ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲಾಭದಾಯಕವಾದ ಅಂತರ ಬೆಳೆ ವಿಧಾನ

ಕಲ್ಲವ್ವನಾಗತಿ ಹಳ್ಳಿಯ ರೈತ ಜಯರಾಜಪ್ಪ ಸಾಧನೆ
Last Updated 30 ನವೆಂಬರ್ 2022, 6:11 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ಅಡಿಕೆ ತೋಟದಲ್ಲಿ ಅಂತರ ಬೆಳೆಯಾಗಿ ಹೂವು ಹಾಗೂ ತರಕಾರಿ ಬೆಳೆದು ಕೈತುಂಬ ಆದಾಯ ಗಳಿಸುತ್ತಿರುವ ಸಮೀಪದ ಕಲ್ಲವ್ವನಾಗತಿ ಹಳ್ಳಿಯ ರೈತ ಕೆ.ಎಂ. ಜಯರಾಜಪ್ಪ ಇತರ ರೈತರಿಗೆ ಮಾದರಿಯಾಗಿದ್ದಾರೆ.

ತಮ್ಮ ಒಂದು ಎಕರೆ ಜಮೀನಿನಲ್ಲಿ 6 ವರ್ಷಗಳ ಹಿಂದೆ ಕೊಳವೆಬಾವಿ ಕೊರೆಸಿದ್ದು, ಉತ್ತಮ ನೀರು ದೊರೆತಿದೆ. ಒಂದು ಎಕರೆಯಲ್ಲಿ 650 ಅಡಿಕೆ ಸಸಿಗಳನ್ನು ನಾಟಿ ಮಾಡಿದ್ದು, ಆರಂಭದ ವರ್ಷಗಳಲ್ಲಿ ಟೊಮೊಟೊ, ಮೆಣಸಿನಕಾಯಿ, ಬದನೆಕಾಯಿ ಮತ್ತಿತರ ತರಕಾರಿ ಬೆಳೆಯುತ್ತಿದ್ದರು. ಈ ವರ್ಷ ಮಿರಾಬುಲ್‌ ಗುಲಾಬಿ, ಚೆಂಡು ಹೂವು ಹಾಗೂ ಟೊಮೆಟೊವನ್ನು ಅಂತರ ಬೆಳೆಯಾಗಿ ಬೆಳೆದಿದ್ದಾರೆ.

‘ವರ್ಷದ ಹಿಂದೆ ತಮಿಳುನಾಡಿನಿಂದ 650 ಮಿರಾಬುಲ್‌ ಗುಲಾಬಿ ಸಸಿ ತಂದು ನಾಟಿ ಮಾಡಿದ್ದೆವು. ಸಸಿಗಳ ವೆಚ್ಚ, ಬೇಸಾಯ, ನಾಟಿ, ಮೇಲುಗೊಬ್ಬರ, ಕಳೆ, ಔಷಧಕ್ಕಾಗಿ ಈವರೆಗೆ ₹ 1.75 ಲಕ್ಷ ಖರ್ಚು ಮಾಡಿದ್ದೇವೆ. ವರ್ಷದಿಂದ ಹೂವು ಕೊಯ್ಲಿಗೆ ಬಂದಿದ್ದು, ಎರಡು ದಿನಗಳಿಗೊಮ್ಮೆ ಕಟಾವು ಮಾಡುತ್ತಿದ್ದೇವೆ. ಆರಂಭದ ದಿನಗಳಲ್ಲಿ ಎರಡು ದಿನಗಳಿಗೊಮ್ಮೆ 5ರಿಂದ 8 ಕೆ.ಜಿ.ಯಷ್ಟು ಹೂವನ್ನು ಕೊಯ್ಲು ಮಾಡುತ್ತಿದ್ದೆವು. ಈಗ 20ರಿಂದ 25 ಕೆ.ಜಿ.ಯಷ್ಟು ಹೂ ಸಿಗುತ್ತಿದೆ. ಹೂವನ್ನು ದಾವಣಗೆರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹ 80ರಿಂದ ₹ 150ರವೆಗೆ ಮಾರಾಟ ಮಾಡುತ್ತಿದ್ದೇವೆ. ಈವರೆಗೆ ₹ 2 ಲಕ್ಷ ಆದಾಯ ಬಂದಿದ್ದು, ಮುಂದಿನ ತಿಂಗಳು ಇಳುವರಿ ಹೆಚ್ಚಾಗಲಿದೆ. ತಿಂಗಳಿಗೆ ಕನಿಷ್ಠ ₹ 18,000ದಿಂದ ₹ 20,000 ಆದಾಯದ ನಿರೀಕ್ಷೆ ಇದೆ’ ಎಂದು ರೈತ ಜಯರಾಜಪ್ಪ ಮಾಹಿತಿ ನೀಡಿದರು.

ಎಲ್ಲೋ ಗೋಲ್ಡ್‌ ಚೆಂಡು ಹೂ: ಅಡಿಕೆ ಹಾಗೂ ಮಿರಾಬುಲ್‌ ಗುಲಾಬಿಗಳ ನಡುವೆ ಅಂತರ ಬೆಳೆಯಾಗಿ 2,000 ಎಲ್ಲೋ ಗೋಲ್ಡ್‌ ಚೆಂಡು ಹೂವು ಸಸಿ ನಾಟಿ ಮಾಡಲಾಗಿತ್ತು. ಇದುವರೆಗೆ ಸಸಿಗಳು, ಕಳೆ, ಮೇಲುಗೊಬ್ಬರ, ಔಷಧ ಸೇರಿ ₹ 8,000 ಖರ್ಚು ಮಾಡಲಾಗಿದೆ. ಈಗ ಅದೂ ಕೊಯ್ಲಿಗೆ ಸಿದ್ಧವಾಗಿದೆ. ಈಗ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹ 30ರಿಂದ ₹ 40 ದರ ಇದ್ದು, ₹ 15,000 ಆದಾಯ ಬಂದಿದೆ. 15 ದಿನಗಳ ನಂತರ ಚೆಂಡು ಹೂವನ್ನು ತೆಗೆದು, ತರಕಾರಿಯನ್ನು ಬೆಳೆಯುವ ಯೋಜನೆ ಇದೆ’ ಎಂದು ಅವರು ವಿವರಿಸಿದರು.

ಟೊಮೊಟೊ: ಒಂದು ಎಕರೆಯಲ್ಲಿ ಪ್ರದೇಶದಲ್ಲಿ 3,000 ಟೊಮೆಟೊ ಸಸಿಗಳನ್ನು ನಾಟಿ ಮಾಡಲಾಗಿದೆ. ₹ 12,000 ವೆಚ್ಚವಾಗಿದೆ. ಹದಿನೈದು ದಿನಗಳಿಂದ ಕೊಯಿಲು ಮಾಡುತ್ತಿದ್ದೇವೆ. ಈವರೆಗೆ 4 ಕ್ವಿಂಟಲ್‌ ಮಾರಾಟ ಮಾಡಿದ್ದೇವೆ. ಸ್ಥಳೀಯವಾಗಿ ನಡೆಯುವ ಸಂತೆಗಳಿಗೆ ತೆಗೆದುಕೊಂಡು ಹೋಗಿ 20 ಕೆ.ಜಿ. ತೂಕದ ಬಾಕ್ಸ್‌ ಒಂದಕ್ಕೆ ₹ 200ರಂತೆ ಮಾರಾಟ ಮಾಡುತ್ತಿದ್ದೇವೆ. ಇನ್ನೂ ಒಂದೂವರೆ ತಿಂಗಳು ಇಳುವರಿ ಬರುತ್ತದೆ. ₹ 40,000 ಆದಾಯದ ನಿರೀಕ್ಷೆ ಇದೆ’ ಎಂದು ಅವರು ತಿಳಿಸಿದರು.

ಕೋಟ್‌...

ಅಂತರ ಬೆಳೆ ವಿಧಾನ ಅನುಸರಿಸುತ್ತಿರುವ ಕಾರಣ ಬಿಡುವಿಲ್ಲದ ಕೆಲಸ ಇದೆ. ಪತ್ನಿ ಗೀತಾ ಕೃಷಿಗೆ ಕೈಜೋಡಿಸಿರುವುದರಿಂದ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದೇವೆ.
ಜಯರಾಜಪ್ಪ, ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT