ಹಿರಿಯೂರು: ತಾಲ್ಲೂಕಿನ ಮರಡಿಹಳ್ಳಿ ಗ್ರಾಮದಲ್ಲಿ 1920ರಲ್ಲಿ ಆರಂಭವಾದ ಸರ್ಕಾರಿ ಮಾಧ್ಯಮಿಕ ಶಾಲೆಯು ಶತಮಾನೋತ್ಸವ ಮತ್ತು 1948ರಲ್ಲಿ ಆರಂಭವಾದ ಜಿಲ್ಲೆಯ ಪ್ರಥಮ ಗ್ರಾಮೀಣ ಪ್ರೌಢಶಾಲೆಯು ಅಮೃತ ಮಹೋತ್ಸವದ ಸಡಗರದಲ್ಲಿದೆ.
ಫೆ. 11 ಮತ್ತು 12ರಂದು ಶತಮಾನೋತ್ಸವ ಹಾಗೂ ಸುವರ್ಣ ಮಹೋತ್ಸವವನ್ನು ಯಶಸ್ವಿಯಾಗಿ ಆಚರಿಸಲು ಶಾಲೆಯ ಹಳೆಯ ವಿದ್ಯಾರ್ಥಿಗಳು, ಮರಡಿಹಳ್ಳಿ ಒಳಗೊಂಡು ಸುತ್ತಮುತ್ತಲ ಹಳ್ಳಿಗಳ ಗ್ರಾಮಸ್ಥರು ಟೊಂಕಕಟ್ಟಿ ನಿಂತಿದ್ದಾರೆ.
ಅಕ್ಷರ ಕಲಿಸಿದ ಊರು: ಮರಡಿಹಳ್ಳಿಯಲ್ಲಿ ಶಾಲೆಗಳನ್ನು ಆರಂಭಿಸಲು ಸುತ್ತಮುತ್ತಲಿನ ಗ್ರಾಮಸ್ಥರು, ಹಿರಿಯರು, ಭೂದಾನಿಗಳು ತನು, ಮನ, ಧನ ಅರ್ಪಿಸಿದ್ದಾರೆ. ಯಾವುದೇ ಜಾತಿ–ಕುಲ ನೋಡದೆ ಮನೆಗೊಬ್ಬ ವಿದ್ಯಾರ್ಥಿಗೆ ಅನ್ನವಿಟ್ಟು, ಅಕ್ಷರಜ್ಞಾನ ನೀಡಿದ್ದರಿಂದ ಸಾವಿರಾರು ಬಡವರು ಅಕ್ಷರವಂತರಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಹಳೆಯ ವಿದ್ಯಾರ್ಥಿಗಳು ಸಂಘಟಿತರಾಗಿ ಶಾಲೆಯ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತಿದ್ದರಿಂದ 2019ರಲ್ಲಿ ಪ್ರೌಢಶಾಲೆಯನ್ನು ಕರ್ನಾಟಕ ಪಬ್ಲಿಕ್ ಶಾಲೆಯನ್ನಾಗಿ ಪರಿವರ್ತನೆ ಮಾಡಲಾಗಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಒತ್ತು ನೀಡಲಾಗಿದೆ.
ಗ್ರಾಮದ ಸಾಹುಕಾರ್ ಸೂರಪ್ಪ ಅವರು ನಾಲ್ಕನೇ ತರಗತಿವರೆಗೆ ಇದ್ದ ಶಾಲೆಯನ್ನು ಏಳನೇ ತರಗತಿವರೆಗೆ ನಡೆಸುವಂತೆ ಪ್ರಯತ್ನಿಸಿ ಯಶಸ್ಸು ಪಡೆದರು. ನಂತರದಲ್ಲಿ ಗ್ರಾಮದ ಶೇರೆಡ್ಡಿ ಎಸ್. ರುದ್ರಪ್ಪ, ಎಸ್. ರಾಮರೆಡ್ಡಿ ಮೊದಲಾದವರು ಗ್ರಾಮದ ಪ್ರಮುಖರ ಸಹಕಾರದಲ್ಲಿ ಪ್ರೌಢಶಾಲೆ ಆರಂಭಿಸಲು ಮುನ್ನುಡಿ ಬರೆದರು.
ಗ್ರಂಥಾಲಯ: ದಿವಂಗತ ಎಸ್. ಶಿವಣ್ಣರೆಡ್ಡಿಯವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಅವರ ನೆನಪಿಗಾಗಿ ಕುಟುಂಬದ ಸದಸ್ಯರಾದ ಡಾ.ಕಂಠೀರವ ಬಾಲಸರಸ್ವತಿ ಅವರು ಗ್ರಂಥಾಲಯದ ವ್ಯವಸ್ಥೆ ಮಾಡಿದ್ದಾರೆ. ಶಾಲೆಯ ಆವರಣಕ್ಕೆ ಹೊಂದಿಕೊಂಡಿರುವ ಪಿತ್ರಾರ್ಜಿತವಾಗಿ ಬಂದಿದ್ದ ನಿವೇಶನವೊಂದನ್ನು ಎಸ್. ಚಂದ್ರಶೇಖರಯ್ಯ ಅವರು ಕೌಶಲಾಭಿವೃದ್ಧಿ ಕೇಂದ್ರ ಸ್ಥಾಪನೆಗೆಂದು ದಾನವಾಗಿ ನೀಡುವ ಮೂಲಕ ಉದಾರತೆ ಮೆರೆದಿದ್ದಾರೆ. ಶಾಲೆಯ ಹಳೆಯ ವಿದ್ಯಾರ್ಥಿಗಳೆಲ್ಲ ಸಂಘಟಿತರಾಗಿ ‘ಹಳೆಯ ವಿದ್ಯಾರ್ಥಿ ಸಂಘ’ದ ಹೆಸರಿನಲ್ಲಿ ಶಾಲೆಯನ್ನು ದತ್ತು ಪಡೆದು ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಇಡೀ ಶಾಲೆಗೆ ಹೊಸ ಮೆರುಗು ನೀಡಿದ್ದಾರೆ.
ಭವಿಷ್ಯದ ಯೋಜನೆಗಳು: ಅಗತ್ಯ ಪೀಠೋಪಕರಣವಿರುವ ಸುಸಜ್ಜಿತ ಕೊಠಡಿಗಳು, ತಂತ್ರಜ್ಞಾನ ಆಧಾರಿತ ತರಗತಿ ನಡೆಸುವ ವ್ಯವಸ್ಥೆ, ವಿಜ್ಞಾನ, ಗಣಿತ, ಸಮಾಜ ವಿಜ್ಞಾನಕ್ಕೆ ಪ್ರತ್ಯೇಕ ಪ್ರಯೋಗಾಲಯಗಳು, ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಕ್ರೀಡಾ ಅಂಕಣಗಳ ನಿರ್ಮಾಣ, ಸುತ್ತಮುತ್ತಲ ಹಳ್ಳಿಗಳಿಂದ ಬರುವ ಮಕ್ಕಳಿಗೆ ವಾಹನ ವ್ಯವಸ್ಥೆ ಮಾಡಬೇಕು ಎಂಬ ಯೋಜನೆಯನ್ನು ಹಳೆಯ ವಿದ್ಯಾರ್ಥಿಗಳ ಸಂಘದವರು ಹಾಕಿಕೊಂಡಿದ್ದಾರೆ.
ಶತಮಾನೋತ್ಸವ ಮತ್ತು ಅಮೃತ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಲು, ಸ್ಮರಣ ಸಂಚಿಕೆ ಹೊರತರಲು ಹಳೆಯ ವಿದ್ಯಾರ್ಥಿಗಳು ಆರೇಳು ತಿಂಗಳುಗಳಿಂದ ಹಗಲಿರುಳು ಶ್ರಮಿಸುತ್ತಿದ್ದು, ಇಡೀ ಹಳ್ಳಿಯನ್ನು ಮದುವಣಗಿತ್ತಿಯಂತೆ ಸಿಂಗರಿಸುವ ಕಾರ್ಯ ಭರದಿಂದ ಸಾಗಿದೆ. ಊರಿನಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.