ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ಣಗೊಂಡರೂ ಉದ್ಘಾಟನೆಯಾಗದ ಬಸ್ ನಿಲ್ದಾಣ, ಡಿಪೊ ಕಾಮಗಾರಿಯೂ ವಿಳಂಬ

Last Updated 19 ಆಗಸ್ಟ್ 2021, 3:20 IST
ಅಕ್ಷರ ಗಾತ್ರ

ಹೊಳಲ್ಕೆರೆ: ತಾಲ್ಲೂಕಿನಲ್ಲಿ ಹೆಚ್ಚು ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತಿದ್ದರೂ ಜನರಿಗೆ ಸಾರಿಗೆ ಸೌಲಭ್ಯಗಳು ಮಾತ್ರ ಮರೀಚಿಕೆಯಾಗಿವೆ.

ಚಿತ್ರದುರ್ಗ– ಶಿವಮೊಗ್ಗ, ದಾವಣಗೆರೆ– ಹೊಸದುರ್ಗ ಮಾರ್ಗದ ಕೆಎಸ್‌ಆರ್‌ಟಿಸಿ ಬಸ್‌ಗಳು ಪಟ್ಟಣದ ಮೂಲಕ ಸಂಚರಿಸುತ್ತವೆ. ಪಟ್ಟಣದಲ್ಲಿ ಕೆಎಸ್‌ಆರ್‌ಟಿಸಿ ನಿಲ್ದಾಣ ಪೂರ್ಣಗೊಂಡರೂ ಉದ್ಘಾಟನೆಯ ಭಾಗ್ಯ ಸಿಕ್ಕಿಲ್ಲ. ಬಸಾಪುರ ಗೇಟ್‌ನಲ್ಲಿ ₹ 9 ಕೋಟಿ ವೆಚ್ಚದಲ್ಲಿ ಬಸ್ ಡಿಪೊ ನಿರ್ಮಿಸಲು 6 ಎಕರೆ ಜಮೀನು ಮಂಜೂರಾಗಿದ್ದು, ಹಿಂದಿನ ಸಾರಿಗೆ ಸಚಿವರಾಗಿದ್ದ ಲಕ್ಷ್ಮಣ ಸವದಿ ಡಿಪೊ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ ಕಾಮಗಾರಿ ಇನ್ನೂ ಆರಂಭ ಆಗಿಲ್ಲ.

‘ಇಲ್ಲಿ ಡಿಪೊ ನಿರ್ಮಾಣ ಆದರೆ ತಾಲ್ಲೂಕಿನ ಸಾರಿಗೆ ಸಮಸ್ಯೆ ಕಡಿಮೆ ಆಗುತ್ತದೆ. ಡಿಪೊದಿಂದ ಕನಿಷ್ಠ 50 ಬಸ್‌ಗಳು ಹೊರಡುವುದರಿಂದ ಗ್ರಾಮೀಣ ಸಾರಿಗೆಗೂ ಅನುಕೂಲ ಆಗಲಿದೆ. ಡಿಪೊ ಆರಂಭವಾದರೆ ಬಸ್ ಕ್ಲೀನಿಂಗ್ ಮತ್ತಿತರ ಕೆಲಸಗಳಿಗೆ ಜನ ಬೇಕಾಗುವುದರಿಂದ ಸ್ಥಳೀಯರಿಗೆ ಉದ್ಯೋಗವೂ ದೊರೆತಂತಾಗುತ್ತದೆ. ಬಸ್ ಪಾಸ್‌ಗೆ ಇಲ್ಲಿಯೇ ಹಣ ಪಾವತಿ ಮಾಡಬಹುದಾಗಿದ್ದು, ಆದಾಯವೂ ಹೆಚ್ಚಲಿದೆ. ಆದ್ದರಿಂದ ಡಿಪೊ ಕಾರ್ಯ ಶೀಘ್ರ ಆರಂಭವಾಗಬೇಕು’ ಎನ್ನುವುದು ನಾಗರಿಕರ ಆಗ್ರಹವಾಗಿದೆ.

‘ತಾಲ್ಲೂಕಿನ ಪ್ರಮುಖ ಮಾರ್ಗಗಳಲ್ಲಿ ಮಾತ್ರ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತವೆ. ಪಟ್ಟಣದಿಂದ ರಾಮಗಿರಿ, ಶಿವನಿ, ಅಜ್ಜಂಪುರ, ಬೀರೂರು, ಕಡೂರು ಮೂಲಕ ನೇರವಾಗಿ ಚಿಕ್ಕಮಗಳೂರು ತಲುಪಬಹುದಾಗಿದ್ದು, ಈ ಮಾರ್ಗದಲ್ಲೂ ಕೆಎಸ್‌ಆರ್‌ಟಿಸಿ ಬಸ್ ಬಿಡಬೇಕು. ಇದರಿಂದ ಧರ್ಮಸ್ಥಳ, ಮಂಗಳೂರಿಗೆ ಹೋಗುವ ಪ್ರಯಾಣಿಕರಿಗೂ ಅನುಕೂಲ ಆಗಲಿದೆ. ಚಿತ್ರದುರ್ಗದಿಂದ ಪಟ್ಟಣದ ಮಾರ್ಗವಾಗಿ ಮಣಿಪಾಲ್, ಉಡುಪಿ, ಮಂಗಳೂರಿಗೆ ಕೆಎಸ್‌ಆರ್‌ಟಿಸಿ ಬಸ್ ಬಿಟ್ಟರೆ ರೋಗಿಗಳು ಮತ್ತು ಅವರ ಪೋಷಕರಿಗೆ ಅನುಕೂಲ ಆಗುತ್ತದೆ’ ಎನ್ನುತ್ತಾರೆ ಈ ಭಾಗದ ಜನ.

ಮೂರು ದಿನ ಮಾತ್ರ ಕರ್ತವ್ಯ

ತಾಲ್ಲೂಕಿನ ಬಸಾಪುರ ಗೇಟ್‌ನಲ್ಲಿ ಚಾಲಕರ ತರಬೇತಿ ಕೇಂದ್ರ ಸ್ಥಾಪಿಸಲಾಗಿದೆ. ಇಲ್ಲಿ ವಿದ್ಯಾವಂತ ಯುವಕರಿಗೆ ಚಾಲನಾ ತರಬೇತಿ ನೀಡಲಾಗುತ್ತದೆ. ಆದರೆ, ಈ ಕೇಂದ್ರದ ಪ್ರಾಂಶುಪಾಲರು ಮಾಲೂರಿನಲ್ಲಿ ಮೂರು ದಿನ, ಇಲ್ಲಿ ಮೂರು ದಿನ ಕರ್ತವ್ಯ ನಿರ್ವಹಿಸುತ್ತಾರೆ. ಇದರಿಂದ ತರಬೇತಿ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ. ‘ಇಲ್ಲಿಗೆ ಒಬ್ಬ ಕಾಯಂ ಪ್ರಾಂಶುಪಾಲರ ನೇಮಕ ಆಗಬೇಕು. ಚಾಲನಾ ತರಬೇತಿ ನೀಡಲು ನುರಿತ ಚಾಲಕರನ್ನು ನೇಮಿಸಬೇಕು’ ಎಂಬುದು ತರಬೇತಿಯ ಆಕಾಂಕ್ಷಿಗಳ ಆಗ್ರಹ.

.....

ಬಸಾಪುರ ಗೇಟ್‌ನಲ್ಲಿ ನಿರ್ಮಿಸುವ ಕೆಎಸ್‌ಆರ್‌ಟಿಸಿ ಬಸ್ ಡಿಪೊ ಕಾರ್ಯ ಟೆಂಡರ್ ಹಂತದಲ್ಲಿದ್ದು, ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವನ್ನೂ ಸದ್ಯದಲ್ಲೇ ಉದ್ಘಾಟಿಸಲಾಗುವುದು.

-ಎಂ. ಚಂದ್ರಪ್ಪ, ಶಾಸಕ ಹಾಗೂ ಕೆಎಸ್‌ಆರ್‌ಟಿಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT