ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಧನ ದರ ಏರಿಕೆಗೆ ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯವೇ ಕಾರಣ: ಡಿ.ಕೆ. ಶಿವಕುಮಾರ್

ಹಿರಿಯೂರಿನಲ್ಲಿ ಕಾಂಗ್ರೆಸ್‌ ಪ್ರತಿಭಟನೆ
Last Updated 12 ಜೂನ್ 2021, 6:24 IST
ಅಕ್ಷರ ಗಾತ್ರ

ಹಿರಿಯೂರು (ಚಿತ್ರದುರ್ಗ): ಇಂಧನ ಮತ್ತು ವಿದ್ಯುತ್ ದರ ಏರಿಕೆ ವಿರೋಧಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು. ಬೆಲೆ ಹೆಚ್ಚಳಕ್ಕೆ ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯವೇ ಕಾರಣ ಎಂದು ಆರೋಪಿಸಿದರು.

ಪೆಟ್ರೋಲ್ ಬಂಕ್ ಎದುರು ಜಮಾಯಿಸಿದ ಕಾಂಗ್ರೆಸ್‌ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅತಿ ಹೆಚ್ಚು ಜನರು ಸೇರಿದ್ದರಿಂದ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಆಗಿರುವುದು ಕಂಡುಬಂದಿತು. 'ಇಂಧನ ಬೆಲೆ ಏರಿಕೆಯಲ್ಲಿ ಬಿಜೆಪಿ ತೊಲಗಲಿ' ಎಂದು ಶಿವಕುಮಾರ್ ಘೋಷಣೆ ಕೂಗಿದರು.

'ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಮಿತಿಮೀರಿ ಏರಿಸಲಾಗಿದೆ. ₹ 35 ಪೆಟ್ರೋಲ್ ಗೆ ₹ 65 ತೆರಿಗೆ ವಿಧಿಸಲಾಗುತ್ತಿದೆ. ಕಳೆದ ವರ್ಷ ₹ 70 ಇದ್ದ ಪೆಟ್ರೋಲ್ ದರ ಏಕಾಏಕಿ ₹ 100ಕ್ಕೆ ಏರಿಸಿದ್ದು ಯಾವ ಸೀಮೆಯ ನ್ಯಾಯ? ಇದೇ ಬಿಜೆಪಿ ಸರ್ಕಾರದ ಸಾಧನೆ' ಎಂದು ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

'ಇಂಧನ ಬೆಲೆ ಹೆಚ್ಚಳದ ಪರಿಣಾಮವಾಗಿ ಅಗತ್ಯ ವಸ್ತುಗಳ ಬೆಲೆ ಗಗನಮುಖಿ ಆಗಿದೆ. ಜನಸಾಮಾನ್ಯರ ಬದುಕು ಇನ್ನಷ್ಟು ದುರ್ಬರವಾಗಿದೆ. ನರೇಗಾ ಕೂಲಿ ಹೆಚ್ಚಿಸಲಿಲ್ಲ, ರೈತರ ಕಷ್ಟಗಳಿಗೆ ಸ್ಪಂದಿಸಲಿಲ್ಲ. ಶ್ರಮಿಕ ವರ್ಗದ ಗೋಳನ್ನು ಕೇಳಲಿಲ್ಲ. ಆದರೆ, ಇಂಧನ ದರವನ್ನು ಮಾತ್ರ ಹೆಚ್ಚಳ ಮಾಡಲಾಗಿದೆ. ಪೆಟ್ರೋಲ್ ಮತ್ತು ಡೀಸೆಲ್‌ ದರವನ್ನು ಕೂಡಲೇ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.

ಗಾಯದ ಮೇಲೆ ಬರೆ ಎಳೆಯುವ ರೀತಿಯಲ್ಲಿ ವಿದ್ಯುತ್ ದರವನ್ನು ಯೂನಿಟ್ ಗೆ 33 ಪೈಸೆ ಹೆಚ್ಚಿಸಲಾಗಿದೆ. ನಾನು ಇಂಧನ ಸಚಿವನಾಗಿದ್ದಾಗ ಪಾವಗಡದಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆಗೆ ಆದ್ಯತೆ ಕೊಟ್ಟು ಬೇಡಿಕೆಗಿಂತ ಹೆಚ್ಚು ವಿದ್ಯುತ್ ಉತ್ಪಾದನೆ ಆಗುವ ರೀತಿಯಲ್ಲಿ ಕ್ರಮ ತೆಗೆದುಕೊಂಡಿದ್ದೆ. ಈ ಸರ್ಕಾರ ವಿದ್ಯುತ್ ಉತ್ಪಾದನೆ ಬದಲು ದರ ಹೆಚ್ಚಿಸಲು ಹೊರಟಿದೆ' ಎಂದು ಶಿವಕುಮಾರ್ ಆರೋಪಿಸಿದರು .

ರಾಜ್ಯದಲ್ಲಿ ಕೋವಿಡ್ ಲಸಿಕೆ ಪಡೆಯಲು, ಆಮ್ಲಜನಕ ಪಡೆಯಲು ಜನರು ಪರದಾಡುತ್ತಿದ್ದಾರೆ. ಕೊರೊನಾ ಸೋಂಕಿತರು ಹಾಸಿಗೆಗೆ ಕಾಯಬೇಕಾದ ಸ್ಥಿತಿ ನಿರ್ಮಾಣ ಆಗಿದೆ. ಜನರ ಆರೋಗ್ಯ ಕಾಪಾಡಲು ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈ ಬಗ್ಗೆ ಕೇಳಿದರೆ ಮುಖ್ಯಮಂತ್ರಿ ಯಡಿಯೂರಪ್ಪ ಬೇಸರ ಹೊರಹಾಕುತ್ತಾರೆ. ನಿಮ್ಮ ಸರ್ಕಾರದ ಎಷ್ಟು ಮಂತ್ರಿಗಳು ಜಿಲ್ಲಾ ಕೇಂದ್ರಗಳಿಗೆ ಹೋಗಿ ಜನರ ಕಷ್ಟ ಸುಖ ವಿಚಾರಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಶಾಸಕ ಟಿ ರಘುಮೂರ್ತಿ, ಮಾಜಿ ಶಾಸಕ ಡಿ.ಸುಧಾಕರ್. ಕಾಂಗ್ರಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್ ಪೀರ್, ಮುಖಂಡರಾದ ಜಿ.ಎಸ್. ಮಂಜುನಾಥ್, ಶಶಿಕಲಾ ಸುರೇಶ್ ಬಾಬು ಇದ್ದರು .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT