ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಮೃತ್‌’ ಯೋಜನೆಯಡಿ ಕುಡಿಯುವ ನೀರು ಪೂರೈಕೆ: ಸಚಿವ ಬಸವರಾಜ್‌

Last Updated 4 ಸೆಪ್ಟೆಂಬರ್ 2020, 10:33 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರದಲ್ಲಿ ‘ಅಮೃತ್‌’ (ಅಟಲ್‌ ನಗರ ನವೀಕರಣ ಹಾಗೂ ಪುನರುಜ್ಜೀವನ) ಯೋಜನೆಯನ್ನು ಡಿಸೆಂಬರ್‌ನಲ್ಲಿ ಲೋಕಾರ್ಪಣೆಗೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ್‌ಇಲ್ಲಿ ಶುಕ್ರವಾರ ತಿಳಿಸಿದರು.

ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ವಾಜಪೇಯಿ ಬಡಾವಣೆಯನ್ನು ಅದೇ ದಿನ ಲೋಕಾರ್ಪಣೆಗೊಳಿಸಲು ಉದ್ದೇಶಿಸಲಾಗಿದೆ. ಡಿಸೆಂಬರ್‌ನೊಳಗೆ ಒಳಚರಂಡಿ (ಯಜಿಡಿ) 100 ಕಿ.ಮೀ ಕಾಮಗಾರಿ ಮುಗಿಸಬೇಕು ಎಂದೂ ಸೂಚನೆ ನೀಡಿದ್ದೇನೆ. ಈ ಎಲ್ಲ ಕಾರ್ಯಕ್ರಮಗಳ ಉದ್ಘಾಟನೆ ಮುಖ್ಯಮಂತ್ರಿವರನ್ನು ಆಹ್ವಾನಿಸಲಾಗುವುದು ಎಂದೂ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿ ಚಿಕ್ಕಮಗಳೂರು ಮತ್ತು ಬೀರೂರು ಹೊರತಾಗಿ ಇತರೆಡೆಗಳಲ್ಲಿ ಒಳಚರಂಡಿ ಸೌಲಭ್ಯ ಇಲ್ಲ।. ಈ ನಿಟ್ಟಿನಲ್ಲಿ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ ಮೇಲ್ಡರ್ಜೆಗೇರಿಸುವ ನಿಟ್ಟಿನಲ್ಲಿ ಪ್ರಸ್ತಾವ ಸಲ್ಲಿಕೆಯಾಗಿದ್ದರೆ ಪರಿಶೀಲಿಸಲಾಗುವುದು. ಜನಸಂಖ್ಯೆ, ವಿಸ್ತೀರ್ಣ ಇತ್ಯಾದಿ ಮಾನದಂಡಗಳನ್ನು ಆಧರಿಸಿ ಕ್ರಮ ವಹಿಸಲಾಗುವುದು ಎಂದು ಉತ್ತರಿಸಿದರು.

ಹೊರರಾಜ್ಯಗಳ ಗುತ್ತಿಗೆದಾರರಿಗೆ ರಾಜ್ಯದಲ್ಲಿ ಕಾಮಗಾರಿ ಗುತ್ತಿಗೆಗೆ ಅವಕಾಶ ನೀಡದಿರಲು ಚಿಂತನೆ ನಡೆದಿದೆ. ಮುಖ್ಯಮಂತ್ರಿ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಪುರಸಭೆ, ಪಟ್ಟಣ ಪಂಚಾಯಿತಿ, ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ನಿಟ್ಟಿನಲ್ಲಿ ಸಂಪುಟ ಉಪಸಮಿತಿ ಶೀಘ್ರದಲ್ಲಿ ತೀರ್ಮಾನ ಕೈಗೊಳ್ಳಲಿದೆ ಎಂದರು.

ಸರ್ಕಾರ ನಿರ್ಮಿಸುವ ಬಡಾವಣೆಗಳಲ್ಲಿ ಪತ್ರಕರ್ತರಿಗೆ ಶೇ 5ರಷ್ಟು ನಿವೇಶನಗಳನ್ನು ನಿಗದಿಪಡಿಸಲು ತೀರ್ಮಾನ ಕೈಗೊಂಡಿದ್ದೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT