ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ ವ್ಯವಸ್ಥೆ; ಮಧ್ಯವರ್ತಿಗಳಿಗೆ ಕಡಿವಾಣ

ವಾಹನ ನೋಂದಣಿ, ಚಾಲನಾ ಪರವಾನಗಿ
Last Updated 25 ಜೂನ್ 2018, 17:19 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಸಾರಿಗೆ ಇಲಾಖೆಯು ವಾಹನ ನೋಂದಣಿಗೆ ‘ವಾಹನ್‌– 4’, ಕಲಿಕಾ ಪತ್ರ (ಎಲ್‌ಎಲ್‌ಆರ್‌) ಮತ್ತು ಚಾಲನಾ ಪರವಾನಗಿಗೆ (ಡಿಎಲ್‌) ‘ಸಾರಥಿ–4’ ಸಾಫ್ಟ್‌ವೇರ್‌ ಪರಿಚಯಿಸಿದ್ದು, ಇದೇ 13ರಿಂದ ನಗರದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸಾಫ್ಟ್‌ವೇರ್‌ ಅಳವಡಿಸಿ ಸಾರ್ವಜನಿಕರಿಗೆ ಸೇವೆ ಒದಗಿಸಲಾಗುತ್ತಿದೆ.

ಎಲ್‌ಎಲ್ಆರ್‌ಗೆ ಈವರೆಗೆ 78, ಡಿಎಲ್‌ಗೆ 450, ಹಾಗೂ ವಾಹನ ನೋಂದಣಿಗೆ 183 ಅರ್ಜಿಗಳು ಆನ್‌ಲೈನ್‌ನಲ್ಲಿ ಸಲ್ಲಿಕೆಯಾಗಿವೆ. ಸಾರ್ಜಜನಿಕರು www.parivahan.gov.in ವೆಬ್‌ಸೈಟಿನಲ್ಲಿ ಅರ್ಜಿ ಸಲ್ಲಿಸಬೇಕು.

ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ನ್ಯಾಷನಲ್ ಇನ್‌ಫಾರ್ಮೆಟಿಕ್ಸ್ ಸೆಂಟರ್ (ಎನ್ಐಸಿ) ಸಹಯೋಗದಲ್ಲಿ ವಾಹನ್‌ ಹಾಗೂ ಸಾರಥಿ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಲಾಗಿದೆ. ವಾಹನ ನೋಂದಣಿ, ನೋಂದಣಿ ಸಂಖ್ಯೆ ಹಂಚಿಕೆ, ನಿರಾಕ್ಷೇಪಣಾ ಪತ್ರ, ಶುಲ್ಕ, ತೆರಿಗೆ ಪಾವತಿ ಸೇವೆಗಳನ್ನು ‘ವಾಹನ್‌–4’ನಲ್ಲಿ ಪಡೆಯಬಹುದು. ಚಾಲನಾ ಕಲಿಕಾ ಪತ್ರ ಮತ್ತು ಚಾಲನಾ ಪರವಾನಗಿಗೆ ಸಂಬಂಧಪಟ್ಟ ಸೇವೆಗಳು ‘ಸಾರಥಿ–4’ರಲ್ಲಿ ಲಭ್ಯ ಇದೆ.

ಹೆಚ್ಚುವರಿ ಸಾರಿಗೆ ಆಯುಕ್ತ ಸಿ.ಪಿ.ನಾರಾಯಣಸ್ವಾಮಿ ಅವರು ಸೋಮವಾರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ಸಾರ್ವಜನಿಕರು ವಾಹನ ನೋಂದಣಿಗೆ ಆನ್‌ಲೈನ್‌ನಲ್ಲಿ (‘ವಾಹನ್‌–4’) ವಿವರ, ದಾಖಲೆಗಳನ್ನು ಅಪ್‌ಲೋಡ್‌ ಮಾಡಬೇಕು. ಇಲಾಖೆ ಸಿಬ್ಬಂದಿ ಮಾಹಿತಿಯನ್ನು ಪರಿಶೀಲನೆ ಮಾಡುತ್ತಾರೆ. ನಂತರ ವಾಹನ ತಪಾಸಣೆ ಮಾಡುತ್ತೇವೆ. ಎಲ್ಲ ಪ್ರಕ್ರಿಯೆ ಮುಗಿದ ನಂತರ ಗರಿಷ್ಠ 30 ದಿನಗಳೊಳಗೆ ಸ್ಪೀಡ್ ಪೋಸ್ಟ್‌ನಲ್ಲಿ ನೋಂದಣಿ ಪತ್ರವನ್ನು (ಸ್ಮಾರ್ಟ್‌ ಕಾರ್ಡ್‌) ಕಳುಹಿಸುತ್ತೇವೆ’ ಎಂದು ತಿಳಿಸಿದರು.

‘ಎಲ್‌ಎಲ್‌ಆರ್‌, ಚಾಲನಾ ಪರವಾನಗಿಗೆ ಆನ್‌ಲೈನ್‌ನಲ್ಲಿ (‘ಸಾರಥಿ–4’) ವಿವರ, ದಾಖಲೆಗಳನ್ನು ಅಪ್‌ಲೋಡ್‌ ಮಾಡಬೇಕು. ಎಲ್‌ಎಲ್‌ಆರ್‌ಗೆ ಆನ್‌ಲೈನ್‌ನಲ್ಲಿ ನೋಂದಾಯಿಸಿದ ನಂತರ ಕಚೇರಿಯಲ್ಲಿ ಪರೀಕ್ಷೆ ಇರುತ್ತದೆ. ‘ಸ್ಟಾಲ್‌’ನಲ್ಲಿ (ಸ್ಕ್ರೀನ್‌ ಟೆಸ್ಟ್‌ ಏಡ್‌ ಫಾರ್‌ ಲರ್ನರ್ಸ್‌ ಲೈಸೆನ್ಸ್‌) 15 ಪಶ್ನೆಗಳು ಇರುತ್ತವೆ. ಈ ಪೈಕಿ ಕನಿಷ್ಠ 10 ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದ್ದರೆ, ಎಲ್‌ಎಲ್ಆರ್‌ ಪಡೆಯಲು ಅರ್ಹರಾಗುತ್ತಾರೆ. ಅರ್ಹತೆ ಪಡೆದಿರುವ ಬಗ್ಗೆ ಮೊಬೈಲ್‌ಗೆ ಎಸ್‌ಎಂಎಸ್‌ ರವಾನೆಯಾಗುತ್ತದೆ’ ಎಂದರು.

‘ಎಲ್‌ಎಲ್‌ಆರ್‌ ಪಡೆದ 30 ದಿನಗಳ ನಂತರ ಚಾಲನಾ ಪರವಾನಗಿ (ಡಿಎಲ್‌) ಪಡೆಯಲು ಚಾಲನಾ ಪರೀಕ್ಷೆಗೆ ಹಾಜರಾಗಬೇಕು. ಡಿಎಲ್‌ಗೆ ವಿವರವನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಿರಬೇಕು. ಕಚೇರಿಯಲ್ಲಿ ‘ಜೀವಮಾಪಕ’ (ಬಯೋಮೆಟ್ರಿಕ್‌), ಹೆಬ್ಬೆರಳಿನ ಗುರುತು ಸ್ಕ್ಯಾನ್‌ ಮಾಡಿಕೊಳ್ಳಲಾಗುವುದು. ಚಾಲನೆ ಪರೀಕ್ಷೆಯಲ್ಲಿ ಅರ್ಹತೆ ಪಡೆದ, ನಂತರ ಗರಿಷ್ಠ 30 ದಿನಗಳೊಳಗೆ ಸ್ಪೀಡ್‌ ಪೋಸ್ಟ್‌ನಲ್ಲಿ ಚಾಲನಾ ಪರವಾನಗಿ (ಸ್ಮಾರ್ಟ್‌ ಕಾರ್ಡ್‌) ಕಳಿಸಲಾಗುವುದು’ ಎಂದರು.

‘ಸಾಮಾನ್ಯವಾಗಿ 10 ದಿನಗಳೊಳಗೆ ಕಾರ್ಡ್‌ ಕಳಿಸಲಾಗುತ್ತದೆ. ಗರಿಷ್ಠ 30 ದಿನಗಳೊಳಗೆ ಪರವಾನಗಿ ಕಳಿಸದಿದ್ದರೆ, ಸಕಾಲದಲ್ಲಿ ದಾಖಲಾಗಿರುತ್ತದೆ. ಪರವಾನಗಿ ಕಳಿಸದಿರುವ ಅಧಿಕಾರಿಗಳು ಸಂಬಂಧಪಟ್ಟ ಸಿಬ್ಬಂದಿ ಕಾರಣ ಕೇಳುತ್ತಾರೆ. ವಿಳಂಬ ನೀತಿ ಅನುರಿಸಲು ಅವಕಾಶ ಇಲ್ಲ. ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT