ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ‘ಸ್ಮಾರ್ಟ್‌ ಕ್ಲಾಸ್‌’ಗೆ ಸೌರಶಕ್ತಿ ಆಸರೆ

ಸೆಲ್ಕೋ ಸಂಸ್ಥೆಯ ಸೋಲಾರ್‌ ತಂತ್ರಜ್ಞಾನ ಹೆಜ್ಜೆ
Last Updated 3 ಜೂನ್ 2022, 5:19 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಸೆಲ್ಕೋ ಸೋಲಾರ್‌ ಲೈಟ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯು ದಾನಿಗಳು, ಸಿಎಸ್ಆರ್‌ ನೆರವಿನಲ್ಲಿ ಹಲವು ಶಾಲೆಗಳಲ್ಲಿ ‘ಸ್ಮಾರ್ಟ್‌ ಕ್ಲಾಸ್‌’ ನಿರ್ವಹಣೆಗೆ ಸೌರ ವಿದ್ಯುತ್‌ ಒದಗಿಸಿ, ಪೂರಕ ಸೌಕರ್ಯ ಕಲ್ಪಿಸಿದೆ. ಈ ಡಿಜಿಟಲ್‌ ವೇದಿಕೆಯು ತರಗತಿಗಳಲ್ಲಿ ಬೋಧನೆ, ಕಲಿಕೆಗೆ ರಂಗು ತುಂಬಿದೆ.

ಶಾಲೆಯಲ್ಲಿ ಸೋಲಾರ್‌ ಪ್ಯಾನಲ್‌, ಬ್ಯಾಟರಿ, ಪಠ್ಯ ತಂತ್ರಾಂಶ ಬಾಕ್ಸ್‌, ಟಿ.ವಿ ಅಳವಡಿಸಲಾಗುತ್ತದೆ. ಈ ಹಿಂದೆ ಒಂದು ಶಾಲೆಗೆ ಅಳವಡಿಸಿದಾಗ ವೆಚ್ಚ ₹ 90 ಸಾವಿರ ತಗುಲಿದೆ. ಈಗ ಸ್ಮಾರ್ಟ್‌ ಟಿ.ವಿ (50 ಇಂಚು) ಮೊದಲಾದವುಗಳಿಂದಾಗಿ ಸುಮಾರು ₹ 1.75 ಲಕ್ಷ ವೆಚ್ಚ ತಗುಲುತ್ತದೆ.

ಸಂಸ್ಥೆಯವರು ಶಾಲೆಯೊಂದಿಗೆ ಒಪ್ಪಂದ ಮಾಡಿಕೊಂಡು ಪ್ಯಾಕೇಜ್‌ನಲ್ಲಿ ಸೌಲಭ್ಯ ಕಲ್ಪಿಸುತ್ತಾರೆ. ಐದು ವರ್ಷಗಳವರೆಗೆ ಉಪಕರಣಗಳ ನಿರ್ವಹಣೆ ಹೊಣೆ ನಿಭಾಯಿಸುತ್ತಾರೆ. ಸ್ಮಾರ್ಟ್‌ ಕ್ಲಾಸ್‌ ನಿರ್ವಹಣೆ ಕುರಿತು ಶಿಕ್ಷಕರಿಗೆ ತರಬೇತಿ ನೀಡಲಾಗುತ್ತದೆ.

‘ಇ–ಶಾಲಾ ಪರಿಕಲ್ಪನೆಯಡಿ ಹಾಸನ ಜಿಲ್ಲೆಯೊಂದರಲ್ಲೇ 300ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್‌ ಕ್ಲಾಸ್‌ ನಿರ್ವಹಣೆಗೆ ಸೋಲಾರ್‌ ಪ್ಯಾನಲ್‌ ಸಹಿತ ಪೂರಕ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಾಮೀಣ ಭಾಗದ ಶಾಲೆಗಳಲ್ಲಿ ಹೆಚ್ಚು ಅಳವಡಿಸಲಾಗಿದೆ. ಇದಕ್ಕೆ ವಿವಿಧ ಮೂಲಗಳಿಂದ ನೆರವು ಪಡೆಯಲಾಗಿದೆ. ಪಠ್ಯ ತಂತ್ರಾಂಶವನ್ನು ಸಂಬಂಧಪಟ್ಟ ಇಲಾಖೆ ಅಥವಾ ಇಲಾಖೆ ಗುರುತಿಸಿದ ಏಜೆನ್ಸಿಯಿಂದ ಪಡೆದುಕೊಳ್ಳುತ್ತೇವೆ. ಡಿಜಿಟಲ್‌ ಸೌಲಭ್ಯವು ಶಿಕ್ಷಣ ವ್ಯವಸ್ಥೆ ನಿರ್ವಹಣೆ ಸುಧಾರಣೆಗೆ ಅನುಕೂಲ ಕಲ್ಪಿಸಿದೆ’ ಎಂದು ಸೆಲ್ಕೋ ಸಂಸ್ಥೆಯ ಕ್ಷೇತ್ರ ವ್ಯವಸ್ಥಾಪಕ ಪ್ರಸಾದ್‌ ವಿವರಿಸುತ್ತಾರೆ.

ವಿದ್ಯುತ್‌ ಅಭಾವ, ಕೊರತೆಯಿಂದ ಉಪಕರಣಗಳು ಬಂದ್‌ ಆಗುವ ಸಮಸ್ಯೆ ಇಲ್ಲ. ಸೌರಶಕ್ತಿ ಅಧರಿತ ಬ್ಯಾಟರಿ ವ್ಯವಸ್ಥೆಯು ಸಾಧನಗಳು ಎಲ್ಲ ಸಮಯದಲ್ಲೂ ಕಾರ್ಯನಿರ್ವಹಿಸಲು ಆಸರೆಯಾಗಿದೆ. ಶಿಕ್ಷಕರು, ವಿದ್ಯಾರ್ಥಿಗಳು ಕ್ರಿಯಾಶೀಲವಾಗಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು.

ತರಗತಿಯಲ್ಲಿ ಶಿಕ್ಷಕ ಇಲ್ಲದಿದ್ದರೂ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಬಹುದು. ತಂತ್ರಾಂಶ ಬಾಕ್ಸ್‌ ಮೂಲಕ ಟಿ.ವಿ ಪರದೆಯಲ್ಲಿ ಪಾಠವನ್ನು ಬಿತ್ತರಿಸಿದರೆ ವಿದ್ಯಾರ್ಥಿಗಳು ವೀಕ್ಷಿಸುತ್ತಾರೆ.

‘ಸ್ಮಾರ್ಟ್‌ ಕ್ಲಾಸ್‌ನಲ್ಲಿ ಟಿ.ವಿಯಲ್ಲಿ ವೀಕ್ಷಿಸಿದ ಅಂಶಗಳನ್ನು ಶಿಕ್ಷಕರು ವಿವರಿಸುತ್ತಾರೆ. ಎರಡು ಬಾರಿ ಪಾಠ ಓದಿದಂತಾಗುತ್ತದೆ. ವಿಷಯಗಳು ಚೆನ್ನಾಗಿ ಮನದಟ್ಟು ಮಾಡಿಕೊಳ್ಳಲು ಅನುಕೂಲವಾಗಿದೆ’ ಎಂದು ಹಾಸನ ಜಿಲ್ಲೆಯ ಬಂದೂರು ಗ್ರಾಮದ ಸರ್ಕಾರಿ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಹರ್ಷಿತಾ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಸಂಸ್ಥೆಯ ಮಾಹಿತಿಗಾಗಿ www.selco-india.com ವೆಬ್‌ಸೈಟ್‌ ಸಂಪರ್ಕಿಸಬಹುದು.

‘ಸ್ಮಾರ್ಟ್‌ ಕ್ಲಾಸ್‌; ದಾಖಲಾತಿ ಏರಿಕೆ’
‘ಶಾಲೆಯಲ್ಲಿ ಸ್ಮಾರ್ಟ್‌ ಕ್ಲಾಸ್‌ ಅಳವಡಿಸಿ ಎರಡು ವರ್ಷವಾಗಿದೆ. ಶಾಲೆಯ ಹಿರಿಯ ವಿದ್ಯಾರ್ಥಿಯೊಬ್ಬರು ಆರ್ಥಿಕ ಸಹಾಯ ನೀಡಿದ್ದಾರೆ. ಸ್ಮಾರ್ಟ್‌ ಕ್ಲಾಸ್‌ ಸೌಕರ್ಯವು ವಿದ್ಯಾರ್ಥಿಗಳಲ್ಲಿ ಚೈತನ್ಯ ತುಂಬಿದೆ. ಸ್ವತಃ ವಿದ್ಯಾರ್ಥಿಗಳೇ ಟಿ.ವಿ ಚಾಲೂ ಮಾಡಿಕೊಂಡು ಪಾಠಗಳನ್ನು ವೀಕ್ಷಿಸುತ್ತಾರೆ. ಈ ಸೌಲಭ್ಯ ಕಲ್ಪಿಸಿದ ನಂತರ ಹೆಚ್ಚು ಮಕ್ಕಳು ದಾಖಲಾಗಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ 80 ಇದ್ದದ್ದು, ಈಗ 130ಕ್ಕೆ ಏರಿದೆ’ ಎಂದು ಹಾಸನ ಜಿಲ್ಲೆ ಬಂದೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಸ್‌.ಪಿ. ಹರೀಶ್‌ ತಿಳಿಸಿದರು.

ಸೌರಶಕ್ತಿ ತಂತ್ರಜ್ಞಾನ ತರಬೇತಿ
ಹಾಸನದ ಡಾನ್‌ಬಾಸ್ಕೊ ತಾಂತ್ರಿಕ ಸಂಸ್ಥೆಯಲ್ಲಿ ಸೌರಶಕ್ತಿ ತಂತ್ರಜ್ಞಾನ ತರಬೇತಿ ನೀಡಲಾಗುತ್ತದೆ. ಸೆಲ್ಕೋ ಪ್ರತಿಷ್ಠಾನವು ಈ ಕಾಯಕಕ್ಕೆ ಕೈಜೋಡಿಸಿದೆ. ತಾಂತ್ರಿಕ ಸಂಸ್ಥೆಯಲ್ಲಿ ಪ್ರಯೋಗಾಲಯ, ‘ಸೋಲಾರ್‌ ಪ್ಲಾಂಟ್‌’ ಸಹಿತ ಎಲ್ಲವನ್ನು ಸಜ್ಜುಗೊಳಿಸಲಾಗಿದೆ. ಐಟಿಐನ ಎಲೆಕ್ಟ್ರಿಕಲ್‌, ಎಲೆಕ್ಟ್ರಾನಿಕ್ಸ್‌ ಟ್ರೇಡ್‌ನವರಿಗೆ ಒಂದು ತಿಂಗಳು ಈ ತರಬೇತಿ ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT