ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆರೆಹೊಸಹಳ್ಳಿ ರೈತನಿಗೆ ಸಿಹಿಯಾದ ಹಾಗಲಕಾಯಿ

Published 12 ಜೂನ್ 2024, 7:03 IST
Last Updated 12 ಜೂನ್ 2024, 7:03 IST
ಅಕ್ಷರ ಗಾತ್ರ

ಶ್ರೀರಾಂಪುರ: ಒಂದೇ ರೀತಿಯ ತರಕಾರಿ ಬೆಳೆದು ನಷ್ಟ ಅನುಭವಿಸುವುದಕ್ಕಿಂತ ಹವಾಮಾನಕ್ಕನುಗುಣವಾಗಿ ವಿವಿಧ ರೀತಿಯ ತರಕಾರಿ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸ್ವಾವಲಂಬಿಯಾಗಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಕೆರೆಹೊಸಹಳ್ಳಿ ಗ್ರಾಮದ ರೈತ ಎನ್.ಜಿ.ದೇವರಾಜ್.

ಒಂದು ಎಕರೆಯಲ್ಲಿ ತೆಂಗು ಮತ್ತು ಅಡಕೆ ತೋಟದಲ್ಲಿ ಅಂತರಬೆಳೆಯಾಗಿ ಬೆಳೆದಿರುವ ಹಾಗಲಕಾಯಿ ಅವರ ಕೈಹಿಡಿದಿದೆ. 

ಮಲ್ಚಿಂಗ್ ಪೇಪರ್ ಹಾಕಿ, 6x4 ಅಡಿ ಅಂತರದಲ್ಲಿ ಸುಮಾರು 1,250 ಸಸಿ ನಾಟಿ ಮಾಡಲಾಯಿತು. ನೀರುಣಿಸಿ, ಗೊಬ್ಬರ ಹಾಕಿ, ಒಂದೂವರೆ ತಿಂಗಳವರೆಗೆ ಜೋಪಾನ ಮಾಡಿದ ನಂತರ ಹೂ ಬಿಡಲು ಆರಂಭಿಸುತ್ತದೆ. 15 ದಿನಗಳ ನಂತರ ಕಾಯಿಯನ್ನು ಕಟಾವು ಮಾಡಬಹುದು. ಮಳೆಗಾಲದ ಸಮಯದಲ್ಲಾದರೆ ವಾರಕ್ಕೆ ಎರಡು ಬಾರಿ ಕಟಾವು ಮಾಡಬಹುದು. ಬೇಸಿಗೆ ಸಮಯದಲ್ಲಿ ಇಳುವರಿ ಕಡಿಮೆ ಇರುವ ಕಾರಣ ಆರು ದಿನಗಳಿಗೊಮ್ಮೆ ಕಟಾವು ಮಾಡಬೇಕಾಗುತ್ತದೆ.

ಬೇಸಿಗೆ ಸಮಯದಲ್ಲಿ ಎಕರೆಗೆ ಆರು ದಿನಗಳಿಗೊಮ್ಮೆ 4 ಕ್ವಿಂಟರ್‌ವರೆಗೆ ಹಾಗಲಕಾಯಿ ಸಿಕ್ಕಿದೆ. ಅವರು ಪ್ರತಿ ಕೆ.ಜಿ.ಗೆ ₹40ನಂತೆ ಮಾರಾಟ ಮಾಡಿದ್ದಾರೆ. ಮಳೆಗಾಲದಲ್ಲಿ ವಾರಕ್ಕೆ ಎರಡು ಬಾರಿ 7–8 ಕ್ವಿಂಟಲ್ ಕಟಾವು ಮಾಡಬಹುದು. 

ಔಷಧಿ ಸಿಂಪಡಣೆ: ಪ್ರತಿ ಬೆಳೆಗೂ ಬಂದಂತೆ ಇದಕ್ಕೂ ರೋಗ ಬರುತ್ತದೆ. ಚುಕ್ಕಿ ರೋಗ ಹಾಗೂ ರೋಗ ಹರಡುವುದು ಸಹಜ.  ವಾರಕ್ಕೊಮ್ಮೆಯಾದರೂ ಔಷಧಿ ಸಿಂಪಡಿಸಿ ಜೋಪಾನ ಮಾಡಬೇಕು. ಮಲ್ಚಿಂಗ್ ಮಾಡಿ ತೇವಾಂಶ ಆರದಂತೆ ನೋಡಿಕೊಳ್ಳಬಹುದು ಅಲ್ಲದೆ ಹೆಚ್ಚಿನ ಕಳೆಯೂ ಹುಟ್ಟುವುದಿಲ್ಲ. ಇದರಿಂದ ಹೆಚ್ಚಿನ ಇಳುವರಿ ತೆಗೆಯಬಹುದು.

‘ಈ ಹಿಂದೆ ಬೇರೆಯವರ ಜಮೀನನ್ನು ಗುತ್ತಿಗೆ ಪಡೆದು ದಾಳಿಂಬೆ ಬೆಳೆದು ನಷ್ಟ ಅನುಭವಿಸಿದ್ದೆವು. ಸುಮಾರು 3 ವರ್ಷಗಳಿಂದ ಹಾಗಲಕಾಯಿ ಬೆಳೆಯುತ್ತಿದ್ದೇನೆ. ಇದರಿಂದ ಆದಾಯ ಸಿಗುತ್ತಿದೆ. ಅಂತರಬೆಳೆಯಾಗಿ ಬೆಳೆಯುವುದರಿಂದ ತೆಂಗು ಮತ್ತು ಅಡಿಕೆಗೆ ಪ್ರತ್ಯೇಕ ಆರೈಕೆ ಮಾಡುವುದು  ತಪ್ಪುತ್ತದೆ’ ಎಂದು ರೈತ ದೇವರಾಜ್ ಹೇಳುತ್ತಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT