ಭಾನುವಾರ, ಜುಲೈ 25, 2021
22 °C
ಅಂತ್ಯಕ್ರಿಯೆಗೆ ಜನರ ಪರದಾಟ, ಸಿಗದ ಸರ್ಕಾರಿ ಭೂಮಿ

ಚಿತ್ರದುರ್ಗ | 609 ಗ್ರಾಮಗಳಲ್ಲಿ ಇಲ್ಲ ಸಾರ್ವಜನಿಕ ಸ್ಮಶಾನ

ಜಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಮರಣ ಹೊಂದಿದ ವ್ಯಕ್ತಿಗೆ ಗೌರವಪೂರ್ವಕವಾಗಿ ವಿದಾಯ ಹೇಳಲು ಕೋಟೆನಾಡಿನಲ್ಲಿ ಜಾಗ ಹುಡುಕುವಂತಾಗಿದೆ. ಜಿಲ್ಲೆಯ 1,245 ಗ್ರಾಮಗಳ ಪೈಕಿ 609 ಹಳ್ಳಿಗಳಲ್ಲಿ ಸಾರ್ವಜನಿಕ ಸ್ಮಶಾನವೇ ಇಲ್ಲ.

ಪ್ರತಿ ಹಳ್ಳಿಗೂ ಸ್ಮಶಾನ ಒದಗಿಸುವುದು ಸರ್ಕಾರದ ಸಂಕಲ್ಪ. ಈ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಪ್ರಯತ್ನ ನಡೆಯುತ್ತಿದೆ. ಆದರೆ, ಅರ್ಧದಷ್ಟು ಹಳ್ಳಿಗಳಿಗೆ ಇನ್ನೂ ರುದ್ರಭೂಮಿ ಸಿಕ್ಕಿಲ್ಲ. ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಸಚಿವ ಆರ್.ಅಶೋಕ್‌ ಅವರೇ ಈ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಕುಟುಂಬದ ಸದಸ್ಯರು ಮರಣ ಹೊಂದಿದಾಗ ಸಂಬಂಧಿಕರು ಸೇರಿ ಎಲ್ಲರೂ ದುಃಖದಲ್ಲಿರುತ್ತಾರೆ. ಇಂತಹ ಸಂದರ್ಭದಲ್ಲಿ ಅಂತ್ಯಕ್ರಿಯೆ ಎಲ್ಲಿ ಮಾಡಬೇಕು ಎಂಬುದು ಬಹುತೇಕ ಗ್ರಾಮಸ್ಥರನ್ನು ಚಿಂತೆಗೀಡು ಮಾಡುತ್ತಿದೆ. ಕೃಷಿ ಭೂಮಿ ಹೊಂದಿದವರು ತಮ್ಮದೇ ಜಮೀನಿನಲ್ಲಿ ಅಂತ್ಯಕ್ರಿಯೆ ಮುಗಿಸುತ್ತಾರೆ. ತುಂಡು ಭೂಮಿಯನ್ನು ಹೊಂದಿಲ್ಲದೇ ಇರುವವರು ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ಬದಿ, ಕೆರೆ ಅಂಗಳ, ಗೋಮಾಳ ಸೇರಿ ನಿರ್ಜನ ಪ್ರದೇಶದಲ್ಲಿ ಅಂತ್ಯಕ್ರಿಯೆ ನೆರವೇರಿಸುತ್ತಿದ್ದಾರೆ.

ಹೊಸದುರ್ಗ ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಸಾರ್ವಜನಿಕ ಸ್ಮಶಾನಗಳಿಲ್ಲ. 357 ಗ್ರಾಮಗಳಲ್ಲಿ 310 ಗ್ರಾಮಗಳಿಗೆ ಇನ್ನೂ ಸ್ಮಶಾನ ನಿರ್ಮಾಣ ಮಾಡುವುದು ಬಾಕಿ ಇದೆ. 85 ಗ್ರಾಮಗಳಿಗೆ ಸ್ಮಶಾನ ಒದಗಿಸುವ ಪ್ರಸ್ತಾವ ಜಿಲ್ಲಾಡಳಿತಕ್ಕೆ ಸಲ್ಲಿಕೆಯಾಗಿದೆ. ಸರ್ಕಾರಿ ಭೂಮಿ ಕೊರತೆ, ನಿಯಮಾವಳಿ ಪಾಲನೆ ಸೇರಿ ಹಲವು ತೊಡಕುಗಳು ಎದುರಾಗಿವೆ.

‘ಸ್ಮಶಾನಕ್ಕೆ ಅಗತ್ಯವಿರುವ ಸರ್ಕಾರಿ ಜಮೀನು ಕೊರತೆ ಇದೆ. ಖಾಸಗಿ ಭೂಮಿ ಖರೀದಿಸಿ ಸ್ಮಶಾನ ನಿರ್ಮಿಸಬೇಕಿದೆ. ಮಾರ್ಗಸೂಚಿ ಬೆಲೆಯ ಮೂರುಪಟ್ಟು ಬೆಲೆ ನೀಡಿ ಖುಷ್ಕಿ ಜಮೀನು ಖರೀದಿಸಲು ಅವಕಾಶವಿದೆ. ಆದರೆ, ಗ್ರಾಮಕ್ಕೆ ಸಮೀಪದಲ್ಲಿ ಭೂಮಿ ಸಿಗುತ್ತಿಲ್ಲ. ಜಮೀನು ಸಿಕ್ಕರೂ ರಸ್ತೆ ಸಮಸ್ಯೆ ಇದೆ’ ಎಂದು ಉಪವಿಭಾಗಾಧಿಕಾರಿ ವಿ.ಪ್ರಸನ್ನ ತಿಳಿಸಿದರು.

ಸ್ಮಶಾನ ಕೊರತೆ ಗ್ರಾಮೀಣ ಪ್ರದೇಶದಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಸ್ಮಶಾನ ಮಂಜೂರು ಮಾಡುವಂತೆ ಹಲವು ಗ್ರಾಮಗಳಿಂದ ಬೇಡಿಕೆ ಬರುತ್ತಿದೆ. ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು ತಾಲ್ಲೂಕಿನ ಹಲವು ಹಳ್ಳಿಗಳ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಕೂಡ ನಡೆಸಿದ್ದಾರೆ. ಇವುಗಳಲ್ಲಿ ಕೆಲವು ಗ್ರಾಮಗಳಿಗೆ ಮಾತ್ರ ರುದ್ರಭೂಮಿ ಸಿಕ್ಕಿದೆ.

ಹಲವು ಹಳ್ಳಿಗಳಲ್ಲಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ಸಮುದಾಯ ಸಮಸ್ಯೆಗೆ ಸಿಲುಕಿದೆ. ಗ್ರಾಮೀಣ ಪ್ರದೇಶದ ಸ್ಮಶಾನಗಳು ಧರ್ಮ ಹಾಗೂ ಜಾತಿ ಆಧಾರಿತವಾಗಿವೆ. ಇಲ್ಲಿ ಅನ್ಯ ಜಾತಿಯ ಜನರ ಅಂತ್ಯಕ್ರಿಯೆಗೆ ಅವಕಾಶವಿಲ್ಲ. ಸರ್ಕಾರವೇ ನಿರ್ಮಿಸಿದ ಸ್ಮಶಾನಗಳು ಸಾರ್ವಜನಿಕರಿಗೆ ಮುಕ್ತವಾಗಿಲ್ಲ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಹಲವು ದೂರುಗಳು ಬಂದಿವೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು