ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ಸಿನಿಮೀಯ ಶೈಲಿಯಲ್ಲಿ ದರೋಡೆಗೆ ಯತ್ನ

Published 9 ಜುಲೈ 2023, 15:55 IST
Last Updated 9 ಜುಲೈ 2023, 15:55 IST
ಅಕ್ಷರ ಗಾತ್ರ

ಚಿತ್ರದುರ್ಗ: ಇಲ್ಲಿನ ಬ್ಯಾಂಕ್ ಕಾಲೊನಿಯಲ್ಲಿರುವ ಹೋಟೆಲ್‌ ಉದ್ಯಮಿ ನಜೀರ್ ಅಹ್ಮದ್‌ ಅವರ ಮನೆಗೆ ನುಗ್ಗಿ ₹ 50 ಲಕ್ಷ ಹಾಗೂ 120 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ ದುಷ್ಕರ್ಮಿಗಳನ್ನು ಪೊಲೀಸರು ಬೆನ್ನಟ್ಟಿ ಬಂಧಿಸಿದ್ದಾರೆ. ಒಬ್ಬ ಆರೋಪಿ ಸೆರೆಯಾಗಿದ್ದು, ಇಬ್ಬರು ತಪ್ಪಿಸಿಕೊಂಡಿದ್ದಾರೆ.

ಬಂಧಿತನನ್ನು ಶಾಹಿದ್‌ ಎಂದು ಗುರುತಿಸಲಾಗಿದೆ. ಮಾದಕವಸ್ತು ಸೇವಿಸಿದ ಅಮಲಿನಲ್ಲಿರುವ ಆರೋಪಿಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ದರೋಡೆ ಮಾಡಲೆತ್ನಿಸಿದ ಹಣ ಹಾಗೂ ಚಿನ್ನಾಭರಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

‘ಶನಿವಾರ ಬೆಳಿಗ್ಗೆ 9.20ಕ್ಕೆ ಮನೆಗೆ ನುಗ್ಗಿದ ಮೂವರು ದುಷ್ಕರ್ಮಿಗಳು ಕೈಯಲ್ಲಿ ಮಾರಕಾಸ್ತ್ರ ಹಿಡಿದಿದ್ದರು. ಪಿಸ್ತೂಲ್‌ನಿಂದ ಬೆದರಿಸಿ ಕುಟುಂಬದ ಸದಸ್ಯರನ್ನು ಕೊಠಡಿಯೊಂದರಲ್ಲಿ ಕೂಡಿಹಾಕಿದ್ದರು. ₹ 50 ಲಕ್ಷ ನೀಡುವಂತೆ ಬೆದರಿಸಿದ್ದರು. ₹ 25 ಲಕ್ಷ ಹಣ, ಚಿನ್ನಾಭರಣ ದೋಚಿದ್ದಲ್ಲದೆ, ಪುತ್ರ ಸಮೀರ್‌ ಹಾಗೂ ಅಳಿಯ ಶಹಜಹಾನ್‌ ಅವರನ್ನು ಅಪಹರಿಸಿ ಕರೆದೊಯ್ದಿದ್ದರು’ ಎಂದು ಠಾಣೆಗೆ ನೀಡಿದ ದೂರಿನಲ್ಲಿ ಹೋಟೆಲ್‌ ಉದ್ಯಮಿ ನಜೀರ್ ಅಹ್ಮದ್‌ ತಿಳಿಸಿದ್ದಾರೆ.

ಹಾಡಹಗಲೇ ದರೋಡೆ:

ಬ್ಯಾಂಕ್‌ ಕಾಲೊನಿ ನಿವಾಸಿ ನಜೀರ್ ಅಹ್ಮದ್‌ ಅವರ ಮನೆಗೆ ದುಷ್ಕರ್ಮಿಗಳು ಶನಿವಾರ ಬೆಳಿಗ್ಗೆಯೇ ನುಗ್ಗಿದ್ದಾರೆ. ಮನೆಯಲ್ಲಿದ್ದ ಸಿ.ಸಿ. ಟಿ.ವಿ ಕ್ಯಾಮೆರಾ ಸಂಪರ್ಕ ಕಡಿತಗೊಳಿಸಿ ಹಾರ್ಡ್‌ ಡಿಸ್ಕ್‌ ನಾಶಪಡಿಸಿದ್ದಾರೆ. ಕುಟುಂಬದ 12 ಸದಸ್ಯರ ಕೈಕಾಲುಗಳನ್ನು ಕಟ್ಟಿದ್ದಾರೆ. ನೆರೆಯವರಿಗೆ ವಿಷಯ ತಿಳಿಸದಂತೆ, ಗಲಾಟೆ ಮಾಡದಂತೆ ಬೆದರಿಕೆ ಹಾಕಿದ್ದಾರೆ. ₹ 50 ಲಕ್ಷ ನೀಡದಿದ್ದರೆ ಸಾಮೂಹಿಕವಾಗಿ ಹತ್ಯೆ ಮಾಡುವುದಾಗಿ ಸಿನಿಮೀಯ ಶೈಲಿಯಲ್ಲಿ ಬೆದರಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದರಿಂದ ಭೀತಿಗೆ ಒಳಗಾದ ಕುಟುಂಬ ದೂರವಾಣಿ ಮೂಲಕ ಸ್ನೇಹಿತರನ್ನು ಸಂಪರ್ಕಿಸಿ ಹಣ ಹೊಂದಿಸಿದೆ. ಇಬ್ಬರನ್ನು ಒತ್ತೆಯಾಗಿಟ್ಟುಕೊಂಡು ಕಾರಿನಲ್ಲಿ ಕರೆದೊಯ್ದ ದುಷ್ಕರ್ಮಿಗಳು, ನಗರದ ಸರ್ವೋದಯ ಹೋಟೆಲ್‌ ಸಮೀಪ ₹ 25 ಲಕ್ಷ ಪಡೆದಿದ್ದಾರೆ. ದಾವಣಗೆರೆಯ ಸಂಬಂಧಿಕರ ಮನೆಯಲ್ಲಿ ₹ 25 ಲಕ್ಷ ಪಡೆದು ಚನ್ನಗಿರಿ ಮಾರ್ಗವಾಗಿ ಶನಿವಾರ ರಾತ್ರಿ ಪರಾರಿಯಾಗಲು ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಚೆಕ್‌ಪೋಸ್ಟ್‌ನಲ್ಲಿ ಅನುಮಾನ:

‘ದಾವಣಗೆರೆಯಿಂದ ಚನ್ನಗಿರಿ ಮಾರ್ಗವಾಗಿ ದುಷ್ಕರ್ಮಿಗಳು ಪರಾರಿಯಾಗುತ್ತಿದ್ದಾಗ ಸಂತೇಬೆನ್ನೂರು ಬಳಿಯ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಕಾರು ಪರಿಶೀಲನೆಗೆ ಮುಂದಾಗಿದ್ದಾರೆ. ಕಾರು ನಿಲ್ಲಿಸದೇ ಹೋದಾಗ ಅನುಮಾನಗೊಂಡ ಪೊಲೀಸರು ಬೆನ್ನಟ್ಟಿದ್ದಾರೆ. ಚಿಕ್ಕಬ್ಬಿಗೆರೆ ಮಾರ್ಗವಾಗಿ ತೆರಳುತ್ತಿದ್ದ ದುಷ್ಕರ್ಮಿಗಳು ರಸ್ತೆ ಬಂದ್‌ ಆಗಿದ್ದರಿಂದ ಕಾರು ಇಳಿದು ಓಡಿದ್ದಾರೆ. ಕತ್ತಲಲ್ಲಿ ಒಬ್ಬ ದುಷ್ಕರ್ಮಿ ಸೆರೆ ಸಿಕ್ಕಿದ್ದಾನೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ್‌ ಮಾಹಿತಿ ನೀಡಿದ್ದಾರೆ.

ಒತ್ತೆಯಾಳಾಗಿ ಕಾರಿನಲ್ಲಿದ್ದ ಸಮೀರ್‌ ಹಾಗೂ ಶಹಜಹಾನ್‌ ಅವರನ್ನು ರಕ್ಷಿಸಲಾಗಿದೆ. ಆರೋಪಿ ಸಿಕ್ಕಿಬಿದ್ದ ಬಳಿಕ ನಜೀರ್‌ ಅಹ್ಮದ್‌ ಅವರು ಬಡಾವಣೆ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಐಜಿಪಿ ತ್ಯಾಗರಾಜನ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT