ಚಿಕ್ಕಮಗಳೂರು: ಜಿಲ್ಲೆಯ ಕನ್ನಡ ಭವನ ನವೀಕರಣ ಹಾಗೂ ನೂತನ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಅನುದಾನ ಕೋರಿ ಕನ್ನಡ ಸಾಹಿತ್ಯ ಪರಿಷತ್ತಿನ(ಕಸಾಪ) ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಶಾಸಕ ತಮ್ಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಕನ್ನಡ ಭವನಕ್ಕೆ ಹೊಸದಾಗಿ ಆಸನಗಳು, ಪೀಠೋಪಕರಣಗಳ ಅವಶ್ಯಕತೆ ಇದೆ. ಭವನದ ಮೇಲ್ಬಾಗದಲ್ಲಿ ನೂತನ ಗ್ರಂಥಾಲಯ ನಿರ್ಮಾಣ ಮಾಡುವ ಆಸಕ್ತಿ ಇದ್ದು ಅಂದಾಜು ₹ 96 ಲಕ್ಷ ಅನುದಾನದ ಅಗತ್ಯವಿದೆ ಇದನ್ನು ಮನಗಂಡು ಸರ್ಕಾರ ಮತ್ತು ಶಾಸಕರ ನಿಧಿಯಿಂದ ಅನುದಾನ ಬಿಡುಗಡೆ ಮಾಡುವಂತೆ ಕೋರಿದರು.
ಜಿಲ್ಲೆಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದು ನಾಲ್ಕು ದಶಕಗಳಾಗಿವೆ. ಮುಂದಿನ ಬಾರಿ ಇಲ್ಲಿ ರಾಷ್ಟ್ರಮಟ್ಟದ ಸಮ್ಮೇಳನ ಆಯೋಜನೆ ಕುರಿತು ಜಿಲ್ಲೆಯ ಐದು ಶಾಸಕರು ಒಂದಾಗಿ ಮುಖ್ಯಮಂತ್ರಿ ಗಮನಕ್ಕೆ ತರಬೇಕು. ಟೌನ್‍ಕ್ಯಾಂಟೀನ್ ಸಮೀಪ ಹಳೆ ಕನ್ನಡ ಭವನ ಜಾಗದಲ್ಲಿ ನೂತನ ಕಟ್ಟಡ ನಿರ್ಮಿಸಿ ನಗರ ವಾಸಿಗಳಿಗೆ ಗ್ರಂಥಾಲಯ, ಕಸಾಪ ಕಾರ್ಯಕ್ರಮ ಆಯೋಜನೆಗೆ ಅನುಕೂಲ ಮಾಡಿಕೊಡುವಂತೆ ವಿನಂತಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ಪದಾಧಿಕಾರಿಗಳಾದ ಕವಿತಾ ಸತ್ಯನಾರಾಯಣ್, ಬಿಸಲೇಹಳ್ಳಿ ಸೋಮಶೇಖರ್, ಪವನ್, ರೂಪಾನಾಯ್ಕ್, ಪುಷ್ಪಲತಾ, ವೀಣಾ ಮಲ್ಲಿಕಾರ್ಜುನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.