ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ಸಂಸದೆ ಶೊಭಾ ಕರಂದ್ಲಾಜೆಗೆ ಈರುಳ್ಳಿ ಹಾರ ಹಾಕಲು ಯತ್ನ

Last Updated 7 ಜನವರಿ 2020, 14:19 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಅಡುಗೆ ಅನಿಲ ಹಾಗೂ ಈರುಳ್ಳಿ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು. ಸಂಸದೆ ಶೊಭಾ ಕರಂದ್ಲಾಜೆ ಅವರಿಗೆ ಈರುಳ್ಳಿ ಹಾರ ಹಾಕಲು ಯತ್ನಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಮುಖ್ಯದ್ವಾರದ ಬಳಿ ಜಮಾಯಿಸಿದ ಕಾರ್ಯಕರ್ತರು, ಈರುಳ್ಳಿ ಹಾರ ಧರಿಸಿ, ಸೌದೆ ಒಲೆಯಲ್ಲಿ ಪಕೋಡ ತಯಾರಿಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ದಿಶಾ ಸಭೆಯಲ್ಲಿ ಭಾಗವಹಿಸಲು ಬರುತ್ತಿದ್ದ ಸಂಸದೆ ಶೋಭಾ ಕರಂದ್ಲಾಜೆ ಅವರ ವಾಹನಕ್ಕೆ ಪ್ರತಿಭಟನಾಕಾರರು ಅಡ್ಡಲಾಗಿ ನುಗ್ಗಿದರು. ವಾಹನದೊಳಗಿದ್ದ ಸಂಸದೆಗೆ ಈರುಳ್ಳಿ ಹಾರ ಹಾಕಲು ಯತ್ನಿಸಿದರು. ಪೊಲೀಸರು ಪ್ರತಿಭಟನಾಕಾರರನ್ನು ಬದಿಗೆ ದಬ್ಬಿ ವಾಹನ ಸಾಗಲು ಅನುವು ಮಾಡಿಕೊಟ್ಟರು. ಪ್ರತಿಭಟನಾಕಾರರನ್ನು ಜಿಲ್ಲಾ ಪಂಚಾಯಿತಿ ಮುಖ್ಯದ್ವಾರದ ಬಳಿಯೇ ತಡೆದರು. ಈ ಸಮಯದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರ ನಡುವೆ ತಳ್ಳಾಟ ನಡೆಯಿತು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ‘ದೇಶದ ಆರ್ಥಿಕ ವ್ಯವಸ್ಥೆ ಕುಸಿಯುತ್ತಿದೆ. ದಿನಬಳಕೆ ವಸ್ತುಗಳು, ತೈಲ ಬೆಲೆ ಪ್ರತಿನಿತ್ಯ ಏರಿಕೆಯಾಗುತ್ತಿದೆ. ಆದರೆ, ಕೇಂದ್ರದ ಬಿಜೆಪಿ ಸರ್ಕಾರ ಭಾವನಾತ್ಮಕ ವಿಷಯಗಳನ್ನು ಹಿಡಿದು, ರಾಜಕೀಯ ಮಾಡುತ್ತಿದೆ. ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿದೆ. ಸಂಸದೆ ಶೋಭಾ ಕರಂದ್ಲಾಜೆ ಅವರು ಪ್ರತಿಭಟನಾಕಾರರ ಮನವಿ ಸ್ವೀಕರಿಸದೇ ತೆರಳಿರುವುದು, ಅವರಿಗೆ ಶೋಭೆ ತರುವುದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷೆ ವನಮಾಲ ದೇವರಾಜ್, ಪ್ರಧಾನ ಕಾರ್ಯದರ್ಶಿ ರೇಣುಕಾ ಉಮೇಶ್, ವಸಂತಾ ಸೋಮೇಗೌಡ, ಸದಸ್ಯೆಯರಾದ ಲೋಲಾಕ್ಷಿಬಾಯಿ, ಸುರೇಖಾ ಸಂಪತ್, ಮುಖಂಡರಾದ ಎಂ.ಎಲ್.ಮೂರ್ತಿ, ಗಾಯತ್ರಿ ಶಾಂತೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT