ಕೊಪ್ಪ: ತಾಲ್ಲೂಕಿನ ವಿವಿಧೆಡೆ ತೀವ್ರ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಶಾಸಕ ಟಿ.ಡಿ.ರಾಜೇಗೌಡ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು.
ಹಾನಿಗೀಡಾಗಿರುವ ಭುವನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಉತ್ತಮೇಶ್ವರ (ಬಗ್ಗುಂಜಿ) ಸೇತುವೆಯನ್ನು ಪರಿಶೀಲಿಸಿದರು. ಸೇತುವೆಯನ್ನು ಎತ್ತರಿಸಬೇಕು, ರಸ್ತೆ ದುರಸ್ತಿಪಡಿಸಬೇಕು ಎಂದು ಸ್ಥಳೀಯರ ಮನವಿಗೆ ಪ್ರತಿಕ್ರಿಯಿಸಿದ ಅವರು ಸೇತುವೆ ನಿರ್ಮಿಸಿಕೊಡುವುದಾಗಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್, ‘ರಸ್ತೆ ಸರಿಪಡಿಸಿಕೊಡುವಂತೆ ಜನರು ಕೇಳಿದ್ದಾರೆ. ಸ್ಪಂದಿಸುವಂತೆ ಸಿಇಒ, ಜಿಲ್ಲಾಧಿಕಾರಿ, ಎಸ್ಪಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.
ಅತಿವೃಷ್ಟಿಯಿಂದ ಹಾನಿಯಾಗಿರುವ ಪ್ರದೇಶಗಳಾದ ಯತ್ನಟ್ಟಿ, ಹೆಗ್ಗಾರುಕೊಡಿಗೆ, ಕೊಗ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ಪಂಚಾಯಿತಿ ಸಿ.ಇ.ಒ ಡಾ.ಬಿ.ಗೋಪಾಲಕೃಷ್ಣ, ಉಪ ವಿಭಾಗಾಧಿಕಾರಿ ರಾಜೇಶ್, ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿ ಗುಂಜನ್ ಆರ್ಯ, ಸ್ಥಳೀಯ ಮುಖಂಡರಾದ ಎಂ.ನಟರಾಜ್, ಲಕ್ಷ್ಮಿನಾರಾಯಣ, ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.
‘ಕೆಲಸ ಆದಮೇಲೆ ಮತ್ತೆ ಬರೋಣ’: ಅತಿವೃಷ್ಟಿ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎಂ.ಸತೀಶ್ ಅವರು ಸಚಿವರೊಂದಿಗೆ ಮಾತನಾಡಿ, ‘ಈ ಹಿಂದಿನ ಸರ್ಕಾರದವರೂ ಭೇಟಿ ನೀಡಿದ್ದರು. ಆದರೆ, ಜನರಿಗೆ ಸ್ಪಂದಿಸಿಲ್ಲ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೆ.ಜೆ.ಜಾರ್ಜ್, ‘ನಾವು ಕೆಲಸ ಆದ ಮೇಲೆ ಮತ್ತೆ ಬರೋಣ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.