ಶನಿವಾರ, ಸೆಪ್ಟೆಂಬರ್ 18, 2021
24 °C
ಚನ್ನಡಲು: ಭೂಕುಸಿತದ ದುಸ್ವಪ್ನಕ್ಕೆ ಎರಡು ವರ್ಷ

ಕಳಸ: ಸಂತ್ರಸ್ತರಿಗೆ ಪುನರ್ವಸತಿ ಮರೀಚಿಕೆ

ರವಿ ಕೆಳಂಗಡಿ Updated:

ಅಕ್ಷರ ಗಾತ್ರ : | |

Prajavani

ಕಳಸ: ಚನ್ನಡಲಿನಲ್ಲಿ 2019ರಲ್ಲಿ ಸಂಭವಿಸಿದ ಭೂಕುಸಿತದ ದುಸ್ವಪ್ನಕ್ಕೆ ಎರಡು ವರ್ಷ ತುಂಬಿದೆ. ಬಾಳೆಹೊಳೆ- ಮಲ್ಲೇಶನಗುಡ್ಡ ಮೂಲಕ ಹಿರೇಬೈಲು ಸಂಪರ್ಕಿಸುವ ಹೊಸ ರಸ್ತೆಯ ಉದ್ದಕ್ಕೂ ಆ ದಿನ ಆರಂಭವಾದ ಭೂಕುಸಿತ ಇಡಿ ಚನ್ನಡಲು ಗ್ರಾಮದ ಪಾಲಿಗೆ ಕರಾಳ ಅನುಭವ. ವಿಪರ್ಯಾಸ ಎಂದರೆ 2 ವರ್ಷ ಕಳೆದರೂ ಸಂತ್ರಸ್ತ ಕುಟುಂಬಗಳಿಗೆ ಪುನರ್ವಸತಿ ಆಗಿಲ್ಲ.

2019 ಆಗಸ್ಟ್ 9ರ ಮಧ್ಯಾಹ್ನ 1.30ಕ್ಕೆ ಹಿರೇಬೈಲು ಆಸುಪಾಸಿನಲ್ಲಿ ಆರಂಭವಾದ ಜಡಿಮಳೆ 3 ಗಂಟೆಯ ಒಳಗೆ ಚನ್ನಡಲು ಪ್ರದೇಶದಲ್ಲಿ 12 ಇಂಚಿಗೂ ಹೆಚ್ಚು ಮಳೆ ಸುರಿದು ಭೂಕುಸಿತ ಉಂಟಾಗಿತ್ತು. ಆ ದಿನ ಎರಡು ಮನೆಗಳು ಸಂಪೂರ್ಣವಾಗಿ ಧ್ವಂಸ ಆಗಿ ಸಂತೋಷ್ ಎಂಬ ಯುವಕ ಮನೆಯೊಳಗೆ ಸಿಲುಕಿ ಮೃತಪಟ್ಟಿದ್ದು, 25ಕ್ಕೂ ಹೆಚ್ಚು ಕುಟುಂಬಗಳ ಕೃಷಿ ಭೂಮಿ, ಮನೆಗಳಿಗೆ ಹಾನಿಯಾಗಿತ್ತು.

ಸಂಪೂರ್ಣ ಮನೆ ಕಳೆದು ಕೊಂಡವರಿಗೆ ತಲಾ ₹ 5 ಲಕ್ಷ ಪರಿಹಾರ, ಜತೆಗೆ ಬಾಡಿಗೆ ಮನೆಯಲ್ಲಿ ಇರುವವರಿಗೆ ಬಾಡಿಗೆಯನ್ನು ಪಾವತಿಸುವ ಭರವಸೆ ಸರ್ಕಾರದಿಂದ ಕೇಳಿ ಬಂದಿತ್ತು. ಇದನ್ನು ನಂಬಿದ ಚನ್ನಡಲು ಗ್ರಾಮಸ್ಥರು ಸಮಾಧಾನ ಪಟ್ಟುಕೊಂಡಿದ್ದರು. ಆದರೆ, ಕೆಲ ಕಾಲದ ನಂತರ ಬಾಡಿಗೆ ಹಣ ಪಡೆಯಲು ನಾಡ ಕಚೇರಿ ಸಂಪರ್ಕಿಸಿದಾಗ ಅವರಿಗೆ ಆಘಾತ ಕಾದಿತ್ತು. ಬಾಡಿಗೆ ಹಣ ಕೊಡುವ ವ್ಯವಸ್ಥೆ ಇಲ್ಲ ಎಂದು ಅಧಿಕಾರಿಗಳಿಂದ ಉತ್ತಮ ಬಂತು. ಸ್ಥಳಾಂತರದ ನಿಯಮಗಳು ಚನ್ನಡಲು ಗ್ರಾಮದವರಿಗೆ ಕಬ್ಬಿಣದ ಕಡಲೆಯೇ ಆಯಿತು.

ಗ್ರಾಮದಲ್ಲಿ 12 ಮನೆಗಳು ಸಂಪೂರ್ಣ ಧ್ವಂಸ ಆಗಿದ್ದು, 5 ಮನೆಗಳು ಜಖಂ ಆಗಿವೆ. ಸ್ಥಳಾಂತರ ಆಗಲೆಂದು ಎಲ್ಲ 27 ಮನೆಗಳಿಗೆ ತಲಾ ₹ 1 ಲಕ್ಷ ಪರಿಹಾರದ ಮೊದಲ ಕಂತು ಲಭ್ಯವಾಗಿದೆ. ಆದರೆ. ಸ್ಥಳಾಂತರಕ್ಕೆ ಒಪ್ಪದ 9 ಮನೆಗಳ ಮಾಲೀಕರು ₹ 50 ಸಾವಿರ ವಾಪಸ್ ಕಟ್ಟಬೇಕು ಎಂಬ ಆದೇಶವೂ ಸರ್ಕಾರದಿಂದ ಸಂತ್ರಸ್ತರಿಗೆ ತಲುಪಿದೆ. ಚನ್ನಡಲಿನಿಂದ 15 ಕಿ.ಮೀ ದೂರದ ಕುಂಬಳಡಿಕೆಯಲ್ಲಿ ಈ ಸಂತ್ರಸ್ತರಿಗೆ ಮನೆ ನಿರ್ಮಿಸಲು ಸರ್ಕಾರ ಭೂಮಿ ಗುರುತಿಸಿತು. ತಮ್ಮ ಕೃಷಿ ಭೂಮಿಯಿಂದ ಅತ್ಯಂತ ದೂರ ಇರುವುದರಿಂದ ಅಲ್ಲಿಗೆ ಹೋಗುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.

ಚನ್ನಡಲು ಗ್ರಾಮದ ಅತಿವೃಷ್ಟಿ ಸಂತ್ರಸ್ತರ ಗೋಳಿನ ಬಗ್ಗೆ ಸ್ಥಳೀಯ ಯುವಕ ಅವಿನಾಶ್ ಪ್ರಧಾನಿ ಕಚೇರಿಗೆ ಪತ್ರ ಬರೆದು ವಿವರಿಸಿದ್ದರು. ಆನಂತರ ಅಲ್ಲಿಂದ ಬಂದ ನಿರ್ದೇಶನದ ಆಧಾರದ ಮೇಲೆ ಜಿಲ್ಲಾಡಳಿತ ಚುರುಕಾಯಿತು. ಇಡಕಿಣಿ ಗ್ರಾಮದ ಓಡಿನಕುಡಿಗೆ ಪ್ರದೇಶದಲ್ಲಿ 2 ಎಕರೆ ಭೂಮಿಯನ್ನು ಶಾಸಕರು ಆಸಕ್ತಿ ತೋರಿ ಮಂಜೂರು ಮಾಡಿಸಿದರು. ಈ ಭೂಮಿಯಲ್ಲಿ ಮರಗಳನ್ನು ಕಡಿಯಲು ಅರಣ್ಯ ಇಲಾಖೆಯು ಈವರೆಗೂ ಅನುಮತಿ ನೀಡಿಲ್ಲ. ಬಡಾವಣೆ ನಿರ್ಮಾಣ ವಿಳಂಬ ಆಗುತ್ತಲೇ ಇದೆ. ಈಗಾಗಲೇ ಚನ್ನಡಲು ಸಂತ್ರಸ್ತರು 2 ವರ್ಷಗಳಿಂದ ಬಾಡಿಗೆ ಮನೆಗಳಲ್ಲಿ ಇದ್ದಾರೆ. ಬಾಡಿಗೆ ಕೊಡಲು ಹಣವೂ ಇಲ್ಲದೆ ಜೀವನಕ್ಕೆ ಆಧಾರವಾಗಿದ್ದ ಕೃಷಿ ಭೂಮಿಯನ್ನೂ ಕಳೆದುಕೊಂಡು ಅತ್ಯಂತ ಯಾತನಾಮಯ ಸ್ಥಿತಿಯಲ್ಲಿ ಇದ್ದಾರೆ.

‘₹ 50 ಸಾವಿರ ವಾಪಸ್ ಅಸಾಧ್ಯ’
‘ಸ್ಥಳಾಂತರ ಆಗದ 9 ಸಂತ್ರಸ್ತರು ಕೂಡ ₹ 50 ಸಾವಿರ ವಾಪಸ್ ಪಾವತಿ ಮಾಡುವ ಸ್ಥಿತಿಯಲ್ಲಿ ಇಲ್ಲ. ಅವರಿಂದ ಹಣ ವಾಪಸ್ ಪಡೆಯಬಾರದು. ಜೊತೆಗೆ ಓಡಿನಕುಡಿಗೆಯಲ್ಲಿ ಕೂಡಲೇ ಬಡಾವಣೆ ನಿರ್ಮಿಸಬೇಕು’ ಎಂದು ಚನ್ನಡಲು ನೆರೆ ಸಂತ್ರಸ್ತರ ಹೋರಾಟ ಸಮಿತಿ ಆಗ್ರಹಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.