ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು | ಮೂರು ಹೊಸ ಕ್ರಿಮಿನಲ್ ಕಾನೂನುಗಳು ಜುಲೈ 1ರಿಂದ ಅನುಷ್ಠಾನ

ಹೊಸ ಕ್ರಿಮಿನಲ್‌ ಕಾನೂನುಗಳು ಕುರಿತು ವಿಚಾರ ಸಂಕಿರಣ
Published 28 ಮೇ 2024, 14:44 IST
Last Updated 28 ಮೇ 2024, 14:44 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಬ್ರಿಟಿಷರ ಕಾಲದಲ್ಲಿ ಜಾರಿಗೆ ತಂದಿದ್ದ ಅಪರಾಧ ಕಾಯ್ದೆಗಳನ್ನು ಮಾರ್ಪಡಿಸಿ ಆಧುನಿಕತೆಗೆ ತಕ್ಕಂತೆ ಕೇಂದ್ರ ಸರ್ಕಾರ ಮೂರು ಕ್ರಿಮಿನಲ್‌ ಕಾನೂನುಗಳನ್ನು ರೂಪಿಸಿದೆ. ಜುಲೈ 1ರಿಂದ ಅವುಗಳು ದೇಶದಾದ್ಯಂತ ಜಾರಿಗೆ ಬರಲಿವೆ’ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ ಹೇಳಿದರು.

ಜಿಲ್ಲಾ ಪೊಲೀಸ್ ಇಲಾಖೆ ಏರ್ಪಡಿಸಿದ್ದ ‘ಹೊಸ ಕ್ರಿಮಿನಲ್‌ ಕಾನೂನುಗಳು’ ಹಾಗೂ ‘ಮಾಧ್ಯಮ ಮತ್ತು ಪೊಲೀಸ್ ಕಾನೂನುಗಳು’ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸೃಷ್ಟಿಯು ಚಲನಶೀಲವಾದುದು. ಅದರಂತೆ ನಾಗರಿಕ ಸಮಾಜದಲ್ಲಿ ಕಾಲಕ್ಕೆ ತಕ್ಕಂತೆ ಕಾನೂನುಗಳ ಬದಲಾವಣೆ ಅಗತ್ಯ. ಸಮಾಜದಲ್ಲಿ ಮಹಿಳೆಯರು, ನೊಂದವರು, ಅಸಹಾಯಕರಿಗೆ ತ್ವರಿತ ನ್ಯಾಯ ಕಲ್ಪಿಸಿ ಹಕ್ಕುಗಳ ರಕ್ಷಣೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಕಾನೂನುಗಳನ್ನು ಮಾರ್ಪಡಿಸಿ ಭಾರತೀಯ ದಂಡ ಸಂಹಿತೆ (ಐಪಿಸಿ) ಜಾಗದಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌), ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌‍ಪಿಸಿ) ಬದಲಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್ಎಸ್‌) ಹಾಗೂ ಸಾಕ್ಷ್ಯ ಕಾಯ್ದೆ ಜಾಗದಲ್ಲಿ ಭಾರತೀಯ ಸಾಕ್ಷ್ಯ ಕಾಯ್ದೆ ಅನುಷ್ಠಾನಕ್ಕೆ ಬರಲಿದೆ ಎಂದು ಅವರು ಹೇಳಿದರು.

ಈ ಕಾನೂನುಗಳನ್ನು ಆಧುನಿಕತೆಗೆ ತಕ್ಕಂತೆ ಸರಳೀಕರಣಗೊಳಿಸಿ ಮಾರ್ಪಡಿಸಲಾಗಿದೆ. ಸಂವಿಧಾನದ ಆಶಯದಂತೆ ಕಾರ್ಯನಿರ್ವಹಿಸಲಿವೆ. ಇದರಿಂದ ಜನಸಾಮಾನ್ಯರು, ಪೊಲೀಸರು, ನ್ಯಾಯಾಧಿಕರಣ ಮಾಡುವವರಿಗೆ ಅನುಕೂಲವಾಗಲಿದೆ. ಅದರಂತೆ ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.

ಸರ್ಕಾರಿ ಅಭಿಯೋಜಕಿ ಭಾವನಾ ಅವರು ಹೊಸ ಭಾರತೀಯ ನ್ಯಾಯ ಸಂಹಿತೆ ಕುರಿತು ಮಾತನಾಡಿ, ‘1860ರಲ್ಲಿ ಜಾರಿಗೆ ತಂದಿದ್ದ ಐಪಿಸಿ ಕಾಯ್ದೆಗಳನ್ನು 2023ರಲ್ಲಿ ಮಾರ್ಪಡಿಸಲಾಗಿದೆ. ಹಳೆಯ ಕಾನೂನುಗಳಲ್ಲಿ 511 ಸೆಕ್ಷನ್ ಹಾಗೂ 23 ಅಧ್ಯಾಯಗಳಿದ್ದವು. ಹೊಸ ಕಾನೂನಿನಲ್ಲಿ 358 ಸೆಕ್ಷನ್‌ ಹಾಗೂ 20 ಅಧ್ಯಾಯ ಒಳಗೊಂಡಿದೆ. ಅಧ್ಯಾಯ 5ರ ಸೆಕ್ಷನ್‌ 63ರಿಂದ 99ರವರೆಗೆ ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯ, ವರದಕ್ಷಿಣೆ, ಅಪಹರಣ ಸಂಬಂಧಿತ ಪ್ರಕರಣಗಳು ಹಾಗೂ ದಂಡ ಮತ್ತು ಶಿಕ್ಷೆಯ ಸ್ವರೂಪ, ಪ್ರಮಾಣದಲ್ಲಿ ಬದಲಾವಣೆ ತರಲಾಗಿದೆ. ಗಂಭೀರವಲ್ಲದ ಚಿಕ್ಕ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಜೈಲು ಶಿಕ್ಷೆ ಬದಲಾಗಿ ಮನಃಪರಿವರ್ತನೆ ಹೊಂದಲು ಸಾಮಾಜಿಕ ಸೇವೆ ಮಾಡುವ (ವೃದ್ಧಾಶ್ರಮ, ಅನಾಥಶ್ರಮಗಳಲ್ಲಿ ಕೆಲಸ) ಶಿಕ್ಷೆ ನೀಡಲು ಅವಕಾಶವಿದೆ ಎಂದು ಹೇಳಿದರು.

ಕೊಲೆ ಪ್ರಕರಣ, ಗುಂಪು ಘರ್ಷಣೆ ಬಿಎನ್‌ಎಸ್‌ ಕಾಯ್ದೆಯ 103ರಡಿ ಬರಲಿವೆ. ಸಂಘಟಿತ ಅಪರಾಧ, ಉಗ್ರಗಾಮಿ ಚಟುವಟಿಕೆ, ಅಪಹರಣ, ಭೂಕಬಳಿಕೆ, ಜೂಜು, ಸುಪಾರಿ ನೀಡುವುದು ಹೊಸ ಕಾನೂನಿನ ಅಧ್ಯಾಯ 6ರ ಕಾಯ್ದೆಗಳಲ್ಲಿ ಅಳವಡಿಸಲಾಗಿದೆ. ಪೋಕ್ಸೊ ಕಾಯ್ದೆಗಳಲ್ಲಿ ಮಕ್ಕಳ ಹೆಸರು, ಭಾವಚಿತ್ರ ಬಹಿರಂಗಪಡಿಸುವಂತಿಲ್ಲ. ಇದಕ್ಕೆ ಕೋರ್ಟ್ ಹಾಗೂ ಕುಟುಂಬದವರ ಸಮ್ಮತಿ ಅಗತ್ಯ ಎಂದು ವಿವರಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ಪ್ರಾಸ್ತಾವಿಕವಾಗಿ ಮಾತನಾಡಿ, ‘ದೇಶದಲ್ಲಿ ಮೂರು ಕ್ರಿಮಿನಲ್ ಕಾನೂನುಗಳನ್ನು ಮಾರ್ಪಡಿಸಿ ಜುಲೈ 1ರಿಂದ ಅನುಷ್ಠಾನಕ್ಕೆ ಬರಲಿವೆ. ಕಾಲಕ್ಕೆ ತಕ್ಕಂತೆ ಸೂಕ್ಷ್ಮ ಪ್ರಕರಣಗಳಲ್ಲಿ ಈ ಕಾನೂನುಗಳು ಪೊಲೀಸರು, ಸಾರ್ವಜನಿಕರು, ಅನುಕೂಲವಾಗಲಿದೆ. ಪತ್ರಿಕೆ, ಮುದ್ರಣ ಮಾಧ್ಯಮಗಳ ಪಾತ್ರವೂ ಮುಖ್ಯವಾಗಿದೆ’ ಎಂದು ಹೇಳಿದರು.

ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ರಾಜೇಶ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ಚಲನಶೀಲ ಸಮಾಜದಲ್ಲಿ ಪತ್ರಕರ್ತ ಹೊಸ ವಿಚಾರಗಳಿಗೆ ತೆರೆದುಕೊಳ್ಳಬೇಕು. ತಮ್ಮಲ್ಲಿನ ಜ್ಞಾನದ ಹಸಿವು ನೀಗಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೃಷ್ಣಮೂರ್ತಿ ಪಾಲ್ಗೊಂಡಿದ್ದರು.

ಮಾಧ್ಯಮಗಳು ಸಾರ್ವಜನಿಕ ಹಿತಾಸಕ್ತಿ ಹೊಂದಿರಬೇಕು ಮಾಧ್ಯಮ ವರದಿಗಳು ವಸ್ತುನಿಷ್ಠವಾಗಿರಬೇಕು. ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವ ಮೊದಲೇ ಅಂತಿಮ ಆದೇಶ ನಿರ್ಧರಿಸುವಂತಾಗಬಾರದು. ಪ್ರಕರಣದ ತನಿಖೆ ನಡೆಯುವಾಗ ಪೊಲೀಸರು ಯಾವುದೇ ವಿಷಯವನ್ನು ಸೋರಿಕೆ ಮಾಡುವಂತಿಲ್ಲ ಎಂದು ಸರ್ಕಾರಿ ಅಭಿಯೋಜಕ ರಾಘವೇಂದ್ರ ರಾಯ್ಕರ್ ಹೇಳಿದರು. ಸಂವಿಧಾನ 19(ಎ) ವಿಧಿಯಲ್ಲಿ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ. ಮಾಧ್ಯಮಗಳು ಸಾರ್ವಜನಿಕ ಹಿತಾಸಕ್ತಿ ಹೊಂದಿರಬೇಕು ಮಾನಹಾನಿಗೆ ಕಾರಣವಾಗಬಾರದು. ಹೊಸ ಅಪರಾಧ ಕಾನೂನುಗಳು ನ್ಯಾಯಾಧೀಕರಣ ಹಾಗೂ ಪೊಲೀಸ್ ವ್ಯವಸ್ಥೆ ಸರಳವಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಅನುಷ್ಠಾನ 1872ರಲ್ಲಿ ಜಾರಿಗೆ ತಂದಿದ್ದ ಸಿಆರ್‌ಪಿಸಿ ಕಾನೂನಿಗೆ ಬದಲಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಅನುಷ್ಠಾನಗೊಳ್ಳಲಿದೆ. ಇದರಲ್ಲಿ 531 ಹೆಚ್ಚುವರಿ ಸೆಕ್ಷನ್‌ಗಳಿದ್ದು 9 ಸೆಕ್ಷನ್‌ಗಳನ್ನು ರದ್ದುಪಡಿಸಿ ಹೊಸದಾಗಿ 9 ಕಾಯ್ದೆ ಸೇರಿಸಲಾಗಿದೆ. 107 ಸೆಕ್ಷನ್‌ಗಳಲ್ಲಿ ಶಿಕ್ಷೆಯ ಪ್ರಮಾಣ ಸ್ವರೂಪ ಬದಲಾಯಿಸಲಾಗಿದೆ. ಪ್ರಕರಣದ ತನಿಖೆ ಜಾರ್ಜ್ ಶೀಟ್ ಸಲ್ಲಿಕೆ ಇತ್ಯರ್ಥಕ್ಕೆ ಕಾಲಮಿತಿ ಇದೆ. ಗಂಭೀರ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳನ್ನು ಕೋರ್ಟ್‌ಗೆ ಕರೆತರುವಾಗ ಕಡ್ಡಾಯವಾಗಿ ಕೈ ಕೋಳವನ್ನು ಹಾಕಬೇಕು ಎಂಬ ನಿಯಮ ಇದೆ. ಸ್ಥಳ ಮಹಜರು ಅಥವಾ ಸಾಕ್ಷ್ಯಾಧಾರಗಳ ಹೇಳಿಕೆ ಪಡೆಯುವಾಗ ಆಡಿಯೊ ವಿಡಿಯೊ ಚಿತ್ರೀಕರಣ ಮಾಡಬೇಕು. ಸೈಬರ್ ಅಪರಾಧಗಳು ನಡೆದಾಗ ಮೋಸಕ್ಕೆ ಒಳಗಾದ ವ್ಯಾಪ್ತಿಯಲ್ಲಿ ದೂರು ನೀಡಬಹುದು ಎಂದು ಕಿರಿಯ ಕಾನೂನು ಅಧಿಕಾರಿ ಬಿನು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT