ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಕ್ಷಣ ಕ್ಷೇತ್ರ ಕಲುಷಿತಗೊಳಿಸಿದ ಕಾಂಗ್ರೆಸ್‌

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ
Published 26 ಮೇ 2024, 3:07 IST
Last Updated 26 ಮೇ 2024, 3:07 IST
ಅಕ್ಷರ ಗಾತ್ರ

ಚಿತ್ರದುರ್ಗ: ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ರೂಪಿಸಿದರು. ಮೊಸರಲ್ಲಿ ಕಲ್ಲು ಹುಡುಕುವ ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಎನ್‌ಇಪಿ ರದ್ದುಪಡಿಸಿದೆ. ಶಿಕ್ಷಣ ಕ್ಷೇತ್ರವನ್ನು ಕಾಂಗ್ರೆಸ್‌ ಕಲುಷಿತಗೊಳಿಸಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.

ಇಲ್ಲಿನ ವಿನಾಯಕ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಮತ್ತು ಜೆಡಿಎಸ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಮೈತ್ರಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಪರವಾಗಿ ಮತಯಾಚನೆ ಮಾಡಿ ಅವರು ಮಾತನಾಡಿದರು.

‘ಶಿಕ್ಷಣ ಕ್ಷೇತ್ರವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಶಿಕ್ಷಣಕ್ಕೆ ನೀಡುತ್ತಿದ್ದ ಆದ್ಯತೆ ಕಡಿಮೆಯಾಗಿದೆ. ಶಿಕ್ಷಣ ಸಚಿವರು ಇನ್ನೂ ಸಿನಿಮಾ ರಂಗದಲ್ಲೇ ಇದ್ದಾರೆ. ರಾಜ್ಯ ಶಿಕ್ಷಣ ನೀತಿಯ ಹೆಸರಿನಲ್ಲಿ ಗೊಂದಲ ಸೃಷ್ಟಿಸಲಾಗುತ್ತಿದೆ’ ಎಂದು ಹರಿಹಾಯ್ದರು.

‘ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡಲಾಗಿತ್ತು. 2005ರಲ್ಲಿ ₹ 4,866 ಕೋಟಿ ಅನುದಾನವನ್ನು ಶಿಕ್ಷಣಕ್ಕೆ ಬಜೆಟ್‌ನಲ್ಲಿ ಮೀಸಲಿಡಲಾಗಿತ್ತು. ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಈ ಅನುದಾನ ₹ 18 ಸಾವಿರ ಕೋಟಿಗೆ ಹೆಚ್ಚಿಸಲಾಯಿತು’ ಎಂದು ಹೇಳಿದರು.

‘ಅತಿಥಿ ಉಪನ್ಯಾಸಕರ ವೇತನ ಹೆಚ್ಚಳವನ್ನು ಬಿಜೆಪಿ ಮಾಡಿದೆ. ಸಾವಿರಕ್ಕೂ ಅಧಿಕ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಪ್ರಾರಂಭವಾಗಿವೆ. ರೈತರ ಕಣ್ಣೀರು ಒರೆಸುತ್ತ ಶಿಕ್ಷಣ ಕ್ಷೇತ್ರ ಬಲಪಡಿಸಲು ಪ್ರಯತ್ನಿಸಲಾಗಿದೆ. ಕಾಂಗ್ರೆಸ್‌ ಸರ್ಕಾರ ಇದನ್ನು ಹಾಳು ಮಾಡುತ್ತಿದೆ’ ಎಂದು ದೂರಿದರು.

ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ‘ವಿದ್ಯಾರ್ಥಿ, ಶಿಕ್ಷಣ ವಿರೋಧಿ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್‌ಗೆ ಸ್ಪಷ್ಟ ಸಂದೇಶ ರವಾನೆ ಆಗಬೇಕು. ಶಿಕ್ಷಣ ಇಲಾಖೆಯ ನೀತಿಗಳು ತುಘಲಕ್ ದರ್ಬಾರ ನೆನಪಿಸುತ್ತಿವೆ. ಶಿಕ್ಷಕರು ಮತ್ತು ಕಾಂಗ್ರೆಸ್ ಹಣ ಬಲದ ನಡುವೆ ಈ ಚುನಾವಣೆ ನಡೆಯುತ್ತಿದೆ. ಇದರಲ್ಲಿ ಶಿಕ್ಷಕರ ಬಲ ಗೆದ್ದು ಬರಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

‘ಪದವೀಧರರು ಸ್ವಾಭಿಮಾನಿ ಮತ್ತು ಸ್ವಾವಲಂಬಿ ಆಗಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಎನ್‌ಇಪಿ ಜಾರಿಗೊಳಿಸಿದೆ. ಈ ನೀತಿ ರೂಪಿಸಿದ್ದು ಬಿಜೆಪಿ ನೇತೃತ್ವದ ಸರ್ಕಾರ ಹಾಗೂ ಅನುಷ್ಠಾನಗೊಳಿಸಿದ್ದು ಪ್ರಧಾನಿ ನರೇಂದ್ರ ಮೋದಿ ಎಂಬ ಏಕ ಮಾತ್ರ ಕಾರಣಕ್ಕೆ ಕಾಂಗ್ರೆಸ್ ವಿರೋಧ ಮಾಡುತ್ತಿದೆ. ರಾಜಕೀಯ ಕಾರಣಕ್ಕೆ ಸಮಾಜ ಒಡೆಯುವ ಹುನ್ನಾರ ನಡೆಸಿದೆ’ ಎಂದು ಕಿಡಿಕಾರಿದರು.

ವಿಧಾನಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಮಾಜಿ ಸಚಿವ ಬೈರತಿ ಬಸವರಾಜ್, ಚಿದಾನಂದಮೂರ್ತಿ, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ಎಸ್.ತಿಪ್ಪೇಸ್ವಾಮಿ, ಶಿವಶಂಕರ್‌, ರಾಜ್ಯ ಎಸ್‌ಸಿ ಮೋರ್ಚಾ ಕಾರ್ಯದರ್ಶಿ ಉಮೇಶ್ ಕಾರಜೋಳ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರುಳಿ, ಮಧುಗಿರಿ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತೇಗೌಡ, ಮುಖಂಡರಾದ ಎಸ್.ಲಿಂಗಮೂರ್ತಿ, ಸೌಭಾಗ್ಯ ಬಸವರಾಜನ್, ಜಿ.ಟಿ.ಸುರೇಶ್ ಇದ್ದರು.

‘ವೇತನ ಹೆಚ್ಚಿಸಿದ್ದು ಬಿಜೆಪಿ’

ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ 5 ಮತ್ತು 6ನೇ ವೇತನ ಆಯೋಗದ ವರದಿ ಜಾರಿಗೊಂಡಿವೆ. ಸರ್ಕಾರಿ ನೌಕರರ ವೇತನ ಹೆಚ್ಚಳ ಮಾಡಿದ್ದು ಬಿಜೆಪಿಯೇ ಹೊರತು ಕಾಂಗ್ರೆಸ್‌ ಅಲ್ಲ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ತಿಳಿಸಿದರು. ‘5ನೇ ವೇತನ ಆಯೋಗದ ವರದಿ ಜಾರಿಗೂ ಮುನ್ನ ಶಿಕ್ಷಕರಿಗೆ ತೀರಾ ಕಡಿಮೆ ಸಂಬಳ ಸಿಗುತ್ತಿತ್ತು. ವರದಿ ಜಾರಿಗೊಂಡ ಬಳಿಕ ನಾಲ್ಕು ಪಟ್ಟು ಸಂಬಳ ಹೆಚ್ಚಾಯಿತು. ಕಾಂಗ್ರೆಸ್ ಸರ್ಕಾರಿ ನೌಕರರ ಪರವಾಗಿ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಿ ನೌಕರರ ವಿರೋಧಿಯಾಗಿದ್ದಾರೆ. ಹೀಗಾಗಿ 7ನೇ ವೇತನ ಆಯೋಗದ ವರದಿ ಒಪ್ಪಿಕೊಳ್ಳುತ್ತಿಲ್ಲ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT