ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಯತ್ರಿಗೆ ಜೆಡಿಎಸ್‌ ಬೆಂಬಲ ಅಚಲ: ಮಾಜಿ ಶಾಸಕ ವೈ.ಎಸ್.ವಿ.ದತ್ತ

ಕಡೂರಿನಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕ ವೈ.ಎಸ್.ವಿ.ದತ್ತ
Last Updated 5 ಡಿಸೆಂಬರ್ 2021, 3:37 IST
ಅಕ್ಷರ ಗಾತ್ರ

ಕಡೂರು: ‘ವಿಧಾನ ಪರಿಷತ್‌ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್ ವರಿಷ್ಠರು, ಪಕ್ಷದ ಜಿಲ್ಲಾ ಸಮಿತಿ ತೀರ್ಮಾನ ಏನಿದ್ದರೂ ಕಡೂರಿನಲ್ಲಿ ಮಾತ್ರ ಕಾಂಗ್ರೆಸ್‌ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಅವರಿಗೆ ನಮ್ಮ ಬೆಂಬಲ ಅಚಲ’ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ಹೇಳಿದರು.

ಕಡೂರಿನಲ್ಲಿ ಶನಿವಾರ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಗಾಯತ್ರಿ ಶಾಂತೇಗೌಡ ಪರವಾಗಿ ಪ್ರಚಾರ ನಡೆಸಿ ಅವರು ಮಾತನಾಡಿದರು.

‘ನೈಜ ಜಾತ್ಯತೀತ ಪಕ್ಷವಾದ ಜೆಡಿಎಸ್, ಕೋಮುವಾದಿ ಪಕ್ಷವನ್ನು ಅಧಿಕಾರಕ್ಕೆ ಬರುವುದನ್ನು ತಡೆಯಬೇಕೆಂಬ ನಿಟ್ಟಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವ ನಿರ್ಧಾರ ಕೈಗೊಂಡಿದ್ದೇವೆ. ಬಹುಶಃ ಈ ನಿರ್ಧಾರವನ್ನು ಜೆಡಿಎಸ್ ವರಿಷ್ಠರೂ ಬೆಂಬಲಿಸುತ್ತಾರೆಂಬ ವಿಶ್ವಾಸ ನನ್ನದಾಗಿದೆ. ಗಾಯತ್ರಿ ಶಾಂತೇಗೌಡರಿಗೆ ಗೆಲುವು ನಿಶ್ಚಿತ’ ಎಂದರು.

‘ನಮ್ಮದು ಬಡವರ ಮತ್ತು ರೈತರ ಪಕ್ಷವಾಗಿದೆ. ನಾನು ಮಾಜಿ ಶಾಸಕನಾದರೂ ನನ್ನ ಇತಿಮಿತಿಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. 32 ಕೆರೆಗಳಿಗೆ ನೀರು ಬರುತ್ತದೆ ಎಂದಾಗ ದತ್ತ ಸುಳ್ಳು ಹೇಳುತ್ತಿದ್ದಾರೆ ಎಂದರು. ಆದರೆ, ಈಗ ಆ ಕಾಮಗಾರಿ ನಡೆಯುತ್ತಿದೆಯೆಂಬುದು ಸುಳ್ಳಲ್ಲ. ನೂರಾರು ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಇವೆಲ್ಲವನ್ನೂ ಜನರು ಮರೆಯುವುದಿಲ್ಲ ಎಂಬ ನಂಬಿಕೆ ನನ್ನದು’ ಎಂದು ಹೇಳಿದರು.

ಕಾಂಗ್ರೆಸ್‌ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಮಾತನಾಡಿ, ‘ಜೆಡಿಎಸ್ ಬೆಂಬಲ ನನಗೆ ಮತ್ತಷ್ಟು ಆತ್ಮಸ್ಥೈರ್ಯ ಹೆಚ್ಚಿಸಿದೆ. ಬಿಜೆಪಿ ಅಭ್ಯರ್ಥಿಯು ಗ್ರಾಮ ಪಂಚಾಯಿತಿಗಳ ಸಮಸ್ಯೆ ಪರಿಹಾರಕ್ಕೆ ಸೂಕ್ತವಾಗಿ ಸ್ಪಂದಿಸಲಿಲ್ಲ. ಕೇವಲ ಜನರೇಟರ್ ಕೊಟ್ಟರೆ ಸಮಸ್ಯೆ ಮುಗಿಯುವುದಿಲ್ಲ. ಮತದಾನ ಮಾಡುವಾಗ ಈ ಹಿಂದೆ ನಾನು ವಿಧಾನ ಪರಿಷತ್ ಸದಸ್ಯೆಯಾಗಿದ್ದಾಗ ಮಾಡಿದ ಕಾರ್ಯಗಳು, ತಾಲ್ಲೂಕಿಗೆ ನೀಡಿದ ಅನುದಾನಗಳನ್ನು ನೆನಪಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಎಪಿಎಂಸಿ ನಿರ್ದೇಶಕ ಬಿದರೆ ಜಗದೀಶ್, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ, ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್, ಯುವ ಜನತಾದಳ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೇಂಕುಮಾರ್, ಚಿಕ್ಕಮಗಳೂರು ಚಂದ್ರಪ್ಪ, ಎ.ಸಿ.ಚಂದನ, ಎಸ್.ವಿ.ಉಮಾಪತಿ, ಬಿ.ಪಿ.ನಾಗಪ್ಪ, ಮರುಗುದ್ದಿ ಮನು, ಪದ್ಮಾಶಂಕರ್, ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಂ.ಲೋಕೇಶ್, ಬಿ.ಟಿ.ಗಂಗಾಧರ ನಾಯ್ಕ, ಬಿಸಿಲೆರೆ ಕೆಂಪರಾಜು, ಸತೀಶ್‌ ನಾಯ್ಕ, ಯರದಕೆರೆ ರಾಜಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT