ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲಕಚ್ಚಿದ ಬಡವರ ಬಾದಾಮಿ ಶೇಂಗಾ

Last Updated 18 ಅಕ್ಟೋಬರ್ 2021, 4:20 IST
ಅಕ್ಷರ ಗಾತ್ರ

ಚಿತ್ರದುರ್ಗ: ಬಯಲುಸೀಮೆ ರೈತರ ಮುಂಗಾರು ಹಂಗಾಮಿನ ಮಳೆಯಾಶ್ರಿತ ಪ್ರಮುಖ ಬೆಳೆಯಾದ ಶೇಂಗಾ ಪ್ರಸಕ್ತ ವರ್ಷವೂ ಕೈಹಿಡಿಯುತ್ತಿಲ್ಲ. ಅತಿವೃಷ್ಟಿ ಹಾಗೂ ಅನಾವೃಷ್ಟಿಗೆ ಶೇಂಗಾ ಮೇವು ಕೂಡ ಹಾಳಾಗಿದೆ. ಹವಾಮಾನ ವೈಪರೀತ್ಯದಿಂದ ಸೃಷ್ಟಿಯಾದ ಈ ಸಮಸ್ಯೆಗೆ ಬೆಳೆಗಾರ ಕಂಗಾಲಾಗಿದ್ದಾನೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 3.35 ಲಕ್ಷ ಹೆಕ್ಟೇರ್‌ ಕೃಷಿ ಭೂಮಿಯಲ್ಲಿ ಬಿತ್ತನೆಯಾಗಿದೆ. ಇದರಲ್ಲಿ 1.42 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಶೇಂಗಾ ಬೆಳೆ ಇದೆ. ಚಳ್ಳಕೆರೆ ತಾಲ್ಲೂಕು ಒಂದರಲ್ಲೇ 85 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಶೇಂಗಾ ಹಾಕಲಾಗಿದೆ. ಚಿತ್ರದುರ್ಗ, ಮೊಳಕಾಲ್ಮುರು ಹಾಗೂ ಹಿರಿಯೂರು ತಾಲ್ಲೂಕಿನಲ್ಲಿ ಶೇಂಗಾ ಪ್ರಮುಖವಾಗಿ ಬೆಳೆಯಲಾಗುತ್ತಿದೆ.

ಪ್ರಸಕ್ತ ವರ್ಷ ಮಳೆ ನಿರೀಕ್ಷೆ ಮೀರಿ ಸುರಿದಿದೆ. ವಾಡಿಕೆಗಿಂತಲೂ ಹೆಚ್ಚು ಮಳೆಯಾದರೂ ರೈತರಲ್ಲಿ ಖುಷಿ ಇಲ್ಲ. ಶೇಂಗಾ ಬೆಳೆಗೆ ಮಳೆಯಿಂದ ಪ್ರಯೋಜನವಾಗಿಲ್ಲ. ಅಗತ್ಯ ಇರುವಾಗ ಕೈಕೊಟ್ಟ ಮಳೆ, ಬೆಳೆ ಕೈಸೇರುವ ಹಂತದಲ್ಲಿ ಅತಿಯಾಗಿ ಸುರಿದು ಸಂಪೂರ್ಣ ನಾಶ ಮಾಡಿದೆ ಎಂಬ ಕೊರಗು ರೈತರಲ್ಲಿದೆ. ಶೇಂಗಾ ಬಿತ್ತನೆಯ ಸಹವಾಸವೇ ಸಾಕು ಎನ್ನುವಷ್ಟು ರೈತರು ಹೈರಾಣಾಗಿದ್ದಾರೆ.

ಜಿಲ್ಲೆಯಲ್ಲಿ ಪೂರ್ವ ಮುಂಗಾರು ಹಾಗೂ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆ ಸುರಿಯಿತು. ಕಾಲಕಾಲಕ್ಕೆ ಹದ ಮಳೆ ಆಗುತ್ತಿರುವುದನ್ನು ಕಂಡ ರೈತರು ಹರ್ಷಗೊಂಡಿದ್ದರು. ಬಿತ್ತನೆಗೆ ನೆಲವನ್ನು ಹದ ಮಾಡಿ ಇಟ್ಟುಕೊಂಡಿದ್ದರು. ಶೇಂಗಾ ಬಿತ್ತನೆ ಬೀಜದ ಬೆಲೆ ಗಗನಕ್ಕೆ ಏರಿದರೂ ಹಿಂದೇಟು ಹಾಕಲಿಲ್ಲ. ಜಿಲ್ಲೆಯಲ್ಲಿ ಗುರಿಗಿಂತಲೂ ಹೆಚ್ಚು ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಲಾಯಿತು. ಆಗಸ್ಟ್‌ವರೆಗೂ ಉತ್ತಮವಾಗಿದ್ದ ಬೆಳೆಗೆ ಮಳೆ ಕೊರತೆ ಉಂಟಾಗಿ ಒಣಗುವ ಹಂತಕ್ಕೆ ತಲುಪಿತು.

ಸಾಮಾನ್ಯವಾಗಿ ಆಗಸ್ಟ್‌ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಶೇಂಗಾ ಕಾಯಿ ಕಟ್ಟುವ ಹಂತಕ್ಕೆ ಬರುತ್ತದೆ. ಈ ಸಂದರ್ಭದಲ್ಲಿ ಹದ ಮಳೆಯಾದರೆ ಇಳುವರಿ ಚೆನ್ನಾಗಿರುತ್ತದೆ. ಹೀಗೆ ಕಾಯಿ ಕಟ್ಟುವ ಸಂದರ್ಭದಲ್ಲಿಯೇ ಮಳೆ ಸಂಪೂರ್ಣ ಕೈಕೊಟ್ಟಿತು. ಒಂದೂವರೆ ತಿಂಗಳು ಮಳೆ ಕಾಣದ ಬೆಳೆ ನಿಧಾನವಾಗಿ ಒಣಗತೊಡಗಿತು. ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ, ಚಿತ್ರದುರ್ಗ ತಾಲ್ಲೂಕಿನ ತುರುವನೂರು ಹೋಬಳಿ, ಹಿರಿಯೂರು ತಾಲ್ಲೂಕಿನ ಧರ್ಮಪುರ ವ್ಯಾಪ್ತಿಯಲ್ಲಿ ಬಿಸಿಲಿನ ತಾಪಕ್ಕೆ ಶೇಂಗಾ ಬಹುತೇಕ ಒಣಗಿತು.

ಇದೇ ಸಂದರ್ಭದಲ್ಲಿ ಶೇಂಗಾ ಬೆಳೆಗೆ ಬೆಂಕಿ ರೋಗವೂ ತೀವ್ರವಾಗಿ ಬಾಧಿಸಿತು. ಸುರಳಿ ಪೂಚಿ ಕೀಟಬಾಧೆ ಕಾಣಿಸಿಕೊಂಡಿತು. ಹೂವು ಕಾಯುವ ಭಂಡಾರವನ್ನು ಕೀಟಗಳು ತಿಂದುಹಾಕಿದವು. ಇದು ರೈತರನ್ನು ಇನ್ನಷ್ಟು ಹತಾಷೆಗೆ ನೂಕಿತು. ಶೇಂಗಾ ಒಣಗಿದರೂ ಜಾನುವಾರಿಗೆ ಮೇವು ಲಭ್ಯವಾಗುತ್ತದೆ ಎಂದು ಸಮಾಧಾನವಾಗಿದ್ದರು. ಆದರೆ, ಅಕ್ಟೋಬರ್‌ ಮೊದಲ ವಾರದಲ್ಲಿ ಸುರಿದ ಮಳೆ ರೈತರ ನಿರೀಕ್ಷೆಗಳೆಲ್ಲವನ್ನೂ ತೊಳೆದುಹಾಕಿದೆ.

ಕಾಳು ಕಟ್ಟುವಾಗ ಕೈಕೊಟ್ಟ ಮಳೆಯನ್ನು ರೈತರು ಸಹಿಸಿಕೊಂಡಿದ್ದರು. ಇಳುವರಿ ಕುಸಿತವಾದರೂ ಮಾಡಿದ ವೆಚ್ಚ ಕೈಗೆ ಬರುವ ನಿರೀಕ್ಷೆ ಹೊಂದಿದ್ದರು. ಜಾನುವಾರು ಮೇವಿಗೂ ಇದನ್ನೇ ಅವಲಂಬಿಸಿದ್ದರಿಂದ ಈರುಳ್ಳಿಯಂತೆ ಈ ಬೆಳೆ ನಾಶಪಡಿಸಲಿಲ್ಲ. ಅನಿರೀಕ್ಷಿತವಾಗಿ ಸುರಿದ ಮಳೆ ಶೇಂಗಾ ಗಿಡಗಳನ್ನು ಕೊಳೆಯುವಂತೆ ಮಾಡಿತು. ಕಾಳು ಕಟ್ಟಿದ್ದ ಶೇಂಗಾ ಕೂಡ ಭೂಮಿಯ ಒಳಗೆ ಹಾಳಾಗಿ ಹೋಗುತ್ತಿದೆ.

ಶೇಂಗಾ ಬೆಳೆಗೆ ಇಂತಹ ಸಂಕಷ್ಟಗಳು ಪ್ರತಿ ವರ್ಷವೂ ಎದುರಾಗುತ್ತಿವೆ. ಅತಿವೃಷ್ಟಿ–ಅನಾವೃಷ್ಟಿಯ ಜೊತೆಗೆ ಬೆಲೆಯ ಏರಿಳಿತವೂ ರೈತರನ್ನು ಸಂಕಷ್ಟಕ್ಕೆ ದೂಡಿದ ನಿದರ್ಶನಗಳಿವೆ. ಉತ್ತಮ ಬೆಳೆ ಕೈಗೆ ಬಂದಾಗ ಬೆಲೆ ಕುಸಿತವಾಗಿ ರೈತರು ನಷ್ಟ ಅನುಭವಿಸಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರ ನೆರವಿಗೆ ಧಾವಿಸಲು ಸರ್ಕಾರ ‘ಶೇಂಗಾ ಪ್ಯಾಕೇಜ್‌’ ರೂಪಿಸುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಿತ್ತು. 2018–19ರಲ್ಲಿ
₹ 50 ಕೋಟಿ ಮೀಸಲಿಡುವ ಆಶ್ವಾಸನೆ ನೀಡಿತ್ತು. ಇದು ಇಂದಿಗೂ ಜಾರಿಗೆ ಬಂದಿಲ್ಲ. ಸಂಕಷ್ಟಕ್ಕೆ ಸಿಲುಕಿದ ಶೇಂಗಾ ಬೆಳೆಗಾರರು ಸರ್ಕಾರದ ನೆರವನ್ನು ಎದುರು ನೋಡುತ್ತಿದ್ದಾರೆ.

ದಿಕ್ಕು ತೋಚದ ಬೆಳೆಗಾರ

ಧನಂಜಯ ವಿ.ನಾಯಕನಹಟ್ಟಿ

ನಾಯಕನಹಟ್ಟಿ: ದಶಕದಿಂದ ನಿರಂತರ ಬರಗಾಲದಿಂದ ತತ್ತರಿಸಿ ಹೋಗಿರುವ ಚಳ್ಳಕೆರೆ ತಾಲ್ಲೂಕಿಗೆ ಪ್ರಸಕ್ತ ವರ್ಷ ಸಕಾಲಕ್ಕೆ ಬಾರದ ಮಳೆಯಿಂದ ಶೇಂಗಾ ಬೆಳೆ ಸಂಪೂರ್ಣ ನಾಶವಾಗಿದೆ.

ತಾಲ್ಲೂಕಿನ ರೈತರು ವರ್ಷದ ಆರಂಭದಲ್ಲಿ ಬಿದ್ದ ಮಳೆಯನ್ನು ನಂಬಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಬ್ಯಾಂಕ್‍, ಲೇವಾದೇವಿಗಾರರ ಬಳಿ ಸಾಲ ಮಾಡಿಕೊಂಡು, ಕೃಷಿ ಇಲಾಖೆಯಿಂದ ವಿತರಿಸಿದ ಬಿತ್ತನೆ ಬೀಜಗಳನ್ನು ಕೊಂಡು ಬಿತ್ತನೆ ಕಾರ್ಯ ನಡೆಸಿದ್ದರು. ಆದರೆ, ಸಕಾಲಕ್ಕೆ ಮಳೆ ಬಾರದೆ ಇರುವುದರಿಂದ ಶೇಂಗಾ ಗಿಡಗಳು ಕಾಯಿಕಟ್ಟುವಲ್ಲಿ ವಿಫಲವಾಗಿವೆ. ರೈತರು ದನ–ಕರುಗಳಿಗೆ ಮೇವಿಗಾಗಿ ಹತಾಶೆಯಿಂದ ಶೇಂಗಾ ಬೆಳೆಯನ್ನು ಫಲಕ್ಕೂ ಮೊದಲೇ ಕಿತ್ತುಹಾಕುತ್ತಿದ್ದಾರೆ.

ಪ್ರತಿವರ್ಷಕ್ಕೆ ಹೋಲಿಸಿದರೆ ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ನಾಯಕನಹಟ್ಟಿ ಹೋಬಳಿಯಲ್ಲಿ ಕಳೆದ ವರ್ಷಪೂರ್ತಿ 486 ಮಿ.ಮೀ ಮಳೆಯಾಗಿತ್ತು. ಪ್ರಸಕ್ತ ವರ್ಷದ ಸೆಪ್ಟೆಂಬರ್ ವೇಳೆಗೆ 550 ಮಿ.ಮೀ. ಮಳೆಯಾಗಿದೆ. ಹೋಬಳಿಯಲ್ಲಿ 18,500 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆಯಾಗಿದೆ. ಆದರೆ, ಶೇಂಗಾ ಬೆಳೆಗೆ ಸಕಾಲಕ್ಕೆ ಮಳೆ ಆಗಲಿಲ್ಲ.

ಇದರಿಂದ ರೈತರಿಗೆ ಸಂಕಷ್ಟ ಎದುರಾಗಿದೆ. ಸಾಲದ ಸುಳಿಗೆ ಸಿಲುಕಿ, ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ. ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ತಾಲ್ಲೂಕಿನ ರೈತರು ಅನುಭವಿಸಿರುವ ಬೆಳೆನಷ್ಟದ ಪ್ರಮಾಣವನ್ನು ನೈಜವಾಗಿ ಅಧ್ಯಯನ ಮಾಡಿ ವರದಿ ನೀಡುವಂತೆ ಹಾಗೂ ಸರ್ಕಾರ ಶೇಂಗಾ ಬೆಳೆಗಾರರ ನೆರವಿಗೆ ಬರಬೇಕೆಂದು ರೈತರು ಆಗ್ರಹಿಸಿದ್ದಾರೆ.

‘ಕಳೆಯ ಕೂಲಿಯೂ ಬರೊಲ್ಲಾ ಸ್ವಾಮಿ’

ಮೊಳಕಾಲ್ಮುರು: ‘ಕೂಲಿ ಕಾರ್ಮಿಕರೊಬ್ಬರಿಗೆ ದಿನಕ್ಕೆ ₹ 300 ಕೊಟ್ಟು ಶೇಂಗಾ ಕಳೆ ತೆಗೆಸಿದ್ದೇನೆ ಸ್ವಾಮಿ. ಕಳೆ ತೆಗೆಸಿದ ನಂತರ ಮಳೆ ಕೈಕೊಟ್ಟು ಕೂಲಿ ಹಣವೂ ವಾಪಸ್ ಬಾರದಂತಾಗಿದೆ. ಇನ್ನು ಬಿತ್ತನೆಬೀಜ, ಬಿತ್ತನೆ ಖರ್ಚು ನಮ್ಮ ನೆತ್ತಿ ಮೇಲೆ ಬರುತ್ತಿದೆ..’

-ಇದು ಈ ವರ್ಷ ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ಮಳೆಯಾಶ್ರಿತ ಶೇಂಗಾ ಬೆಳೆಗಾರರ ನೋವು.

‘ಮಳೆ ಈ ವರ್ಷ ಬಿತ್ತನೆ ಸಮಯಕ್ಕೆ ಸರಿಯಾಗಿ ಬಂದಿತೆಂದು ಖುಷಿಯಿಂದ ದುಬಾರಿಯಾದರೂ ಪ್ರತಿ ಕ್ವಿಂಟಲ್‌ಗೆ ₹ 9,000ದಂತೆ ಬೀಜ ಖರೀದಿಸಿ ಬಿತ್ತನೆ ಮಾಡಿದೆವು. ಒಂದು ಜೋಡಿ ನೇಗಿಲು ಬಿತ್ತನೆಗೆ ರೂ ₹ 2,500 ನೀಡಿದ್ದೇವೆ. ಎಡೆ ಹಾಕಿಸಿದ್ದೇವೆ, ಕಳೆ ತೆಗೆಸಿದ್ದೇವೆ. ಎಲ್ಲಾ ಸೇರಿ ಎಕರೆಗೆ ಅಂದಾಜು ₹ 11 ಸಾವಿರ ಖರ್ಚು ಮಾಡಿದ್ದೇವೆ. ಅಕಾಲಿಕ ಮಳೆಯಿಂದಾಗಿ ಬೆಳೆ ಬುಡ ಕೊಳೆರೋಗಕ್ಕೆ ತುತ್ತಾಗಿದೆ. ಇದಕ್ಕೂ ಮುಂಚೆ ಮಳೆ ಇಲ್ಲದೇ ಗಿಡ ಒಣಗಿರುವುದು ಹಾನಿಗೆ ಒತ್ತು ನೀಡಿದೆ’ ಎಂದು ರೈತ ರಾಯಾಪುರದ ನಾಗೇಂದ್ರಣ್ಣ ಅಳಲು ತೋಡಿಕೊಂಡರು.

‘ಗೌರಸಮುದ್ರ ಮಾರಮ್ಮದೇವಿ ದೊಡ್ಡಪರಿಷೆಯಲ್ಲಿ ಬೆಳೆ ಕಂಗೊಳಿಸುತ್ತಿದ್ದವು. ಜಾತ್ರೆ ನಂತರ ಕೈಕೊಟ್ಟ ಮಳೆ ಮರಿಪರಿಷೆ ತನಕ ಬರಲಿಲ್ಲ. ಹೂಡು ಇಳಿಯಬೇಕಾಗಿದ್ದ ಗಿಡ ಒಣಗಿ ನಿಂತಿವೆ. ಮುಂಚೆ ಇಳಿದಿದ್ದ ಹೂಡುಗಳು ಸಣ್ಣ ಕಾಯಿಯಾಗಿ ಸೊರಗಿವೆ. ಈಗ ಮಳೆ ಬಂದಿರುವುದು ಒಣಗುತ್ತಿದ್ದ ಬಳ್ಳಿ ಮತ್ತು ಸೊರಗಿದ್ದ ಕಾಯಿಯನ್ನು ಕೊಳೆಸುತ್ತಿದೆ. ಇದರಿಂದ ದನಕರುಗಳ ಬಾಯಿಗೆ ಮಣ್ಣು ಬಿದ್ದಂಗಾಗಿದೆ’ ಎಂದು ಮಾರಮ್ಮನಹಳ್ಳಿಯ ದುರುಗಪ್ಪ ಬೇಸರ ಹೊರಹಾಕಿದರು.

‘ಸೆಪ್ಟಂಬರ್ ತಿಂಗಳಿನಲ್ಲಿ ವಾಡಿಕೆಗಿಂತ ಶೇ 84ರಷ್ಟು ಮಳೆ ಕೊರತೆಯಾಗಿದೆ. ಹಾನಿ ಪ್ರಮಾಣ
ಶೇ 75ಕ್ಕೂ ಹೆಚ್ಚು ಎಂದು ಅಂದಾಜಿಸಿ ಕಂದಾಯ ಇಲಾಖೆಗೆ ವರದಿ ಸಲ್ಲಿಸಲಾಗಿದೆ. ಶೇಂಗಾಕ್ಕೆ ಹೂಡು ಇಳಿಯುವ ಮತ್ತು ಕಾಯಿ ಕಟ್ಟುವ ವೇಳೆ ಹೆಚ್ಚು ಮಳೆ ಬೇಕು. ಈ ವರ್ಷ ಇದಕ್ಕೆ ತದ್ವಿರುದ್ಧವಾಗಿ ಬೆಳೆ ಬಹುತೇಕ ಕೈಬಿಟ್ಟು ಹೋಗಿದೆ’ ಎಂದು ತಾಲ್ಲೂಕು ಕೃಷಿ ಅಧಿಕಾರಿ ಡಾ.ವಿ.ಸಿ. ಉಮೇಶ್ ತಿಳಿಸಿದರು.

ಶೇಂಗಾದಂತೆ ಪುಡಿಯಾದ ಬದುಕು

ಹಿರಿಯೂರು:‘ಜೂನ್ ತಿಂಗಳಲ್ಲಿ ಬಿದ್ದ ರೋಹಿಣಿ ಮಳೆಗೆ ಶೇಂಗಾ ಬಿತ್ತನೆ ಮಾಡಿದ್ದೆ. ಸೆಪ್ಟೆಂಬರ್ ತಿಂಗಳಲ್ಲಿ ಉತ್ತರೆ ಮಳೆಯ ಮೊದಲ ಪಾದ ಆಗಿದ್ದರೆ, ನನ್ನ ನಿರೀಕ್ಷೆ ಮೀರಿ ಶೇಂಗಾ ಇಳುವರಿ ಬರುತ್ತಿತ್ತು. ನಮ್ಮ ಎಲ್ಲಾ ಕನಸುಗಳು ನುಚ್ಚು ನೂರಾಗಿವೆ. ಕೃಷಿಯ ಸಹವಾಸವೇ ಬೇಡ ಎನಿಸಿದೆ’.

ಹಿರಿಯೂರು ತಾಲ್ಲೂಕಿನ ಯರಬಳ್ಳಿಯ ಜ್ಞಾನಪ್ರಕಾಶ್ 23 ಎಕರೆಯಲ್ಲಿ ಶೇಂಗಾ ಬಿತ್ತನೆ ಮಾಡಿದ್ದಾರೆ. ಹೊಲದಲ್ಲಿಯೇ ಶೆಡ್ ಹಾಕಿಕೊಂಡು ವಾಸಿಸುತ್ತ ಕೊಳೆಯುತ್ತಿರುವ ಶೇಂಗಾ ನೋಡಿ ಹತಾಶರಾಗಿದ್ದಾರೆ.

‘ಹತ್ತು ಸಾವಿರ ರೂಪಾಯಿಗೆ ಕ್ವಿಂಟಲ್‌ನಂತೆ ಏಳು ಕ್ವಿಂಟಲ್ ಶೇಂಗಾ ಬಿತ್ತನೆ ಮಾಡಿದ್ದೆ. 50 ಕೆ.ಜಿ. ಚೀಲಕ್ಕೆ 1,300 ರೂಪಾಯಿಯಂತೆ ಖರೀದಿಸಿದ ಏಳು ಕ್ವಿಂಟಲ್ ಡಿಎಪಿ ಗೊಬ್ಬರ ಹಾಕಿದ್ದೆ. ದೀಪಾವಳಿ ಸಮಯಕ್ಕೆ ಕೊಯ್ಲು ಮಾಡಬೇಕಿದೆ. ಗಿಡ ಕಿತ್ತು ನೋಡಿದರೆ ಒಂದೊಂದರಲ್ಲಿ ಐದಾರು ಕಾಯಿಗಳಿವೆ. ಹೋದವರ್ಷ ಪ್ರತಿ ಗಿಡದಲ್ಲಿ 20–25 ಕಾಯಿ ಹಿಡಿದಿತ್ತು. ಕಳೆ ತೆಗೆಸಲು, ಬಿತ್ತನೆ ಮಾಡಲು 20–25 ಸಾವಿರ ಖರ್ಚಾಗಿದೆ. ಬೀಜ–ಗೊಬ್ಬರದ್ದಿರಲಿ, ಕೂಲಿಯೂ ಕೈಗೆ ಸಿಗುತ್ತಿಲ್ಲ. ದನಗಳಿಗೆ ಮೇವು ಕೂಡ ಸಿಗದ ರೀತಿ ಕೊಳೆತಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ವರ್ಷದ ಆರಂಭದಲ್ಲಿ ಬಿದ್ದ ಮಳೆಯನ್ನು ಕಂಡು ನಿರೀಕ್ಷೆ ಹೆಚ್ಚಾಗಿತ್ತು. ಆದರೆ, ಮಳೆಯ ಸಕಾಲಕ್ಕೆ ಬಾರದೇ ಶೇಂಗಾ ಒಣಗಿಹೋಗಿದೆ. ಜಾನುವಾರಿಗೆ ಮೇವಿನ ಕೊರತೆ ಉಂಟಾಗಲಿದೆ.

ಜಿ.ಬಿ.ಮದಿಯಪ್ಪ, ಬೋಸೆದೇವರಹಟ್ಟಿ ಚಳ್ಳಕೆರೆ ತಾಲ್ಲೂಕು.

ಪ್ರತಿವರ್ಷ ವಾಣಿಜ್ಯ ಬೆಳೆ ಎಂದು ಶೇಂಗಾ ಹಾಕುತ್ತಿದ್ದೇವೆ. ಆದರೆ, ಒಂದು ವರ್ಷವೂ ಹಣ ನೋಡಲು ಆಗುತ್ತಿಲ್ಲ. ಇದು ನಮ್ಮ ಹಣೆಬರಹ ಎಂದು ಶಪಿಸಿಕೊಳ್ಳುತ್ತಿದ್ದೇವೆ.

ತಿಪ್ಪೇಸ್ವಾಮಿ, ಮೊಗಲಹಳ್ಳಿ. ಮೊಳಕಾಲ್ಮುರು ತಾಲ್ಲೂಕು

ಬೆಳೆಗೆ ಬೇಕಿದ್ದಾಗ ಬರಬೇಕಿದ್ದ ಮಳೆ, ಬೇಕಿಲ್ಲದಾಗ ಸಾಕೆನಿಸುವಷ್ಟು ಸುರಿದ ಕಾರಣ ಹೊಲದಲ್ಲಿನ ಶೇಂಗಾ ಗಿಡಗಳನ್ನು ಕೈಯಲ್ಲಿ ಹಿಡಿದರೆ ಪುಡಿ ಪುಡಿಯಾಗುತ್ತವೆ. ಎಲೆ ಉದುರಿ ನೆಲಕ್ಕೆ ಬಿದ್ದು ಕೊಳೆತುಹೋಗಿವೆ.

ಮಂಜುನಾಥ್, ಖಂಡೇನಹಳ್ಳಿ, ಹಿರಿಯೂರು ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT