ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಧಿತ ಪೊಲೀಸ್ ಬಿಡುಗಡೆ, ವಕೀಲರ ವಿರುದ್ಧ ಪ್ರಕರಣ: ಪ್ರತಿಭಟನೆ ಕೈಬಿಟ್ಟ ಪೊಲೀಸರು

Published 3 ಡಿಸೆಂಬರ್ 2023, 5:33 IST
Last Updated 3 ಡಿಸೆಂಬರ್ 2023, 5:33 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ವಕೀಲ ಪ್ರೀತಮ್‌ ಮೇಲೆ ಪೊಲೀಸರು ನಡೆಸಿದ ಹಲ್ಲೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಪೊಲೀಸರು ಮತ್ತು ವಕೀಲರ ನಡುವಿನ ಜಟಾಪಟಿ ತಾರಕಕ್ಕೇರಿದೆ. ಪೊಲೀಸ್ ಸಿಬ್ಬಂದಿಯೇ ಕರ್ತವ್ಯ ತೊರೆದು ಇಡೀ ರಾತ್ರಿ ಪ್ರತಿಭಟನೆ ನಡೆಸಿದರು. ಬಂಧಿಸಿದ್ದ ಪೊಲೀಸ್‌ ಕಾನ್‌ಸ್ಟೆಬಲ್ ಗುರುಪ್ರಸಾದ್ ಬಿಡುಗಡೆಗೊಳಿಸಿ, ವಕೀಲರ ವಿರುದ್ಧ ಮೊಕದ್ದಮೆ ದಾಖಲಿಸಿದ ಬಳಿಕ ಭಾನುವಾರ ಬೆಳಗ್ಗೆ ಪ್ರತಿಭಟನೆ ವಾಪಸ್ ಪಡೆದರು.

ಹೆಲ್ಮೆಟ್ ಹಾಕದ ಬೈಕ್‌ ಚಾಲನೆ ಮಾಡಿದ ವಕೀಲ ಪ್ರೀತಮ್ ಮೇಲೆ ಗುರುವಾರ ರಾತ್ರಿ ಹಲ್ಲೆ ನಡೆಸಿರುವ ಆರೋಪದಲ್ಲಿ ಪಿಎಸ್‌ಐ ಮಹೇಶ್ ಪೂಜಾರಿ, ಎಎಸ್‌ಐ ರಾಮಪ್ಪ, ಮುಖ್ಯ ಕಾನ್‌ಸ್ಟೆಬಲ್ ಶಶಿಧರ್, ಕಾನ್‌ಸ್ಟೆಬಲ್ ಗುರುಪ್ರಸಾದ್, ಬಿ.ಕೆ.ನಿಖಿಲ್, ವಿ.ಟಿ.ಯುವರಾಜ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ಅವರು ಅಮಾನತುಗೊಳಿಸಿದ್ದರು. ಎಲ್ಲರನ್ನೂ ಬಂಧಿಸಬೇಕು ಎಂದು ವಕೀಲರು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರು ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸಿದ್ದರು.

ಅಮಾನತುಗೊಂಡಿರುವ ಪೊಲೀಸ್ ಸಿಬ್ಬಂದಿಯ ಕುಟುಂಬ ಸದಸ್ಯರು ಶನಿವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿದ್ದರು. ಈ ನಡುವೆ ಕಾನ್‌ಸ್ಟೆಬಲ್ ಗುರುಪ್ರಸಾದ್ ಅವರನ್ನು ಶನಿವಾರ ರಾತ್ರಿ ಪೊಲೀಸ್ ಅಧಿಕಾರಿಗಳು ಬಂಧಿಸಿದರು.

ಈ ಸುದ್ದಿ ಪೊಲೀಸ್ ಸಿಬ್ಬಂದಿಯ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಹರಿದಾಡಿದ ಕೂಡಲೇ ಕುಟುಂಬ ಸದಸ್ಯರು ಮತ್ತು ಪೊಲೀಸರು ನೂರಾರು ಸಂಖ್ಯೆಯಲ್ಲಿ ನಗರ ಠಾಣೆಯ ಮುಂದೆ ಜಮಾಯಿತಿ ಸಮವಸ್ತ್ರದಲ್ಲೇ ಧರಣಿ ಕುಳಿತರು.

‘ವಕೀಲ ಪ್ರೀತಮ್ ಪೊಲೀಸರ ಕಪಾಳಕ್ಕೆ ಹೊಡೆದಿದ್ದಾರೆ. ಎಫ್‌ಐಆರ್ ಪ್ರತಿಯನ್ನು ಸುಧಾಕರ್ ಮತ್ತು ಮಹೇಶ್‌ಕುಮಾರ್ ವಿರುದ್ಧ ಪ್ರಕರಣ ದಾಖಲಿಸಬೇಕು. ಬಂಧಿಸಿರುವ ಗುರುಪ್ರಸಾದ್ ಬಿಡುಗಡೆ ಮಾಡಬೇಕು’ ಎಂದು ಪಟ್ಟು ಹಿಡಿದರು.

‘ಪೊಲೀಸ್‌ ಕೆಲಸದಲ್ಲಿ ಇರುವ  ಕಾರಣಕ್ಕೆ ಅನ್ಯಾಯವನ್ನೂ ಸಹಿಸಬೇಕೆ, ನಮಗೂ ನ್ಯಾಯ ಬೇಕು. ನ್ಯಾಯ ಸಿಗುವ ತನಕ ಕದಲುವುದಿಲ್ಲ’ ಎಂದರು.

ಬಳಿಕ ಹನುಮಂತಪ್ಪ ವೃತದಲ್ಲಿ ವಾಹನ ಸಂಚಾರ ತಡೆದು ಧರಣಿ ಮುಂದುವರಿಸಿದರು. ಪಶ್ಚಿಮ ವಲಯ ಐಜಿಪಿ ಚಂದ್ರಗುಪ್ತ ಅವರು ಸ್ಥಳಕ್ಕೆ ಬಂದು ಪ್ರತಿಭಟನಾನಿರತ ಪೊಲೀಸರ ಮನವೊಲಿಸು ಪ್ರಯತ್ನ ನಡೆಸಿದರು. ವಿಕ್ರಮ ಅಮಟೆ ಅವರು ಕಾನ್‌ಸ್ಟೆಬಲ್‌ಗಳ ಮುಂದೆ ಕುಳಿತು ಧರಣಿ ವಾಪಸ್ ಪಡೆಯಲು ಮನವಿ ಮಾಡಿದರು. ಆದರೂ, ವಾಪಸ್ ಪಡೆಯಲಿಲ್ಲ. ಜಿಲ್ಲೆಯ ಎಲ್ಲೆಡೆಯಿಂದ ತಂಡೋಪತಂಡವಾಗಿ ಬಂದ ಪೊಲೀಸ್ ಸಿಬ್ಬಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಲಾಠಿಗಳನ್ನು ಬೆಂಕಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಕಾನ್‌ಸ್ಟೆಬಲ್ ಗುರುಪ್ರಸಾದ್ ಅವರನ್ನು ಧರಣಿ ಸ್ಥಳಕ್ಕೆ ಕರೆತಂದ ಪೊಲೀಸ್ ಅಧಿಕಾರಿಗಳು, ಬಿಡುಗಡೆಗೊಳಿಸಿದರು. ಆದರೂ, ಧರಣಿ ಹಿಂದಕ್ಕೆ ಪಡೆಯಲಿಲ್ಲ. ಪೊಲೀಸರ ಕಪಾಳಕ್ಕೆ ಹೊಡೆದ ಪ್ರೀತಮ್ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ ವಕೀಲರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಪಟ್ಟು ಹಿಡಿದರು.

ಬೆಳಗಿನ ಜಾವದ ತನಕ ಪ್ರತಿಭಟನಾನಿರತರ ಮನವೊಲಿಸಲು ಅಧಿಕಾರಿಗಳು ಪ್ರಯತ್ನಿಸಿ ವಿಫಲರಾದರು. ಪ್ರೀತಮ್ ವಿರುದ್ಧ ಪ್ರತ್ಯೇಕ ಮೊಕದ್ದಮೆ ಮತ್ತು ಏಳು ವಕೀಲರ ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಿಸಿದ ಬಳಿಕ ಪ್ರತಿಭಟನೆ ಹಿಂದಕ್ಕೆ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT