ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭದ್ರಾ ಮೇಲ್ದಂಡೆ’ ನಿಜಲಿಂಗಪ್ಪ ಕೊಡುಗೆ : ಮಾಜಿ ಸಚಿವ ಎಚ್.ಆಂಜನೇಯ ಅಭಿಮತ

Last Updated 10 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯು ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಅವಿರತ ಪ್ರಯತ್ನದ ಫಲ ಎಂದು ಮಾಜಿ ಸಚಿವ ಎಚ್.ಆಂಜನೇಯ ಅಭಿಪ್ರಾಯಪಟ್ಟರು.

ಇಲ್ಲಿಗೆ ಸಮೀಪದ ಸೀಬಾರದಲ್ಲಿರುವ ಎಸ್.ನಿಜಲಿಂಗಪ್ಪ ಅವರ ಸ್ಮಾರಕದ ಬಳಿ ಮೆಮೋರಿಯಲ್ ಟ್ರಸ್ಟ್ ಮಂಗಳವಾರ ಏರ್ಪಡಿಸಿದ್ದ ನಿಜಲಿಂಗಪ್ಪ ಅವರ 118ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಚಿತ್ರದುರ್ಗ ಜಿಲ್ಲೆಗೆ ಭದ್ರ ನದಿ ನೀರು ತರಬೇಕು ಎಂಬ ಕನಸು ಅವರಲ್ಲಿತ್ತು. ಆಗ ನಡೆದ ಸಮೀಕ್ಷೆಯಲ್ಲಿ ನೀರು ಹರಿಸಲು ಸಾಧ್ಯವಿಲ್ಲ ಎಂಬ ಅಂಶ ಉಲ್ಲೇಖವಾಗಿತ್ತು. ಬರದ ನಾಡಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಸಾಧ್ಯವಾಗಲಿಲ್ಲ ಎಂಬ ಕೊರಗು ಅವರನ್ನು ಕಾಡುತ್ತಿತ್ತು’ ಎಂದರು.

‘ಮುಖ್ಯಮಂತ್ರಿ ಸ್ಥಾನದಲ್ಲಿದ್ದರೂ ಚಿತ್ರದುರ್ಗ ಜಿಲ್ಲೆಗೆ ಯಾವ ಕೊಡುಗೆ ನೀಡಲಿಲ್ಲ ಎಂಬ ಆಪಾದನೆ ಅವರ ಮೇಲಿದೆ. ಈ ಆರೋಪದಿಂದ ಮುಕ್ತರಾಗಲು ಅವರು ಪ್ರಯತ್ನಿಸಿದರು. ಭದ್ರಾ ಮೇಲ್ದಂಡೆ ಯೋಜನೆಯ ಅನುಷ್ಠಾನಕ್ಕೆ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆ, ಧರ್ಮಸಿಂಗ್, ಎಸ್.ಎಂ.ಕೃಷ್ಣ ಸೇರಿ ಅನೇಕರ ಮೇಲೆ ಒತ್ತಡ ಹೇರಿದ್ದರು’ ಎಂದು ಸ್ಮರಿಸಿದರು.

‘ನಿಜಲಿಂಗಪ್ಪ ಅವರು ಅತ್ಯಂತ ಪ್ರಾಮಾಣಿಕ ರಾಜಕಾರಣಿ. ಅವರು ಆಸ್ತಿ ಮಾಡಲಿಲ್ಲ, ವೈಭವ, ಆಡಂಭರ ಜೀವನವನ್ನು ಬಯಸಲಿಲ್ಲ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕಾಲದಲ್ಲೇ ನಿಜಲಿಂಗಪ್ಪ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ರಾಷ್ಟ್ರಪತಿ ಸ್ಥಾನವನ್ನು ಅತ್ಯಂತ ವಿನಯವಾಗಿ ನಿರಾಕರಿಸಿದ ಪ್ರಾಮಾಣಿಕ ರಾಜಕಾರಣಿ. ತತ್ವ ಸಿದ್ದಂತ ಹಾಗೂ ಆದರ್ಶಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸೋಣ’ ಎಂದರು.

ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು, ‘ನಿಜಲಿಂಗಪ್ಪ ಅವರು ಮೂಲತಃ ರಾಜಕಾರಣಿ ಆಗಿದ್ದರೂ ತತ್ವಜ್ಞಾನಿಯ ಜೀವನ ಶೈಲಿ ಹೊಂದಿದ್ದರು. ಹೀಗಾಗಿ, ಅವರಿಗೆ ವಿಶಾಲ ಮನೋಭಾವ ಇತ್ತು. ರಾಜಕಾರಣದಲ್ಲಿಯೂ ತತ್ವಜ್ಞಾನ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಿದರು. ಸರಳ ಬದುಕು ನಡೆಸುತ್ತಿದ್ದ ಅಪ್ರತಿಮ ಸಾಧಕರಾಗಿದ್ದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಅಧಿಕಾರ ಶಾಶ್ವತವಲ್ಲ ಎಂಬ ಅರಿವು ಅವರಿಗಿತ್ತು. ಅಧಿಕಾರದ ಮೂಲಕ ಸಂಪತ್ತು ಗಳಿಸಲಿಲ್ಲ. ಹೀಗಾಗಿ ಅವರು ಇತಿಹಾಸದಲ್ಲಿ ದಾಖಲಾದರು. ಆದರ್ಶ ಜೀವನ ಮುಳ್ಳಿನ ಹಾದಿಯಾದರೂ, ಹೊಸ ಮೈಲುಗಲ್ಲು ನಿರ್ಮಿಸಿದರು. ಬುದ್ಧ, ಬಸವಣ್ಣನವರ ಬಗ್ಗೆ ಕಲ್ಪನೆ, ಖಚಿತ ದೃಷ್ಟಿ ಹೊಂದಿದ್ದರು. ಪ್ರಬುದ್ಧ ಹಾಗೂ ಮೌಲ್ಯಾಧಾರಿತ ರಾಜಕಾರಣಿಯಾಗಿದ್ದರು’ ಎಂದು ಕೊಂಡಾಡಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಇತಿಹಾಸ ತಜ್ಞ ಡಾ. ಬಿ.ರಾಜಶೇಖರಪ್ಪ, ನಿಜಲಿಂಗಪ್ಪ ಅವರಿಗೆ ಚಿಕಿತ್ಸೆ ನೀಡಿದ ಡಾ. ಚಂದ್ರಶೇಖರ್ ಎಸ್.ರಟ್ಕಲ್ ಅವರನ್ನು ಸನ್ಮಾನಿಸಲಾಯಿತು.

ರಾಜ್ಯಸಭೆ ಮಾಜಿ ಸದಸ್ಯ ಎಚ್.ಹನುಮಂತಪ್ಪ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್.ರಂಗಪ್ಪ, ಶಿವಪ್ರಕಾಶ್, ಜಿಲ್ಲಾ ಪಂಚಾಯಿತಿ ಸದಸ್ಯ ನರಸಿಂಹರಾಜು, ಸುನಂದಮ್ಮ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್ ಪೀರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT