ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಕಡೆ ಮುಖ ಮಾಡದ ಶಿಕ್ಷಕ: ಕಾದು ಕಾದು ಸುಸ್ತಾದ ವಿದ್ಯಾರ್ಥಿಗಳು

ಗ್ರಾಮಸ್ಥರ ಆಕ್ರೋಶ
Last Updated 26 ಅಕ್ಟೋಬರ್ 2021, 17:10 IST
ಅಕ್ಷರ ಗಾತ್ರ

ಕಲ್ಲುಗುಡ್ಡೆ(ಬಾಳೆಹೊನ್ನೂರು): ಭೌತಿಕ ತರಗತಿಗಳು ಆರಂಭಗೊಂಡು ಎರಡು ದಿನ ಕಳೆದರೂ ಶಿಕ್ಷಕರೊಬ್ಬರು, ಶಾಲೆ ಕಡೆಗೆ ಮುಖ ಮಾಡದ ಕಾರಣ ವಿದ್ಯಾರ್ಥಿಗಳು ಕಾದು ಸುಸ್ತಾದ ಘಟನೆ ನಡೆದಿದೆ.

ಕೊಪ್ಪ ತಾಲ್ಲೂಕಿನ ಅತ್ತಿಕೊಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುಗುಡ್ಡೆ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ 18 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಎರಡು ವರ್ಷದಿಂದ ಭೈರಲಿಂಗಪ್ಪ ಅವರೊ ಬ್ಬರೇ ಶಿಕ್ಷಕರಾಗಿ ಏಳೂ ತರಗತಿಗಳಿಗೂ ಪಾಠ ಮಾಡುತ್ತಿದ್ದಾರೆ. ವಾರದಲ್ಲಿ ಮೂರು ನಾಲ್ಕು ದಿನ ಮಾತ್ರ ಶಾಲೆಗೆ ಹಾಜರಾಗಿ ಉಳಿದ ದಿನ ಗೈರು ಹಾಜರಾಗುತ್ತಿದ್ದರು ಎಂದು ಸ್ಥಳೀಯರು ದೂರಿದ್ದಾರೆ.

ಶಾಲೆಗಳು ಆರಂಭಗೊಂಡಿವೆ. ಆದರೆ ಇಲ್ಲಿ ವಿದ್ಯಾರ್ಥಿಗಳು ಎರಡೂ ದಿನ ಶಾಲೆಗೆ ಹಾಜರಾಗಿದ್ದರೂ ಶಿಕ್ಷಕ ಮಾತ್ರ ಬರಲಿಲ್ಲ. ಕಾದು ಸುಸ್ತಾದ ವಿದ್ಯಾರ್ಥಿಗಳು ಮನೆಗೆ ವಾಪಸಾದರು.

‘ಇಲ್ಲಿಗೆ ನಿಯೋಜನೆಗೊಂಡಿರುವ ಶಿಕ್ಷಕರು ಎರಡು ವರ್ಷದಿಂದಲೂ ಸರಿಯಾಗಿ ಶಾಲೆಗೆ ಬರುತ್ತಿರಲಿಲ್ಲ. ಖಾಸಗಿ ಶಾಲೆಗಳಿಗೆ ಕಳುಹಿಸಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ, ಈ ಭಾಗದ ಎಲ್ಲಾ ಮಕ್ಕಳನ್ನೂ ಸರ್ಕಾರಿ ಶಾಲೆಗೆ ಸೇರಿಸಲಾಗಿದೆ. ಈಗ 18 ವಿದ್ಯಾರ್ಥಿಗಳಿದ್ದು. ಇನ್ನೂ ಒಂದನೇ ತರಗತಿಗೆ ಸೇರ್ಪಡೆಗೊಳ್ಳುವವರು ಇಲ್ಲಿ ಇದ್ದಾರೆ. ಆದರೆ ಇಲ್ಲಿಗೆ ನಿಯೋಜನೆಗೊಂಡಿರುವ ಶಿಕ್ಷಕ ನಿತ್ಯ ಪಾನಮತ್ತನಾಗಿ ಶಾಲೆಗೆ ಬರುತ್ತಿದ್ದಾರೆ. ಇದು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿದ್ದು, ಶಿಕ್ಷಣಕ್ಕೆ ಹಿನ್ನಡೆಯಾಗಿದೆ. ಹಲವು ಬಾರಿ ಕೊಪ್ಪದ ಬಿಇಒ ಅವರಿಗೆ ದೂರು ನೀಡಿದರೂ ಅದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಸರ್ಕಾರ ತಕ್ಷಣ ಶಾಲೆಗೆ ಇಬ್ಬರು ಶಿಕ್ಷಕರನ್ನು ನೇಮಿಸಬೇಕು. ಕುಡಿದು ಶಾಲೆಗೆ ಬರುವ ಶಿಕ್ಷಕನನ್ನು ಅಮಾನತು ಮಾಡಬೇಕು ಎಂದು ಕಲ್ಲುಗುಡ್ಡೆಯ ಭರತರಾಜ್ ಒತ್ತಾಯಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಕೊಪ್ಪ ಬಿಇಒ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದೇವೆ. ಮಂಗಳವಾರ ಬೇರೆ ಶಿಕ್ಷಕರನ್ನು ನಿಯೋಜನೆ ಮಾಡುವುದಾಗಿ ತಿಳಿಸಿದ್ದರು. ಆದರೆ ಇದುವರೆಗೂ ಯಾವುದೇ ಶಿಕ್ಷಕರನ್ನು ಇಲ್ಲಿಗೆ ನಿಯೋಜಿಸಿಲ್ಲ. ಈ ಬಗ್ಗೆ ಮತ್ತೆ ಅವರಿಗೆ ಕರೆ ಮಾಡಿದಾಗ ಕರೆ ಸ್ವೀಕರಿಸಲಿಲ್ಲ. ಕೊಪ್ಪ ಬಿಇಒ ಬೇಜವಾಬ್ದಾರಿಯಿಂದಾಗಿ ಇಲ್ಲಿನ ಶೈಕ್ಷಣಿಕ ವ್ಯವಸ್ಥೆ ಹಾಳಾಗಿದೆ. ಕಲ್ಲುಗುಡ್ಡೆ ಸುತ್ತ ಬಹುತೇಕ ಕೂಲಿ ಕಾರ್ಮಿಕರು, ಸಣ್ಣ ರೈತರು ವಾಸವಿದ್ದಾರೆ. ಈ ಸಂದರ್ಭದಲ್ಲಿ ಮಕ್ಕಳನ್ನು ಬೇರೆ ಶಾಲೆಗೆ ಸೇರ್ಪಡೆಗೊಳಿಸಲು ಆಗುತ್ತಿಲ್ಲ. ತಕ್ಷಣ ಶಾಲೆಗೆ ಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಮಣಿಕಂಠನ್ ಕಂದಸ್ವಾಮಿ ಒತ್ತಾಯಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಬಿಇಒ ಅವರಿಗೆ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT