ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತುವರಿ, ಹೂಳು: ಸೊರಗಿದ ಕಾಫಿನಾಡಿನ ಕೆರೆಗಳು

ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ 27 ಕೆರೆ ಒತ್ತುವರಿ; ಜಲಮೂಲಗಳ ನಾಶ, ತ್ಯಾಜ್ಯ ಸಮಸ್ಯೆ, ಏರಿ ಕುಸಿತ – ಬಿರುಕು
Last Updated 4 ಜುಲೈ 2022, 7:26 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಹಲವು ಕೆರೆಗಳು ಒತ್ತುವರಿ, ಏರಿ ಕುಸಿತ–ಬಿರುಕು, ಹೂಳು, ಸಂಗ್ರಹ ಸಾಮರ್ಥ್ಯ ಕ್ಷೀಣ, ಜಲಮೂಲಗಳ ನಾಶ, ಗಿಡಗಂಟಿ ತ್ಯಾಜ್ಯ ಸಮಸ್ಯೆಗಳಿಂದ ಸೊರಗಿವೆ. ನಿರ್ವಹಣೆ ಇಲ್ಲದೆ ಕೋಡಿ, ತೂಬುಗಳು ಹಾಳಾಗಿವೆ.

ಕೆಲವೆಡೆ ಚರಂಡಿ ಕೊಳಕು ಕೆರೆಯ ಒಡಲಿಗೆ ಸೇರುತ್ತಿದೆ. ಜಲ ಮಲಿನವಾಗಿ ಬಳಕೆಗೆ ಯೋಗ್ಯವಾಗಿಲ್ಲ. ಚಿಕ್ಕಮಗಳೂರಿನ ದಂಟರಮಕ್ಕಿ ಕೆರೆಯ ನೀರು ಬಳಕೆಗೆ ಯೋಗ್ಯವಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.

ಜಿಲ್ಲೆಯ ಹಲವೆಡೆ ಕೆರೆಗಳು ಒತ್ತುವರಿಯಾಗಿರುವುದು ಕಂಡುಬಂದಿದೆ. ಸಣ್ಣ ನೀರಾವರಿ ಇಲಾಖೆ ಅಂಕಿಅಂಶ ಪ್ರಕಾರ ಉಪವಿಭಾಗವಾರು ಚಿಕ್ಕಮಗಳೂರು ವ್ಯಾಪ್ತಿಯಲ್ಲಿ 16 ಹಾಗೂ ತರೀಕೆರೆ ವ್ಯಾಪ್ತಿಯಲ್ಲಿ 11 ಕೆರೆಗಳು ಒತ್ತುವರಿಯಾಗಿರುವುದು ಕಂಡುಬಂದಿದೆ. ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಹೆಚ್ಚು ಕೆರೆಗಳು ಒತ್ತುವರಿಯಾಗಿವೆ.

ಸಂಗ್ರಹ ಸಾಮರ್ಥ್ಯ ಇಳಿಕೆ: ಕೆರೆಗಳಲ್ಲಿ ಹೂಳು ತುಂಬಿಕೊಂಡಿರುವುದು, ಒತ್ತುವರಿಯಿಂದಾಗಿ ಸಂಗ್ರಹ ಸಾಮರ್ಥ್ಯವೂ ಕ್ಷೀಣವಾಗಿದೆ. ಕೆರೆಯ ನೈಸರ್ಗಿಕ ಹರಿವಿನ ಮೂಲಗಳು ನಾಶವಾಗಿವೆ. ದಿಕ್ಕು ಬದಲಾವಣೆ, ಹರಿವಿಗೆ ತಡೆ, ಕೆರೆ ಸುತ್ತಮುತ್ತ ಕಟ್ಟಡಗಳ ನಿರ್ಮಾಣ ಇತ್ಯಾದಿ ಕಾರಣಗಳಿಂದ ಜಲ ಮೂಲಗಳು ನಶಿಸಿವೆ.

ಸೋರಿಕೆ; ದುರಸ್ತಿ

ಬೀರೂರು: ಕಡೂರು ತಾಲ್ಲೂಕಿನ ಜೀವನಾಡಿ ಕೆರೆಯಾಗಿರುವ ಮದಗದಕೆರೆ ಇರುವುದು ಬೀರೂರು ಹೋಬಳಿ ಎಮ್ಮೆದೊಡ್ಡಿಯಲ್ಲಿ. ಎಂತಹ ಬರಗಾಲದಲ್ಲಿಯೂ ತನ್ನ ಒಡಲನ್ನು ಬರಿದು ಮಾಡಿಕೊಳ್ಳದೆ ರೈತರ ಹಿತ ಕಾಯ್ದಿದೆ. ಸಣ್ಣ ನೀರಾವರಿ ಇಲಾಖೆ ಮೂಲಗಳ ಪ್ರಕಾರ ಸದ್ಯ ಕೆರೆಯಲ್ಲಿ ಶೇ 30 ಹೂಳು ತುಂಬಿದೆ.130 ಹೆಕ್ಟೇರ್‌ಗೂ ಹೆಚ್ಚು ವ್ಯಾಪ್ತಿ ಹೊಂದಿರುವ ಕೆರೆ ಸದಾ ತುಂಬುವುದರಿಂದ ಒತ್ತುವರಿ ಭೀತಿಯಿಂದ ಪಾರಾಗಿದೆ.

ಮೂರ್ನಾಲ್ಕು ವರ್ಷಗಳಿಂದ ಕೆರೆ ತೂಬಿನಲ್ಲಿ ಸೋರಿಕೆ ಕಾಣುತ್ತಿದ್ದು ದುರಸ್ತಿ ಪ್ರತಿವರ್ಷವೂ ನಡೆಯುತ್ತಿದೆ, ಹಾಗಾಗಿ ಸರಣಿ ಕೆರೆಗಳಿಗೆ ನೀರು ಹರಿಸಿ ಕೆರೆ ಖಾಲಿ ಮಾಡಲಾಗುತ್ತಿದೆ.

₹ 1281 ಕೋಟಿ ವೆಚ್ಚದಲ್ಲಿ ಭದ್ರಾ ಉಪಕಣಿವೆ ಯೋಜನೆ ಅಡಿ ಮದಗದಕೆರೆಗೆ ನೀರು ಹರಿಸುವ ಯೋಜನೆಗೆ ಮಂಜೂರಾತಿ ದೊರೆತಿದೆ. ಬೀರೂರು ಹೊರವಲಯದ ಗಾಳಿಹಳ್ಳಿ ಕೆರೆ ಒಡಲನ್ನು ಕೆಲ ವರ್ಷಗಳ ಹಿಂದೆ ಬಗೆದು ಅದು ಎಂದೂ ತುಂಬದ ಸ್ಥಿತಿಗೆ ದೂಡಲಾಗಿತ್ತು, ಕೆರೆ ಮತ್ತೆ ನೀರು ಹಿಡಿದಿಟ್ಟುಕೊಂಡಿದೆ. ಹನುಮಾಪುರ ಕೆರೆ, ಬುಕ್ಕಸಾಗರ ಕೆರೆ, ಹುಲಿಗುಂಡರಾಯನಕೆರೆ, ಚೆನ್ನಾಪುರ, ಚಿಕ್ಕಂಗಳ ಮೊದಲಾದ ಕೆರೆಗಳು ಮದಗದಕೆರೆ ನೆರವಿನಿಂದ ಮಳೆಗಾಲದಲ್ಲಿ ತುಂಬುತ್ತಿವೆ, ದಶಕಗಳಿಂದ ಸಾಕಷ್ಟು ಕೆರೆಗಳಲ್ಲಿ ಹೂಳು ತುಂಬಿದ್ದರೂ ಅನುದಾನ ಕೊರತೆ ಹೂಳೆತ್ತುವ ಕೆಲಸಕ್ಕೆ ಅಡ್ಡಿಯಾಗಿದೆ. ಸಾಕಷ್ಟು ಗ್ರಾಮಗಳು ಕೆರೆಗಳ ಏರಿಯ ಮೂಲಕ ಹಾದುಹೋಗುವ ಸಂಪರ್ಕ ರಸ್ತೆ ಹೊಂದಿವೆ. ರಸ್ತೆಗಳು ಸುಗಮವಾಗಿಲ್ಲ, ಸಂಚಾರ ದಟ್ಟಣೆ ಕಡಿಮೆ ಇದೆ.

ಸಾಮರ್ಥ್ಯ ಕ್ಷೀಣ

ಅಜ್ಜಂಪುರ: ಜಿಲ್ಲೆಯ ಮೂರನೇ ದೊಡ್ಡ ಹಾಗೂ ತಾಲ್ಲೂಕಿನ ಅತಿ ದೊಡ್ಡ ಕೆರೆಯಾದ ಬುಕ್ಕಾಂಬುಧಿ ಕೆರೆ ಒತ್ತುವರಿಯಾಗಿದೆ. ಕೆರೆಯಲ್ಲಿ ಹೂಳು ತುಂಬಿಕೊಂಡಿದ್ದು ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿದೆ.

‘ಕೆರೆ ಮೋಜಣಿಗೆ ಸಣ್ಣ ನೀರಾವರಿ ಇಲಾಖೆಗೆ ಮನವಿ ಸಲ್ಲಿಸಿ ಹಲವು ವರ್ಷಗಳೇ ಗತಿಸಿವೆ. ಈವರೆಗೆ ಕ್ರಮ ವಹಿಸಿಲ್ಲ. ಕೋರ್ಟ್ ಮೆಟ್ಟಿಲು ಏರಲು ನಿರ್ಧರಿಸಿದ್ದೇವೆ’ ಎಂದು ಕೆರೆ ನೀರು ಬಳಕೆದಾರರ ಸಂಘದ ಅಧ್ಯಕ್ಷ ಕೊಟ್ರೇಶ್ ಗೌಡ್ರು ತಿಳಿಸಿದರು.

‘ಅಜ್ಜಂಪುರದ ಪರ್ವತರಾಯನ ಕೆರೆ ತಟ್ಟೆಯಂತಾಗಿದೆ. ಹೂಳು ತುಂಬಿದ್ದು, ನೀರು ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿದೆ. ಸ್ವಲ್ಪ ಮಳೆ ಬಂದರೂ ತುಂಬುವ ಕೆರೆ, ಮಳೆ ಮರೆಯಾದೊಡೆ ಬರಿದಾಗುತ್ತದೆ. ಹೂಳು ತೆಗೆಯುವಂತೆ ಮನವಿ ಮಾಡಿದ್ದೇವೆ. ಆದರೆ ಅಧಿಕಾರಿಗಳು ಗಮನಹರಿಸಿಲ್ಲ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಮಹೇಶ್ವರಯ್ಯ ದೂರುತ್ತಾರೆ. ಅಜ್ಜಂಪುರ ತಾಲ್ಲೂಕಿನಲ್ಲಿ 6 ಕೆರೆಗಳಿವೆ. ಪರ್ವತರಾಯನಕೆರೆ, ಬುಕ್ಕಾಂಬುಧಿ ಕೆರೆ, ಶಿವನಿ, ಜಾವೂರು, ಮುದಿಗೆರೆಯ ಕೆರೆಗಳಲ್ಲಿ ಒತ್ತುವರಿ ಸಮಸ್ಯೆ ಇದೆ.

ದುರಸ್ತಿ ಭಾಗ್ಯವಿಲ್ಲ

ನರಸಿಂಹರಾಜಪುರ: ತಾಲ್ಲೂಕಿನಲ್ಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 451 ಕರೆಗಳು ಇವೆ. ನಾಗಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗೇರಿ ಕೆರೆ ಅತಿ ದೊಡ್ಡಕೆರೆ. ಇದರಲ್ಲಿ ತುಂಬಿರುವ ಹೂಳನ್ನು ತೆಗೆಯುವ ಪ್ರಯತ್ನ ನಡೆದಿಲ್ಲ. ಈ ಕೆರೆಯ ಅಂಗಳದಲ್ಲಿಯೇ ರಸ್ತೆ ನಿರ್ಮಿಸಲಾಗಿದೆ.

ಕೆಲವು ಕೆರೆಯ ಸುತ್ತ ಪ್ರದೇಶದ ಖರಾಬ್ ಜಮೀನನ್ನು ಸೇರಿಸಿ ಖಾತೆ ಮಾಡಿಕೊಟ್ಟಿರುವುದರಿಂದ ಕೆರೆಗೆ ಹೋಗಲು ದಾರಿಯೇ ಇಲ್ಲವಾಗಿದೆ. ಕೆರೆಯ ಸುತ್ತಲೂ ಬಫರ್ ವಲಯ ಗುರುತಿಸುವ ಕಾರ್ಯ ಇಲಾಖೆ ಈವರೆಗೂ ಮಾಡಿಲ್ಲ. ಬಹುತೇಕ ಜಮೀನುಗಳಲ್ಲಿ ನೀರಿಗಾಗಿ ಕೊಳವೆ ಬಾವಿ ಅವಲಂಬಿಸಿರುವುದರಿಂದ ಕೆರೆಯ ಕೊಡಿಯನ್ನು ಮುಚ್ಚಲಾಗಿದೆ. ಇದರಿಂದ ನೀರು ಹರಿಯಲು ಅವಕಾಶ ಇಲ್ಲದಂತಾಗಿದೆ.ಕೆಲವು ಕೆರೆಗಳ ತೂಬುಗಳು ಸಹ ದುರಸ್ತಿಯಾಗಿಲ್ಲ. ಕೆರೆ ಪ್ರದೇಶದಲ್ಲಿ ಕೆರೆ ಹೆಸರು, ವಿಸ್ತೀರ್ಣ, ಅಚ್ಚುಕಟ್ಟು ವ್ಯಾಪ್ತಿಯ ವಿವರಗಳ ಫಲಕಗಳನ್ನು ಅಳವಡಿಸಿಲ್ಲ.

ಪಟ್ಟಣದ ವ್ಯಾಪ್ತಿಯಲ್ಲೂ ಕೆಳದಿ ಅರಸರ ಕಾಲದ ಇರಮ್ಮಾಜಿ ಕೆರೆ13.30 ಎಕರೆ ವಿಸ್ತೀರ್ಣ ಇದೆ. ಇದು ಬತ್ತದ ಕೆರೆ ಎಂದೂ ಹೆಸರಾಗಿದೆ. ಈ ಕೆರೆಯಲ್ಲಿ ಹೂಳು ತುಂಬಿದೆ.

‘ಒತ್ತುವರಿ ತೆರವುಗೊಳಿಸಬೇಕಾದ ಇಲಾಖೆ ಸಹಕರಿಸುವುದಿಲ್ಲ. ಹಾಗಾಗಿ ಕೆರೆಗಳ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ‘ಅನುದಾನ ಬಿಡುಗಡೆ ಮಾಡಿದ್ದರೂ ಆಡಳಿತ ಪಕ್ಷದವರು, ಬಲಾಢ್ಯರು ಕೃಪೆ ತೋರಿದ ಕೆರೆಗಳು ಮಾತ್ರ ಅಭಿವೃದ್ಧಿ ಹೊಂದಿವೆ. ಉದ್ಯೋಗ ಖಾತರಿ ಯೋಜನೆಯಡಿ ಕೆರೆ ಅಭಿವೃದ್ಧಿ ಪಡಿಸುವ ಕಾಮಗಾರಿ ಕೈಗೊಂಡರೂ ಪರಿಕರಗಳ ಅನುದಾನ ಬಿಡುಗಡೆಯಾಗದಿರುವುದಿಂದ ಕೆರೆ ದುರಸ್ತಿಗೆ ರೈತರು ಮುಂದೆ ಬರುವುದಿಲ್ಲ’ ಎಂದು ರೈತ ಸುನಿಲ್ ಹೇಳುತ್ತಾರೆ.

50 ಕೆರೆ ಸರ್ವೆ

ಕೊಪ್ಪ: ತಾಲ್ಲೂಕಿನಲ್ಲಿ 400 ಕೆರೆಗಳಿದ್ದು, 50 ಕೆರೆಗಳ ಸರ್ವೆ ಕಾರ್ಯ ನಡೆದಿದೆ. ಕೆಲವು ಕೆರೆಗಳು ಒತ್ತುವರಿಯಾಗಿವೆ. ನರಸೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರು ಒತ್ತುವರಿ ಮಾಡಿದ್ದ ಕೆರೆ ಜಾಗವನ್ನು ಈಚೆಗೆ ತೆರವುಗೊಳಿಸಲಾಗಿದೆ. ಬಹುತೇಕ ಕೆರೆಗಳ ಏರಿ ಸರಿಯಾಗಿಲ್ಲ, ತಡೆಗೋಡೆಯೂ ಇಲ್ಲ. ಅಪಾಯಕ್ಕೂ ಎಡೆಮಾಡಿಕೊಡಬಹುದಾದ ಸ್ಥಿತಿಯಲ್ಲಿ ಇವೆ. ತಾಲ್ಲೂಕಿನ ಗಡಿಕಲ್ ಬಳಿ ರಾಷ್ಟ್ರೀಯ ಹೆದ್ದಾರಿ 169ರ ಪಕ್ಕದಲ್ಲಿ ಇರುವ ಕೆರೆಗೆ ತಡೆಗೋಡೆ ಇಲ್ಲ, ಸವಾರರು ಬಿದ್ದ ನಿದರ್ಶನಗಳಿವೆ.

ಪಕ್ಷಿಧಾಮಕ್ಕೆ ಕುತ್ತು

ಶೃಂಗೇರಿ: ತಾಲೂಕಿನಲ್ಲಿ ಒಟ್ಟು 154 ಕೆರೆಗಳಿವೆ. ಹಲವು ಕೆರೆಗಳು ಒತ್ತುವರಿಯಾಗಿವೆ. ಶೃಂಗೇರಿಯಿಂದ ಕೊಪ್ಪ ಮಾರ್ಗದಲ್ಲಿ ದಟ್ಟ ಹಸಿರಿನ ನಡುವೆ ಉಳುವೆ ಪಕ್ಷಿಧಾಮ ಇತ್ತು. ಪ್ರವಾಸಿಗರು ತಾಣ ವೀಕ್ಷಣೆಗೆ ಭೇಟಿ ನೀಡುತ್ತಿದ್ದರು. ಪಕ್ಷಿಗಳು ಸಂತಾನೋತ್ಪತ್ತಿಗೆ
ವಲಸೆ ಬರುತ್ತಿದ್ದವು. ಕೆರೆ ಮತ್ತು ಪಕ್ಷಿಧಾಮ ಅವನತಿ ಹಾದಿಯಲ್ಲಿವೆ.

ಅಪಾಯಕ್ಕೆ ಆಹ್ವಾನ ಅಂಗಡಿ ಕೆರೆ

ಮೂಡಿಗೆರೆ: ಹೊಯ್ಸಳರ ಮೂಲ ಸ್ಥಾನವಾದ ತಾಲ್ಲೂಕಿನ ಅಂಗಡಿ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಕೆರೆಯು ಅಪಾಯಕ್ಕೆ ಆಹ್ವಾನ ಸ್ಥಿತಿಯಲ್ಲಿದೆ. ಎರಡು ವರ್ಷಗಳ ಹಿಂದೆ ಸುರಿದ ಮಳೆಗೆ ಕೆರೆಯ ಏರಿ ಕುಸಿದು ಸಂಚಾರ ಸ್ಥಗಿತವಾಗಿತ್ತು. ತುರ್ತಾಗಿ ದುರಸ್ತಿ ಕೈಗೊಂಡು ಮೂಡಿಗೆರೆ– ದೇವರುಂದ– ಸಕಲೇಶಪುರ ಸಂಪರ್ಕ ಕಲ್ಪಿಸಲಾಗಿದೆಯಾದರೂ ಕೆರೆಗೆ ತಡೆಗೋಡೆ ಇಲ್ಲ. ಕೆರೆಯ ಏರಿಯ ಮೇಲೆಯೇ ಮುಖ್ಯ ರಸ್ತೆ ಇದೆ, ತಿರುವಿನಿಂದ ಕೂಡಿದೆ. ಬಿದ್ದೀರಾ ಜೋಕೆ ಎಚ್ಚರಿಯಲ್ಲೇ ಅಪಾಯದ ಮಗ್ಗುಲಲ್ಲೇ ಸಂಚರಿಸಬೇಕಾದ ಸ್ಥಿತಿ ಇದೆ.

ಸರ್ಕಾರಿ ಕೆರೆಗಳೇ ಮಾಯ!

ತಾಲ್ಲೂಕಿನ 50ಕ್ಕೂ ಹೆಚ್ಚು ಕೆರೆಗಳು ದಾಖಲೆಗಳಲ್ಲಿ ಮಾತ್ರ ಇವೆ. ವಾಸ್ತವವಾಗಿ ಕೆರೆಯ ಒಡಲೆಲ್ಲವೂ ಒತ್ತುವರಿಯಾಗಿ ಕಾಫಿ ತೋಟಗಳಾಗಿ ನಿರ್ಮಾಣಗೊಂಡಿವೆ. ಪ್ರತಿ ಹೋಬಳಿಯಲ್ಲೂ ಕೆರೆಗಳು ಕಣ್ಮರೆಯಾಗಿದ್ದು, ಒತ್ತುವರಿ ತೆರವು ಎಂಬುದು ದಾಖಲೆಗಳಲ್ಲಿ ಮಾತ್ರ ಕಾಣ ಸಿಗುತ್ತಿದೆ. ಕೆರೆ ಒತ್ತುವರಿ ಕುರಿತು ರೈತ ಹಲವು ರೈತಪರ ಸಂಘಟನೆಗಳು ಹೋರಾಟ ನಡೆಸಿದರೂ ಪರಿಹಾರ ಸಿಕ್ಕಿಲ್ಲ. ಕೆರೆ ಹೂಳೆತ್ತದೇ ಬಿಲ್ ಮಂಜೂರಿ ಮಾಡಿಸಿಕೊಂಡಿರುವ ಪ್ರಕರಣಗಳು ಇವೆ ಎಂದು ಸಾರ್ವಜನಿಕರು ಹೇಳುತ್ತಾರೆ.

(ಪೂರಕ ಮಾಹಿತಿ: ಬಾಲು ಮಚ್ಚೇರಿ, ಎನ್‌.ಸೋಮಶೇಖರ್‌, ಜೆ.ಒ.ಉಮೇಶ್‌ಕುಮಾರ್‌, ಎಚ್‌.ಎಂ.ರಾಜಶೇಖರ್‌, ಕೆ.ವಿ.ನಾಗರಾಜ್‌, ಕೆ.ಎನ್‌.ರಾಘವೇಂದ್ರ, ರವಿಕುಮಾರ್‌ ಶೆಟ್ಟಿಹಡ್ಲು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT