ಶನಿವಾರ, ಡಿಸೆಂಬರ್ 3, 2022
21 °C
ಜಯಂತ್ಯುತ್ಸವ, ಕಾರ್ಯಾಗಾರ, ಸನ್ಮಾನ ಕಾರ್ಯಕ್ರಮದಲ್ಲಿ ಡಾ.ಕುಮಾರ

ನೇತಾಜಿ ದೇಶಪ್ರೇಮ ಎಲ್ಲರಿಗೂ ಪ್ರೇರಕ: ಜಿಲ್ಲಾಧಿಕಾರಿ ಡಾ. ಕುಮಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ‘ನೇತಾಜಿ ಸುಭಾಷ್‌ ಚಂದ್ರ ಬೋಸ್ ಅವರ ದೇಶಪ್ರೇಮ ಯುವಪೀಳಿಗೆಗೆ ಪ್ರೇರಣೆಯಾಗಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ವಿಷನ್‌ ಚಿಕ್ಕಮಗಳೂರು ಟ್ರಸ್ಟ್, ನಿವೃತ್ತ ಸೈನಿಕರ ಜಿಲ್ಲಾ ಸಂಘ, ಶಾರದಾಂಬ ಸೈನಿಕ ತರಬೇತಿ ಸಂಘ, ಜೀವಧಾರೆ ಟ್ರಸ್ಟ್ ಸಹಯೋಗದೊಂದಿಗೆ ನಗರದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ನೇತಾಜಿ ಸುಭಾಷ್‌ಚಂದ್ರ ಬೋಸ್ 124ನೇ ಜಯಂತ್ಯುತ್ಸವ, ಸೇನೆ ಸೇರುವವರಿಗೆ ತರಬೇತಿ ಕಾರ್ಯಾಗಾರ, ಮಾಜಿ ಸೈನಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸುಭಾಷ್‌ಚಂದ್ರ ಬೋಸ್ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದರು. ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದರು. ಯುವಪೀಳಿಗೆ ಅವರ ಬಗ್ಗೆ ತಿಳಿದುಕೊಳ್ಳಬೇಕು. ಎನ್‌ಎಸ್‌ಎಸ್‌, ಎನ್‌ಸಿಸಿ ಸಂಸ್ಥೆಗಳು ಮಕ್ಕಳಲ್ಲಿ ವಿದ್ಯಾರ್ಥಿ ದಿಸೆಯಿಂದಲೇ ದೇಶಪ್ರೇಮ ಮೈಗೂಡಿಸಬೇಕು. ಸೈನ್ಯ ಸೇರಲು ಪ್ರೋತ್ಸಾಹ ನೀಡಬೇಕು’ ಎಂದು ಹೇಳಿದರು.

ನಿವೃತ್ತ ಸೈನಿಕ ನವಾಜ್ ಮಾತನಾಡಿ, ‘ಸೈನಿಕನಾಗಿ ಕೆಲಸ ನಿರ್ವಹಿಸುವುದು ಹೆಮ್ಮೆಯ ಸಂಗತಿಯಾಗಿದೆ. ಸೈನ್ಯ ಸೇರಲು ಯುವಕರು ಆಸಕ್ತಿ ತೋರಬೇಕು. ನೇಮಕಾತಿ ಪರೀಕ್ಷೆಗೆ ತಯಾರಿ ನಡೆಸಬೇಕು. ರಾಜ್ಯ, ಜಿಲ್ಲೆಗೆ ಕೀರ್ತಿ ತರಬೇಕು’ ಎಂದು ಹೇಳಿದರು.

ಎರಡನೇ ಮಹಾಯುದ್ಧದಲ್ಲಿ ಹುತಾತ್ಮರಾದ ಯೋಧರ ಪತ್ನಿಯರಾದ ಪ್ರೇಮಾ, ಚೆನ್ನಮ್ಮ ಅವರ ಪಾದಪೂಜೆ ನೆರವೇರಿಸಲಾಯಿತು. 86 ಮಂದಿ ಮಾಜಿ ಸೈನಿಕರಿಗೆ ಸನ್ಮಾನಿಸಲಾಯಿತು.

ಜೀವಧಾರೆ ಸಂಸ್ಥೆಯ ಪ್ರವೀಣ್ ‘ಪ್ರಜಾವಾಣಿ’ ಜತೆ ಮಾತನಾಡಿ, ‘ಸಂಸ್ಥೆಯು ಮಂಡ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಂಸ್ಥೆ ವತಿಯಿಂದ ಹಲವಾರು ರಕ್ತದಾನ ಶಿಬಿರ, ಸಸಿ ನೆಡುವ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಯುವಕರಲ್ಲಿ ದೇಶಪ್ರೇಮ ಬೆಳೆಸುವ ನಿಮಿತ್ತ ಈ ಜಯಂತ್ಯುತ್ಸವ, ಸನ್ಮಾನ ಹಾಗೂ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್, ಉಪ ವಿಭಾಗಾಧಿಕಾರಿ ಎಚ್.ಎಲ್.ನಾಗರಾಜ್, ಮಾಜಿ ಸೈನಿಕರ ಸಂಘದ ಜಿಲ್ಲಾ ಘಟಕದ ಗೌರವ ಕ್ಯಾಪ್ಟನ್ ಈ.ಕೃಷ್ಣೇಗೌಡ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಎಚ್.ಪಿ.ಮಂಜುಳಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು