೆ ಮುಂಜಾಗ್ರತಾ ಕ್ರಮ ಅನುಸರಿಸುವಂತೆ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಹರೀಶ್‌ ಬಾಬು ಗುರುವಾರ ಇಲ್ಲಿ ತಿಳಿಸಿದರು.

ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಡೆಂಗಿ, ಮಲೇರಿಯಾ ಚಿಕನ್‌ಗುನ್ಯಾ ನಿಯಂತ್ರಣ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಡೆಂಗಿ ವೈರಸ್‌ನಿಂದ ಹರಡುವ ಕಾಯಿಲೆ. ಸೋಂಕು ಇರುವ ಈಡಿಸ್‌ ಈಜಿಪ್ಟೈ ಎಂಬ ಸೊಳ್ಳೆ ಕಚ್ಚಿ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಸಾಮಾನ್ಯವಾಗಿ ಸೊಳ್ಳೆಗಳು ಸ್ವಚ್ಛ ನೀರಿನಲ್ಲಿ ಸಂತಾನೋತ್ಪತ್ತಿ ವೃದ್ಧಿ ಮಾಡುತ್ತವೆ. ಹಗಲು ಹೊತ್ತಿನಲ್ಲಿ ಕಚ್ಚುತ್ತವೆ ಇವುಗಳ ನಿಯಂತ್ರಣಕ್ಕೆ ಕ್ರಮವಹಿಸಬೇಕು ಎಂದರು.

ಮನೆಗಳಲ್ಲಿ ನೀರು ಶೇಖರಿಸುವ ತೊಟ್ಟಿ, ಬ್ಯಾರಲ್‌, ಡ್ರಮ್ಮು, ಒರಳುಕಲ್ಲು ಮೊದಲಾದ ಕಡೆಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಹಾಗಾಗಿ ಶೇಖರಿಸಿದ ನೀರನ್ನು ವಾರಕ್ಕೊಮ್ಮೆ ಖಾಲಿಮಾಡಿ, ಒಣಗಿಸಿ ಭರ್ತಿ ಮಾಡಬೇಕು. ಬಯಲಿನಲ್ಲಿ ತ್ಯಾಜ್ಯಗಳಾದ ಟೈರು, ಎಳನೀರಿನ ಚಿಪ್ಪು, ಒಡೆದ ಬಾಟಲಿಗಳನ್ನು ಸೂಕ್ತವಾಗಿ ವಿಲೇವಾರಿ ಮಾಡಬೇಕು. ಮನೆ ಮುಂದೆ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ರಾತ್ರಿ ಮಲಗುವಾಗ ಸೊಳ್ಳೆಪರದೆ ಬಳಸುವಂತೆ ಸಲಹೆ ನೀಡಿದರು.

ಜಿಲ್ಲೆಯಲ್ಲಿ ಪ್ರಕರಣ: ಜೂನ್‌ 8ರವರೆಗೆ ಜಿಲ್ಲೆಯಲ್ಲಿ ಒಟ್ಟು 7 ಡೆಂಗಿ ಪ್ರಕರಣ, 1 ಮಲೇರಿಯಾ, ಚಿಕನ್‌ಗುನ್ಯಾ 1 ಹಾಗೂ ಮಿದುಳುಜ್ವರ (ಎಈಎಸ್‌) 3 ಪ್ರಕರಣಗಳು ದಾಖಲಾಗಿವೆ. ಆರೋಗ್ಯ ಇಲಾಖೆ ವತಿಯಿಂದ ಆಶಾ ಕಾರ್ಯಕರ್ತೆಯರು ಮನೆ, ಮನೆಗೆ ತೆರಳಿ ನೀರಿನ ತಾಣಗಳಲ್ಲಿ ಸೊಳ್ಳೆಗಳ ಲಾರ್ವ ಪರೀಕ್ಷೆ ನಡೆಸುತ್ತಿದ್ದಾರೆ. ಮಲೇರಿಯಾ, ಡೆಂಗಿ ಸಂಬಂಧಿಸಿದಂತೆ ರಕ್ತ ಪರೀಕ್ಷೆ ನಡೆಸಲಾಗಿದೆ ಎಂದು ತಿಳಿಸಿದರು.

ಗ್ರಾಮೀಣ ಭಾಗದಲ್ಲಿ ಸೊಳ್ಳೆಗಳ ನಿಯಂತ್ರಣಕ್ಕಾಗಿ ಕೆರೆಕಟ್ಟೆ, ಬಾವಿ, ಕೃಷಿಹೊಂಡ ಮೊದಲಾದ ಕಡೆಗಳಲ್ಲಿ ಲಾರ್ವಹಾರಿಗಳಾದ ಗಪ್ಪಿ, ಗ್ಯಾಂಬೂಸಿಯಾ ಮೀನುಗಳನ್ನು ಬಿಡಲಾಗುತ್ತಿದೆ. ‘ಎಲ್ಲರ ಸಹಭಾಗಿತ್ವದೊಂದಿಗೆ ಡೆಂಗಿ ಸೋಲಿಸೋಣ’ ಎಂಬುದು ಈ ವರ್ಷದ ಘೋಷವಾಕ್ಯವಾಗಿದೆ. ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯೊಂದಿಗೆ ಸಮುದಾಯ ಹಾಗೂ ವಿವಿಧ ಇಲಾಖೆಗಳ ಸಹಕಾರವೂ ಅಗತ್ಯ ಎಂದರು.

ಮಲೇರಿಯಾ ಅನಾಫಿಲಿಸ್‌ ಎಂಬ ಹೆಣ್ಣು ಸೊಳ್ಳೆ ಕಡಿತದಿಂದ ಹರಡುತ್ತದೆ. ವಿಪರೀತ ತಲೆನೋವು, ಮೈ–ಕೈನೋವು, ಜ್ವರ, ನಡುಕ ಲಕ್ಷಣಗಳಾಗಿವೆ. ಚಿಕನ್‌ಗುನ್ಯಾ, ಡೆಂಗಿ ವೈರಾಣು ಜ್ವರ ಇದಕ್ಕೆ ನಿರ್ದಿಷ್ಟ ಔಷಧಿ ಲಸಿಕೆಗಳಿಲ್ಲ. ರೋಗದ ಲಕ್ಷಣಗಳು ಕಂಡು ಬಂದಾಗ ವೈದ್ಯರಿಂದ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಹಿರಿಯ ಆರೋಗ್ಯ ನಿರೀಕ್ಷಕರಾದ ದೇವರಾಜ್‌, ಯೋಗೇಶ್, ಪ್ರದೀಪ್‌, ಹೇಮಾವತಿ, ಉಮೇಶ್‌, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT