ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿನಾಡಿನಲ್ಲಿ ವರ್ಷಧಾರೆ ಅಬ್ಬರ

ಮಳೆ ಬಿರುಸು: ಮೂಡಿಗೆರೆ, ಎನ್‌.ಆರ್‌.ಪುರ, ಕೊಪ್ಪ, ಶೃಂಗೇರಿ ತಾಲ್ಲೂಕಿನ ಶಾಲಾ, ಕಾಲೇಜಿಗೆ ರಜೆ ಇಂದು
Last Updated 5 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಲೆನಾಡು ಭಾಗದಲ್ಲಿ ಮಳೆ ಬಿರುಸು ಗೊಂಡಿದೆ. ಹಳ್ಳ, ನದಿ, ಜಲಪಾತಗಳು ಮೈದುಂಬಿಕೊಂಡಿವೆ. ಕೆಲವೆಡೆ ಮರ, ವಿದ್ಯುತ್‌ ಕಂಬಗಳು ಧರೆಗುರುಳಿವೆ.

ಚಿಕ್ಕಮಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಹದ ಮಳೆಯಾಗಿದೆ. ಕುಡಿಯುವ ನೀರಿನ ಪೈಪು ಅಳವಡಿಸಲು ವಿವಿಧ ಬಡಾವಣೆಗಳಲ್ಲಿ ರಸ್ತೆ ಬದಿ ಅಗೆದಿರುವ ಗುಂಡಿಗಳಲ್ಲಿ ನೀರು ತುಂಬಿಕೊಂಡಿದೆ. ಕೆಲವು ಕಡೆ ಕೆಸರುಮಯವಾಗಿ ಸಂಚಾರಕ್ಕೆ ತೊಂದರೆಯಾಗಿದೆ.

ಅಲ್ಲಂಪುರ, ಗಿರಿಶ್ರೇಣಿಯ ಮುಳ್ಳ ಯ್ಯನಗಿರಿ, ಅತ್ತಿಗುಂಡಿ, ಕವಿಕಲ್ಗಂಡಿ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಮವಾರ ಬೆಳಿಗ್ಗೆಯಿಂದಲೂ ಬಿಟ್ಟುಬಿಟ್ಟು ಮಳೆಯಾಗಿದೆ. ವರ್ಷಧಾರೆ ಬೆಳೆಗಾರರಲ್ಲಿ ಮಂದಹಾಸ ಮೂಡಿಸಿದೆ.

ಬೆಳಿಗ್ಗೆಯಿಂದಲೂ ಶೀತಗಾಳಿ ಮತ್ತು ಮೋಡ ಕವಿದ ವಾತಾವರಣ ಇತ್ತು. ಮೂಡಿಗೆರೆ ತಾಲ್ಲೂಕಿನಲ್ಲಿ ಮಳೆ ಆರ್ಭಟ ಹೆಚ್ಚು ಇದ್ದಿದ್ದರಿಂದ ಶಾಲಾ–ಕಾಲೇಜುಗಳಿಗೆ ಸೋಮವಾರ ರಜೆ ನೀಡಲಾಗಿತ್ತು. ಸೋಮವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಆಲ್ದೂರು 32 ಮಿ.ಮೀ, ಸಂಗಮೇಶ್ವರಪೇಟೆ 26, ಹರಿಹರಪುರ 75, ಮೂಡಿಗೆರೆ 91, ಬಣಕಲ್‌ 74, ಎನ್‌.ಆರ್‌.ಪುರ 45, ಶೃಂಗೇರಿ 42, ಕಿಗ್ಗಾ 57, ಕಡೂರು 3, ತರೀಕೆರೆ 17, ಅಜ್ಜಂಪುರದಲ್ಲಿ 8 ಮಿ.ಮೀ ಮಳೆಯಾಗಿದೆ.

ಮಳೆಯ ಆರ್ಭಟ
ಕಳಸ: ತಾಲ್ಲೂಕಿನಾದ್ಯಂತ ಮಳೆಯ ಆರ್ಭಟ ಹೆಚ್ಚಿತ್ತು. ಭಾನುವಾರ ಮಧ್ಯಾಹ್ನ ಆರಂಭಗೊಂಡಿದ್ದ ಬಿರುಸಾದ ಮಳೆ ಸೋಮವಾರ ಬೆಳಿಗ್ಗೆವರೆಗೂ ಸತತವಾಗಿ ಸುರಿದಿತ್ತು. ಅಲ್ಪವಿರಾಮದ ನಂತರ ಮತ್ತೆ ಆರಂಭವಾದ ವರ್ಷಧಾರೆ ನಿರಂತರವಾಗಿ ಸುರಿದು ಎಲ್ಲೆಡೆ ಚಳಿ ವಾತಾವರಣಕ್ಕೆ ಸೃಷ್ಟಿಸಿತು. ಮಳೆಯಿಂದಾಗಿ ಭದ್ರೆ ಮತ್ತು ಅದರ ಉಪನದಿಗಳು ಮತ್ತು ಹಳ್ಳಗಳಲ್ಲಿ ಗರಿಷ್ಠ ನೀರು ಹರಿಯಿತು.

ಶಾಲಾ ಕಾಲೇಜುಗಳಿಗೆ ಮತ್ತು ತೋಟಗಳಿಗೆ ಮಳೆಯ ಕಾರಣಕ್ಕೆ ರಜೆ ನೀಡಲಾಗಿತ್ತು. ತಾಲ್ಲೂಕಿನ ಎಲ್ಲ ಗ್ರಾಮ ಗಳಲ್ಲೂ ಜನಸಂಚಾರ ವಿರಳವಾಗಿತ್ತು.

ಭಾನುವಾರ ಬೆಳಿಗ್ಗೆವರೆಗೆ 40 ಮಿ.ಮೀ, ಮಳೆ ದಾಖಲಾಗಿದ್ದರೆ, ಸೋಮವಾರ ಬೆಳಿಗ್ಗೆವರೆಗೆ 123 ಮಿ.ಮೀ. ಮಳೆ ದಾಖಲಾಗಿದೆ. ಕಳಸದಲ್ಲಿ ಈವರೆಗೆ ಒಟ್ಟು 1347 ಮಿ.ಮೀ. (54 ಇಂಚು) ಮಳೆ ಸುರಿದಿದೆ. ಏಪ್ರಿಲ್‍ನಲ್ಲಿ 43 ಮಿ.ಮೀ, ಮೇ ತಿಂಗಳಲ್ಲಿ 64 ಮಿ.ಮೀ, ಜೂನ್‍ನಲ್ಲಿ 285 ಮಿ.ಮೀ ಮತ್ತು ಜುಲೈನಲ್ಲಿ 741 ಮಿ.ಮೀ. ಮತ್ತು ಆಗಸ್ಟ್‌ನಲ್ಲಿ ಈವರೆಗೆ 203 ಮಿ.ಮೀ. ಮಳೆ ಸುರಿದಿದೆ.

ಧಾರಾಕಾರ ಮಳೆ
ಶೃಂಗೇರಿ: ಇಷ್ಟು ದಿನ ಸಾಧಾರಣ ಮಳೆಯಾಗುತ್ತಿದ್ದ ಮಳೆ ಭಾನುವಾರ ಸಂಜೆಯಿಂದ ರಭಸವಾಗಿ ಸುರಿಯುತ್ತಿದೆ. ಸೋಮವಾರ ಕೂಡ ಮಳೆಯ ಆರ್ಭಟ ಮುಂದುವರಿದಿದೆ. ಕೆರೆಕಟ್ಟೆ, ಕಿಗ್ಗಾ ಭಾಗದಲ್ಲಿ ಅತಿ ಹೆಚ್ಚು ಮಳೆ ಸುರಿದಿದೆ.

ಶೃಂಗೇರಿ ತಾಲ್ಲೂಕಿನಲ್ಲಿ ಜನವರಿಯಿಂದ ಇಲ್ಲಿಯವರೆಗೆ 1,506 ಮಿ.ಮೀ ಮಳೆ ಸುರಿದಿದೆ. ಸೋಮವಾರ ಶೃಂಗೇರಿಯಲ್ಲಿ 42 ಮಿ.ಮೀ, ಕಿಗ್ಗಾದಲ್ಲಿ 60.8 ಮಿ.ಮೀ ಕೆರೆಕಟ್ಟೆಯಲ್ಲಿ 140.0 ಮಿ.ಮೀ ಮಳೆಯಾಗಿದೆ. ಪಟ್ಟಣದಲ್ಲಿ ಜೋರಾದ ಮಳೆಯಿಂದ ಗ್ರಾಮೀಣ ಪ್ರದೇಶದ ಜನರು ಹಾಗೂ ಪ್ರವಾಸಿಗರ ಸಂಖ್ಯೆ ಸ್ವಲ್ಪ ಇಳಿಮುಖವಾಗಿದೆ.

ಮಳೆಯಿಂದ ಹಲವು ಕಡೆ ನೀರಿನಿಂದ ಆವೃತ್ತಗೊಂಡು ನೆಮ್ಮಾರ್, ಕೆರೆಕಟ್ಟೆ, ಕುರಬಕೇರಿ, ಭಾರತೀತೀರ್ಥ ರಸ್ತೆ,ಭಾರತಿ ಬೀದಿ, ಆನೆಗುಂದ ರಸ್ತೆ, ಗಾಂಧೀ ಮೈದಾನ, ಹಾಲಂದೂರು ರಸ್ತೆ, ಕೆರೆಕಟ್ಟೆಯ ಗುಲುಗುಂಜಿ ಮನೆ ರಸ್ತೆಯು ನೀರಿನಿಂದ ಆವೃತವಾಗಿದೆ.

ಭಾನುವಾರ ರಾತ್ರಿಯಿಂದ ಸುರಿದ ಮಳೆಯಿಂದ ತಾಲ್ಲೂಕಿನಲ್ಲಿ ವಿದ್ಯುತ್ ತಂತಿಯ ಮೇಲೆ ಮರಗಳು ಬಿದ್ದಿದ್ದು, ನೆಮ್ಮಾರ್‌ನ ಮಂಗಳೂರು ಮೈನ್ ರಸ್ತೆಯಲ್ಲಿ 1 ಕಂಬ, ತನಿಕೋಡುನಲ್ಲಿ 1 ಕಂಬ, ವೈಕುಂಠಪುರದಲ್ಲಿ 3 ಕಂಬ, ಮಸಿಗೆ ಕೆರೆಮನೆಯಲ್ಲಿ 1 ಕಂಬ ನೆಲಕ್ಕೆ ಉರುಳಿದೆ. ತಾಲ್ಲೂಕಿನ 49 ಗ್ರಾಮಗಳಲ್ಲಿ ಶಿರ್ಲು, ಹಾದಿ, ಕೆರೆ, ಸುಂಕದಮಕ್ಕಿ, ನಿಲಂದೂರು, ಕುಂಬ್ರಗೋಡು, ಕೂಗೋಡು ಮೊದಲಾದ ಗ್ರಾಮಗಳು ಪಟ್ಟಣದಿಂದ 25 ರಿಂದ 30 ಕಿಲೋ ಮೀಟರ್ ದೂರವಿದೆ. ಆ ಭಾಗದಲ್ಲಿ ಯಾರಿಗಾದರೂ ಅನಾರೋಗ್ಯ, ಅಪಘಾತ ಸಂಭವಿಸಿದರೆ ಅಸ್ಪತ್ರೆಗೆ ಬರಲು ಹರಸಾಹಸ ಪಡಬೇಕಾಗಿದೆ. ಅಸಮರ್ಪಕವಾದ ರಸ್ತೆಗಳು ಇರುವು ದರಿಂದ ಮಳೆಯಲ್ಲಿ ವಾಹನವನ್ನು ಕೊಂಡೊಯ್ಯಲು ಕಷ್ಟವಾಗಿದೆ.

ಉತ್ತಮ ಮಳೆ
ಅಜ್ಜಂಪುರ ವರದಿ: ಪಟ್ಟಣದಲ್ಲಿ ಭಾನುವಾರ ರಾತ್ರಿ ಹಾಗೂ ಸೋಮವಾರ ಉತ್ತಮ ಮಳೆ ಆಗಿದೆ. ಮೋಡ ಕವಿದ ವಾತಾವರಣದ ನಡುವೆ ಆಗಾಗ್ಗೆ ಸೋನೆ ಮಳೆ ಸುರಿಯಿತು. ಇದು ರೈತರ ಮೊಗದಲ್ಲಿ ಹರ್ಷ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT