ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗೆ ಅಂದ ನೀಡಿದ ಪ್ರೇರಣಾ ತಂಡ; ಎಲ್ಲರಂತಲ್ಲ ನಮ್ಮ ಈ ಶಿಕ್ಷಕರು!

Last Updated 19 ಜುಲೈ 2020, 15:13 IST
ಅಕ್ಷರ ಗಾತ್ರ

ಮೂಡಿಗೆರೆ: ಸರ್ಕಾರಿ ಶಾಲೆಗಳೆಂದರೆ ಸಮಸ್ಯೆಗಳ ಕಾರಣಕ್ಕೆ ಬಹುತೇಕ ಮಂದಿಯಲ್ಲಿ ಋಣಾತ್ಮಕ ಚಿಂತನೆ ಮೂಡುವುದು ಸಹಜ. ಆದರೆ, ಮನಸು ಮಾಡಿದರೆ ಸರ್ಕಾರಿ ಶಾಲೆಗಳನ್ನೂ ಮಾದರಿಯಾಗಿ ರೂಪಿಸಬಹುದು ಎಂಬುದಕ್ಕೆ ತಾಲ್ಲೂಕಿನ ಪ್ರೇರಣಾ ತಂಡ ಸಾಕ್ಷಿಯಾಗಿದೆ.

ತಾಲ್ಲೂಕಿನ ವಿವಿಧೆಡೆ ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸೇವಾ ಮನೋಭಾವದ ಸಮಾನ ಮನಸ್ಕ ಶಿಕ್ಷಕರು ಸೇರಿ, ಪ್ರೇರಣಾ ಎಂಬ ತಂಡವನ್ನು ಕಟ್ಟಿಕೊಂಡಿದ್ದಾರೆ. ಈ ತಂಡವು ರಜೆ ದಿನಗಳಂದು ತಾಲ್ಲೂಕಿನ ಸರ್ಕಾರಿ ಶಾಲೆಗಳ ಗೋಡೆಗಳಿಗೆ ಮೆರುಗು ನೀಡುವ ಕಾರ್ಯನಿರ್ವಹಿಸುತ್ತಿದೆ.

ಲಾಕ್‌ಡೌನ್ ಪ್ರಾರಂಭವಾದ ಬಳಿಕ ಸಕ್ರಿಯವಾಗಿರುವ ಈ ತಂಡವು ಬಿಡುವಿನ ಅವಧಿಯಲ್ಲಿ ಸರ್ಕಾರಿ ಶಾಲೆಗಳ ಗೋಡೆಗಳಿಗೆ ಬಣ್ಣ ಬಳಿದು, ಚಿತ್ರ ಬಿಡಿಸಿ ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆಯುವಂತೆ ಆಕರ್ಷಣೀಯಗೊಳಿಸುತ್ತಿದೆ. ತಾಲ್ಲೂಕಿನ ಲೋಕವಳ್ಳಿ, ಕಲ್ಲುಗುಡ್ಡ, ಹೇರಡಿಕೆ, ಉದುಸೆ, ದಿಣ್ಣೇಕೆರೆ, ಸಂಸೆ, ಬಾಳೂರು, ದುಂಡುಗ, ಕೊಟ್ಟಿಗೆಹಾರ ಸೇರಿದಂತೆ ಪಟ್ಟಣದ ವಿವಿಧ ಸರ್ಕಾರಿ ಶಾಲೆಗಳಲ್ಲಿ ಕೈಚಳಕ ತೋರಿರುವ ಈ ತಂಡ, ಶಾಲಾ ಪರಿಸರವನ್ನೇ ಬದಲಾಯಿಸಿದೆ. ಕೆಲವು ಶಾಲೆಗಳಲ್ಲಿ ಆಡಳಿತ ಮಂಡಳಿ ಬಣ್ಣ, ಪರಿಕರಗಳನ್ನು ನೀಡಿದರೆ, ಮತ್ತೆ ಕೆಲವೆಡೆ ಈ ಪ್ರೇರಣಾ ತಂಡವೇ ವೆಚ್ಚ ಭರಿಸಿ ಸರ್ಕಾರಿ ಶಾಲೆಗಳನ್ನು ಅಂದಗೊಳಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

‘ಕೊಟ್ಟಿಗೆಹಾರ ಶಾಲೆಯ ಶಿಕ್ಷಕ ಕುಮಾರ್ ನೇತೃತ್ವದಲ್ಲಿ ಪ್ರೇರಣಾ ತಂಡವು ರಚನೆಯಾಯಿತು. ಈ ತಂಡಕ್ಕೆ ಸೇರ್ಪಡೆಗೊಂಡಿರುವ 15ಕ್ಕೂ ಹೆಚ್ಚು ಮಂದಿ ಶಿಕ್ಷಕರು ಪ್ರತಿ ಭಾನುವಾರ ಹಾಗೂ ರಜಾ ದಿನಗಳಂದು ಪೂರ್ವ ನಿಗದಿಯಂತೆ ಸರ್ಕಾರಿ ಶಾಲೆಗಳನ್ನು ಗುರುತಿಸಿಕೊಂಡು ಕಾರ್ಯತತ್ಪರರಾಗುತ್ತೇವೆ. ತಂಡದಲ್ಲಿ ಚಿತ್ರಕಲೆಯಲ್ಲಿ ನೈಪುಣ್ಯತೆ ಪಡೆದವರಿದ್ದು, ಅವರು ಚಿತ್ರಗಳನ್ನು ರಚಿಸಿದರೆ, ಮತ್ತೆ ಕೆಲವರು ಸ್ವಚ್ಛಗೊಳಿಸುವ, ಬಣ್ಣ ಬಳಿಯುವ ಕೆಲಸ ಮಾಡುತ್ತೇವೆ. ಗುಂಪಿನಲ್ಲಿ ಕೆಲಸ ಮಾಡುವುದೇ ನಮಗೆ ರಜೆಯ ಮಜಾ ನೀಡುತ್ತದೆ’ ಎನ್ನುತ್ತಾರೆ ಪ್ರೇರಣಾ ತಂಡದ ಬಿ.ಆರ್. ನವೀನ್.

ತಂಡದಲ್ಲಿ ಕುಮಾರ್ ಕೊಟ್ಟಿಗೆಹಾರ, ಪ್ರಕಾಶ್ ದುರ್ಗದಹಳ್ಳಿ, ಸಲೀಂ, ನವೀನ್, ವೆಂಕಟೇಶ್, ರಾಜು, ಸುನೀಲ್, ಕಾಂತರಾಜ್, ಪ್ರಕಾಶ್, ವಸಂತ್, ದಾಕ್ಷಾಯಿಣಿ, ಆಶಾಲತಾ, ಮಮತಾ ಮುಂತಾದವರಿದ್ದು, ತಂಡದ ಹೆಸರಿಗೆ ತಕ್ಕಂತೆ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪ್ರೇರಕರಾಗಿದ್ದಾರೆ.

ಸರ್ಕಾರಿ ಹುದ್ದೆಯಲ್ಲಿದ್ದು, ರಜೆ ಸಿಕ್ಕರೆ ಸಾಕು ಎನ್ನುವವರೇ ಹೆಚ್ಚು. ಅಂತಹದ್ದರಲ್ಲಿ ರಜೆಯಲ್ಲೂ ಸರ್ಕಾರಿ ಶಾಲೆಗಳ ಗೋಡೆಗಳನ್ನು ಸ್ವಇಚ್ಛೆಯಿಂದ ಅಂದಗಾಣಿಸಲು ಮುಂದಾಗಿರುವ ಈ ಶಿಕ್ಷಕರ ಕಾರ್ಯವನ್ನು ಶಾಲಾಭಿವೃದ್ಧಿ ಸಮಿತಿಗಳು, ಸಾರ್ವಜನಿಕರು ಶ್ಲಾಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT