ಸೋಮವಾರ, ಫೆಬ್ರವರಿ 17, 2020
24 °C
l ಶೃಂಗೇರಿ ಪಟ್ಟಣದಲ್ಲಿಲ್ಲ ಸುಸಜ್ಜಿತ ಒಳಚರಂಡಿ ವ್ಯವಸ್ಥೆ l ನದಿಯನ್ನು ಸೇರುತ್ತಿದೆ ಕೊಳಚೆ ನೀರು

ಶೃಂಗೇರಿ: ಮಲಿನವಾಗುತ್ತಿದೆ ‘ತುಂಗೆ’ಯ ಒಡಲು

ರಾಘವೇಂದ್ರ ಕೆ.ಎನ್. Updated:

ಅಕ್ಷರ ಗಾತ್ರ : | |

Prajavani

ಶೃಂಗೇರಿ: ಪಶ್ಚಿಮಘಟ್ಟದ ವರಾಹ ಪರ್ವತದಲ್ಲಿರುವ ಗಂಗಾಮೂಲದಲ್ಲಿ ಹುಟ್ಟಿ ಆಂಧ್ರಪ್ರದೇಶದವರೆಗೂ ಹರಿಯುವ ‘ತುಂಗೆ’ಯ ಒಡಲಿಗೆ ಶೃಂಗೇರಿ ಪಟ್ಟಣದ ಕೊಳಚೆ ನೀರು ಅಡೆತಡೆ ಇಲ್ಲದೆ ಸೇರುತ್ತಿದೆ. ಶೃಂಗೇರಿ ಶಾರದಾಂಬೆಯ ದರ್ಶನಕ್ಕೆ ಬರುವ ಭಕ್ತರು, ಮಲೆನಾಡಿನ ಪ್ರಾಕೃತಿಕ ಸೊಬಗನ್ನು ಸವಿಯಲು ಧಾವಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಿದಂತೆಲ್ಲ ಪಟ್ಟಣವೂ ವಿಸ್ತಾರವಾಗುತ್ತಿದೆ. ಅಷ್ಟೇ ಪ್ರಮಾಣದಲ್ಲಿ ಚರಂಡಿಗಳು ಹೊತ್ತು ತಂದು ತುಂಗೆಯ ಒಡಲಿಗೆ ಸುರಿಯವ ಕೊಳಚೆ ನೀರಿನ ಪ್ರಮಾಣವೂ ಹೆಚ್ಚುತ್ತಿದೆ. ತುಂಗಾ ನದಿಯ ನೀರು ನಿಧಾನಕ್ಕೆ ವಿಷವಾಗಿ ಬದಲಾಗುತ್ತಿದೆ.

ಪಟ್ಟಣದ ರಾಜಾನಗರ, ಗಿಣಿಗಿಣಿ, ಹನುಮಂತನಗರ, ಕುವೆಂಪು ಬಸ್ ನಿಲ್ದಾಣ, ಕೆರೆದಂಡೆ ಮುಂತಾದ ಪ್ರದೇಶಗಳ ಕೊಳಚೆ ನೀರು ಚರಂಡಿಯ ಮೂಲಕ ಎಕ್ಕನಹಳ್ಳದಿಂದ ತುಂಗಾನದಿ ಸೇರುತ್ತಿದೆ. ಶಾರದಾ ಮಠದ ಅನ್ನಛತ್ರದ ತ್ಯಾಜ್ಯ ನೀರು ಮತ್ತು ಊಟ ಮಾಡಿದವರು ಕೈತೊಳೆದ ನೀರು ಚರಂಡಿಯ ಮೂಲಕ ನೇರವಾಗಿ ತುಂಗಾ ನದಿಯನ್ನು ತಲುಪುತ್ತಿದೆ.

ಕಟ್ಟೆಬಾಗಿಲು, ಮಲ್ಲಿಕಾರ್ಜುನ ಬೀದಿ, ಭಾರತೀ ಬೀದಿಯ ಎರಡು ಚರಂಡಿಗಳ ಕೊಳಚೆ ನೀರನ್ನೂ ನೇರವಾಗಿ ತುಂಗಾ ನದಿಗೆ ಹರಿಸಲಾಗುತ್ತಿದೆ. ಮದಗಜಹಳ್ಳ, ಗಿಣಿಗಿಣಿಹಳ್ಳಗಳು ಕೊಳಚೆ ನೀರನ್ನು ಹೊತ್ತು ತಂದು ಶಾರದಾ ನಗರದಿಂದ ಕುರುಬಕೇರಿ ರಸ್ತೆಯ ಚರಂಡಿಯನ್ನು ಹಾದು ತುಂಗಾನದಿ ಸೇರುತ್ತಿವೆ. ಎರಡೂ ಹಳ್ಳಗಳ ನೀರು ಕಪ್ಪು ಬಣ್ಣಕ್ಕೆ ತಿರುಗಿದ್ದು, ತುಂಗೆಯ ಒಡಲಿಗೆ ‘ವಿಷ’ ಸೇರುತ್ತಿರುವುದಕ್ಕೆ ಸಾಕ್ಷಿ ಒದಗಿಸುವಂತಿವೆ.

ಪಟ್ಟಣಕ್ಕೆ ಹೊಂದಿಕೊಂಡಿರುವ ಗ್ರಾಮಾಂತರ ಪ್ರದೇಶಗಳಿಂದಲೂ ಕೊಳಚೆ ನೇರವಾಗಿ ನದಿಗೆ ಸೇರುತ್ತಿದೆ. ಮೆಣಸೆ ಗ್ರಾಮ, ಜೇಸಿಸ್‌ ಶಾಲೆ ಹಾಗೂ ಬಿಜಿಎಸ್‌ ಶಾಲೆಯ ಪ್ರದೇಶಗಳಿಂದ ನಿರಂತರವಾಗಿ ಕೊಳಚೆ ನೀರು ತುಂಗೆಗೆ ಸೇರುತ್ತಿದೆ. ಪಟ್ಟಣದ ಹೋಟೆಲ್‌ಗಳು, ಲಾಡ್ಜ್‌ಗಳಲ್ಲಿ ಉತ್ಪತ್ತಿಯಾಗುವ ಸಾವಿರಾರು ಲೀಟರ್‌ ಕೊಳಚೆ ನೀರು ಸಂಸ್ಕರಣೆಯೇ ಇಲ್ಲದೆ ನದಿಯನ್ನು ತಲುಪುತ್ತಿದೆ.

ಒಳಚರಂಡಿಯೇ ಇಲ್ಲ: 5,000ಕ್ಕೂ ಹೆಚ್ಚು ಜನಸಂಖ್ಯೆ ಇರುವ ಶೃಂಗೇರಿ ಪಟ್ಟಣಕ್ಕೆ ನಿತ್ಯವೂ ಸಾವಿರಾರು ಮಂದಿ ಭಕ್ತರು, ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿನ ಹೋಟೆಲ್‌ಗಳು, ಲಾಡ್ಜ್‌ಗಳು ಸದಾ ಜನಜಂಗುಳಿಯಿಂದ ತುಂಬಿರುತ್ತವೆ. ಸಹಜವಾಗಿಯೇ ಇಲ್ಲಿ ದ್ರವರೂಪದ ತ್ಯಾಜ್ಯ ಉತ್ಪತ್ತಿ ಹೆಚ್ಚುತ್ತಿದೆ. ಇಂತಹ ಪಟ್ಟಣಕ್ಕೆ ಸುಸಜ್ಜಿತವಾದ ಒಳಚರಂಡಿ ವ್ಯವಸ್ಥೆಯೇ ಆಗಿಲ್ಲ. ಇದರಿಂದಾಗಿ ಪಟ್ಟಣದ ಜೊತೆಗೆ ಎರಡು ರಾಜ್ಯಗಳ ಲಕ್ಷಾಂತರ ಮಂದಿಯ ಜೀವನಾಡಿಯಾಗಿರುವ ತುಂಗೆಯ ಒಡಲೂ ಮಲಿನವಾಗುತ್ತಿದೆ.

ಪಟ್ಟಣವಷ್ಟೇ ಅಲ್ಲ, ಮಠ, ದೇವಸ್ಥಾನದಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರನ್ನು ಸಂಸ್ಕರಿಸುವ ಘಟಕಗಳೇ (ಎಸ್‌ಟಿಪಿ) ಇಲ್ಲ. ಪಟ್ಟಣದಲ್ಲಿ ಸಮಗ್ರವಾದ ಒಳಚರಂಡಿ ವ್ಯವಸ್ಥೆಯನ್ನು ರೂಪಿಸಿ, ಕೊಳಚೆ ನೀರನ್ನು ಎಸ್‌ಟಿಪಿ ಮೂಲಕ ಸಂಸ್ಕರಿಸಿ ನದಿಗೆ ಬಿಡುವ ಯೋಜನೆಯ ಪ್ರಸ್ತಾವ ಹಲವು ವರ್ಷಗಳಿಂದ ಇದೆ. ಆದರೆ, ಅದು ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಪರಿಣಾಮವಾಗಿ ತುಂಗೆ ನಿತ್ಯವೂ ಮಲಿನವಾಗುತ್ತಲೇ ಇದ್ದಾಳೆ.

ವಾಹನದ ಕೊಳೆಯೂ ನದಿಗೆ

ಭಕ್ತರು, ಪ್ರವಾಸಿಗರನ್ನು ಹೊತ್ತು ನಿತ್ಯವೂ ನೂರಾರು ವಾಹನಗಳು ಶೃಂಗೇರಿಗೆ ಬರುತ್ತವೆ. ಈ ಎಲ್ಲ ವಾಹನಗಳಿಗೂ ತುಂಗಾ ನದಿಯ ದಂಡೆಯ ಮೇಲಿರುವ ಗಾಂಧಿ ಮೈದಾನದಲ್ಲಿ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. ನದಿಯ ನೀರನ್ನೇ ಬಳಸಿ ವಾಹನಗಳನ್ನು ತೊಳೆಯಲಾಗುತ್ತಿದೆ. ವಾಹನದ ಕೊಳೆ, ಡೀಸೆಲ್‌, ಪೆಟ್ರೋಲ್‌, ಆಯಿಲ್‌ ಎಲ್ಲವನ್ನೂ ಒಳಗೊಂಡ ಕಲುಷಿತ ನೀರು ಮತ್ತೆ ನದಿಗೆ ಹರಿಯುತ್ತಿದೆ.

ಮೈದಾನದಲ್ಲಿರುವ ಸುಲಭ ಶೌಚಾಲಯದ ಕೊಳಚೆ ನೀರು ಕೂಡ ನದಿಗೆ ಹರಿಯುತ್ತಿದೆ. ಪಕ್ಕದಲ್ಲಿರುವ ಸ್ನಾನಘಟ್ಟದಲ್ಲೂ ನೀರು ಮಲಿನವಾಗುತ್ತಿದೆ. ಸ್ನಾನಕ್ಕೆ ಬಳಸಿದ ಸೋಪ್‌ಗಳನ್ನು ಬಹುತೇಕರು ನದಿಯಲ್ಲೇ ಬಿಡುತ್ತಾರೆ. ಪ್ಲಾಸ್ಟಿಕ್‌ ತೊಟ್ಟೆ, ತ್ಯಾಜ್ಯವನ್ನೂ ಎಸೆದು ಹೋಗುತ್ತಾರೆ. ಇದರಿಂದಾಗಿ ನದಿ ಮತ್ತಷ್ಟು ಕಲುಷಿತವಾಗುತ್ತಿದೆ ಎಂದು ದೂರುತ್ತಾರೆ ಇಲ್ಲಿನ ಜನರು.

‘ಕುರುಬಗೇರಿಯಲ್ಲಿರುವ ಕೋಳಿ, ಕುರಿ ಮಾಂಸದ ಅಂಗಡಿಗಳ ತ್ಯಾಜ್ಯವೂ ಹಳ್ಳದ ಮೂಲಕ ನದಿ ತಲುಪುತ್ತಿದೆ. ಮದ್ಯ ಸೇವಿಸಿದವರು ಬಾಟಲಿಗಳನ್ನು ನದಿಗೆ ಎಸೆಯುತ್ತಿದ್ದಾರೆ. ಇವೆಲ್ಲವೂ ನದಿಯ ಒಡಲನ್ನು ಮತ್ತಷ್ಟು ಕಲುಷಿತಗೊಳಿಸುತ್ತಿದ್ದು, ನೀರು ಕುಡಿಯಲು ಹಿಂದೇಟು ಹಾಕಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ’ ಎನ್ನುತ್ತಾರೆ ಪಟ್ಟಣದ ನಿವಾಸಿ ಕೃಷ್ಣಪ್ಪ.

ಯುಜಿಡಿ ಸೌಲಭ್ಯಕ್ಕೆ ಸರ್ಕಾರಕ್ಕೆ ಪ್ರಸ್ತಾವ

‘ನದಿಯ ಸ್ವಚ್ಛತೆಯ ಬಗ್ಗೆ ಪಟ್ಟಣ ಪಂಚಾಯಿತಿ ವತಿಯಿಂದ ಹೆಚ್ಚಿನ ಗಮನ ನೀಡುತ್ತೇವೆ. ಶೃಂಗೇರಿ ವರ್ತಕರ ಸಭೆ ಕರೆದು ಯಾರು ನದಿ ನೀರು ಕಲುಷಿತಗೊಳಿಸುತ್ತಾರೆ ಅವರಿಗೆ ನೋಟಿಸ್ ನೀಡುತ್ತೇವೆ. ನಾಗರಿಕರು ಮತ್ತು ಪ್ರವಾಸಿಗರು ನಮ್ಮ ಜೊತೆ ಕೈಜೋಡಿಸಬೇಕು. ತುಂಗಾ ನದಿಯ ಸ್ವಚ್ಛತೆಯ ಕುರಿತು ಶಾಶ್ವತವಾದ ಪರಿಹಾರ ಯೋಜನೆ ಆಗಬೇಕಿದ್ದು, ಈ ಕುರಿತು ಶಾಸಕರ ಹಾಗೂ ಮೇಲಧಿಕಾರಿಗಳೊಂದಿಗೆ ಚರ್ಚಿಸಿ, ನದಿಯ ಸ್ವಚ್ಛತೆಯ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇನೆ. ಪಟ್ಟಣಕ್ಕೆ ಒಳಚರಂಡಿ ಸೌಲಭ್ಯ ನೀಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಶೃಂಗೇರಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶಿವನಾಯಕ್ ತಿಳಿಸಿದ್ದಾರೆ.

***

ಜವಾಬ್ದಾರಿ ಇರಲಿ

ತುಂಗಾನದಿ ಸೇರುವ ಮಾಲತಿ ನದಿ ಈಗಾಗಲೇ ಭೀಮನಕಟ್ಟೆಯಲ್ಲಿ ಬತ್ತಿಹೋಗಿದೆ. ತುಂಗಾನದಿ ಪಾನದಿಂದ ಕಾಯಿಲೆ ವಾಸಿಯಾಗುತಿತ್ತು. ಆದರೆ, ಈಗ ವಾಸನೆ ಬರುತ್ತಿದೆ. ನದಿಯನ್ನು ಪೂಜಿಸುವುದರಿಂದ ಪವಿತ್ರವಾಗುವುದಿಲ್ಲ. ಜೀವಜಲದ ಬಗ್ಗೆ ಎಲ್ಲರಿಗೂ ಜವಾಬ್ದಾರಿ ಇರಬೇಕು.

-ಕಲ್ಕುಳಿ ವಿಠಲ ಹೆಗ್ಡೆ, ಪರಿಸರವಾದಿ

***

ಸೊಳ್ಳೆಗಳ ಕಾಟ ವಿಪರೀತ

ಮಳೆಗಾಲದಲ್ಲಿ ಮೋರಿ ಹಾಗೂ ಬಾಕ್ಸ್ ಚರಂಡಿಯಲ್ಲಿ ಮಣ್ಣು ತುಂಬಿದ್ದು, ನೀರಿನ ಹರಿವಿಗೆ ತಡೆ ಉಂಟಾಗುತ್ತದೆ. ಈಗ ಕೊಳಚೆ ನೀರು ಸ್ಥಗಿತಗೊಂಡು ಸೊಳ್ಳೆಗಳ ಕಾಟ ವಿಪರೀತವಾಗಿದೆ. ಜನಪರ ಕಾಳಜಿಯುಳ್ಳ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ಸ್ಪಂದಿಸಬೇಕು.

-ಸಂತೋಷ್ ಕಾಳ್ಯ, ಕುರಬಕೇರಿ ರಸ್ತೆಯ ದಿನಸಿ ವ್ಯಾಪಾರಸ್ಥ

***

ತುಂಗೆಯ ಮಡಿಲಿಗೆ ಅಪಾಯ

ಅರಣ್ಯ ನಾಶ ಒಂದೆಡೆಯಾದರೆ ಕೃಷಿಗೆ ಯಥೇಚ್ಛ ನೀರಿನ ಬಳಕೆ ಮತ್ತೊಂದೆಡೆ. ಈ ಮಧ್ಯೆ ಮುಂಗಾರು ಮಳೆ ದಾಖಲೆಯಷ್ಟು ಆದರೂ ನದಿಯಲ್ಲಿ ನೀರಿಲ್ಲ. ಈ ಎಲ್ಲಾ ಕಾರಣಗಳಿಂದ ತುಂಗೆಯ ಮಡಿಲಿಗೆ ಅಪಾಯ ಒದಗಿದೆ.

-ನವೀನ್ ಕಲ್ಕಟ್ಟೆ, ವಕೀಲ

***

ಕುಡಿಯುವ ನೀರಿಗೆ ಅಭಾವ

ನದಿ ದಂಡೆಯ ಪ್ರತಿ ಗ್ರಾಮಗಳಲ್ಲಿ ಕೊಳಚೆ ನೀರನ್ನು ತುಂಗಾನದಿಗೆ ಸೇರಿಸುತ್ತಾರೆ. ಮಲಿನಗೊಂಡ ನೀರಿನಿಂದ ಸಾಂಕ್ರಾಮಿಕ ರೋಗಗಳು ಬರಬಹುದು. ಇದರಿಂದ ಬೇಸಿಗೆಯಲ್ಲಿ ಶುದ್ಧ ಕುಡಿಯುವ ನೀರಿನ ಅಭಾವಕ್ಕೂ ಕಾರಣವಾಗಿದೆ.

-ಕೇಶವಮೂರ್ತಿ, ಟೈಲರ್, ಶೃಂಗೇರಿ

***

ಮೀನುಗಳು ಸಾಯುತ್ತಿವೆ

ಪಟ್ಟಣದ ಕೊಳಚೆ ನೀರು ನದಿಗೆ ಬೀಡುವುದರಿಂದ ಶಾರದಾ ಮಠದವರು ನದಿಯಲ್ಲಿ ಸಾಕಿರುವ ಮೀನುಗಳು ಸಾಯುತ್ತಿವೆ. ಕಳೆದ ವರ್ಷ 30 ಕೆ.ಜಿಯ ಮೀನು ಸತ್ತು ಹೋಗಿತ್ತು. ಅದನ್ನು ಪಟ್ಟಣ ಪಂಚಾಯಿತಿಯವರು ಮಣ್ಣು ಮಾಡಿದ್ದಾರೆ.

-ರಮೇಶ್, ಪಂಪಸೆಟ್ ನೌಕರ, ಪಟ್ಟಣ ಪಂಚಾಯಿತಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು