ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಾಮ ಸೇನೆ: 17ನೇ ವರ್ಷದ ದತ್ತಮಾಲಾ ಅಭಿಯಾನ ಸಂಪನ್ನ

Last Updated 15 ನವೆಂಬರ್ 2021, 3:09 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಶ್ರೀರಾಮ ಸೇನೆ ವತಿಯಿಂದ ಜರುಗಿದ 17ನೇ ವರ್ಷದ ದತ್ತಮಾಲಾ ಅಭಿಯಾನದ ಕೊನೆ ದಿನ ಭಾನುವಾರ ದತ್ತ ಭಕ್ತರು ಗಿರಿಯಲ್ಲಿನ ಗುರುದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾದಲ್ಲಿ ದತ್ತ ಪಾದುಕೆ ದರ್ಶನ ಮಾಡಿ ನಮಿಸಿದರು.

ದತ್ತ ಭಕ್ತರು ನಗರದ ಬಸವನಹಳ್ಳಿಯ ಶಂಕರ ಮಠದಲ್ಲಿ ಬೆಳಿಗ್ಗೆ ಪೂಜೆ ಸಲ್ಲಿಸಿದರು. ನಂತರ ಮಾಲಾಧಾರಿಗಳು ವಾಹನಗಳಲ್ಲಿ ಗಿರಿಗೆ ತೆರಳಿದರು. ನೂರಾರು ಭಕ್ತರು ಪಾಲ್ಗೊಂಡಿದ್ದರು. ಹೊರ ಜಿಲ್ಲೆಗಳ ಭಕ್ತರು ಇದ್ದರು.

ದತ್ತ ಭಕ್ತರು ಸಾಲಾಗಿ ದತ್ತ ಪೀಠಕ್ಕೆ ತೆರಳಿದರು. ಗುಹೆಯೊಳಗೆ ದತ್ತ ಪಾದುಕೆ ದರ್ಶನ ಮಾಡಿ ಭಕ್ತಿ ಸಮರ್ಪಿಸಿದರು.

ದತ್ತ ಪೀಠ ಆವರಣದ ಹೊರವಲಯದಲ್ಲಿರುವ ಸಭಾ ಮಂಟಪ ಗಣ ಹೋಮ, ದತ್ತ ಹೋಮ ಮೊದಲಾದ ಕೈಂಕರ್ಯಗಳು ಜರುಗಿದವು. ಭಕ್ತರು ಗುರು ದತ್ತಾತ್ರೇಯರ ನಾಮ ಸ್ಮರಣೆ, ಭಜನೆ ಮಾಡಿದರು.

ಹೋಮ, ಹವನ, ಪೂಜಾ ಕೈಂಕರ್ಯಗಳಲ್ಲಿ ಭಕ್ತರು ಪಾಲ್ಗೊಂಡರು. ಪ್ರಸಾದ ವ್ಯವಸ್ಥೆ ಇತ್ತು. ಧಾರ್ಮಿಕ ಸಭೆ ಜರುಗಿತು. ‘ಗುರು ಚರಿತ್ರೆ’ ಕೃತಿ ಬಿಡುಗಡೆಗೊಳಿಸಲಾಯಿತು.

ಪ್ರಮೋದ್ ಮುತಾಲಿಕ್‌ ಮಾತನಾಡಿ, ದತ್ತ ಪೀಠ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರವು ಸಂಪುಟ ಉಪಸಮಿತಿ ನೇಮಿಸಿದೆ. ಸಮಿತಿಯು ಪ್ರಕ್ರಿಯೆಯಲ್ಲಿ ತೊಡಗಿದೆ ಎಂದು ಸಂಸದೀಯ ವ್ಯವಹಾರ ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ. ಸಮಿತಿಯು ನಿರ್ಧಾರ ಕೈಗೊಳ್ಳುವ ಭರವಸೆ ಇದೆ’ ಎಂದು ಹೇಳಿದರು.

‘ನಾವು ಮುಂದೆ ಇನ್ನು ಬಹಳಷ್ಟು ಹೋರಾಟ ಮಾಡಬೇಕಿದೆ. ದತ್ತ ಪೀಠವನ್ನು ಹಿಂದೂಗಳಿಗೆ ಒಪ್ಪಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ’ ಎಂದರು.

ಈ ಭಾರಿ ಶೋಭಾ ಯಾತ್ರೆ ಇರಲಿಲ್ಲ. ಶ್ರೀರಾಮ ಸೇನೆ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಆನಂದಶೆಟ್ಟಿ ಆಡ್ಯಾರ್‌, ಜಿಲ್ಲಾ ಘಟಕದ ಅಧ್ಯಕ್ಷ ರಂಜಿತ್‌ ಶೆಟ್ಟಿ, ಮಹೇಶ್‌ ಕಟ್ಟಿನ ಮನೆ, ವಕೀಲರಾದ ಜಗದೀಶ ಬಾಳಿಗ, ಕಾಳಿ ಮಠದ ಋಷಿಕುಮಾರ ಸ್ವಾಮೀಜಿ, ಕರುಣೇಶ್ವರ ಮಠದ ಸಿದ್ಧಲಿಂಗ ಸ್ವಾಮೀಜಿ, ಪರಮಾತ್ಮ ಸ್ವಾಮೀಜಿ, ಯೋಗಿ ಸಂಜೀತ್‌ ಸುವರ್ಣಾ, ದುರ್ಗಾಸೇನೆ ಜಿಲ್ಲಾಧ್ಯಕ್ಷೆ ಶಾರದಮ್ಮ, ತಾಲ್ಲೂಕು ಅಧ್ಯಕ್ಷೆ ನವೀನಾ ಇದ್ದರು.

ಪೊಲೀಸ್‌ ಭದ್ರತೆ: ನಗರದ ಪ್ರಮುಖ ವೃತ್ತಗಳು ಆಯಕಟ್ಟಿನ ಸ್ಥಳಗಳು, ಗಿರಿ ಶ್ರೇಣಿ ಮಾರ್ಗ, ದರ್ಗಾ ಆವರಣದ ಸುತ್ತ ಪೊಲೀಸರನ್ನು ನಿಯೋಜಿಸಲಾಗಿತ್ತು. ಅಭಿಯಾನದ ನಿಮಿತ್ತ ಗಿರಿಶ್ರೇಣಿ ತಾಣಗಳಿಗೆ ಪ್ರವಾಸಿಗರಿಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿತ್ತು.

ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್‌ ಎಂ.ಹಾಕೆ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಸ್‌.ಎನ್‌.ಶ್ರುತಿ, ಉಪವಿಭಾಗಾಧಿಕಾರಿ ಎಚ್.ಎಲ್‌.ನಾಗರಾಜ್‌ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT