ಬುಧವಾರ, ಜೂನ್ 29, 2022
24 °C
ಧಾರವಾಡ ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ತಳಿ ಬೆಳೆದ ರೈತ ಮೋಹನ್‌

ಚಳ್ಳಕೆರೆ: ಭರವಸೆ ಮೂಡಿಸಿದ ಡಿಎಚ್256 ಶೇಂಗಾ, ರೈತನ ಮುಖದಲ್ಲಿ ಸಂತಸ

ಶಿವಗಂಗಾ ಚಿತ್ತಯ್ಯ Updated:

ಅಕ್ಷರ ಗಾತ್ರ : | |

Prajavani

ರಂಗವ್ವನಹಳ್ಳಿ (ಚಳ್ಳಕೆರೆ): ಧಾರವಾಡ ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಡಿಎಚ್256 ಹೊಸ ತಳಿಯ ಶೇಂಗಾವನ್ನು ಪ್ರಾಯೋಗಿಕವಾಗಿ ಬಿತ್ತನೆ ಮಾಡಿ ಆಶಾದಾಯಕ ಬೆಳೆಯನ್ನು ಬೆಳೆಯುವಲ್ಲಿ ಗ್ರಾಮದ ರೈತ ಆರ್.ಜಿ. ಮೋಹನ್‍ ಯಶಸ್ವಿಯಾಗಿದ್ದಾರೆ.

ಬಬ್ಬೂರು ಕೃಷಿ ಫಾರಂನ ಕೃಷಿ ವಿಜ್ಞಾನಿ ಹರೀಶ್‍ ಅವರ ಮೂಲಕ ಹುಬ್ಬಳಿಯಲ್ಲಿ ಡಿಎಚ್256 ತಳಿ ಶೇಂಗಾವನ್ನು ಖುಷ್ಕಿ ಭೂಮಿಯಲ್ಲಿ ಉತ್ಕೃಷ್ಟವಾಗಿ ಬೆಳೆದ ರೈತರನ್ನು ಸಂಪರ್ಕಿಸಿದ ಮೋಹನ್, ಆ ರೈತರಿಂದಲೇ ಖರೀದಿ ಮಾಡಿ ತಂದ ಬಿತ್ತನೆ ಶೇಂಗಾ ಬೀಜವನ್ನು ದಪ್ಪ, ತೆಳು ಹಾಗೂ ತೀರಾ ತೆಳು ಹೀಗೆ ಮೂರು ಥರದಲ್ಲಿ 3 ಎಕರೆ ನೀರಾವರಿ ಪ್ರದೇಶದಲ್ಲಿ ಬಿತ್ತನೆ ಮಾಡಿ ಪ್ರತಿ ಕೆ.ಜಿ ಬೀಜಕ್ಕೆ ಒಂದು ಚೀಲದಂತೆ 130 ಕೆ.ಜಿ ಬೀಜದಲ್ಲಿ 175 ಚೀಲ ಶೇಂಗಾವನ್ನು ಬೆಳೆದಿದ್ದಾರೆ.

ಆರಂಭದಲ್ಲಿ ತಿಂಗಳ ತನಕ 8 ದಿನಗಳಿಗೊಮ್ಮೆ ಬೆಳೆಗೆ ನೀರು ಕಟ್ಟಬೇಕು. ಹೂಡು ಇಳಿಯುವ ಹಂತದಲ್ಲಿ ಕರಿತೇವ ಆರದ ಹಾಗೆ ನೋಡಿಕೊಂಡು ಪ್ರತಿದಿನವೂ ನೀರು ಕಟ್ಟಬೇಕು. ನಂತರ ಕಾಯಿ ಕಟ್ಟಿ ಒಳಗಿನ ಬೀಜ ಗಟ್ಟಿಯಾಗುವ ಹಂತದಲ್ಲಿ ಗಿಡ ಬಾಡಿದ ಮೇಲೆ ಹೀಗೆ ಹಂತ ಹಂತವಾಗಿ ಬೆಳೆಗೆ ನೀರು ಕಟ್ಟಬೇಕು. ಬಿತ್ತನೆ ಮಾಡಿ 4 ತಿಂಗಳುಗಳ ನಂತರ ಬೆಳೆ ಕಟಾವಿಗೆ ಬರುತ್ತದೆ.

ತೀರಾ ಅಂತರದಲ್ಲಿ ಬಿತ್ತನೆ ಮಾಡಿದ ಬೀಜಗಳು ಹೆಚ್ಚು ಕಾಯಿ ಕಟ್ಟುತ್ತವೆ. ಏನಿಲ್ಲ ಅಂದ್ರೂ ಗಿಡಕ್ಕೆ 150 ರಿಂದ 200ರವರೆಗೆ ಕಾಯಿ ಕಟ್ಟುತ್ತವೆ. ಈ ಗುಣಮಟ್ಟದ ಶೇಂಗಾದಲ್ಲಿ ಎಣ್ಣೆ ಅಂಶವು ಹೆಚ್ಚು ಇದೆ. ಕ್ವಿಂಟಲ್‌ಗೆ ₹ 8,500ರಂತೆ ಈಗಾಗಲೇ 30 ಕ್ವಿಂಟಲ್ ಶೇಂಗಾ ಮಾರಾಟ ಮಾಡಲಾಗಿದೆ. ಬೇಸಾಯ, ಬೀಜ–ಗೊಬ್ಬರ ಹಾಗೂ ಕೂಲಿ ಸೇರಿ 3 ಎಕರೆ ಶೇಂಗಾಕ್ಕೆ ₹ 1 ಲಕ್ಷ ಖರ್ಚು ಮಾಡಿ 175 ಚೀಲ ಶೇಂಗಾ ಬೆಳೆದಿದ್ದೇನೆ. ಇದರಿಂದ ಕನಿಷ್ಠ ₹ 3 ಲಕ್ಷ ಆದಾಯ ನಿರೀಕ್ಷಿಸಲಾಗಿದೆ ಎನ್ನುತ್ತಾರೆ ರೈತ ಮೋಹನ್.

ಹಿಂಗಾರು ಹಂಗಾಮಿನ ಆರಂಭದಲ್ಲಿ 2–3 ಬಾರಿ ಇಲಾಖೆಯಿಂದ ಪ್ರಾತ್ಯಕ್ಷಿಕೆ ನಡೆಸಲಾಗಿತ್ತು. ಡಿಎಚ್256 ತಳಿ ಶೇಂಗಾ ಉತ್ತಮ ನಿರ್ವಹಣೆ ಮಾಡಿದ್ದರಿಂದ ಆಶಾದಾಯಕ ಬೆಳೆ ಬಂದಿದೆ. ಸಾಮಾನ್ಯ ಶೇಂಗಾ ತಳಿಗಿಂತ ಈ ಹೊಸ ತಳಿ ಗುಣಮಟ್ಟ ಹೊಂದಿದೆ. ಪ್ರತಿ ಗಿಡಕ್ಕೆ 100ರಿಂದ 150ರವರೆಗೆ ಕಾಯಿ ಕಟ್ಟುತ್ತದೆ. ಆಸಕ್ತ ರೈತರು ಸ್ಥಳೀಯವಾಗಿ ಬೆಳೆದಿರುವ ಡಿಎಚ್256 ತಳಿಯನ್ನು ಖರೀದಿಸಿ ಮುಂಗಾರಿನಲ್ಲಿ ಬಿತ್ತನೆ ಮಾಡುವ ಮೂಲಕ ಉತ್ತಮ ಆದಾಯ ಪಡೆಯಬಹುದು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಮೋಹನ್‍ಕುಮಾರ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು