ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು | ಬಿಸಿಲು ಮಳೆಯಾಟ; ಭತ್ತಕ್ಕೆ ಬೆಂಕಿ ರೋಗದ ಕಾಟ

Published 24 ಸೆಪ್ಟೆಂಬರ್ 2023, 5:36 IST
Last Updated 24 ಸೆಪ್ಟೆಂಬರ್ 2023, 5:36 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಮಳೆ ಕೊರತೆಯಿಂದ ಭತ್ತದ ನಾಟಿ ಕಡಿಮೆಯಾಗಿರುವ ನಡುವೆ ಇರುವ ಬೆಳೆಯೂ ಬೆಂಕಿ ರೋಗಕ್ಕೆ ತುತ್ತಾಗುತ್ತಿದೆ. ‌ನಾಟಿ ವಿಳಂಬ, ನೀರಿನ ಕೊರತೆ, ಮಳೆಗಾಲದಲ್ಲೆ ಬೇಸಿಗೆಯಂತ ಬಿಸಿಲಿರುವುದರಿಂದ ಭತ್ತದ ಬೆಳೆಗೆ ಬೆಂಕಿ ರೋಗದ ಕಾಟ ಆರಂಭವಾಗಿದೆ.

ಶಿಲೀಂದ್ರ ಹರಡಿ ಮೊದಲಿಗೆ ಎಲೆಗಳು, ತೆನೆ ಮತ್ತು ಭತ್ತದ ಕಾಳುಗಳ ಮೇಲೆ ಸಣ್ಣ ಕಂದು ಬಣ್ಣದ ಚುಕ್ಕೆಗಳು ಕಾಣಿಸುತ್ತವೆ. ನಂತರ ಅವುಗಳ ಗಾತ್ರ ದೊಡ್ಡದಾಗುತ್ತಾ ಹೋಗುತ್ತದೆ. ಚುಕ್ಕೆಯ ಮಧ್ಯ ಭಾಗ ಅಗಲವಾಗಿ ಬೂದಿ ಬಣ್ಣಕ್ಕೆ ತಿರುಗುತ್ತದೆ. ನಂತರ ಚುಕ್ಕೆಗಳು ಸೇರಿ ಎಲ್ಲೆಗಳೆಲ್ಲವೂ ಸಂಪೂರ್ಣ ಸುಟ್ಟಂತೆ ಕಾಣಿಸುತ್ತದೆ. ಈ ಶಿಲೀಂದ್ರ ಇಡೀ ಗದ್ದೆಗೆ ಹರಡಿದಾಗ ಬೆಳೆ ಬೆಂಕಿಯಿಂದ ಸುಟ್ಟಂತೆ ಕಾಣಿಸುತ್ತದೆ. ಆದ್ದರಿಂದ ಬೆಂಕಿರೋಗ ಎಂದು ಕರೆಯಲಾಗುತ್ತದೆ.

ಮಳೆ ಕೊರತೆಯಿರುವುದರಿಂದ ಭತ್ತ ನಾಟಿ ವಿಳಂಬವಾಗಿದೆ. ಸಾಮಾನ್ಯವಾಗಿ ಭತ್ತವನ್ನು 21ನೇ ದಿನಕ್ಕೆ ಮಡಿಯಿಂದ ಕಿತ್ತು ನಾಟಿ ಮಾಡಬೇಕು ಎಂಬುದು ಕೃಷಿ ಇಲಾಖೆ ನೀಡುವ ಸಲಹೆ. ಈ ಬಾರಿ ಜೂನ್‌ನಲ್ಲಿ ಮಳೆ ಬೀಳಲೇ ಇಲ್ಲ. ಜುಲೈನಲ್ಲಿ ನಾಲ್ಕೈದು ದಿನ ಮಳೆ ಸುರಿದಾಗ ಹೆಚ್ಚಿನ ಪ್ರಮಾಣದಲ್ಲಿ ನಾಟಿ ಮಾಡಲಾಗಿದೆ.

ಮಳೆ ವಿಳಂಬವಾಗಿದ್ದರಿಂದ ಮಡಿಯಲ್ಲೇ ಹೆಚ್ಚು ದಿನ ಸಸಿ ಉಳಿದಿದ್ದವು. ವಯಸ್ಸಾದ ಸಸಿ ನಾಟಿ ಮಾಡಿರುವುದು, ನಾಟಿ ಮಾಡಿದ ನಂತರ ನೀರಿನ ಕೊರತೆ ಆಗಿರುವುದು, ಮಳೆಗಾದಲ್ಲೂ ಬಿಸಿಲಿನ ಝಳ ಇರುವುದರಿಂದ ಭತ್ತದ ಬೆಳೆಗೆ ಈ ರೋಗ ಕಾಣಿಸಿಕೊಂಡಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣೆ ವಿಜ್ಞಾನಿಗಳು ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಭತ್ತದ ಗದ್ದೆಗಳಿಗೆ ಭೇಟಿ ನಿಡಿ ಪ್ರಾಥಮಿಕ ಹಂತದಲ್ಲೇ ರೋಗ ಹತೋಟಿ ಮಾಡುವ ಬಗ್ಗೆ ಸಲಹೆಗಳನ್ನು ರೈತರಿಗೆ ನೀಡುತ್ತಿದ್ದಾರೆ. 

ಪ್ರಾಥಮಿಕ ಹಂತದಲ್ಲಿ ಹತೋಟಿ ಸಾಧ್ಯ

ಭತ್ತದ ಬೆಳೆಗೆ ಕಾಣಿಸಿಕೊಂಡಿರುವ ಬೆಂಕಿ ರೋಗದ ಹತೋಟಿಗೆ ಅವಕಾಶ ಇದೆ. ಪ್ರಾಥಮಿಕ ಹಂತದಲ್ಲಿ ಇದ್ದಾಗಲೇ ರೋಗಕ್ಕೆ ತುತ್ತಾದ ಗಿಡಗಳನ್ನು ಕಿತ್ತು ಸುಡಬೇಕು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಚ್‌.ಎಲ್. ಸುಜಾತಾ ಹೇಳುತ್ತಾರೆ. ‌ನೀರಿನ ಕರೊತೆ ಇರುವ ಗದ್ದೆಗಳ್ಲಲಿ ಬೆಂಕಿರೋಗದ ತೀವ್ರತೆ ಕಂಡು ಬರುತ್ತಿದೆ. ಔಷಧ ಸಿಂಪರಣೆ ಮೂಲಕ ರೋಗ ಹತೋಟಿ ಸಾಧ್ಯವಿದೆ. ಒಂದು ಲೀಟರ್‌ ನೀರಿಗೆ 1 ಗ್ರಾಂ ಕಾರ್ಬನ್‌ಡೈಜಿಂ–50 ಡಬ್ಲ್ಯುಪಿ ಅಥವಾ 0.6 ಗ್ರಾಂ ಟ್ರೈಸೈಕ್ಲೊಜೋಲ್–75 ಡಬ್ಲ್ಯುಪಿ ಅಥವಾ 0.5 ಗ್ರಾಂ ಟೆಬುಕೋನಜೋಲ್–50 ಸಿಂಪಡಿಸಬಹುದು. ಈ ಮೂರದಲ್ಲಿ ಒಂದು ಔಷಧವನ್ನು ಮಾತ್ರ ಸಿಂಪಡಿಸಬೇಕು. ಪ್ರಾಥಮಿಕ ಹಂತದಲ್ಲಿ ಇದ್ದಾಗ ಸಿಂಪಡಿಸಿದರೆ ಬೆಳೆ ಉಳಿಸಿಕೊಳ್ಳಬಹುದು ಎಂದು ಅವರು ಸ್ಪಷ್ಟಪಡಿಸಿದರು. 

ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವ ಬೆಳೆ

ಮೊದಲಿಗೆ ಭತ್ತದ ಸೀಮೆಯಾಗಿದ್ದ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಭತ್ತದ ಬೆಳೆ ಕಡಿಮೆಯಾಗುತ್ತಿದೆ. ಐದು ವರ್ಷಗಳ ಹಿಂದೆ 20 ಸಾವಿರ ಹೆಕ್ಟೇರ್‌ನಲ್ಲಿ ಇದ್ದು ಬೆಳೆ ಈ ವರ್ಷ 13 ಸಾವಿರ ಹೆಕ್ಟೇರ್‌ಗೆ ಇಳಿಕೆಯಾಗಿದೆ. ಈ ವರ್ಷ 16255 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಹೊಂದಿತ್ತು. ಆದರೆ 13 375 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಈ ಹಿಂದೆ 2014ರಲ್ಲಿ ಭತ್ತ ಬೆಳೆಯುವ ರೈತರಿಗೆ ಸರ್ಕಾರ ಪ್ರೋತ್ಸಾಹಧನ ನೀಡುತ್ತಿತ್ತು. ಆದರೂ ಬೆಳೆಯ ಪ್ರಮಾಣ ಏರಿಕೆಯಾಗಲಿಲ್ಲ. ಆದ್ದರಿಂದ ಪ್ರೋತ್ಸಾಹಧನ ನೀಡುವ ಪದ್ಧತಿ ಈಗ ಇಲ್ಲ. ಭತ್ತ ಬೆಳೆಯುತ್ತಿದ್ದ ಜಾಗದಲ್ಲಿ ಕಾಫಿ ಮತ್ತು ಅಡಿಕೆ ಬೆಳೆಗಳು ಆವರಿಸಿಕೊಂಡಿವೆ. ಕೃಷಿ ಕಾರ್ಮಿಕರ ಕೊರತೆ ಇದಕ್ಕೆ ಪ್ರಮುಖ ಕಾರಣ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT