ಭಾನುವಾರ, ಅಕ್ಟೋಬರ್ 2, 2022
18 °C
ಅರೆ ಮಲೆನಾಡಿನಲ್ಲಿ ಮಿಶ್ರ ಬೆಳೆಯಲ್ಲಿ ಚೆರಿಯನ್ ಯಶಸ್ಸು

ಅಡಿಕೆ ನಡುವೆ ಸುವರ್ಣಗಡ್ಡೆ: ಸಿಹಿ ನೀಡಿದ ಜೇನು

ಹಾ.ಮ. ರಾಜಶೇಖರಯ್ಯ Updated:

ಅಕ್ಷರ ಗಾತ್ರ : | |

Prajavani

ತರೀಕೆರೆ: ಸಮಗ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡಿರುವ ರಂಗೇನಹಳ್ಳಿಯ ಚೆರಿಯನ್‌, ಅಡಿಕೆ– ತೆಂಗಿನ ತೋಟದಲ್ಲಿ ಸುವರ್ಣಗೆಡ್ಡೆ ಬೆಳೆದು ಯಶಸ್ಸು ಕಂಡಿದ್ದಾರೆ.

ರಂಗೇನಹಳ್ಳಿ ಗ್ರಾಮದ ಚೆರಿಯನ್ ತಮ್ಮ 4 ಎಕರೆ ಜಮೀನಿನಲ್ಲಿ ಅಡಿಕೆ ಗಿಡಗಳ ಮಧ್ಯೆ 4x4 ಅಡಿ ಅಂತರದಲ್ಲಿ ಸುವರ್ಣಗೆಡ್ಡೆ ನಾಟಿ ಮಾಡಿದ್ದಾರೆ. 6 ರಿಂದ 9 ತಿಂಗಳ ಅವಧಿಯಲ್ಲಿ ಒಂದು ಗೆಡ್ಡೆಯು 8 ಕೆ.ಜಿ.ವರೆಗೆ ತೊಗುತ್ತದೆ. 1 ಎಕರೆಗೆ 6ರಿಂದ 8ಟನ್‌ ವರೆಗೆ ಇಳುವರಿ ಬರುತ್ತದೆ. ಇದರಿಂದ ವಾರ್ಷಿಕ ₹60ರಿಂದ ₹80 ಸಾವಿರದ ವರೆಗೆ ಆದಾಯ ಗಳಿಸುತ್ತಿದ್ದಾರೆ. ‘ಸುವರ್ಣ ಗೆಡ್ಡೆಗೆ ಕರ್ನಾಟಕ ಮಾತ್ರವಲ್ಲದೇ ಕೇರಳ, ದುಬೈ ರಾಜ್ಯಗಳಿಂದ ಬೇಡಿಕೆ ಇದೆ’ ಎನ್ನುತ್ತಾರೆ ಚೆರಿಯನ್.

ಇದರ ಜೊತೆಗೆ ವಾರ್ಷಿಕ ಸುಮಾರು 150 ಕ್ವಿಂಟಲ್ ಹಸಿ ಅಡಿಕೆ ಫಸಲು ಸಿಗುತ್ತದೆ ಎನ್ನುತ್ತಾರೆ ಅವರು.

ತೆಂಗಿನ ಮರದಿಂದಲು ವರ್ಷವೊಂದಕ್ಕೆ ₹50 ಸಾವಿರ ಆದಾಯ ಗಳಿಸುತ್ತಿದ್ದಾರೆ. ಸುವರ್ಣಗೆಡ್ಡೆಗೆ ಅನುಕೂಲವಾಗುವಂತೆ ತುಂತುರು ನೀರಾವರಿ ಪದ್ದತಿಯನ್ನು ಅಳವಡಿಸಿಕೊಂಡಿದ್ದಾರೆ. ಇದರ ಜೊತೆಗೆ ಹಲಸು, ಸಪೋಟ, ಲವಂಗ, ಮಾವು ಮರಗಳಿವೆ.

ಸಿಹಿಯಾದ ಜೇನು ಕೃಷಿ: ಇದರ ಜೊತೆ ಸುಮಾರು 20 ವರ್ಷದಿಂದ ಜೇನು ಕೃಷಿಯನ್ನೂ ಮಾಡುತ್ತಿದ್ದಾರೆ. ಅವರಿಗೆ ಬೆನ್ನಲುಬಾಗಿ ಪತ್ನಿ ಎಲಿಜಬೆತ್ ಮತ್ತು ಪುತ್ರ ಸಜು ನಿಂತಿದ್ದಾರೆ. 10 ಜೇನು ಪಟ್ಟಿಗೆಯಲ್ಲಿ ತುಡುವೆ, ನುಸರಿ, ತಳಿ ಜೇನು ನೊಣಗಳಿವೆ. ನುಸರಿ ಜೇನು ತುಪ್ಪ ವರ್ಷಕ್ಕೆಒಂದು ಪಟ್ಟಿಗೆಯಲ್ಲಿ 500 ಗ್ರಾಂ ಪಡೆದರೆ, ಮಾರುಕಟ್ಟೆಯಲ್ಲಿ ಕಿಲೊ ಒಂದಕ್ಕೆ ₹2,500ರಿಂದ ₹3 ಸಾವಿರದವರೆಗೆ ಧಾರಣೆಯಿದೆ. 

ನುಸರಿ ತುಪ್ಪಕ್ಕೆ ಸ್ಥಳೀಯವಾಗಿ ಉತ್ತಮ ಬೇಡಿಕೆಯಿದೆ. ಬೇಡಿಕೆ ತಕ್ಕಂತೆ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಜೇನು ಸಾಕಣಿಕೆ ಮಾಡಿ, ತಮ್ಮದೆ ಬ್ರಾಂಡ್ ಮೂಲಕ ಮಾರುಕಟ್ಟೆಗೆ ಪರಿಚಯಿಸುವ ಯೋಜನೆ ಇದೆ ಎನ್ನುತ್ತಾರೆ ಅವರು. ಹತ್ತನೆ ತರಗತಿ ವರೆಗೆ ಓದಿದ ಅವರ, ಕೃಷಿ ಅನುಭವ ಅಪಾರ.

ಜೇನು ಸಾಕಾಣಿಕೆಯಿಂದ ‍ಪರಾಗಸ್ಪರ್ಶ ಹೆಚ್ಚುತ್ತದೆ. ಇದರಿಂದ ಅಧಿಕ ಇಳುವರಿ ಪಡೆಯಬಹುದು. ಜೇನು, ದುಂಬಿಗಳಿಗೆ ಮಕರಂದಕ್ಕೆ ಸಹಕಾರಿಯಾಗುತ್ತದೆ. ಜೂನ್ ತಿಂಗಳಿನಿಂದ ಆಗಸ್ಟ್ ವರೆಗೆ ಮಾತ್ರ ಜೇನು ನೋಣಗಳಿಗೆ ಕೃತಕ ಆಹಾರ ಪೂರೈಕೆ ಮಾಡಬೇಕಾಗುತ್ತದೆ ಎನ್ನುತ್ತಾರೆ ಅವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು